ಶಿವಮೊಗ್ಗ: ಮಲೆನಾಡಿನಲ್ಲೀಗ ವಾ-ನರ ಸಂಘರ್ಷ

ಮಲೆನಾಡಿನಲ್ಲೀಗ ಮನುಷ್ಯರು ಮತ್ತು ವನ್ಯಜೀವಿಗಳ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವನ್ಯಜೀವಿಗಳಿಂದ ರೈತರು ಅಕ್ಷರಶಃ ಹೈರಾಣಾಗಿದ್ದಾರೆ. ಇದರ ನಡುವೆಯೇ ಇತ್ತೀಚೆಗೆ ಮಲೆನಾಡಿನ ರೈತರು ಮಂಗಗಳ ಹಾವಳಿಯಿಂದ ಕಂಗೆಟ್ಟು ಹೋಗಿದ್ದಾರೆ. ಈ ಕಾರಣಕ್ಕೇ ಮಂಗಗಳು ಮತ್ತು ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ರೈತರು ಮಂಕಿಪಾರ್ಕ್ ನಿರ್ಮಿಸಿ ಎಂದು ಕೂಗು ಹಾಕಿದ್ದಾರೆ.

Farmers request to construct monkey park

ಶಿವಮೊಗ್ಗ(ಅ.31): ಮಲೆನಾಡಿನಲ್ಲೀಗ ಮನುಷ್ಯರು ಮತ್ತು ವನ್ಯಜೀವಿಗಳ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವನ್ಯಜೀವಿಗಳಿಂದ ರೈತರು ಅಕ್ಷರಶಃ ಹೈರಾಣಾಗಿದ್ದಾರೆ. ಇದರ ನಡುವೆಯೇ ಇತ್ತೀಚೆಗೆ ಮಲೆನಾಡಿನ ರೈತರು ಮಂಗಗಳ ಹಾವಳಿಯಿಂದ ಕಂಗೆಟ್ಟು ಹೋಗಿದ್ದಾರೆ. ಈ ಕಾರಣಕ್ಕೇ ಮಂಗಗಳು ಮತ್ತು ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ರೈತರು ಮಂಕಿಪಾರ್ಕ್ ನಿರ್ಮಿಸಿ ಎಂದು ಕೂಗು ಹಾಕಿದ್ದಾರೆ.

ಮಂಗಗಳು ರೈತರ ಕೃಷಿ ಬೆಳೆ ಮೇಲೆ ನಡೆಸುತ್ತಿರುವ ದಾಳಿ ಅಕ್ಷರಶಃ ವೈರಿ ದೇಶದ ದಾಳಿಯ ಸ್ವರೂಪದಲ್ಲಿಯೇ ಇದೆ ಎಂದು ರೈತರು ಭಾವಿಸುತ್ತಿರುವ ಮಟ್ಟಕ್ಕೆ ತಲುಪಿರುವುದರಿಂದ ಮಂಗಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರದ ಮೊರೆಯಿಟ್ಟಿದ್ದಾರೆ. ಇದರ ಒಂದು ಭಾಗವೇ ಮಂಕಿಪಾರ್ಕ್. ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಮಂಗಗಳನ್ನು ಸಾಯಿಸಲು ಸಾಧ್ಯವಿಲ್ಲ. ರೈತರು ಕೂಡ ಧಾರ್ಮಿಕ ಭಾವನೆ ಸೇರಿದಂತೆ ವಿವಿಧ ಕಾರಣಕ್ಕಾಗಿ ಮಂಗಗಳ ಮಾರಣ ಹೋಮಕ್ಕೆ ಸಿದ್ಧರಿಲ್ಲ. ಆದರೆ ಈ ಮಂಗಗಳನ್ನು ಗ್ರಾಮಗಳಿಂದ ದೂರ ಕಳುಹಿಸಲೇಬೇಕು. ಇಲ್ಲವಾದರೆ ರೈತ ಸಮುದಾಯ ಉಳಿಯಲು ಸಾಧ್ಯವಿಲ್ಲ ಎನ್ನುತ್ತಾರೆ ರೈತರು.

ದೇವರಹಿಪ್ಪರಗಿ: 90 ವರ್ಷ ಗತಿಸಿದ್ರೂ ಪೋಸ್ಟ್ ಆಫಿಸ್‌ಗಿಲ್ಲ ಸ್ವಂತ ಕಟ್ಟಡ!

ಕಳೆದ ವಾರ ಶಿವಮೊಗ್ಗದಲ್ಲಿ ನಡೆದ ರೈತರ ಬೃಹತ್‌ ಪ್ರತಿಭಟನೆ ಮಂಗಗಳ ವಿರುದ್ಧ ರೈತರ ಆಕ್ರೋಶಕ್ಕೆ ಸಾಕ್ಷಿಯಾಯಿತು. ಹೇಗಾದರೂ ಮಾಡಿ ಮಂಗಗಳ ಉಪಟಳದಿಂದ ನಮ್ಮನ್ನು ರಕ್ಷಿಸಿ ಎಂದು ಜಿಲ್ಲಾಡಳಿತಕ್ಕೆ ಮೊರೆ ಇಟ್ಟರು.

ಅರಣ್ಯದಲ್ಲಿಯಷ್ಟೇ ಇರುತ್ತಿದ್ದ ಮಂಗಗಳು ಕಳೆದೊಂದು ದಶಕಗಳಿಂದ ನಿಧಾನವಾಗಿ ಗ್ರಾಮಗಳತ್ತ, ರೈತರ ತೋಟಗಳತ್ತ ಬರ ತೊಡಗಿದವು. ಮೊದಲು ಈ ರೀತಿಯ ದಾಳಿ ಇದ್ದರೂ ಅದು ಲೆಕ್ಕಕ್ಕೆ ಬಾರದಷ್ಟುಗೌಣವಾಗಿರುತ್ತಿತ್ತು. ಆದರೆ ಇತ್ತೀಚೆಗೆ ಮಂಗಗಳು ರೈತರ ಬೆಳೆ ಮೇಲೆ, ರೈತರ ಮನೆ ಮೇಲೆ ನಡೆಸುತ್ತಿರುವ ದಾಳಿಯನ್ನು ಅನುಭವಿಸಬೇಕಾದರೆ ಹಳ್ಳಿಗಳಿಗೆ ಭೇಟಿ ನೀಡಿ ನೋಡಬೇಕೇ ವಿನಃ ಉಳಿದಂತೆ ಅರ್ಥವಾಗದು. ತೋಟಗಳಲ್ಲಿನ ಬಾಳೆ, ಮನೆಯ ಹಿಂದಿನ ಹಲಸು, ಸಪೋಟ ಇವಿಷ್ಟನ್ನೇ ಆಗಾಗ್ಗೆ ಬಂದು ತಿಂದು ಹೋಗುತಿದ್ದ ಮಂಗಗಳು ನಿಧಾನವಾಗಿ ಕೋಕೋ, ಕಬ್ಬು, ಭತ್ತ, ಶುಂಠಿ, ಕಾಳು ಮೆಣಸು, ಕಾಫಿಗೆ ದಾಳಿ ಇಡತೊಡಗಿದವು. ಈಗ್ಗೆ ನಾಲ್ಕು ವರ್ಷದಿಂದ ಅಡಕೆ ಬೆಳೆಯ ಮೇಲೂ ದಾಳಿ ಆರಂಭಿಸಿದ್ದು, ಯಾವ ಫಸಲು ಕೂಡ ರೈತರ ಕೈಗೆ ಸಿಗದಂತಾಗಿದೆ.

ಕಿತ್ತು, ಎಸೆದು ಹಾಳು ಮಾಡುತ್ತಿವೆ:

ತಿನ್ನುವುದಕ್ಕಿಂತ ಹೆಚ್ಚಾಗಿ ಕಿತ್ತು ಎಸೆದು ಹಾಳು ಮಾಡುತ್ತಿವೆ. ಇತ್ತ ಮಂಗಗಳು ಮರದ ಮೇಲಿಂದ ದಾಳಿ ನಡೆಸುತ್ತಿದ್ದರೆ, ಇನ್ನೊಂದೆಡೆ ಕಾಡುಕೋಣ, ಜಿಂಕೆ, ನವಿಲು, ಕಾಡು ಹಂದಿಗಳು ಕೆಳಗಡೆಯಿಂದ ದಾಳಿಯನ್ನು ಚುರುಕುಗೊಳಿಸಿವೆ. ಸಂಜೆಯವರೆಗೆ ಚೆನ್ನಾಗಿಯೇ ಇದ್ದ ಅಡಕೆ ಸಸಿ ತೋಟ, ಬಾಳೆ ತೋಟ ಬೆಳಗಾಗುವಷ್ಟರಲ್ಲಿ ಬಹುತೇಕ ನಿರ್ನಾಮ ಮಾಡಿಬಿಡುತ್ತವೆ ಕಾಡುಕೋಣಗಳು. ಇವುಗಳನ್ನು ಎದುರಿಸುವುದು ಕೂಡ ಸಾಧ್ಯವಿಲ್ಲದ ಮಾತು. ಈಗಾಗಲೇ ರೈತರ ಮೇಲೆ ಕಾಡುಕೋಣಗಳು ದಾಳಿ ಮಾಡಿದ ಅನೇಕ ಪ್ರಕರಣಗಳು ದಾಖಲಾಗಿದೆ.

ಈ ಮಂಗಗಳು ಗುಂಪು ಗುಂಪಾಗಿ ಬರುತ್ತಿವೆ. ಒಂದು ತೋಟದ ಮೇಲೆ ನಾಲ್ಕೈದು ತಂಡಗಳು ದಾಳಿ ನಡೆಸುತ್ತವೆ. ಮರದ ಮೇಲೆ ಕುಳಿತ ಇವುಗಳನ್ನು ನಿಯಂತ್ರಿಸಲು ಯಾವ ರೀತಿಯಿಂದಲೂ ಸಾಧ್ಯವಾಗುತ್ತಿಲ್ಲ. ಆರಂಭದಲ್ಲಿ ನಾಯಿ ಬೊಗಳಿಕೆಗೆ, ಪಟಾಕಿಗೆ ಹೆದರುತ್ತಿದ್ದ ಮಂಗಗಳು ಇದೀಗ ಇಂತಹ ಯಾವುದೇ ಸದ್ದಿಗೂ ಕ್ಯಾರೇ ಎನ್ನುತ್ತಿಲ್ಲ. ತೋಟದ ಮೇಲೆ ಮಾತ್ರವಲ್ಲ, ಮನೆ ಮೇಲೆಯೂ ದಾಳಿ ನಡೆಸುವ ಮಂಗಗಳು ಮನೆ ಹೆಂಚು ತೆಗೆದು ಒಳಗೆ ಇಳಿದು ಮನೆಯೊಳಗಿನ ಸಾಮಾನುಗಳನ್ನು ಕೂಡ ಒಯ್ಯುತ್ತಿವೆ. ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗಿ ಬರುವಷ್ಟರಲ್ಲಿ ಮನೆಯ ಹೆಂಚುಗಳು ಪುಡಿಪುಡಿ, ಇತ್ತ ಮನೆಯೊಳಗಿನ ಅಡುಗೆ ಮನೆಯ ವಸ್ತುಗಳು ಇಲ್ಲವಾಗಿರುತ್ತದೆ.

‘ಬಿಜೆಪಿ ಇದ್ರೆ ದೇಶ ಸರ್ವನಾಶ ಆಗೋದು ಗ್ಯಾರಂಟಿ’

ರೈತರ ಈ ಕೂಗು ಇದೀಗ ಸರ್ಕಾರಕ್ಕೆ ಮುಟ್ಟಿದೆ. ಈ ಸಂಬಂಧ ಚರ್ಚಿಸಲು ನ. 5 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ಕರೆಯುವುದಾಗಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಸಂಸದ ರಾಘವೇಂದ್ರ ಕೂಡ ಇದಕ್ಕೆ ಸ್ಪಂದಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಮತ್ತು ಪರಿಸರ ಪ್ರೇಮಿಗಳು ಮಾತ್ರ ಇದಕ್ಕೆ ಅಪಸ್ವರ ತೆಗೆದಿದ್ದಾರೆ. ಮಾತಿನ ವಾಗ್ಯುದ್ಧಗಳೂ ನಡೆದಿವೆ.

ಇದೇನೇ ಆದರೂ ರೈತರ ಕೂಗು ಸರ್ಕಾರಕ್ಕೆ ಕೇಳಿಸಿದೆ ಎನ್ನುವುದು ಸಧ್ಯದ ಸಮಾಧಾನ. ಮಂಕಿ ಪಾರ್ಕ್ ಯೋಜನೆ ಯಶಸ್ವಿಯಾಗಿ ಜಾರಿಗೆ ಬಂದರೆ ನಿಜಕ್ಕೂ ರೈತರು ಉಳಿಯುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಏನಿದು ಮಂಕಿ ಪಾರ್ಕ್?

ಯಾವುದಾದರೊಂದು ಕನಿಷ್ಠ 1.5 ಹೆ.ಗೂ ಅಧಿಕ ಅರಣ್ಯ ಪ್ರದೇಶವನ್ನು ಗುರುತಿಸಿ, ಸುತ್ತ ಟ್ರಂಚ್‌ ಅಥವಾ ಬೇಲಿ ನಿರ್ಮಿಸಿ ಮಂಕಿ ಪಾರ್ಕ್ ನಿರ್ಮಿಸಬೇಕು. ಇಲ್ಲಿ ಮಲೆನಾಡಿನ ಕಾಡುಗಳಲ್ಲಿ ಇರುವ ಮಂಗಗಳನ್ನು ಹಿಡಿದು ಬಿಡಬೇಕು. ಇವುಗಳಿಗೆ ಆಹಾರ ಒದಗಿಸುವ ಸಹಜ ಪರಿಸರಕ್ಕೆ ಪೂರಕವಾದ ಹಣ್ಣಿನ ಗಿಡಗಳನ್ನು ನೆಡಬೇಕು. ಇತ್ತ ಮಂಗಗಳೂ ನೆಮ್ಮದಿಯಿಂದ ಇರಬೇಕು. ಅತ್ತ ರೈತರೂ ಸಂಕಷ್ಟದಿಂದ ಪಾರಾಗಬೇಕು ಎಂಬುದೇ ಸಂಕ್ಷಿಪ್ತ ರೂಪದ ಯೋಜನೆಯಾಗಿದೆ. ಚಕ್ರಾ ನಗರದಲ್ಲಿ ಇದನ್ನು ಮಾಡಿ ಎಂದು ರೈತರು ಹೇಳುತ್ತಿದ್ದಾರೆ. ಲಿಂಗನಮಕ್ಕಿಯಂತಹ ಬೃಹತ್‌ ಜಲಾಶಯಗಳ ನಡುವೆ ಇರುವ ನಡುಗಡ್ಡೆಗಳಲ್ಲಿಯೂ ಇದನ್ನು ಮಾಡಬಹುದು ಎಂಬುದು ಕೆಲವರು ತಜ್ಞರ ಅನಿಸಿಕೆ. ದಟ್ಟಾರಣ್ಯ ಪ್ರದೇಶದಲ್ಲಿಯೇ ಇದನ್ನು ನಿರ್ಮಿಸಬೇಕು ಎನ್ನುತ್ತಾರೆ. ಈಗಾಗಲೇ ಅಸ್ಸಾಂನಲ್ಲಿ ಇಂತಹ ಮಂಕಿಪಾರ್ಕ್ ಯಶಸ್ವಿಯಾಗಿ ಮಾಡಲಾಗಿದೆ ಎಂದು ತಜ್ಞರು ಹೇಳುತ್ತಾರೆ. ಇದರಿಂದ ಇನ್ನೊಂದು ಲಾಭವೆಂದರೆ ಮಲೆನಾಡನ್ನು ಹೈರಾಣಾಗಿಸಿರುವ ಮಂಗನ ಕಾಯಿಲೆಗೂ ಮುಕ್ತಿ ಸಿಗುತ್ತದೆ ಎಂಬುದು. ಈ ರೋಗದ ನಿಯಂತ್ರಣ ಬಲು ಸುಲಭ ಎನ್ನುತ್ತಾರೆ.

ಮಂಗಗಳ ದಾಳಿಯಿಂದ ಪ್ರತಿ ವರ್ಷ ಶಿವಮೊಗ್ಗ ಜಿಲ್ಲೆಯೊಂದರಲ್ಲಿಯೇ ಕನಿಷ್ಠ 1 ಸಾವಿರ ಕೋಟಿ ರು. ನಷ್ಟವಾಗುತ್ತಿದೆ. ಇದು ಪ್ರತಿವರ್ಷ ಹೆಚ್ಚಾಗುತ್ತಲೇ ಇದೆ. ಇದನ್ನು ನಿಯಂತ್ರಿಸದಿದ್ದರೆ ಮಲೆನಾಡಿನಲ್ಲಿ ರೈತರಿಗೆ ಭವಿಷ್ಯವಿಲ್ಲ. ಮಂಗಗಳ ಪಾರ್ಕ್ ಸಧ್ಯದ ಪರಿಹಾರ ಎಂದು ಶೋಧ ಫಾಮರ್ಸ್ ಪ್ರೊಡ್ಯುಸರ್‌ ಕಂಪನಿಯ ಛೇರ್ಮನ್‌ ಬೆಳ್ಳಕ್ಕಿ ಪುರುಷೋತ್ತಮ್‌ ಹೇಳಿದ್ದಾರೆ.

-ಗೋಪಾಲ್‌ ಯಡಗೆರೆ

Latest Videos
Follow Us:
Download App:
  • android
  • ios