ಹುಸೇನ್‌ ಆರ್‌ ಕೊಕಟನೂರ 

ದೇವರಹಿಪ್ಪರಗಿ[ಅ.30]: ಪಟ್ಟಣವು ತಾಲೂಕು ಕೇಂದ್ರವಾಗಿ ಎರಡು ವರ್ಷಗಳಾಗುತ್ತ ಬಂದರೂ ಸ್ವಂತ ಕಟ್ಟಡ, ಕುಡಿಯುವ ನೀರು, ಅಗತ್ಯ ಸಿಬ್ಬಂದಿ, ಸಿಬ್ಬಂದಿಗಾಗಿ ಶೌಚಾಲಯ, ಸಾರ್ವಜನಿಕರಿಗಾಗಿ ಸ್ಥಳಾವಕಾಶ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳಿಂದ ಸ್ಥಳೀಯ ಅಂಚೆ ಕಚೇರಿ ವಂಚಿತವಾಗಿದೆ.

ಕಳೆದ 90 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಅಂಚೆ ಕಚೇರಿಗೆ ಪಟ್ಟಣದಲ್ಲಿ ನಿವೇಶನವಿದ್ದರೂ ಕಟ್ಟಡದ ಭಾಗ್ಯ ಇದುವರೆಗೂ ಸಿಕ್ಕಿಲ್ಲ. ಇದರಿಂದ ವಿವಿಧ ಬಾಡಿಗೆ ಕಟ್ಟಡಗಳನ್ನೇ ಆಶ್ರಯಿಸುವಂತಾಗಿದೆ. ಇನ್ನು ಕಚೇರಿಯಲ್ಲಿ ಅಗತ್ಯ ಸಿಬ್ಬಂದಿಯ ಕೊರತೆಯಿದ್ದು, ನಾಲ್ವರು ಅಧಿಕೃತ ಕಾಯಂ ಸಿಬ್ಬಂದಿ ಮಾತ್ರ ಕೆಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚುವರಿ ಕಾರ್ಯಕ್ಕಾಗಿ ಸ್ಥಳೀಯರನ್ನು ತಾತ್ಕಾಲಿಕ ಸಿಬ್ಬಂದಿಯನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಆದಾಗ್ಯೂ ಪಟ್ಟಣಕ್ಕೆ ಇನ್ನೊಬ್ಬ ಅಂಚೆ ವಿತರಕ, ಪೋಸ್ಟ್‌ ಸಹಾಯಕ ಇ.ಡಿ ಪ್ಯಾಕರ್‌ ನೇಮಕ ಅಗತ್ಯವಾಗಿದೆ. ಜೊತೆಗೆ ಕಚೇರಿಯನ್ನು ಮೇಲ್ದರ್ಜೆಗೇರಿಸಿ ಮೂಲಸೌಕರ್ಯಗಳಿಂದ ಕೂಡಿದ, ತಾಲೂಕು ಕೇಂದ್ರಕ್ಕೆ ಅಗತ್ಯವಾದ ಅಂಚೆ ಕಚೇರಿ ಅವಶ್ಯವಾಗಿದೆ.

ಬಾಡಿಗೆ ಕಟ್ಟಡವೂ ಸಾಕಾಗುತ್ತಿಲ್ಲ:

ಕಚೇರಿ ಕಟ್ಟಡ ಸಾಕಷ್ಟು ವಿಶಾಲವಾಗಿದ್ದರೂ ಪೀಠೊಪಕರಣಗಳಿಂದಲೇ ಭರ್ತಿಯಾಗಿದೆ. ಇದರಿಂದ ಸಿಬ್ಬಂದಿ ಕುಳಿತು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಸಿಬ್ಬಂದಿಯಾದ ನಾನೇ ಹೊರಗಡೆ ಕುಳಿತು ವಿತರಣೆಯ ಅಂಚೆಗಳನ್ನು ಸಿದ್ಧಪಡಿಸಿಕೊಳ್ಳುತ್ತೇನೆ. ಇನ್ನೂ ಅಗತ್ಯ ಕಾರ್ಯಗಳಿಗಾಗಿ ಬಂದ ಸಾರ್ವಜನಿಕರಿಗೆ ಆಸನ ವ್ಯವಸ್ಥೆ ದೂರದ ಮಾತಾಗಿದೆ. ಜೊತೆಗೆ ಮಳೆಯಾದ ದಿನಗಳಲ್ಲಿ ಕಟ್ಟಡ ಸೋರುವುದರಿಂದ ಕಾಗದಪತ್ರಗಳನ್ನು ಕಾಯುವುದೇ ದೊಡ್ಡ ಸವಾಲಿನ ಕೆಲಸ ಎನ್ನುತ್ತಾರೆ ಪೋಸ್ಟ್‌ಮನ್‌ಗಳಾದ ಯಲಗೋಡ ಹಾಗೂ ಭೀಸೆ.

ಮೂಲಭೂತ ಸೌಲಭ್ಯಗಳಿಲ್ಲದ ಅಂಚೆ ಕಚೇರಿ:

ತಿಂಗಳ ಮೊದಲ ಹಾಗೂ ಕೊನೆ ವಾರದಲ್ಲಿ ಕಚೇರಿಗೆ ಆಗಮಿಸುವ ನೂರಾರು ವೃದ್ಧಾಪ್ಯ, ವಿಧವಾ, ಅಂಗವಿಕಲ ಪಿಂಚಣಿದಾರರು ಸಹಿತ ವಿವಿಧ ಅಂಚೆ ಇಲಾಖೆಯ ಫಲಾನುಭವಿಗಳು ಬಯಲನ್ನೇ ಆಶ್ರಯಿಸುವಂತಾಗಿದೆ. ಅವರಿಗಾಗಿ ಆಸನ ವ್ಯವಸ್ಥೆಯೇ ಇಲ್ಲವಾಗಿದೆ. ಅಲ್ಲದೆ, ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು ಸೇರಿದಂತೆ ಸಿಬ್ಬಂದಿ ಕೂಡ ಈ ಸಮಸ್ಯೆಯಿಂದ ಹೊರತಾಗಿಲ್ಲ.

ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳಿಂದ ಕೂಡಿದ ಅತ್ಯಾಧುನಿಕ ಅಂಚೆ ಕಚೇರಿಯನ್ನು ಪಟ್ಟಣದ ಸೂಕ್ತ ಸ್ಥಳದಲ್ಲಿ ನಿರ್ಮಿಸಲು ಜಿಲ್ಲಾ ಅಂಚೆ ಅಧೀಕ್ಷಕರು ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣದ ಡಾ ಆರ್‌ ಆರ್‌ ನಾಯಿಕ್‌, ಡಾ ಮಂಜುನಾಥ ಮಠ, ಎಸ್‌.ಬಿ.ಬುದ್ನಿ, ವಸಂತ ನಾಡಗೌಡ, ಆನಂದ ಜಡಿಮಠ, ಚೇತನ ಅಡಕಿ ಮತ್ತಿತರರು ಆಗ್ರಹಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತಾಲೂಕು ಕೇಂದ್ರವಾಗಿರುವ ದೇವರಹಿಪ್ಪರಗಿ ಪಟ್ಟಣದಲ್ಲಿ ಉತ್ತಮ ಸ್ವಾಂತ ಕಟ್ಟಡ ಹೊಂದಿರುವ ಅಂಚೆ ಕಚೇರಿ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಸಂಬಂಧಿಸಿದ ಇಲಾಖೆಯವರು ಆದಷ್ಟುಬೇಗ ಅಂಚೆ ಕಚೇರಿಯ ವ್ಯವಸ್ಥೆ ಸರಿಪಡಿಸಿ ಅನುಕೂಲ ಮಾಡಿಕೊಡಬೇಕು ಎಂದು ದೇವರಹಿಪ್ಪರಗಿ ಕೋ. ಆಪ್‌ ಕ್ರೆಡಿಟ್‌ ಅಧ್ಯಕ್ಷ ಡಾ.ಆರ್‌.ಆರ್‌.ನಾಯಿಕ ಅವರು ತಿಳಿಸಿದ್ದಾರೆ.

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣಕ್ಕೆ ಅಗತ್ಯವಾದ ಸರ್ಕಾರಿ ಕಚೇರಿಗಳ ಅವಶ್ಯಕತೆ ಬಹಳಷ್ಟಿದೆ. ಸುಮಾರು 90 ವರ್ಷಗಳಿಂದ ಅಂಚೆ ಕಚೇರಿ ಸ್ಥಾಪನೆಯಾದರೂ ಇನ್ನೂ ಸ್ವಂತ ಕಟ್ಟಡ ಹೊಂದಿಲ್ಲದಿರುವುದು ವಿಷಾದನೀಯ ಸಂಗತಿ. ಸಾರ್ವಜನಿಕರ ಅನುಕೂಲಕ್ಕಾಗಿ ಅಂಚೆ ಕಚೇರಿಗೆ ಸ್ವಂತ ಸೂರು ಕಲ್ಪಿಸಿ ಅಗತ್ಯ ಸೌಲಭ್ಯ ಒದಗಿಸಲು ಅಂಚೆ ಇಲಾಖೆ ಮುಂದಾಗಬೇಕು ಎಂದು ದೇವರಹಿಪ್ಪರಗಿಯ ಮುಖಂಡರು ಮಂಜುನಾಥ ಮಠ ಅವರು ಹೇಳಿದ್ದಾರೆ.