ಸೊರಬ [ಅ.26]:  ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಜಾಮೀನು ದೊರೆತಿರುವುದು ರಾಜ್ಯದ ಜನತೆಯಲ್ಲಿ ಹರ್ಷ ಮೂಡಿಸಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಪ್ರಮುಖ ಇಲಾಖೆಗಳನ್ನು ಸ್ವಹಿತಾಸಕ್ತಿಗಾಗಿ ಬಳಕೆ ಮಾಡಿಕೊಳ್ಳುತ್ತಾ, ಕಾಂಗ್ರೆಸ್‌ ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಇದಕ್ಕೆ ರಾಜ್ಯ ಹಾಗೂ ದೇಶದ ಜನತೆ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸ್ಪಷ್ಟವಾಗಿ ಬಹುಮತ ಸಾಧಿಸಲಿದೆ ಎಂದು ಆನವಟ್ಟಿಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರುದ್ರಗೌಡ ಸಿ. ಪಾಟೀಲ ಹೇಳಿದರು.

ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಯಲದಿಂದ ಬಂಧನಕ್ಕೊಳ್ಳಗಾಗಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಜಾಮೀನು ದೊರೆತಿದ್ದರಿಂದ ತಾಲೂಕಿನ ಆನವಟ್ಟಿಗ್ರಾಮದ ಸೊರಬ ಸರ್ಕಲ್‌ನಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿಕೆಶಿ ಅವರಿಗೆ ಜಾಮೀನು ದೊರೆತಿರುವುದು ಮೊದಲ ಜಯವಾಗಿದ್ದು, ಶೀಘ್ರದಲ್ಲಿಯೇ ಅವರು ಎಲ್ಲ ಆರೋಪಗಳಿಂದ ಮುಕ್ತರಾಗಿ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ಹೊಸ ಸಂಚಲನ ಮೂಡಿಸಲಿದ್ದಾರೆ. ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭಾ ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಹೆಚ್ಚಿನ ಸಂಖ್ಯೆಯಲ್ಲಿ ಜಯಭೇರಿ ಭಾರಿಸಲಿದೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಚೌಟಿ ಚಂದ್ರಶೇಖರ ಪಾಟೀಲ ಮಾತನಾಡಿದರು. ಜೆಡಿಎಸ್‌ ಮುಖಂಡ ಸಂಜೀವ ಲಕ್ಕವಳ್ಳಿ, ಸಿದ್ದಲಿಂಗ ನೇರಲಗಿ, ನಾಗರಾಜ ಆನವಟ್ಟಿ, ತಾಲೂಕು ಕಾಂಗ್ರೆಸ್‌ ಕಾರ್ಯದರ್ಶಿ ಹಬೀಬುಲ್ಲಾ ಹವಾಲ್ದಾರ್‌, ಪ್ರಮುಖರಾದ ಉದಯ್‌ ಕುಬಟೂರು, ಅಶೋಕ ಶಕುನವಳ್ಳಿ, ದೇವೀಂದ್ರ ತಿಮ್ಮಾಪುರ, ಅಕ್ರಂ ಪಾಷಾ, ಅನೀಶ್‌ಗೌಡ ಇತರರಿದ್ದರು.