ಶಿವಮೊಗ್ಗ(ಮೇ.05): ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ ಅಡಕೆ ವ್ಯವಹಾರವನ್ನು ಮೇ 11 ರ ಸೋಮವಾರದಿಂದ ಪುನಾರಂಭಿಸಲು ಅಡಕೆ ವಲಯದ ಉದ್ಯಮಿಗಳು, ಸಹಕಾರಿಗಳು ನಿರ್ಧರಿಸಿದ್ದಾರೆ. ಯಾವುದೇ ಅಡಕೆ ಬೆಳೆಗಾರರು ಆತಂಕಕ್ಕೆ ಒಳಗಾಗುವ ಚಿಂತೆಯಿಲ್ಲ ಎಂದು ಅಡಕೆ ಟಾಸ್ಕ್‌ಫೋರ್ಸ್‌ ಅಧ್ಯಕ್ಷ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಅಡಕೆ ವ್ಯವಹಾರ ನಡೆಸುವ ಸಹಕಾರಿ ಸಂಸ್ಥೆಗಳ ಮುಖ್ಯಸ್ಥರು, ಅಡಕೆ ವರ್ತಕರ ಸಂಘದ ಮುಖ್ಯಸ್ಥರು, ಖರೀದಿದಾರರ ಜೊತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಸಭೆಯಲ್ಲಿ ಅಡಕೆ ವರ್ತಕರು, ಖರೀದಿದಾರರು, ಕ್ಯಾಂಪ್ಕೋ, ಮಾಮ್ಕೋಸ್‌ ಸೇರಿದಂತೆ ವಿವಿಧ ಸಹಕಾರಿ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು. ಸೋಮವಾರದಿಂದ ಅಡಕೆ ವ್ಯಾಪಾರಕ್ಕೆ ನಿರ್ಧರಿಸಿದ್ದಾರೆ. ಅಡಕೆ ಬೆಳೆಗಾರರಲ್ಲಿ ಧೈರ್ಯ, ಮಾನಸಿಕ ಸ್ಥೈರ್ಯ ತುಂಬುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದ್ದು, ಧಾರಣೆ ಕುಸಿತವಾಗದಂತೆ ನೋಡಿಕೊಳ್ಳುವ ಭರವನೆಯನ್ನು ಕೂಡ ನೀಡಿದ್ದಾರೆ. ಹೀಗಾಗಿ ಯಾವುದೇ ಅಡಕೆ ಬೆಳೆಗಾರರು ಯಾವ ರೀತಿಯಲ್ಲಿಯೂ ಆತಂಕಕ್ಕೆ ಒಳಗಾಗುವುದು ಬೇಡ. ಸಂಯಮದಿಂದ ಇರಬೇಕು. ತಮ್ಮ ಅಡಕೆಯನ್ನು ಮನೆ ಬಾಗಿಲಿಗೆ ಬಂದು ಬೇಕಾಬಿಟ್ಟಿದರದಲ್ಲಿ ಖರೀದಿಸುವವರಿಗೆ ಕೊಡಬಾರದು ಎಂದು ಮನವಿ ಮಾಡಿದರು.

ಲಾಕ್‌ಡೌನ್‌ ಸಡಿಲಕೊಂಡ ಹಿನ್ನೆಲೆಯಲ್ಲಿ ಉತ್ತರ ಭಾರತದಲ್ಲಿ ಗುಟ್ಕಾ ಸೇರಿದಂತೆ ಬಹುತೇಕ ಫ್ಯಾಕ್ಟರಿಗಳು ಆರಂಭಗೊಂಡಿವೆ. ಅಲ್ಲಿನ ವ್ಯಾಪಾರಿಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಅಡಕೆ ದಾಸ್ತಾನು ಇಲ್ಲದೆ ಇರುವುದರಿಂದ ಅಲ್ಲಿಂದ ಅಡಕೆಗೆ ಬೇಡಿಕೆ ಬರುತ್ತದೆ. ಹೀಗಾಗಿ ಅಡಕೆ ಬೆಳೆಗಾರರಿಗೆ ಯಾವುದೇ ರೀತಿಯ ಆತಂಕ ಬೇಕಾಗಿಲ್ಲ ಎಂದರು.

ಮಕ್ಕಳಂತೆ ಸಾಕಿದ್ದ ಮರಗಳ ಮಾರಣ ಹೋಮ..! ಮುಗಿಲು ಮುಟ್ಟಿತು ರೈತ ಮಹಿಳೆಯ ಆಕ್ರಂದನ

ಅನೇಕ ರೈತರು ತಮ್ಮ ಮನೆಯಲ್ಲಿಯೇ ಅಡಕೆಯನ್ನು ಇನ್ನೂ ಇಟ್ಟುಕೊಂಡಿದ್ದಾರೆ. ಕೆಲವರದ್ದು ಅಡಕೆ ಮಂಡಿಗಳಲ್ಲಿವೆ. ಮಾ. 23 ರಿಂದ ಅಡಕೆ ವ್ಯವಹಾರ ಸ್ಥಗಿತಗೊಂಡಿದ್ದರಿಂದ ರೈತರು ಕಂಗಾಲಾಗಿದ್ದರು. ಸ್ಥಗಿತಗೊಳ್ಳುವ ವೇಳೆಯಲ್ಲಿ ಇದ್ದ ಧಾರಣೆಯನ್ನು ಪುನಃ ವ್ಯಾಪಾರ ಆರಂಭವಾದಾಗಲೂ ಉಳಿಸಿಕೊಂಡು ಹೋಗಲು ವ್ಯಾಪಾರಸ್ಥರು ಭರವಸೆ ನೀಡಿದ್ದಾರೆ ಎಂದರು.

ಕ್ಯಾಂಪ್ಕೋ ಅಧ್ಯಕ್ಷ ಸತೀಶ್‌ಚಂದ್ರ ಮಾತನಾಡಿ ಕಾಂಪ್ಕೋ ಈಗಾಗಲೇ ಮಂಗಳೂರು, ಕೇರಳದಲ್ಲಿ ಖರೀದಿ ಆರಂಭಿಸಿದೆ. ಏ. 11 ರಿಂದ ಈ ಭಾಗದಲ್ಲಿ ಕೂಡ ಅಗ್ರೆಸ್ಸೀವ್‌ ಆಗಿ ಖರೀದಿ ಆರಂಭಿಸಲಿದೆ. ಯಾವುದೇ ಕಾರಣಕ್ಕೂ ಧಾರಣೆ ಕುಸಿಯಲು ಬಿಡುವುದಿಲ್ಲ. ರೈತರಲ್ಲಿ ಆತಂಕ ಬೇಡ ಎಂದರು. ಮಾಮ್ಕೋಸ್‌ ಉಪಾಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ ಮಾತನಾಡಿ, ಮಾಮ್ಕೋಸ್‌ ಕೂಡ ಖರೀದಿ ಆರಂಭಿಸಲಿದೆ. ತನ್ನ ಸದಸ್ಯರ ಅಡಕೆಯನ್ನು ಎಲ್ಲ ಶಾಖೆಗಳಲ್ಲಿಯೂ ಖರೀದಿಸಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಅಡಕೆ ಮಹಾಮಂಡಳದ ಅಧ್ಯಕ್ಷ ಕಂಕೋಡಿ ಪದ್ಮನಾಭ ಭಟ್‌, ಉಪಾಧ್ಯಕ್ಷ ಶಿವಕುಮಾರ್‌, ತುಮ್ಕೋಸ್‌ ಅಧ್ಯಕ್ಷ ರವಿ, ಅಡಕೆ ವರ್ತಕರ ಸಂಘದ ಅಧ್ಯಕ್ಷ ಡಿ. ಬಿ. ಶಂಕರಪ್ಪ, ಪ್ರಮುಖ ವರ್ತಕರಾದ ಕಿಮ್ಮನೆ ಜಯರಾಂ ಮತ್ತಿತರರು ಇದ್ದರು.