ಶಿವಮೊಗ್ಗ(ಮೇ.05): ಲಾಕ್‌ಡೌನ್‌ನಿಂದ ಮದ್ಯ ಸಿಗದೆ ಕಂಗಾಲಾಗಿದ್ದ ಮದ್ಯ ಪ್ರಿಯರು ಸೋಮವಾರದಿಂದ ಆರಂಭಗೊಂಡ ಮದ್ಯದಂಗಡಿ ಮುಂದೆ ಭಾರೀ ಸಂಖ್ಯೆಯಲ್ಲಿ ಜಮಾಯಿಸುತ್ತಾರೆ ಎಂಬ ನಿರೀಕ್ಷೆ ಮಲೆನಾಡಿನಲ್ಲಿ ಸುಳ್ಳಾಗಿದೆ. ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಮದ್ಯದಂಗಡಿ ಮುಂದೆ ಚಿಕ್ಕದಾದ ಕ್ಯೂ ಇತ್ತೇ ಹೊರತು ಎಲ್ಲಿಯೂ ನೂಕು ನುಗ್ಗಾಟ ಕಾಣಿಸಲಿಲ್ಲ.

ಬೆಳಗ್ಗೆ 9 ಗಂಟೆಗೆ ವೈನ್‌ ಶಾಪ್‌ಗಳು ಆರಂಭಗೊಳ್ಳುವ ಸುಮಾರಿಗೆ ಹತ್ತಿಪ್ಪತ್ತು ಜನರಿದ್ದರು. ಸಂಜೆಯವರೆಗೂ ಬಹುತೇಕ ಇದೇ ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ಜನ ಇದ್ದುದು ಕಂಡು ಬಂದಿತು. ಸಂಜೆ ವೇಳೆ ಸ್ವಲ್ಪ ರಶ್‌ ಹೆಚ್ಚಿತ್ತು.

ಮದ್ಯ ಕೊಂಡವರೆಲ್ಲರಲ್ಲಿ ಬಹುತೇಕರು ಗೌರವದಿಂದ ನಡೆದುಕೊಂಡರು. ಅಲ್ಲಿಯೆ ಕುಡಿಯುವ ಅಥವಾ ಸಂದಿಗೊಂದಲಿನಲ್ಲಿ ಸೇರಿಕೊಳ್ಳುವ ಸಾಹಸ ಮಾಡದೆ ನೇರವಾಗಿ ಮನೆಯ ಹಾದಿ ಹಿಡಿದರು. ಕಡಿಮೆ ಸಂಖ್ಯೆಯ ಜನ ಮಾತ್ರ ದಾರಿ ಮಧ್ಯದಲ್ಲಿಯೇ ಸೇವನೆ ಆರಂಭಿಸಿದರು.

ಅಷ್ಟಕ್ಕೂ ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಮದ್ಯಪ್ರಿಯರ ಕೊಡುಗೆ!

ಒಂದೆರಡು ಪ್ರಕರಣಗಳಲ್ಲಿ ಮಾತ್ರ ರಸ್ತೆಯಲ್ಲಿ ತೂರಾಡಿದ ಘಟನೆ ನಡೆಯಿತು. ಒಂದು ಪ್ರಕರಣದಲ್ಲಿ ಮಾತ್ರ 11 ಗಂಟೆ ಸುಮಾರಿಗೆ ತೀವ್ರ ಮದ್ಯಪಾನದಿಂದ ರಸ್ತೆ ಬದಿಯಲ್ಲಿಯೇ ಪ್ರಜ್ಞೆಯಿಲ್ಲದೆ ಬಿದ್ದುಕೊಂಡಿದ್ದು ಕಂಡು ಬಂದಿತು. ಸಿಎಲ್‌-2 ಹಾಗೂ ಎಂಎಸ್‌ಐಎಲ್‌ ಮದ್ಯದ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಸೋಮವಾರ ಎಲ್ಲ ಮದ್ಯಪ್ರಿಯರು ನಿಯಮ ಪಾಲಿಸಿ ಮದ್ಯ ಖರೀದಿಸಿದರು.

ಬಹುತೇಕ ಎಲ್ಲ ಮದ್ಯದಂಗಡಿಗಳ ಮುಂದೆ ಸರತಿ ಸಾಲು ಕಂಡು ಬಂದಿತು. ಆಶ್ರಯ ಬಡಾವಣೆ ಇರುವ ಬೊಮ್ಮನಕಟ್ಟೆಯಲ್ಲಿನ ವೈನ್‌ ಶಾಪ್‌ ಒಂದರಲ್ಲಿ ಬೆಳಗ್ಗೆಯಿಂದಲೂ ಖಾಲಿ ಖಾಲಿ ಇತ್ತು.

90ರ ಅಜ್ಜಿಗೆ ಖುಷಿಯೋ ಖುಷಿ

ಒಂದೂವರೆ ತಿಂಗಳಿಂದ ಕುಡಿಯದೆ ಕಂಗಾಲಾಗಿದ್ದ 90 ಹರೆಯದ ಅಜ್ಜಿಗೆ ಎಣ್ಣೆ ಅಂಗಡಿ ತೆರೆದದ್ದನ್ನು ಕಂಡು ಸಂತೋಷಕ್ಕೆ ಮಿತಿಯೇ ಇಲ್ಲ. ಬೆಳಗ್ಗೆಯಿಂದಲೇ ಅಂಗಡಿ ಮುಂದೆ ಕಾದು ನಿಂತ ಅಜ್ಜಿ ಮೊದಲ ಖರೀದಿ ತನ್ನದೇ ಎಂದು 90 ಎಂಎಲ್‌ನ ಆರು ಪ್ಯಾಕೇಟ್‌ ಖರೀದಿಸಿ ಖುಷಿಯಿಂದ ಎಲ್ಲರೂ ತೋರಿಸುತ್ತಾ ಮನೆಯ ಕಡೆಗೆ ನಡೆದ ಘಟನೆ ಶರಾವತಿ ನಗರದಲ್ಲಿ ಸೋಮವಾರ ಬೆಳಗ್ಗೆ ನಡೆಯಿತು.

ನಿತ್ಯ ನೈಂಟಿ ಕುಡಿಯುತ್ತಿದ್ದ ಸಾಕಮ್ಮ ಹೆಸರಿನ ಈ ಅಜ್ಜಿಗೆ ಎಣ್ಣೆ ಸಿಗದೆ ಕಂಗಾಲಾಗಿದ್ದರು. ಶರಾವತಿ ನಗರದ ಈಕೆಗೆ ಎಣ್ಣೆ ಇಲ್ಲದೆ ಇರಲು ಸಾಧ್ಯವೇ ಇಲ್ಲವಂತೆ. ಈಗ್ಗೆ ಒಂದೂವರೆ ತಿಂಗಳಿಂದ ಇಲ್ಲದೆ ಕಫ, ಕೆಮ್ಮು ಶುರುವಾಗಿದೆಯಂತೆ. ಹೀಗೆಂದು ಪತ್ರಕರ್ತರೊಂದಿಗೆ ಮಾತನಾಡಿ ಹೇಳಿದರು. ಈವತ್ತು ಬೆಳಗ್ಗೆ ಅಂಗಡಿ ತೆರೆಯುವುದು ಗೊತ್ತಾಯಿತು. ಅದಕ್ಕೆ ಬಂದೆ ಎನ್ನುತ್ತಾ ಆರು ಪ್ಯಾಕೇಟ್‌ ಖರೀದಿಸಿ ನಡೆದರು.