ಕೊರೋನಾ ವೈರಸ್‌ಗೆ ಸೆಪ್ಟೆಂಬರ್‌ ವೇಳೆಗೆ ಲಸಿಕೆ ಬರುತ್ತದೆ ಎಂದು ಸಾಕಷ್ಟುಸುದ್ದಿಯಾಗುತ್ತಿದೆ. ಆದರೆ, ಯಾವುದೇ ವೈರಾಣುವಿಗೆ ಲಸಿಕೆ ಕಂಡುಹಿಡಿಯುವುದು ಇಷ್ಟುಕಡಿಮೆ ಅವಧಿಯಲ್ಲಿ ಆಗುವ ಕೆಲಸವಲ್ಲ. ಸಾಮಾನ್ಯವಾಗಿ ಲಸಿಕೆಯ ಶೋಧ, ಪ್ರಾಣಿ ಹಾಗೂ ಮಾನವನ ಮೇಲಿನ ಪ್ರಯೋಗ, ದೀರ್ಘಕಾಲದಲ್ಲಿ ಅದರಿಂದಾಗುವ ಅಡ್ಡಪರಿಣಾಮಗಳ ಅಧ್ಯಯನ... ಹೀಗೆ ವಿವಿಧ ಪ್ರಕ್ರಿಯೆ ಮುಗಿದು ಲಸಿಕೆಯೊಂದು ಮಾರುಕಟ್ಟೆಗೆ ಬರಲು ಸರಾಸರಿ 10 ವರ್ಷ ಹಿಡಿಯುತ್ತದೆ. ಆದರೆ, ಕೊರೋನಾ ವೈರಸ್‌ ಹಾವಳಿ ಆರಂಭವಾಗಿ 5 ತಿಂಗಳಷ್ಟೇ ಆಗಿದೆ. ಲಸಿಕೆಯ ಸಂಶೋಧನೆ ಆರಂಭವಾಗಿಯೂ ಹೆಚ್ಚುಕಮ್ಮಿ ಅಷ್ಟೇ ಸಮಯವಾಗಿದೆ. ಸೆಪ್ಟೆಂಬರ್‌ ವೇಳೆಗೆ ಲಸಿಕೆ ಮಾರುಕಟ್ಟೆಗೆ ಬಂದರೆ 10 ತಿಂಗಳಲ್ಲೇ ಲಸಿಕೆ ಅಭಿವೃದ್ಧಿಪಡಿಸಿದಂತಾಗುತ್ತದೆ. ಇದೊಂದು ಸಾರ್ವಕಾಲಿಕ ದಾಖಲೆಯಾಗಲಿದೆ. ಸದ್ಯ ಜಗತ್ತಿನ ವಿವಿಧೆಡೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಗೆ ಮಾಹಿತಿ ನೀಡಿ 7 ಕಡೆ ಲಸಿಕೆಗಳ ಪ್ರಯೋಗ ನಡೆಯುತ್ತಿವೆ. ಅವು ಯಾವ್ಯಾವ ಹಂತದಲ್ಲಿವೆ ಎಂಬ ಮಾಹಿತಿ ಇಲ್ಲಿದೆ.

ಎಡಿ5-ಎನ್‌ಕೊವ್‌

ಚೀನಾದ ಮಿಲಿಟರಿ ಹಾಗೂ ಕ್ಯಾನ್‌ಸಿನೋ ಬಯೋಲಾಜಿಕ್ಸ್‌ ಎಂಬ ಔಷಧ ಕಂಪನಿ ಜಂಟಿಯಾಗಿ ಇದನ್ನು ಶೋಧಿಸುತ್ತಿವೆ. ಕೊರೋನಾ ವೈರಸ್‌ಗೆ ಜಗತ್ತಿನಲ್ಲೇ ಮೊದಲು ಮಾನವನ ಮೇಲಿನ ಪ್ರಯೋಗದ ಹಂತಕ್ಕೆ ಬಂದ ಲಸಿಕೆಯಿದು. ಎಡೆನೋವೈರಸ್‌ ಎಂಬ ನಿರುಪದ್ರವಿ ವೈರಸ್‌ನ ಮೂಲಕ ಕೊರೋನಾ ವೈರಸ್‌ ವಿರುದ್ಧ ಹೋರಾಡುವ ಶಕ್ತಿಯನ್ನು ಇದು ದೇಹಕ್ಕೆ ನೀಡುತ್ತದೆ. ಸದ್ಯ 2ನೇ ಹಂತದ ಕ್ಲಿನಿಕಲ್‌ ಟ್ರಯಲ್‌ನಲ್ಲಿರುವ ಈ ಲಸಿಕೆಯ ಮಾನವನ ಮೇಲಿನ ಪ್ರಯೋಗ ಆರು ತಿಂಗಳಲ್ಲಿ ಮುಗಿಯಬಹುದು. ಯಶಸ್ವಿಯಾದರೆ ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಬರಬಹುದು.

ಕೊರೋನಾ ಲಸಿಕೆ, ಮತ್ತೊಂದು ಹೆಜ್ಜೆ ಮುಂದೆ ಇಟ್ಟ ಭಾರತ!

ಛಡಾಕ್ಸ್‌1 

ಬ್ರಿಟನ್ನಿನ ಆಕ್ಸ್‌ಫರ್ಡ್‌ ವಿವಿ ವಿಜ್ಞಾನಿಗಳು ಇದನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ನಿರುಪದ್ರವಿ ವೈರಾಣುವನ್ನು ಹೊಂದಿರುವ ಈ ಲಸಿಕೆಯು ಮನುಷ್ಯನ ದೇಹದೊಳಗೆ ಕೊರೋನಾ ವೈರಸ್‌ನ ಮೇಲಿರುವ ಮುಳ್ಳುಗಳಂತಹ ಪ್ರೋಟೀನ್‌ಗಳನ್ನು ಉತ್ಪಾದಿಸಿ, ಕೊರೋನಾ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ನೀಡುತ್ತದೆ. ಇದು ಯಶಸ್ವಿಯಾಗಿಯೇ ತೀರುತ್ತದೆ ಎಂಬ ನಂಬಿಕೆಯಿಂದ ಪುಣೆಯ ಸೆರಮ್‌ ಸಂಸ್ಥೆಯೂ ಸೇರಿದಂತೆ ಜಗತ್ತಿನ ಬೇರೆ ಬೇರೆ ಕಡೆ ಈಗಾಗಲೇ ಈ ಲಸಿಕೆಯ ಉತ್ಪಾದನೆ ಆರಂಭವಾಗಿದೆ. ಮಾನವನ ಮೇಲೆ ಇದರ ಪೂರ್ಣ ಪ್ರಮಾಣದ ಪ್ರಯೋಗ ಮುಂದಿನ ವರ್ಷದ ಮೇ ವೇಳೆಗೆ ಮುಗಿಯಬಹುದು. ಆದರೆ, ತುರ್ತು ಪರಿಸ್ಥಿತಿಯ ಕಾರಣಕ್ಕೆ ಸೆಪ್ಟೆಂಬರ್‌ ವೇಳೆಗೇ ಇದರ ಬಳಕೆಗೆ ಎಲ್ಲೆಡೆ ಅನುಮತಿ ಪಡೆಯುವ ವಿಶ್ವಾಸವನ್ನು ಆಕ್ಸ್‌ಫರ್ಡ್‌ ವಿಜ್ಞಾನಿಗಳು ಹೊಂದಿದ್ದಾರೆ.

ಐಎನ್‌ಒ-4800 

ಅಮೆರಿಕದ ಇನೊವಿಯೋ ಫಾರ್ಮಾಸುಟಿಕಲ್ಸ್‌ ಕಂಪನಿ ಇದನ್ನು ಶೋಧಿಸುತ್ತಿದೆ. ಇದಕ್ಕೆ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡುವ ಜಾಗತಿಕ ಒಕ್ಕೂಟದ ಬೆಂಬಲವಿದೆ. ಈ ಒಕ್ಕೂಟಕ್ಕೆ ಭಾರತ, ನಾರ್ವೆ, ಬಿಲ್‌ ಗೇಟ್ಸ್‌ ಫೌಂಡೇಶನ್‌ ಆರ್ಥಿಕ ನೆರವು ನೀಡುತ್ತಿವೆ. ಇದು ಹೊಸ ತಂತ್ರಜ್ಞಾನ ಬಳಸಿ ತಯಾರಿಸಲಾದ ಲಸಿಕೆಯಾಗಿದ್ದು, ನಮ್ಮ ದೇಹದೊಳಗೇ ಕಡಿಮೆ ಶಕ್ತಿಯ ಕೊರೋನಾ ವೈರಸ್‌ಗಳನ್ನು ಉತ್ಪಾದಿಸಿ, ಅವು ದೇಹಕ್ಕೆ ಹೊರಗಿನಿಂದ ಪ್ರವೇಶಿಸುವ ಕೊರೋನಾ ವೈರಸ್‌ ವಿರುದ್ಧ ಹೋರಾಡುವಂತೆ ಮಾಡುತ್ತದೆ. ಮುಂದಿನ ವರ್ಷದ ಜೂನ್‌ ಒಳಗೆ ಇದರ 1ನೇ ಹಂತದ ಪ್ರಯೋಗ ಮುಗಿಯಬಹುದು.

ಇನಾಕ್ಟಿವೇಟೆಡ್‌ 

ಚೀನಾದ ಸರ್ಕಾರಿ ಪ್ರಯೋಗಾಲಯವೊಂದು ಇದನ್ನು ಅಭಿವೃದ್ಧಿಪಡಿಸುತ್ತಿದೆ. ನಿಷ್ಕಿ್ರಯಗೊಳಿಸಲಾದ ಕೊರೋನಾ ವೈರಸ್‌ಗಳನ್ನೇ ಇದು ಹೊಂದಿರುತ್ತದೆ. ದೇಹಕ್ಕೆ ಇದನ್ನು ಇಂಜೆಕ್ಟ್ ಮಾಡಿದರೆ ದೇಹದ ರೋಗನಿರೋಧಕ ವ್ಯವಸ್ಥೆಯು ಹೊರಗಿನಿಂದ ದಾಳಿ ನಡೆಸುವ ಕೊರೋನಾ ವೈರಸ್‌ ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು ಉತ್ಪಾದಿಸತೊಡಗುತ್ತದೆ. ಸದ್ಯ ಇದು 2ನೇ ಹಂತದ ಪ್ರಯೋಗದಲ್ಲಿದ್ದು, ಶೀಘ್ರವೇ 3ನೇ ಹಂತಕ್ಕೆ ಪ್ರವೇಶಿಸಲಿದೆ. ಲಸಿಕೆ ಮಾರುಕಟ್ಟೆಗೆ ಬರಲು ಒಂದು ವರ್ಷ ಬೇಕಾಗಬಹುದು.

ಬಯೋಕಾನ್‌ನಲ್ಲಿ ರೆಡಿಯಾಗ್ತಿದೆ ಮಹಾಮಾರಿ ಕೊರೋನಾಗೆ ಲಸಿಕೆ!

ಪಿಕೋವ್ಯಾಕ್‌ 

ಚೀನಾದ ಸಿನೋವ್ಯಾಕ್‌ ಎಂಬ ಕಂಪನಿ ಇದನ್ನು ಅಭಿವೃದ್ಧಿಪಡಿಸುತ್ತಿದೆ. ಇದೂ ಕೂಡ ನಿಷ್ಕಿ್ರಯಗೊಳಿಸಲಾದ ಕೊರೋನಾ ವೈರಸ್‌ಗಳನ್ನು ಬಳಸಿಕೊಂಡು ಸಕ್ರಿಯ ಕೊರೋನಾ ವೈರಸ್‌ ವಿರುದ್ಧ ಹೋರಾಡುತ್ತದೆ. ಸದ್ಯ ಇದು 1 ಮತ್ತು 2ನೇ ಹಂತದ ಮಿಶ್ರ ಪ್ರಯೋಗದಲ್ಲಿದೆ.

ಎಂಆರ್‌ಎನ್‌ಎ-1273 

ಮಾಡರ್ನಾ ಎಂಬ ಅಮೆರಿಕದ ಕಂಪನಿ ಇದನ್ನು ಶೋಧಿಸುತ್ತಿದೆ. ಕೊರೋನಾ ವೈರಸ್‌ನಲ್ಲಿರುವ ಮುಳ್ಳುಗಳಂತಹ ಪ್ರೊಟೀನ್‌ ಕೋಶಗಳನ್ನು ಹೇಗೆ ಉತ್ಪಾದಿಸಬೇಕು ಎಂಬ ಮಾಹಿತಿಯನ್ನು ಈ ಲಸಿಕೆ ನಮ್ಮ ದೇಹಕ್ಕೆ ನೀಡುತ್ತದೆ. ಆ ಪ್ರೊಟೀನ್‌ ಕೋಶಗಳು ಮುಂದೆ ಕೊರೋನಾ ವಿರುದ್ಧ ಹೋರಾಡುತ್ತವೆ. ಅಮೆರಿಕ ಸರ್ಕಾರ ಈ ಸಂಶೋಧನೆಗೆ ನೆರವು ನೀಡುತ್ತಿದೆ. ಸದ್ಯ 1ನೇ ಹಂತದ ಪ್ರಯೋಗದಲ್ಲಿ ಈ ಲಸಿಕೆಯಿದ್ದು, ಕೆಲ ತಿಂಗಳಲ್ಲೇ 2ನೇ ಹಂತಕ್ಕೆ ಪ್ರವೇಶಿಸಲಿದೆ.

ಬಿಎನ್‌ಟಿ162

ಜರ್ಮನಿಯ ಬಯೋಎನ್‌ಟೆಕ್‌ ಹಾಗೂ ಅಮೆರಿಕದ ಫೈಜರ್‌ ಕಂಪನಿ ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸುತ್ತಿವೆ. ಬೇರೆ ಬೇರೆ ರೀತಿಯ ನಾಲ್ಕು ಲಸಿಕೆಗಳನ್ನು ಒಟ್ಟಿಗೇ ಇವು ಕಂಡುಹಿಡಿಯುತ್ತಿದ್ದು, ಶೀಘ್ರದಲ್ಲೇ ಜರ್ಮನಿ ಮತ್ತು ಅಮೆರಿಕದಲ್ಲಿ ಮಾನವನ ಮೇಲೆ ಇವುಗಳ 1 ಮತ್ತು 2ನೇ ಹಂತದ ಮಿಶ್ರ ಪ್ರಯೋಗ ಆರಂಭವಾಗಲಿದೆ. ಈ ಲಸಿಕೆಗಳು ಕೊರೋನಾ ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು ನಮ್ಮ ದೇಹದ ಜೀವಕೋಶಗಳೇ ಉತ್ಪಾದಿಸುವಂತೆ ಮಾಡುತ್ತವೆ. ಇವುಗಳ ಪ್ರಯೋಗ ಮುಗಿಯಲು ಕನಿಷ್ಠ 1 ವರ್ಷ ಬೇಕು.

ಲಸಿಕೆ ಎಂದರೇನು?

ಒಂದು ರೋಗ ನಮಗೆ ಬಾರದಂತೆ ತಡೆಯಲು ಆ ರೋಗಕ್ಕೆ ಕಾರಣವಾಗುವ ಸೂಕ್ಷ್ಮ ಜೀವಿಯ ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು ಹಾಗೂ ರೋಗನಿರೋಧಕ ಶಕ್ತಿಯನ್ನು ನಮ್ಮ ದೇಹದಲ್ಲೇ ಉತ್ಪಾದಿಸುವ ಔಷಧವೇ ಲಸಿಕೆ. ಉದಾ: ಪೋಲಿಯೋ, ದಢಾರ ಇತ್ಯಾದಿ ಲಸಿಕೆಗಳು. ರೋಗ ಬಂದ ಮೇಲೆ ಚಿಕಿತ್ಸೆ ನೀಡಲು ಔಷಧಗಳನ್ನು ಬಳಸಿದರೆ, ರೋಗ ಬರುವುದನ್ನು ತಡೆಯಲು ಮುನ್ನೆಚ್ಚರಿಕೆಯಾಗಿ ಲಸಿಕೆಗಳನ್ನು ಬಳಸಲಾಗುತ್ತದೆ. ಇದು ಇಂಜೆಕ್ಷನ್‌ ಅಥವಾ ಓರಲ್‌ ಡ್ರಾಫ್ಸ್‌ ರೂಪದಲ್ಲಿರುತ್ತದೆ.

ಕೋವಿಡ್ ಸೋಲಿಸಲು ಪ್ರಾಣಾಯಾಮ ಬ್ರಹ್ಮಾಸ್ತ್ರ: ದಿಲ್ಲಿಯ ಮೊದಲ ರೋಗಿ

ಭಾರತದಲ್ಲಿ ಏನು ಸಂಶೋಧನೆ ನಡೆಯುತ್ತಿದೆ?

ಭಾರತದಲ್ಲಿ ಆರು ಫಾರ್ಮಾ ಕಂಪನಿಗಳು ಸ್ವತಂತ್ರವಾಗಿ ಅಥವಾ ವಿದೇಶಿ ಕಂಪನಿಗಳ ಜೊತೆ ಜಂಟಿಯಾಗಿ ಕೊರೋನಾಗೆ ಲಸಿಕೆ ಶೋಧಿಸುತ್ತಿವೆ. ಆದರೆ ಯಾವುವೂ ಮಾನವನ ಮೇಲಿನ ಪ್ರಯೋಗದ ಹಂತಕ್ಕೆ ಇನ್ನೂ ಬಂದಿಲ್ಲ. ಇವುಗಳ ಪೈಕಿ ಅಹ್ಮದಾಬಾದಿನ ಜೈಡಸ್‌ ಕ್ಯಾಡಿಲಾ, ಹೈದರಾಬಾದ್‌ನ ಬಯೋಲಾಜಿಕಲ್‌ ಇಲಿ. ಹಾಗೂ ಪುಣೆಯ ಸೆರಮ್‌ ಇನ್‌ಸ್ಟಿಟ್ಯೂಟ್‌ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ತಮ್ಮ ಪ್ರಯೋಗವನ್ನು ನೋಂದಾಯಿಸಿಕೊಂಡಿವೆ.

ಲಸಿಕೆ ನಮ್ಮ ಕೈಗೆ ಸಿಗೋದು ಯಾವಾಗ?

ಈಗಲೂ ಕೊರೋನಾ ಲಸಿಕೆಯ ಸಂಶೋಧನೆ ಆರಂಭಿಕ ಹಂತದಲ್ಲೇ ಇದೆ. 7 ಪ್ರಮುಖ ಲಸಿಕೆಗಳ ಹೊರತಾಗಿ ಇನ್ನೂ 80 ಲಸಿಕೆಗಳು ಬೇರೆ ಬೇರೆ ಕಡೆ ಮಾನವನ ಮೇಲಿನ ಪ್ರಯೋಗ-ಪೂರ್ವ ಹಂತದಲ್ಲಿವೆ. ಕೊರೋನಾ ವೈರಸ್ಸಿನ ಲಕ್ಷಣಗಳು ದಿನದಿಂದ ದಿನಕ್ಕೆ ಬದಲಾಗುತ್ತಿರುವುದು ಲಸಿಕೆ ಅಭಿವೃದ್ಧಿಪಡಿಸುವವರಿಗೆ ಸವಾಲಾಗಿದೆ. ಸಾಮಾನ್ಯವಾಗಿ ಯಾವುದೇ ಲಸಿಕೆಯನ್ನು 3 ಹಂತದಲ್ಲಿ ಮನುಷ್ಯನ ಮೇಲೆ ಪ್ರಯೋಗಿಸಬೇಕು. ಕೊರೋನಾ ಮಹಾಮಾರಿ ಶರವೇಗದಲ್ಲಿ ಜಗತ್ತಿನಾದ್ಯಂತ ಹರಡುತ್ತಿರುವುದರಿಂದ ಈ ಪ್ರಯೋಗಗಳನ್ನು ಕ್ಷಿಪ್ರವಾಗಿ ಮುಗಿಸಿ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರೂ, ವಿಜ್ಞಾನಿಗಳ ಪ್ರಕಾರ, ಅದಕ್ಕೆ ಕನಿಷ್ಠ ಇನ್ನು ಒಂದೂವರೆ ವರ್ಷ ಬೇಕು.