ನಾಲ್ಕೈದು ದಿನಗಳಿಂದ ಆಟವಾಡಿಸಿದ್ದ ಜಿರಳೆಯೊಂದು ಮೊನ್ನೆ ಕೊನೆಗೂ ಪೊರಕೆಯ ಅಡಿಗೆ ಸಿಲುಕಿಬಿಟ್ಟಿತ್ತು. ಅಷ್ಟೂ ದಿನದ ಆಕ್ರೋಶ ಸೇರಿಸಿ ತಲೆ ಮೇಲೆ ಬಡಿದೇ ಬಡಿದೆ. ಅದು ಸತ್ತಿದ್ದು ಖಚಿತವಾದ ಮೇಲೆ, ಥೂ ಏಕಪ್ಪಾ ಇಂಥ ಚಿತ್ರವಿಚಿತ್ರ ಕೀಟಗಳೆಲ್ಲ ಭೂಮಿ ಮೇಲಿವೆ ಎನಿಸಿತ್ತು. ಊರಿನ ಹಳ್ಳಿಮನೆಯ ಅಡುಗೆಕೋಣೆಯಲ್ಲಿ ನೊಣವನ್ನು ನೋಡಿದಾಗಲೂ ಹೀಗೆ ಬೈದುಕೊಳ್ಳುವುದಿದೆ.

ಇಂಥದೊಂದು ಕೀಟ ಬದುಕಿಲ್ಲವಾದರೆ ಯಾರಿಗೂ ಯಾವ ನಷ್ಟವೂ ಇಲ್ಲ ಎನಿಸುತ್ತದೆ. ಇಂಥ ಕೀಟಗಳಿಂದ ಭೂಮಿಗೆ ಏನು ಪ್ರಯೋಜನ ಎಂದು ಯೋಚಿಸುತ್ತಾ, ಅದನ್ನೇ ಗೂಗಲ್ ಮಾಡಿದಾಗ ಸಿಕ್ಕ ವಿಷಯ ನನ್ನನ್ನು ದಂಗುಬಡಿಸಿತ್ತು. ಆ ನಂತರದಲ್ಲಿ ಈ ಭೂಮಿಗೆ ಪ್ರಯೋಜನವಿಲ್ಲವಾಗಿ ಭಾರವಾಗಿರುವುದು ನಾನೇ ಹೊರತು ಕೀಟಗಳಲ್ಲ ಎನಿಸಿದ್ದು ಸುಳ್ಳಲ್ಲ. 

ಇಷ್ಟಕ್ಕೂ ಕೀಟಗಳಿಂದ ಏನೇನು ಪ್ರಯೋಜನಗಳಿವೆ ಗೊತ್ತಾ?

ಜೇನುನೊಣಗಳಿಲ್ಲದೆ ಹೂವು, ಆಹಾರವಿಲ್ಲ!

ಪರಿಸರ ಸಂಸ್ಥೆ  ಅರ್ಥ್‌ವಾಚ್ ಜೇನು ನೊಣಗಳನ್ನು "ಈ ಗ್ರಹದ ಮೇಲಿನ ಅತಿ ಪ್ರಮುಖ ಜೀವಿ'' ಎಂದು ಹೆಸರಿಸಿದೆ. ಅವು ಕೇವಲ ಜೇನುತುಪ್ಪ ತಯಾರಿಸುವುದಿಲ್ಲ, ಬದಲಿಗೆ ಹೂವು ಹಾಗೂ ಕೃಷಿ ಸಸ್ಯಗಳ ಪ್ರಮುಖ ಪರಾಗಸ್ಪರ್ಶಕಗಳು ಇವಾಗಿವೆ. ಇವು ಪರಾಗವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರಿಸದಿದ್ದರೆ ಜಗತ್ತಿನ ಕೃಷಿ ಬೆಳೆ ಶೇ.30ರಷ್ಟು ಕುಗ್ಗುತ್ತದೆ. ಹೂವಿನ ಗಿಡಗಳಂತೂ ಶೇ.90ರಷ್ಟು ನಾಪತ್ತೆಯಾಗುತ್ತವೆ. ಅಲ್ಲಿಗೆ ಹೂವೊಂದು ಹೇಗಿರುತ್ತದೆ ಎಂದು ಕಣ್ತುಂಬಿಕೊಳ್ಳಲು ಪ್ರಪಂಚ ಪರ್ಯಟನೆ ಮಾಡಬೇಕಾದ ಕಾಲ ಬರುತ್ತದೆಯಷ್ಟೇ! ಇಷ್ಟೆಲ್ಲ ಉಪಯೋಗವಿರುವ ಜೇನುನೊಣಗಳ ಸಂಖ್ಯೆ ಕಳೆದೊಂದು ದಶಕದಲ್ಲೇ ಶೇ.30ರಷ್ಟು ಕಡಿಮೆಯಾಗಿರುವುದು ಆಘಾತಕಾರಿ. ಕೃಷಿಯಲ್ಲಿ ಕೆಮಿಕಲ್‌ಗಳ ಬಳಕೆ ಹಾಗೂ ಹವಾಮಾನ ಬದಲಾವಣೆ ಜೇನುನೊಣಗಳ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣ. 

ನೈಟ್ರೋಜನ್ ತಯಾರಕ ಜಿರಳೆಗಳು

ಜಿರಳೆಗಳಷ್ಟು ಜನರಿಂದ, ಅದರಲ್ಲೂ ಹೆಣ್ಣುಮಕ್ಕಳಿಂದ ದ್ವೇಷಿಸಲ್ಪಡುವ ಮತ್ತೊಂದು ಜೀವಿ ಇರಲಾರದು. ಅವುಗಳ ಕುರೂಪವಷ್ಟೇ ಅಲ್ಲದೆ, ಬ್ಯಾಕ್ಟೀರಿಯಾಗಳನ್ನು ಹರಡುತ್ತವೆಂದು, ತಾವು ನಡೆದಾಡಿದಲ್ಲೆಲ್ಲ ಮಲ ಬಿಡುತ್ತಾ ಅಲರ್ಜಿ ಮುಂತಾದ ಕಾಯಿಲೆಗೆ ಕಾರಣವಾಗುತ್ತವೆಂಬುದು ಇದಕ್ಕೆ ಕಾರಣ. ಆದರೆ, 3500 ರೀತಿಯ ಜಿರಳೆ ಜಾತಿಗಳಲ್ಲಿ ಕೇವಲ 20 ಸ್ಪೀಶೀಸ್ ಮಾತ್ರ ಮನುಷ್ಯರಿಗೆ ಸಿಟ್ಟು ಬರಿಸುವಂಥವು. 

ನಗರಗಳಿಂದ ದೂರದಲ್ಲಿ ಇರುವಂಥ ಜಿರಳೆಗಳು ಸಣ್ಣ ಸಣ್ಣ ಪಕ್ಷಿಗಳು, ಸರೀಸೃಪಗಳು ಹಾಗೂ ಪ್ರಾಣಿಗಳಿಗೆ ಆಹಾರವಾಗಿವೆ. ಜೊತೆಗೆ ಅವು ಗೊಬ್ಬರದಂಥ ಕೊಳೆಯುವ ವಸ್ತುಗಳನ್ನು ತಿಂದು ಸಂಪೂರ್ಣ ನೈಟ್ರೋಜನ್‌ನಿಂದ ತುಂಬಿದ ಮಲವನ್ನು ಹೊರಬಿಡುತ್ತವೆ. ಈ ನೈಟ್ರೋಜನ್ ಸಸ್ಯಗಳ ಬೆಳವಣಿಗೆಗೆ ಬಹಳ ಮುಖ್ಯ. ಹಾಗಾಗಿ, ಜಿರಳೆಗಳಿಲ್ಲವೆಂದರೆ ಸಸ್ಯಜಗತ್ತು ಹಾಗೂ ಪ್ರಾಣಿಜಗತ್ತಿನ ಸಮತೋಲನ ತಪ್ಪುವುದು. 

ಬೀಜವಾಹಕಗಳಾಗಿ ಕೆಲಸ ಮಾಡುವ ಇರುವೆಗಳು

1000 ಶತಕೋಟಿಯಿಂದ 10,000 ಶತಕೋಟಿಯಷ್ಟು ಭಾರಿ ಸಂಖ್ಯೆಯಲ್ಲಿರುವ ಇರುವೆಗಳು ಸಂಪೂರ್ಣ ಮರೆಯಾಗುವುದು ಸುಲಭದ ವಿಷಯವಿಲ್ಲ. ಅಂಟಾರ್ಟಿಕಾ ಹೊರತುಪಡಿಸಿ ಎಲ್ಲ ಖಂಡಗಳಲ್ಲೂ ವಾಸಿಸುವ ಇರುವೆಗಳು ಇಲ್ಲವಾದರೆ ಮನುಷ್ಯರಿಗೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ. ಇವು ಮಣ್ಣಿಗೆ ಗಾಳಿ ಒದಗಿಸುವ ಜೊತೆಗೆ ಕೀಟ ನಿಯಂತ್ರಣ ಮಾಡುತ್ತವೆ. ಬೇರೆ ಬೇರೆ ರೀತಿಯ ಗುಣಗಳನ್ನು ಹೊಂದಿದ 14,000ಕ್ಕೂ ಅಧಿಕ ಜಾತಿಯ ಇರುವೆಗಳಿದ್ದು, ಅವುಗಳಲ್ಲಿ ಕೆಲವು ಗಿಡದಿಂದ ಕೆಳಗೆ ಬೀಳುವ ಬೀಜಗಳನ್ನು ಬೇರೆಡೆ ಸಾಗಿಸುತ್ತವೆ. ಮತ್ತೆ ಕೆಲವು ಪರಾಗಸ್ಪರ್ಶ ಮಾಡುತ್ತವೆ. ಮತ್ತೊಂದಿಷ್ಟು ಜಾತಿಯ ಇರುವೆಗಳು ಬೇರೆ ಕೀಟಗಳು ಹಾಗೂ ಪ್ರಾಣಿಗಳಿಗೆ ಆಹಾರವಾಗಿವೆ. 

ನೊಣವಿಲ್ಲದಿದ್ದರೆ ಚಾಕೋಲೇಟ್ ಇಲ್ಲ!

ಅತಿ ಕೆಟ್ಟ ಹೆಸರು ಪಡೆದ ಕೀಟಗಳಲ್ಲಿ ನೊಣ ಮೊದಲಿಗ. ಕೊಳೆ, ಮಲ,ಕಾಯಿಲೆಗಳನ್ನು ಹರಡುವುದರಲ್ಲಿ ಅವು ಎಕ್ಸ್‌ಪರ್ಟ್ ಅಷ್ಟೇ ಅಲ್ಲ, ಅವುಗಳ ಕೂಗುವ ಸದ್ದು ಕೂಡಾ ಕಿವಿಯಲ್ಲಿ ಗುಯ್‌ಗುಟ್ಟಿ ನಿದ್ದೆ ಮಾಡಲು ಬಿಡದು. ಇವೆಲ್ಲವೂ ನಿಜ, ಆದರೆ, ಅವು ಮನುಷ್ಯನ ಜೀವನವನ್ನು ಭೂಮಿಯಲ್ಲಿ ಸರಾಗಗೊಳಿಸಿವೆ ಎಂಬುದೂ ಅಷ್ಟೇ ನಿಜ. ನೊಣಗಳೇನಾದರೂ ಮರೆಯಾದರೆ ಮನುಷ್ಯರ ಹಾಗೂ ಪ್ರಾಣಿಗಳ ಮೃತದೇಹ ತಿಂದು ಮಮರೆಯಾಗಿಸುವ ಹೊಣೆ ಕೇವಲ ಬ್ಯಾಕ್ಟೀರಿಯಾಗಲು ಹಾಗೂ ಫಂಗಸ್ ಹೊಣೆಯಾಗಿರುತ್ತಿತ್ತು. ಆಗ ಈ ಪ್ರಕ್ರಿಯೆ ಇನ್ನೂ ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿತ್ತು.

ಇದಲ್ಲದೆ, ಮಲವನ್ನು ರಿಸೈಕಲ್ ಮಾಡುವಲ್ಲಿ ಕೂಡಾ ಇವು ಎತ್ತಿದ ಕೈ. ಇವುಗಳ ಕೆಲ ವರ್ಗಗಳು ಉತ್ತಮ ಪರಾಗಸ್ಪರ್ಶಿಗಳು ಕೂಡಾ. ಅದರಲ್ಲೂ ಸೆರಟೋಪೋಗೊನಿಡ್ಸ್ ಎಂಬ ನೊಣದ ಜಾತಿಯು ಕೋಕೋ ಸಸ್ಯಗಳ ಪ್ರಮುಖ ಪರಾಗಸ್ಪರ್ಶಿ. ಅಂದರೆ, ಇವಿಲ್ಲದೆ ಹೋದರೆ ನಾವು ಚಾಕೋಲೇಟ್ ತಿನ್ನಲು ಸಾಧ್ಯವಿರುತ್ತಿರಲಿಲ್ಲ!