ಇಸ್ರೋ ಬಾಹ್ಯಾಕಾಶ ನಿಲ್ದಾಣಗಳ ಡಾಕಿಂಗ್‌ ಪ್ರಯೋಗ: ಇದರ ಯಶಸ್ಸಿನಲ್ಲಿದೆ ಭಾರತದ ಶ್ರೇಯಸ್ಸು

ಉಪಗ್ರಹಗಳು ಪರಸ್ಪರ ಒಂದೇ ಕಕ್ಷೆಯಲ್ಲಿ ಅಳವಡಿಕೆಯಾಗಿ, ಕ್ರಮೇಣ ಪರಸ್ಪರ ಸನಿಹಕ್ಕೆ ಚಲಿಸಲಿವೆ. ಅವೆರಡೂ ಸಾಕಷ್ಟು ಹತ್ತಿರಕ್ಕೆ ಸಾಗಿದ ಬಳಿಕ, ಅವು ಒಂದಕ್ಕೊಂದು ಜೋಡಣೆಯಾಗಿ, ವಿದ್ಯುತ್ ಶಕ್ತಿಯನ್ನು ಹಂಚಿಕೊಂಡು, ಬಳಿಕ ಬೇರ್ಪಡಲಿವೆ. ಬೇರ್ಪಟ್ಟ ಬಳಿಕ, ಮುಂದಿನ ಎರಡು ವರ್ಷಗಳ ಕಾಲ ಎರಡೂ ಉಪಗ್ರಹಗಳು ತಮ್ಮ ಪೇಲೋಡ್‌ಗಳನ್ನು ಬಳಸಿಕೊಂಡು ಕಾರ್ಯಾಚರಿಸಲಿವೆ.

ISRO space station docking experiment Indias credit lies in its success gvd

ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ.

ಭಾರತ ತನ್ನ ಬಾಹ್ಯಾಕಾಶ ಯಾತ್ರೆಯ ಒಂದು ಅತಿದೊಡ್ಡ ಹೆಜ್ಜೆ ಇಡಲು ಸನ್ನದ್ಧವಾಗುತ್ತಿದೆ. ಡಿಸೆಂಬರ್ 30ರಂದು ಇಸ್ರೋ ಪಿಎಸ್ಎಲ್‌ವಿ-ಸಿ60 ರಾಕೆಟ್ ಮೂಲಕ ಮಹತ್ವಾಕಾಂಕ್ಷಿ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್ (ಸ್ಪೇಡೆಕ್ಸ್) ಯೋಜನೆಯನ್ನು ಉಡಾವಣೆಗೊಳಿಸಲಿದೆ. ಸ್ಪೇಡೆಕ್ಸ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನದ ರಾತ್ರಿ 9:58ಕ್ಕೆ ಉಡಾವಣೆಗೊಳ್ಳಲಿದೆ. ಬಾಹ್ಯಾಕಾಶದಲ್ಲಿ ಎರಡು ಬಾಹ್ಯಾಕಾಶ ನೌಕೆಗಳ ಡಾಕಿಂಗ್ ನಡೆಸುವ ಭಾರತದ ಸಾಮರ್ಥ್ಯವನ್ನು ಇದು ಪ್ರದರ್ಶಿಸುವುದರಿಂದ, ಈ ಯೋಜನೆ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಈ ತಂತ್ರಜ್ಞಾನ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಬಹಳ ಮುಖ್ಯವಾಗಿದೆ.

ಡಾಕಿಂಗ್ ಎಂದರೆ, ಬಾಹ್ಯಾಕಾಶದಲ್ಲಿ ಎರಡು ಬಾಹ್ಯಾಕಾಶ ನೌಕೆಗಳನ್ನು ಜಾಗರೂಕವಾಗಿ ಸಂಯೋಜಿಸಿ, ಅವುಗಳನ್ನು ಒಂದಕ್ಕೊಂದು ಜೋಡಿಸುವ ಪ್ರಕ್ರಿಯೆಯಾಗಿದೆ. ಈ ತಂತ್ರಜ್ಞಾನ, ಇಸ್ರೋದ ಭವಿಷ್ಯದ ಯೋಜನೆಗಳಾದ ಚಂದ್ರಯಾನ-4 ಅಥವಾ ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣವಾದ ಭಾರತೀಯ ಅಂತರಿಕ್ಷ ಸ್ಟೇಷನ್ ನಿರ್ಮಾಣಕ್ಕೆ ಅತ್ಯವಶ್ಯಕವಾಗಿದೆ.

'ಮಹಾರತ್ನ' ಎಚ್ಎಎಲ್ ಇನ್ನಷ್ಟು ಸಾಧನೆ ಮೆರೆಯಲಿ: 85ನೇ ಸಂಸ್ಥಾಪನಾ ದಿನದಂದು ಯದುವೀರ್ ಒಡೆಯರ್ ಶ್ಲಾಘನೆ

ಯೋಜನೆಯ ಮೇಲ್ನೋಟ ಮತ್ತು ಗುರಿಗಳು: ಸ್ಪೇಡೆಕ್ಸ್ ಯೋಜನೆ ಎರಡು ಉಪಗ್ರಹಗಳಾದ ಎಸ್‌ಡಿಎಕ್ಸ್01 (ಚೇಸರ್) ಮತ್ತು ಎಸ್‌ಡಿಎಕ್ಸ್02 (ಟಾರ್ಗೆಟ್) ಗಳನ್ನು ಹೊಂದಿದೆ. ಈ ಉಪಗ್ರಹಗಳು ಹಲವು ಮುಖ್ಯ ಕಾರ್ಯಗಳನ್ನು ನೆರವೇರಿಸಲಿವೆ. ಮೊದಲನೆಯದಾಗಿ, ಅವೆರಡು ಉಪಗ್ರಹಗಳು ಪರಸ್ಪರ ಒಂದೇ ಕಕ್ಷೆಯಲ್ಲಿ ಅಳವಡಿಕೆಯಾಗಿ, ಕ್ರಮೇಣ ಪರಸ್ಪರ ಸನಿಹಕ್ಕೆ ಚಲಿಸಲಿವೆ. ಅವೆರಡೂ ಸಾಕಷ್ಟು ಹತ್ತಿರಕ್ಕೆ ಸಾಗಿದ ಬಳಿಕ, ಅವು ಒಂದಕ್ಕೊಂದು ಜೋಡಣೆಯಾಗಿ, ವಿದ್ಯುತ್ ಶಕ್ತಿಯನ್ನು ಹಂಚಿಕೊಂಡು, ಬಳಿಕ ಬೇರ್ಪಡಲಿವೆ. ಬೇರ್ಪಟ್ಟ ಬಳಿಕ, ಮುಂದಿನ ಎರಡು ವರ್ಷಗಳ ಕಾಲ ಎರಡೂ ಉಪಗ್ರಹಗಳು ತಮ್ಮ ಪೇಲೋಡ್‌ಗಳನ್ನು ಬಳಸಿಕೊಂಡು ಕಾರ್ಯಾಚರಿಸಲಿವೆ.

ಪೇಲೋಡ್ ಎಂದರೆ ಉಪಗ್ರಹ ಅಥವಾ ಬಾಹ್ಯಾಕಾಶ ನೌಕೆಯಲ್ಲಿರುವ ಉಪಕರಣಗಳಾಗಿದ್ದು, ಅವುಗಳು ಯೋಜನಾ ಕಾರ್ಯಗಳನ್ನು ನೆರವೇರಿಸುತ್ತವೆ. ಪೇಲೋಡ್‌ನಲ್ಲಿ ವೈಜ್ಞಾನಿಕ ಸಂಶೋಧನೆ ಅಥವಾ ನಿರ್ದಿಷ್ಟ ಉದ್ದೇಶಗಳಿಗಾಗಿ ಕ್ಯಾಮೆರಾಗಳು, ಸಂವಹನ ಉಪಕರಣಗಳು, ಸೆನ್ಸರ್‌ಗಳು ಸೇರಿವೆ. ಭಾರತದ ನಂಬಿಕಾರ್ಹ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್‌ವಿ-ಸಿ60) ತಲಾ 220 ಕೇಜಿ ತೂಕ ಹೊಂದಿರುವ ಎಸ್‌ಡಿಎಕ್ಸ್01 (ಚೇಸರ್) ಮತ್ತು ಎಸ್‌ಡಿಎಕ್ಸ್02 (ಟಾರ್ಗೆಟ್) ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಒಯ್ದು, ಬಳಿಕ ಅವುಗಳನ್ನು 470 ಕಿಲೋಮೀಟರ್ ವ್ಯಾಪ್ತಿಯ ವೃತ್ತಾಕಾರದ ಭೂಮಿಯ ಕೆಳಕಕ್ಷೆಯಲ್ಲಿ ಅಳವಡಿಸಲಿದೆ.

470 ಕಿಲೋಮೀಟರ್‌ಗಳ ಕಕ್ಷೆಯಲ್ಲಿ ಅಳವಡಿಸಿದ ಬಳಿಕ, ರಾಕೆಟ್ ಎರಡು ಉಪಗ್ರಹಗಳ ವೇಗದಲ್ಲಿ ಕೊಂಚ ಬದಲಾವಣೆ ತರಲಿದೆ. ಈ ವ್ಯತ್ಯಾಸದ ಕಾರಣದಿಂದ, ಉಪಗ್ರಹಗಳು ಕ್ರಮೇಣ ಒಂದರಿಂದ ಒಂದು ದೂರಾಗಿ, ಒಂದು ದಿನದಲ್ಲಿ ಅವೆರಡರ ನಡುವೆ 10-20 ಕಿಲೋಮೀಟರ್‌ಗಳ ಅಂತರ ಸೃಷ್ಟಿಯಾಗುತ್ತದೆ. ಟಾರ್ಗೆಟ್ ಉಪಗ್ರಹದಲ್ಲಿರುವ ಪ್ರೊಪಲ್ಷನ್ ವ್ಯವಸ್ಥೆಯನ್ನು ಬಳಸಿಕೊಂಡು, ಎರಡು ಉಪಗ್ರಹಗಳು ಇನ್ನಷ್ಟು ದೂರಾಗದಂತೆ ತಡೆಯಲಾಗುತ್ತದೆ. ಅಂದರೆ, ಇವೆರಡು ಉಪಗ್ರಹಗಳು ಪರಸ್ಪರ 20 ಕಿಲೋಮೀಟರ್ ಅಂತರವನ್ನು ಕಾಯ್ದುಕೊಂಡು, ಒಂದೇ ವೇಗದಲ್ಲಿ ಸಂಚರಿಸಲಿವೆ. ಈ ಹಂತವನ್ನು ''ಫಾರ್ ರೆಂಡೆಜ್ವಸ್'' ಎಂದು ಕರೆಯಲಾಗುತ್ತದೆ.

ರೆಂಡೆಜ್ವಸ್ ಎಂದರೆ, ಬಾಹ್ಯಾಕಾಶದಲ್ಲಿ ಪ್ರತ್ಯೇಕ ಸ್ಥಾನ ಅಥವಾ ಪಥದಿಂದ ಆಗಮಿಸುವ ಎರಡು ವಸ್ತುಗಳು ಅಥವಾ ಕಾಯಗಳು ಪರಸ್ಪರ ಭೇಟಿಯಾಗುವ, ಅಥವಾ ಸನಿಹಕ್ಕೆ ಬರುವ ಕ್ರಿಯೆ. ಇನ್ನು ವೇಗದ ವಿಚಾರಕ್ಕೆ ಬರುವುದಾದರೆ, ಎರಡು ಉಪಗ್ರಹಗಳು ಪ್ರತಿ ಗಂಟೆಗೆ 28,800 ಕಿಲೋಮೀಟರ್‌ಗಳ ಅಸಾಧಾರಣ ವೇಗದಲ್ಲಿ ಚಲಿಸಲಿವೆ. ಅಂದರೆ, ಇವು ವಾಣಿಜ್ಯಿಕ ವಿಮಾನಕ್ಕಿಂತ 36 ಪಟ್ಟು ವೇಗವಾಗಿ, ಗುಂಡಿನ ವೇಗಕ್ಕಿಂತ 10 ಪಟ್ಟು ಹೆಚ್ಚಿನ ವೇಗದಲ್ಲಿ ಚಲಿಸಲಿವೆ. ಸುರಕ್ಷಿತವಾಗಿ ಡಾಕಿಂಗ್ ನಡೆಸುವ ಸಲುವಾಗಿ, ಚೇಸರ್ ಉಪಗ್ರಹ ನಿಧಾನವಾಗಿ, ಹಂತ ಹಂತವಾಗಿ ತನ್ನ ವೇಗವನ್ನು ಕಡಿಮೆಗೊಳಿಸಿ ಟಾರ್ಗೆಟ್ ಉಪಗ್ರಹದ ಕಡೆಗೆ ಚಲಿಸುತ್ತದೆ. ಈ ಹಿಂಬಾಲಿಸುವಿಕೆ ಒಂದು ವಿಧಾನವನ್ನು ಅನುಸರಿಸಲಿದ್ದು, 20 ಕಿಲೋಮೀಟರ್‌ಗಳ ಅಂತರವನ್ನು 5 ಕಿಲೋಮೀಟರ್, 1.5 ಕಿಲೋಮೀಟರ್, 500 ಮೀಟರ್, 225 ಮೀಟರ್, 15 ಮೀಟರ್, ಕೊನೆಗೆ 3 ಮೀಟರ್‌ಗಳಿಗೆ ಇಳಿಸಿ, ಅಂತಿಮವಾಗಿ ಡಾಕಿಂಗ್ ನಡೆಸಲಾಗುತ್ತದೆ.

ಈ ವೇಳೆಗೆ, ವಿಶೇಷ ಥ್ರಸ್ಟರ್‌ಗಳನ್ನು ಬಳಸಿಕೊಂಡು, ಉಪಗ್ರಹಗಳ ವೇಗವನ್ನು ಬಹುತೇಕ ಶೂನ್ಯಕ್ಕೆ (ಅಂದಾಜು ಪ್ರತಿ ಗಂಟೆಗೆ 0.036 ಕಿಲೋಮೀಟರ್ ಅಥವಾ ಪ್ರತಿ ಸೆಕೆಂಡಿಗೆ 10 ಮಿಲಿಮೀಟರ್) ಇಳಿಸಿ, ಅವುಗಳು ಸಮರ್ಥವಾಗಿ ಒಂದಕ್ಕೊಂದು ಜೋಡಣೆಯಾಗುವಂತೆ ಮಾಡಲಾಗುತ್ತದೆ. ಉಪಗ್ರಹಗಳೆರಡು ಒಂದಕ್ಕೊಂದು ಬೆಸೆದ ಬಳಿಕ, ಅವುಗಳು ತಮ್ಮ ನಡುವೆ ವಿದ್ಯುತ್ ಶಕ್ತಿಯನ್ನು ಹಂಚಿಕೊಳ್ಳುವ ಪರೀಕ್ಷೆಯನ್ನು ನಡೆಸಲಿವೆ. ಆ ಬಳಿಕ, ಎರಡು ಉಪಗ್ರಹಗಳನ್ನು ಒಂದೇ ವಸ್ತುವಿನಂತೆ ನಿಯಂತ್ರಿಸಲು ಸಾಧ್ಯವೇ ಎಂದು ಪರಿಶೀಲಿಸಲಾಗುತ್ತದೆ. ಪರೀಕ್ಷೆಗಳು ಪೂರ್ಣಗೊಂಡ ಬಳಿಕ, ಉಪಗ್ರಹಗಳು ಪ್ರತ್ಯೇಕಗೊಂಡು, ಸ್ವತಂತ್ರವಾಗಿ ತಮ್ಮ ಕಾರ್ಯಗಳನ್ನು ನಡೆಸುತ್ತವೆ.

ಚೇಸರ್ ಉಪಗ್ರಹದಲ್ಲಿ ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾವನ್ನು ಅಳವಡಿಸಲಾಗುತ್ತದೆ. ಇನ್ನು ಟಾರ್ಗೆಟ್ ಉಪಗ್ರಹ ಭೂಮಿಯ ನೈಸರ್ಗಿಕ ಸಂಪನ್ಮೂಲಗಳು, ಸಸ್ಯ ಸಂಪತ್ತನ್ನು ಗಮನಿಸುವ ಸಲುವಾಗಿ ಮಲ್ಟಿಸ್ಪೆಕ್ಟ್ರಲ್ ಉಪಕರಣವನ್ನು ಹೊಂದಿದೆ. ಇದು ಬಾಹ್ಯಾಕಾಶದ ವಿಕಿರಣ ಮಟ್ಟವನ್ನು ಗಮನಿಸಿ, ಮುಂದಿನ ಯೋಜನೆಗಳ ಬಳಕೆಗಾಗಿ ಅದನ್ನು ದಾಖಲಿಸುತ್ತದೆ. ಇವೆರಡು ಉಪಗ್ರಹಗಳು ಸಣ್ಣವೂ, ಹಗುರವೂ ಆಗಿರುವುದರಿಂದ, ಅವುಗಳ ಡಾಕಿಂಗ್ ನಡೆಸುವುದು ಹೆಚ್ಚು ಕಷ್ಟಕರ ಪ್ರಕ್ರಿಯೆ. ದೊಡ್ಡ ಬಾಹ್ಯಾಕಾಶ ನೌಕೆಗಳ ಡಾಕಿಂಗ್‌ಗೆ ಹೋಲಿಸಿದರೆ, ಇದಕ್ಕೆ ಹೆಚ್ಚಿನ ನಿಖರತೆ ಬೇಕಾಗುತ್ತದೆ. ಏನಾದರೂ ಸಣ್ಣ ತಪ್ಪಾದರೂ ಅದರ ಪರಿಣಾಮ ದೊಡ್ಡದಾಗಿರುತ್ತದೆ.

ವರ್ಷಾಂತ್ಯದಲ್ಲಿ ನಡೆಯುವ ಸ್ಪೇಡೆಕ್ಸ್ ಯೋಜನೆಯ ಮೂಲಕ ಭಾರತ ಹಲವಾರು ಪ್ರಥಮಗಳನ್ನು ದಾಖಲಿಸಲಿದೆ. ಉಪಗ್ರಹಗಳು ವಿಶೇಷ ಡಾಕಿಂಗ್ ವ್ಯವಸ್ಥೆಯಂತಹ ನೂತನ, ಆಧುನಿಕ ತಂತ್ರಜ್ಞಾನಗಳನ್ನು ಪರೀಕ್ಷಿಸಲಿವೆ. ಪರಸ್ಪರ ಡಿಕ್ಕಿ ಹೊಡೆಯದಂತೆ ಡಾಕಿಂಗ್ ನಡೆಸುವ ಸಲುವಾಗಿ ಉಪಗ್ರಹಗಳಲ್ಲಿರುವ ಸೆನ್ಸರ್‌ಗಳು ಉಪಗ್ರಹಗಳ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸಲಿವೆ. ಉಪಗ್ರಹಗಳು ತಮ್ಮ ಸ್ಥಾನವನ್ನು ಲೆಕ್ಕಾಚಾರ ಹಾಕಲು ಮತ್ತು ಕಕ್ಷೆಯಲ್ಲಿನ ಚಲನೆಯನ್ನು ನಿಖರವಾಗಿ ಗುರುತಿಸಲು ವಿಶಿಷ್ಟ ಸಂಚರಣಾ (ನ್ಯಾವಿಗೇಶನ್) ವ್ಯವಸ್ಥೆಯನ್ನು ಬಳಸಲಿವೆ. ಆ ಮೂಲಕ ಸಂಪೂರ್ಣ ಪ್ರಕ್ರಿಯೆ ಸುಗಮವಾಗಿ ಸಾಗುತ್ತದೆ.

ಇಲ್ಲಿಯತನಕ, ಕೇವಲ ರಷ್ಯಾ, ಅಮೆರಿಕ ಮತ್ತು ಚೀನಾಗಳು ಮಾತ್ರವೇ ಬಾಹ್ಯಾಕಾಶ ಡಾಕಿಂಗ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಭಿವೃದ್ಧಿ ಪಡಿಸಿವೆ. ಆದರೆ, ಇದನ್ನು ನಡೆಸುವುದು ಹೇಗೆ ಎಂಬ ರಹಸ್ಯವನ್ನು ಯಾವ ದೇಶವೂ ಬಹಿರಂಗಪಡಿಸಿಲ್ಲ. ಡಾಕಿಂಗ್ ಪ್ರಯೋಗದ ಹೊರತಾಗಿ, ಪಿಎಸ್ಎಲ್‌ವಿ-ಸಿ60 ರಾಕೆಟ್ ಪಿಒಇಎಂ-4 ಎಂದು ಕರೆಯಲಾಗುವ ತನ್ನ ನಾಲ್ಕನೇ ಹಂತದಲ್ಲಿ (ಅಥವಾ ಪಿಎಸ್ಎಲ್‌ವಿ ಆರ್ಬಿಟಲ್ ಎಕ್ಸ್‌ಪರಿಮೆಂಟಲ್ ಮಾಡ್ಯುಲ್-4) 24 ಸಣ್ಣ ಉಪಕರಣಗಳನ್ನು (ಪೇಲೋಡ್) ಒಯ್ಯಲಿದೆ. ಎರಡು ಮುಖ್ಯ ಉಪಗ್ರಹಗಳನ್ನು ಕಕ್ಷೆಗೆ ಬಿಡುಗಡೆಗೊಳಿಸಿದ ಬಳಿಕ ಈ ಉಪಕರಣಗಳು ಚಾಲನೆಗೊಳ್ಳುತ್ತವೆ. 24 ಪೇಲೋಡ್‌ಗಳ ಪೈಕಿ, 14 ಪೇಲೋಡ್‌ಗಳನ್ನು ಇಸ್ರೋ ತಂಡ ಅಭಿವೃದ್ಧಿ ಪಡಿಸಿದ್ದರೆ, ಇನ್ನುಳಿದ ಹತ್ತು ಪೇಲೋಡ್‌ಗಳನ್ನು ವಿಶ್ವವಿದ್ಯಾಲಯಗಳು, ಸ್ಟಾರ್ಟಪ್‌ಗಳು ಸೇರಿದಂತೆ ವಿವಿಧ ಸರ್ಕಾರೇತರ ಸಂಸ್ಥೆಗಳು ನಿರ್ಮಿಸಿವೆ.

ಸ್ಪೇಡೆಕ್ಸ್ ಯೋಜನೆಯಲ್ಲಿ ಕರ್ನಾಟಕದ ಪಾತ್ರ: ಶೈಕ್ಷಣಿಕ ಸಂಸ್ಥೆಗಳು ಮತ್ತು ಸ್ಟಾರ್ಟಪ್‌ಗಳ ಸಹಯೋಗ ಸ್ಪೇಡೆಕ್ಸ್ ಯೋಜನೆಯ ಬಾಹ್ಯಾಕಾಶ ತಂತ್ರಜ್ಞಾನ ಅನ್ವೇಷಣೆಗಳಲ್ಲಿ ಕರ್ನಾಟಕದ ಮಹತ್ವದ ಕೊಡುಗೆಗಳಿವೆ. ಸರ್ಕಾರೇತರ ಸಂಸ್ಥೆಗಳ ನಿರ್ಮಾಣದ ಹತ್ತು ಪೇಲೋಡ್‌ಗಳ ಪೈಕಿ ಮೂರು ಕರ್ನಾಟಕದಲ್ಲೇ ನಿರ್ಮಾಣಗೊಂಡಿವೆ. ಈ ಪೇಲೋಡ್‌ಗಳನ್ನು ಶಿಕ್ಷಣ ಸಂಸ್ಥೆಗಳು, ಸ್ಟಾರ್ಟಪ್‌ಗಳು ನಿರ್ಮಿಸಿದ್ದು, ಬಾಹ್ಯಾಕಾಶ ಅನ್ವೇಷಣೆಯಲ್ಲಿ ಕರ್ನಾಟಕದ ನಿರಂತರ ಬದ್ಧತೆಗೆ ಸಾಕ್ಷಿಯಾಗಿವೆ.

1.ಆರ್‌ವಿಸ್ಯಾಟ್-1: ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಂಶೋಧಕರು ನಿರ್ಮಿಸಿರುವ ಆರ್‌ವಿಸ್ಯಾಟ್-1, ಬಾಹ್ಯಾಕಾಶದಲ್ಲಿ ಕರುಳಿನ ಬ್ಯಾಕ್ಟೀರಿಯಾಗಳು ಹೇಗೆ ಬೆಳೆಯುತ್ತವೆ ಎನ್ನುವುದರ ಅಧ್ಯಯನ ನಡೆಸಲಿದೆ. ಇದನ್ನು ಅರ್ಥ ಮಾಡಿಕೊಂಡರೆ, ಪರಿಣಾಮಕಾರಿ ಆ್ಯಂಟಿಬಯಾಟಿಕ್‌ಗಳನ್ನು ಅಭಿವೃದ್ಧಿ ಪಡಿಸಿ, ಗಗನಯಾತ್ರಿಗಳ ಆರೋಗ್ಯವನ್ನು ಉತ್ತಮಪಡಿಸಲು ಸಾಧ್ಯ.

2. ಬಿಜಿಎಸ್ ಅರ್ಪಿತ್: ಎಸ್‌ಜೆಸಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಚಿಕ್ಕಬಳ್ಳಾಪುರ ವಿನ್ಯಾಸಗೊಳಿಸಿರುವ ಈ ಪೇಲೋಡ್, ಧ್ವನಿ, ಅಕ್ಷರ ಮತ್ತು ಚಿತ್ರಗಳು ಸೇರಿದಂತೆ ಸಂದೇಶಗಳನ್ನು ಕಳುಹಿಸುವ ಟ್ರಾನ್ಸ್‌ಮಿಟರ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದು ಎಫ್ಎಂ ಸಂಕೇತಗಳು ಮತ್ತು ವಿಎಚ್ಎಫ್ ಬ್ಯಾಂಡ್ ಬಳಸಿಕೊಂಡು ಉಪಗ್ರಹದಿಂದ ಭೂಮಿಗೆ ಸಂದೇಶ ರವಾನಿಸುತ್ತದೆ. ಈ ತಂತ್ರಜ್ಞಾನ ಜಗತ್ತಿನಾದ್ಯಂತ ಅಮೆಚೂರ್ ರೇಡಿಯೋ ಸೇವೆಗೂ ಲಭ್ಯವಿದೆ. ಎಸ್‌ಜೆಸಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 1986ರಲ್ಲಿ ಸ್ಥಾಪನೆಗೊಂಡ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾಗಿದೆ. ಬೆಂಗಳೂರಿನ ಸನಿಹದಲ್ಲಿರುವ ಈ ಸಂಸ್ಥೆಯನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಿರ್ವಹಿಸುತ್ತಿದೆ. ಸಂಸ್ಥೆ ಡಾ। ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಆಶೀರ್ವಾದ ಮತ್ತು ಡಾ। ನಿರ್ಮಲಾನಂದನಾಥ ಮಹಾಸ್ವಾಮಿಯವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿದೆ.

ವಿಜಯ ದಿವಸದ ಸಂಭ್ರಮಕ್ಕೆ ಪ್ರತಿಭಟನೆ, ಉದ್ವಿಗ್ನತೆಗಳ ಕರಿನೆರಳು

3.ರುದ್ರ 1.0 ಎಚ್‌ಪಿಜಿಪಿ ಪೇಲೋಡ್: ಬೆಂಗಳೂರಿನ ಬೆಲ್ಲಾಟ್ರಿಕ್ಸ್ ಏರೋಸ್ಪೇಸ್ ಪ್ರೈವೇಟ್‌ ಲಿಮಿಟೆಡ್‌ ನಿರ್ಮಿಸಿರುವ ಈ ಪೇಲೋಡ್, ಅತ್ಯಾಧುನಿಕ ಹಸಿರು ಪ್ರೊಪಲ್ಷನ್ ತಂತ್ರಜ್ಞಾನವನ್ನು ಪ್ರದರ್ಶಿಸುತ್ತದೆ. ಈ ತಂತ್ರಜ್ಞಾನ ಹೆಚ್ಚು ಸಮರ್ಥವೂ, ಪರಿಸರ ಸ್ನೇಹಿಯೂ ಆಗಿದೆ. ಕರ್ನಾಟಕ ಮೂಲದ ಸಂಸ್ಥೆಗಳು ಮತ್ತು ಸ್ಟಾರ್ಟಪ್‌ಗಳ ಈ ಕೊಡುಗೆಗಳು ಭಾರತದ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೆಚ್ಚುತ್ತಿರುವ ಕರ್ನಾಟಕದ ಪ್ರಾಧಾನ್ಯತೆಗೆ ಸಾಕ್ಷಿಯಾಗಿವೆ. ಶೈಕ್ಷಣಿಕ ಸಂಶೋಧನೆಗಳು ಮತ್ತು ವಾಣಿಜ್ಯೋದ್ಯಮದ ಪ್ರಯತ್ನಗಳು ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲಿವೆ.

Latest Videos
Follow Us:
Download App:
  • android
  • ios