ಭಾರತದ ಚಂದ್ರಯಾನ-3 ಯಶಸ್ಸಿನ ಬಗ್ಗೆ ಹಿರಿಯ ಕವಿ ಎಚ್‌ಎಸ್‌ ವೆಂಕಟೇಶಮೂರ್ತಿ ಅವರು ಬರೆದ ವಿಶೇಷ ಕವಿತೆ

- ಎಚ್.ಎಸ್.ವಿ (ಎಚ್ ಎಸ್‌ ವೆಂಕಟೇಶಮೂರ್ತಿ)

ಭಾರತದ ವಿಕ್ರಮ್- ಲ್ಯಾಂಡರ್ ಚಂದ್ರನ ಮೇಲೆ ಬಾಲಗೋಪಾಲನಂತೆ

ಅಂಬೆಗಾಲೂರಿದ್ದೇ ತಡ ಹಿಂದುಸಾಗರದಲ್ಲಿ ಅಬ್ಬರದೇರಿಳಿತ. ಎಲ್ಲೆಲ್ಲೂ

ತಿರಂಗದ ಗಾಳಿಪುಲಕ. ವಿಜ್ಞಾನಿ, ಯೋಧ, ಕಲಾವಿದ, ಹೊಲವುತ್ತು

ತಾಯ್ನೆಲದಲ್ಲಿ ಕಿರುನಗೆ ಬಿಡಿಸುವ ರೈತ, ಕಾರ್ಮಿಕ- ಕುಣಿಕುಣಿದು

ತಣಿದರೀ ನೆಲದ ನೆಲೆಯಲ್ಲಿ. ಮುದ್ದುಗೋಪಾಲ ಎಲ್ಲಿ? ಕಾಳಿಂಗನ

ಮೆಟ್ಟಿ ತಕ ಧಿಮಿ ಧಿಮಿ ತಕ ಕುಣಿಯತೊಡಗಿದ್ದಾನೆ. ಕಬ್ಬೊಗೆಯ

ಹೆಡೆ ಮುದುಡಿ ನೆಲ ಕಚ್ಚಿದಾಗ ನಾಗ, ಬೆಳ್ದಿಂಗಳಮೃತ ಪ್ರೋಕ್ಷಣೆ

ಭರತ ವರ್ಷದ ಮೇಲೆ! ಹೀಗೆ ನೆಡೆದಿದೆ ನವಯುಗದ ತ್ರಿವಿಕ್ರಮ ಲೀಲೆ.

ಸುರಿವ ಬೆಳ್ದಿಂಗಳಲಿ ತೊಪ್ಪ ತೋಯುತ್ತಿದೆ ಅಖಂಡ ಭರತ ಖಂಡ.

ಪಕ್ಷ, ಲಿಂಗ, ಧರ್ಮಾತೀತ ಮಂದಿ ಹಾಕುತ್ತಾ ಇಸ್ರೋಗೆ ಒಕ್ಕೊರಲ

ಜಯಘೋಷ, ಹೂಬಿಟ್ಟ ತಿಳಿಗೊಳದ ಕನ್ನೈದಿಲೆಯಂತೆ ಸುಳಿವ ಗಾಳಿಗೆ

ತೊನೆಯುತ್ತ ತಲೆ, ಭಲೆ ಭಲೆ ಎನ್ನುವಾಗ, ನಭೋಯಾನದ ಇತಿಹಾಸ

ಸೂಸಲು ಚಂದ್ರಹಾಸ, ಕೇಳಿ ಬರುತಿರೆ ಹಲವು ಒಲವಿನೊಂದೇ ನೆಲೆಯ

ಒಕ್ಕೊರಲ ಪ್ರಾರ್ಥನೆ- ಇರುಳಲ್ಲೇ ಬೆಳ್ಳಂಬೆಳಗಿನ ಭರತ ಭಾರತದಲ್ಲಿ.