ಡೆಟ್ರಾಯಿಟ್‌ (ಮೇ.23): ಇದೇ ಮೇ 26ರಂದು ಅಪರೂಪದ ಖಗೋಳ ವಿದ್ಯಮಾನವೊಂದು ಘಟಿಸಲಿದೆ. ಅಂದು ಈ ವರ್ಷದ ಮೊದಲ ಚಂದ್ರಗ್ರಹಣ ಇದ್ದು, ಅದೇ ದಿನ ಸೂಪರ್‌ ಮೂನ್‌ ಹಾಗೂ ರೆಡ್‌ ಬ್ಲಡ್‌ ಮೂನ್‌ ವಿದ್ಯಮಾನವೂ ಗೋಚರವಾಗಲಿದೆ. ಇದನ್ನು ವೀಕ್ಷಿಸಲು ಖಗೋಳಾಸಕ್ತರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಭೂಮಿಯ ಸನಿಹಕ್ಕೆ ಚಂದ್ರ ಬಂದು ಎಂದಿಗಿಂತ ದೊಡ್ದದಾಗಿ ಕಾಣುವುದನ್ನು ಸೂಪರ್‌ ಮೂನ್‌ ಎಂದು ಕರೆಯಲಾಗುತ್ತದೆ. ಇದು ಹುಣ್ಣಿಮೆಯ ದಿನ ಘಟಿಸುತ್ತದೆ. ಭೂಮಿಯ ನೆರಳು ಹುಣ್ಣಿಮೆಯ ದಿನ ಚಂದ್ರನ ಮೇಲೆ ಬಿದ್ದಾಗ ಚಂದ್ರ ಮರೆಯಾಗುತ್ತಾನೆ. ಇದನ್ನು ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ಭೂಮಿಯ ಸಂಪೂರ್ಣ ನೆರಳಿನಿಂದ ಚಂದ್ರ ಆವೃತ್ತವಾಗಿ, ಕೆಂಪು ಬಣ್ಣ ಗೋಚರವಾದರೆ ಅದನ್ನು ಬ್ಲಡ್‌ ರೆಡ್‌ ಬ್ಲಡ್‌ ಮೂನ್‌ ಎಂದು ಕರೆಯಲಾಗುತ್ತದೆ.

ಈ ಅಪರೂಪದ ವಿದ್ಯಮಾನ ಏಷ್ಯಾದ ಪೂರ್ವ ಕರಾವಳಿ, ಪೆಸಿಫಿಕ್‌ ಸಾಗರ, ಆಸ್ಪ್ರೇಲಿಯಾ, ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಕಂಡುಬರುತ್ತದೆ. ಅಮೆರಿಕದ ಅರ್ಧಭಾಗಕ್ಕೆ ಇದು ಗೋಚರವಾಗಲಿದೆ ಎಂದು ಖಗೋಳ ತಜ್ಞರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಗೋಚರವಿಲ್ಲ

ಈ ಚಂದ್ರಗ್ರಹಣ ದೇಶದ ಈಶಾನ್ಯ ರಾಜ್ಯಗಳಲ್ಲಿ ಮಾತ್ರವೇ ಗೋಚರವಾಗಲಿದೆ. ಕರ್ನಾಟಕದಲ್ಲಿ ಕಾಣಸಿಗದು.