ಸೂರ್ಯ ಯಾವ ಬಣ್ಣದಲ್ಲಿ ಇರುತ್ತಾನೆ ಎಂದು ಕೇಳಿದ ತಕ್ಷಣ ನಾವೆಲ್ಲ ಹಳದಿ ಅಥವಾ ಕೇಸರಿ ಬಣ್ಣ ಎನ್ನುತ್ತೇವೆ. ಆದರೆ ಸೂರ್ಯನ ನಿಜವಾದ ಬಣ್ಣ ಬಿಳಿ ಎಂಬುದು ನಿಮಗೆ ಗೊತ್ತೇ? ಬಾಹ್ಯಾಕಾಶದಿಂದ ನೋಡಿದರೆ ಸೂರ್ಯ ಹಾಲು ಬಿಳುಪಿನಂತೆ ಕಾಣುತ್ತಾನೆ. ಹಾಗಾದರೆ ಸೂರ್ಯನ ಬಣ್ಣದ ಹಿಂದಿರುವ ಈ ಮ್ಯಾಜಿಕ್ ಏನು?

ನಮ್ಮ ಕಣ್ಣಿಗೆ ಸೂರ್ಯ ಹಳದಿ ಅಥವಾ ಕೇಸರಿ ಬಣ್ಣದಲ್ಲಿ ಕಾಣಲು ಭೂಮಿಯ ವಾತಾವರಣವೇ ಕಾರಣ. ಗಾಳಿ, ಧೂಳಿನ ಕಣಗಳು ಸೂರ್ಯನ ಬೆಳಕನ್ನು ಚದುರಿಸಿ ಬೇರೆ ಬಣ್ಣದಲ್ಲಿ ಕಾಣುವಂತೆ ಮಾಡುತ್ತವೆ. ಸೂರ್ಯನ ಬೆಳಕು ಒಂದೇ ಬಣ್ಣದ್ದಲ್ಲ, ಅದರಲ್ಲಿ ಕಾಮನಬಿಲ್ಲಿನ ಏಳು ಬಣ್ಣಗಳೂ ಸೇರಿವೆ. ಈ ಎಲ್ಲಾ ಬಣ್ಣಗಳು ಒಟ್ಟಿಗೆ ಸೇರಿದಾಗ ಅದು ಬಿಳಿ ಬೆಳಕಿನಂತೆ ಕಾಣುತ್ತದೆ. ಇದೇ ಕಾರಣಕ್ಕೆ ಬಾಹ್ಯಾಕಾಶದಿಂದ ನೋಡಿದಾಗ ಸೂರ್ಯ ಸಂಪೂರ್ಣವಾಗಿ ಬಿಳಿಯಾಗಿ ಕಾಣುತ್ತಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೂರ್ಯನ ಬೆಳಕು ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ, ಅದು ಗಾಳಿ ಮತ್ತು ಧೂಳಿನ ಕಣಗಳಿಗೆ ತಗುಲುತ್ತದೆ. ಇದರಿಂದ ಬೆಳಕು ಎಲ್ಲಾ ದಿಕ್ಕುಗಳಲ್ಲಿಯೂ ಹರಡುತ್ತದೆ. ಈ ಪ್ರಕ್ರಿಯೆಯನ್ನು ವಿಜ್ಞಾನಿಗಳು 'ಸ್ಕ್ಯಾಟರಿಂಗ್' ಅಥವಾ 'ಬೆಳಕಿನ ಚದುರುವಿಕೆ' ಎನ್ನುತ್ತಾರೆ. ನೀಲಿ ಮತ್ತು ನೇರಳೆ ಬಣ್ಣದ ಬೆಳಕಿನ ತರಂಗಾಂತರ (wavelength) ಚಿಕ್ಕದಾಗಿರುವುದರಿಂದ, ಅವು ಹೆಚ್ಚು ಚದುರುತ್ತವೆ. ಇದೇ ಕಾರಣಕ್ಕೆ ಆಕಾಶ ನಮಗೆ ನೀಲಿ ಬಣ್ಣದಲ್ಲಿ ಕಾಣುತ್ತದೆ. ಇನ್ನು ಉಳಿದ ಬೆಳಕು ಹಳದಿ ಬಣ್ಣದ ಕಡೆಗೆ ವಾಲುವುದರಿಂದ ಸೂರ್ಯ ನಮಗೆ ಹಳದಿಯಾಗಿ ಕಾಣುತ್ತಾನೆ.

ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಸೂರ್ಯ ಕೆಂಪು ಅಥವಾ ಗಾಢ ಕೇಸರಿ ಬಣ್ಣದಲ್ಲಿ ಕಾಣುತ್ತಾನೆ. ಇದಕ್ಕೂ ವಾತಾವರಣವೇ ಕಾರಣ. ಹೀಗಾಗಿ ಸೂರ್ಯನ ಕಿರಣಗಳು ನಮ್ಮ ಕಣ್ಣನ್ನು ತಲುಪಲು ಹೆಚ್ಚು ದೂರ ಪ್ರಯಾಣಿಸಬೇಕು. ಈ ದೀರ್ಘ ಪ್ರಯಾಣದಲ್ಲಿ, ನೀಲಿ ಮತ್ತು ಹಸಿರು ಬಣ್ಣದಂತಹ ಚಿಕ್ಕ ತರಂಗಾಂತರದ ಬೆಳಕು ಸಂಪೂರ್ಣವಾಗಿ ಚದುರಿಹೋಗುತ್ತದೆ. ಕೊನೆಗೆ ಕೆಂಪು ಮತ್ತು ಕೇಸರಿ ಬಣ್ಣದ ಬೆಳಕು ಮಾತ್ರ ನಮ್ಮನ್ನು ತಲುಪುತ್ತದೆ. ಹಾಗಾಗಿಯೇ ಸೂರ್ಯ ಕೆಂಪಾಗಿ ಕಾಣುತ್ತಾನೆ.

ಬಣ್ಣ ಬದಲಾದಂತೆ ಭಾಸವಾಗುತ್ತದೆ

ಸೂರ್ಯನ ಒಳಗೆ ನಿರಂತರವಾಗಿ ಪರಮಾಣು ಸಮ್ಮಿಲನ (nuclear fusion) ಪ್ರಕ್ರಿಯೆ ನಡೆಯುತ್ತಿರುತ್ತದೆ. ಹೈಡ್ರೋಜನ್ ಅಣುಗಳು ಒಂದಾಗಿ ಹೀಲಿಯಂ ಆಗಿ ಪರಿವರ್ತನೆಯಾಗುತ್ತವೆ. ಈ ಪ್ರಕ್ರಿಯೆಯಲ್ಲಿ, ಭಾರಿ ಪ್ರಮಾಣದ ಶಕ್ತಿ ಮತ್ತು ಬೆಳಕು ಬಿಡುಗಡೆಯಾಗುತ್ತದೆ. ಸೂರ್ಯನ ಮೇಲ್ಮೈ ತಾಪಮಾನ ಸುಮಾರು 5500 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಈ ತೀವ್ರವಾದ ಶಾಖ ಮತ್ತು ಬೆಳಕಿನಿಂದಾಗಿಯೇ ಸೂರ್ಯನು ಇಷ್ಟು ಪ್ರಕಾಶಮಾನವಾಗಿ ಕಾಣುತ್ತಾನೆ. ಬಾಹ್ಯಾಕಾಶದಲ್ಲಿ ಈ ಬೆಳಕು ಶುದ್ಧವಾಗಿ ಪ್ರಯಾಣಿಸಿದರೆ, ಭೂಮಿಯ ವಾತಾವರಣ ಪ್ರವೇಶಿಸಿದ ನಂತರ ಬಣ್ಣ ಬದಲಾದಂತೆ ನಮಗೆ ಭಾಸವಾಗುತ್ತದೆ.