ರಷ್ಯಾ ಚಂದ್ರಯಾನ ನೌಕೆ ಲೂನಾ25ಗೆ ತಾಂತ್ರಿಕ ಸಮಸ್ಯೆ ಡೀ ಬೂಸ್ಟ್ ಪ್ರಕ್ರಿಯೆಗೆ ಅಡ್ಡಿ
ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಲು ರಷ್ಯಾ ಕೈಗೊಂಡಿರುವ ಲೂನಾ-25 ಯೋಜನೆಯ ಡೀಬೂಸ್ಟಿಂಗ್ ವೇಳೆ ತಾಂತ್ರಿಕ ಸಮಸ್ಯೆ ಉಂಟಾಗಿರುವುದಾಗಿ ರಷ್ಯಾ ಹೇಳಿದೆ. ಆದರೆ ಈ ತೊಂದರೆಯಿಂದಾಗಿ ಲ್ಯಾಂಡಿಂಗ್ ವಿಳಂಬವಾಗಬಹುದೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಮಾಸ್ಕೋ: ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಲು ರಷ್ಯಾ ಕೈಗೊಂಡಿರುವ ಲೂನಾ-25 ಯೋಜನೆಯ ಡೀಬೂಸ್ಟಿಂಗ್ ವೇಳೆ ತಾಂತ್ರಿಕ ಸಮಸ್ಯೆ ಉಂಟಾಗಿರುವುದಾಗಿ ರಷ್ಯಾ ಹೇಳಿದೆ. ಆದರೆ ಈ ತೊಂದರೆಯಿಂದಾಗಿ ಲ್ಯಾಂಡಿಂಗ್ ವಿಳಂಬವಾಗಬಹುದೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಶನಿವಾರ ಹೇಳಿಕೆ ಬಿಡುಗಡೆ ಮಾಡಿರುವ ರಷ್ಯಾ ಬ್ಯಾಹ್ಯಾಕಾಶ ಸಂಸ್ಥೆ (Russian space agency)ರಾಸ್ ಕಾಸ್ಮೋಸ್ (Roscosmos), ‘ಲ್ಯಾಂಡಿಂಗ್ ಪೂರ್ವ ಕಕ್ಷೆಗೆ ನೌಕೆ ಇಳಿಸುವ ವೇಳೆ ತಾಂತ್ರಿಕ ಸಮಸ್ಯೆ ಉಂಟಾಗಿದೆ’ ಎಂದು ಹೇಳಿದೆ. ಚಂದ್ರಯಾನ-3 ಉಡಾವಣೆಯ ಬಳಿಕ ರಷ್ಯಾ ಈ ರಾಕೆಟ್ ಉಡಾವಣೆ ಮಾಡಿದ್ದರೂ ಭಾರತಕ್ಕಿಂತಲೂ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವುದಾಗಿ ಹೇಳಿತ್ತು. ಆದರೆ ಇದೀಗ ತಾಂತ್ರಿಕ ಸಮಸ್ಯೆ ಉಂಟಾಗಿರುವುದರಿಂದ ಲ್ಯಾಂಡಿಂಗ್ ವಿಳಂಬವಾಗಲಿದೆಯೇ ಅಥವಾ ಈ ಸಮಸ್ಯೆಯನ್ನು ಸರಿಪಡಿಸಿ ನೌಕೆಯನ್ನು ಸರಿಯಾದ ಕಕ್ಷೆಗೆ ಕೂರಿಸಲಾಗಿದೆಯೇ ಎಂಬ ಮಾಹಿತಿಯನ್ನು ರಷ್ಯಾ ಹಂಚಿಕೊಂಡಿಲ್ಲ.
ಇಸ್ರೋ ಪರಿಶ್ರಮಕ್ಕೆ ಸಿಕ್ಕಿದ ಫಲ, ಯಶಸ್ವಿಯಾಗಿ ಚಂದ್ರನ ವೃತ್ತಕಾರ ಕಕ್ಷೆ ಸೇರಿದ ವಿಕ್ರಂ ಲ್ಯಾಂಡರ್!
ಜೂನ್‌ನಲ್ಲೇ ಈ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದ ರಾಸ್‌ಕಾಸ್ಮೋಸ್‌ನ ಮುಖ್ಯಸ್ಥ ಯೂರಿ ಬೋರಿಸೋವ್ ( Yuri Borisov), ರಷ್ಯಾದ ಈ ಯೋಜನೆ ಸಾಕಷ್ಟುಸಮಸ್ಯೆಯಿಂದ ಕೂಡಿದ್ದು, ಇದು ಯಶಸ್ವಿಯಾಗುವ ಸಾಧ್ಯತೆ ಶೇ.70ರಷ್ಟಿದೆ ಎಂದು ಹೇಳಿದ್ದರು.
1976ರ ಬಳಿಕ ರಷ್ಯಾ ಇದೇ ಮೊದಲ ಬಾರಿಗೆ ಚಂದ್ರನ ಅನ್ವೇಷಣೆಗೆ ನೌಕೆಯನ್ನು ಕಳಿಸಿಕೊಟ್ಟಿತ್ತು. ಆದರೆ ಅದರಲ್ಲೀಗ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ಅಂದು ಯುಎಸ್‌ಎಸ್‌ಆರ್ ಎನ್ನುವ ಹೆಸರಿನಲ್ಲಿದ್ದ ರಷ್ಯಾ, ಅಮರಿಕದ ಜೊತೆಗೆ ನಡೆಸಿದ್ದ ಸ್ಪೇಸ್ ರೇಸ್ ಇಂದಿಗೂ ಪ್ರಖ್ಯಾತದಲ್ಲಿದೆ. ಆದರೆ, ಈ ಬಾರಿ ಚಂದ್ರನ ದಕ್ಷಿಣ ಧ್ರುವದ ರೇಸ್‌ನಲ್ಲಿ ಅಮೆರಿಕವಿಲ್ಲ. ಇರೋದು ಭಾರತ. ಹಾಗಂತ ಭಾರತ ಹಾಗೂ ರಷ್ಯಾದ ರೇಸ್ ಬಹಳ ಭಿನ್ನ. ಭಾರತ ಚಂದ್ರನ ಮೇಲೆ ಲ್ಯಾಂಡ್ ಆಗುವ ನಿಟ್ಟಿನಲ್ಲಿ ಆಮೆಯಂತೆ ಎಚ್ಚರಿಕೆ ಹೆಜ್ಜೆ ಇರಿಸಿದ್ದರೆ, ರಷ್ಯಾ ಮೊಲದಂತೆ ವೇಗವಾಗಿ ಚಂದ್ರನ ತಲುಪುವ ಇರಾದೆಯಲ್ಲಿದೆ. ಆ ಮೂಲಕ ಸ್ಪೇಸ್ ಸೂಪರ್‌ಪವರ್ ಪಟ್ಟವನ್ನು ಪುನಃ ಪಡೆದುಕೊಳ್ಳುವ ನಿಟ್ಟಿನಲ್ಲಿ ರಷ್ಯಾದ ಬಾಹ್ಯಾಕಾಶ ಏಜೆನ್ಸಿ ರೋಸ್ಕೊಸ್ಮೊಸ್ ಪ್ರಯತ್ನಿಸಲಿದೆ. ಸುಯೇಜ್ 2.1ವಿ ರಾಕೆಟ್ ಮೂಲಕ ಲೂನಾ 25 ಅನ್ನು ವೊಸ್ಟೊಚ್ನಿ ಕಾಸ್ಮೊಡ್ರೋಮ್‌ನಿಂದ ರೋಸ್ಕೊಸ್ಮೊಸ್ ನಭಕ್ಕೆ ಹಾರಿಸಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಸಾಧಿಸುವುದು ಮಿಷನ್‌ನ ಪ್ರಾಥಮಿಕ ಗುರಿಯಾಗಿತ್ತು. ಹೆಪ್ಪುಗಟ್ಟಿದ ನೀರಿನ ರೀತಿಯಲ್ಲಿರುವ ಪ್ರದೇಶವನ್ನು ಶೋಧನೆ ಮಾಡುವ ಗುರಿಯನ್ನು ಹೊಂದಿತ್ತು. ಆದರೀಗ ಅದರಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಸುದ್ದಿಯಾಗಿದೆ.
ಚಂದ್ರಯಾನದ ಬೆನ್ನಲ್ಲೇ ಸೂರ್ಯನ ಅಧ್ಯಯನಕ್ಕೆ ಇಸ್ರೋ ಸಜ್ಜು: ಶ್ರೀಹರಿಕೋಟಕ್ಕೆ ಬಂದ ಆದಿತ್ಯ-ಎಲ್1 ಉಪಗ್ರಹ
ಚಂದ್ರನ ದಕ್ಷಿಣ ಧ್ರುವದ ಮಹತ್ವವನ್ನು ಈವರೆಗೂ ಯಾರೂ ಶೋಧನೆ ಮಾಡಿಲ್ಲ. ಇತ್ತೀಚಿನ ವರ್ಷಗಳಲ್ಲಿ, ನಾಸಾ ಸೇರಿದಂತೆ ಅನೇಕ ಬಾಹ್ಯಾಕಾಶ ಸಂಸ್ಥೆಗಳ ವೈಜ್ಞಾನಿಕ ತನಿಖೆಗಳು, ಈ ಪ್ರದೇಶದಲ್ಲಿನ ಕುಳಿಗಳ ನೆರಳಿನ ಪದರದಲ್ಲಿ ಅಡಗಿರುವ ನೀರಿನ ಮಂಜುಗಡ್ಡೆಯ ಬಲವಾದ ಪುರಾವೆಗಳನ್ನು ಬಹಿರಂಗಪಡಿಸಿವೆ. ಇನ್ನು ರಷ್ಯಾದ ಲುನಾ-25 ಚಿಕ್ಕ ಕಾರ್‌ನ ಗಾತ್ರದಲ್ಲಿದೆ. ಚಂದ್ರನ ಮೇಲೆ ಇಳಿಯುವ ಮುನ್ನ ಕೆಲವೊಂದು ಪ್ರಮುಖವಾದ ಕಕ್ಷಗಳನ್ನು ದಾಟಬೇಕಿದೆ. ಐದು ದಿನದ ಪ್ರಯಾಣದ ಬಳಿಕ, ಚಂದ್ರನ ಕಕ್ಷೆಯಲ್ಲಿ ಇದು 5-7 ದಿನಗಳನ್ನು ಕಳೆಯಲಿದೆ. ಈ ವೇಳೆ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿ ಮಾಡಲಾಗಿರುವ ಮೂರು ಲ್ಯಾಂಡಿಂಗ್ ಸೈಟ್‌ಗಳ ಪೈಕಿ ಒಂದು ಸೈಟ್‌ಅನ್ನು ಆಯ್ದುಕೊಳ್ಳಲಿದೆ. ಎಲ್ಲಾ ಅಂದುಕೊಂಡಂತೆ ಆದಲ್ಲಿ ಚಂದ್ರಯಾನ-3ಗಿಂತ ಮುಂಚಿತವಾಗಿ ಲುನಾ-25 ಚಂದ್ರನ ಮೇಲೆ ಇಳಿಯಲಿದೆ.