ಚಂದ್ರನ ನೆಲದಾಳದ ರಹಸ್ಯ ಅನಾವರಣ: ಚಂದ್ರನಲ್ಲಿ ಮಾನವ ನೆಲೆಗೆ ಗುಹಾ ವ್ಯವಸ್ಥೆಯಾಗಲಿದೆಯೇ ಆಶ್ರಯ ತಾಣ?
ಹೊಸ ಸಂಶೋಧನೆಗಳು ಚಂದ್ರನ ಮೇಲೆ ನೂರಾರು ಹೊಂಡಗಳು ಮತ್ತು ಸಾವಿರಾರು ಲಾವಾ ಕೊಳವೆಗಳು ಇರುವ ಸಾಧ್ಯತೆಗಳನ್ನು ಪ್ರದರ್ಶಿಸಿವೆ. ಈ ಸ್ಥಳಗಳು ಭವಿಷ್ಯದಲ್ಲಿ ಗಗನಯಾತ್ರಿಗಳಿಗೆ ನೈಸರ್ಗಿಕ ನೆಲೆಗಳಾಗಿ, ಅವರನ್ನು ಕಾಸ್ಮಿಕ್ ಕಿರಣಗಳು, ಸೌರ ವಿಕಿರಣಗಳು, ಮತ್ತು ಸೂಕ್ಷ್ಮ ಉಲ್ಕಾಶಿಲೆಗಳ ಪರಿಣಾಮದಿಂದ ರಕ್ಷಿಸಬಲ್ಲವು.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ಼್ ಆಲ್ಡ್ರಿನ್ ಅವರು 55 ವರ್ಷಗಳ ಹಿಂದೆ ಚಂದ್ರನ ಮೇಲೆ ಇಳಿದ ಪ್ರದೇಶಕ್ಕೆ ಸನಿಹದಲ್ಲಿ, ಚಂದ್ರನಲ್ಲಿ ಒಂದು ಗುಹೆ ಇರುವುದನ್ನು ಇತ್ತೀಚೆಗೆ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ವಿಜ್ಞಾನಿಗಳು ಚಂದ್ರನಲ್ಲಿ ಇಂತಹ ನೂರಾರು ಗುಹೆಗಳು ಇರುವ ಸಾಧ್ಯತೆಗಳಿವೆ ಎಂದಿದ್ದು, ಭವಿಷ್ಯದಲ್ಲಿ ಗಗನಯಾತ್ರಿಗಳಿಗೆ ನೆಲೆಸಲು ಇವುಗಳು ಸಂಭಾವ್ಯ ನೆಲೆಗಳಾಗುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇಟಲಿ ನೇತೃತ್ವದ ತಂಡವೊಂದು ಸೋಮವಾರ ಈ ಕುರಿತು ತನ್ನ ವರದಿ ನೀಡಿದ್ದು, ಚಂದ್ರನಲ್ಲಿ ತಿಳಿದಿರುವ ಅತ್ಯಂತ ಆಳವಾದ ಕುಳಿಯೊಂದರಿಂದ ಈ ವಿಶಾಲವಾದ ಗುಹೆಗೆ ಪ್ರವೇಶ ಪಡೆಯಲು ಸಾಧ್ಯವಿದೆ ಎಂದು ವಿವರಿಸಿದ್ದಾರೆ. ಈ ಕುಳಿ ಚಂದ್ರನ ಮೇಲೆ ಅಪೋಲೋ 11 ಇಳಿದ ಪ್ರದೇಶದಿಂದ ಕೇವಲ 400 ಕಿಲೋಮೀಟರ್ (250 ಮೈಲಿ) ದೂರದ, ಸೀ ಆಫ್ ಟ್ರ್ಯಾಂಕ್ವಿಲಿಟಿ ಎಂದು ಗುರುತಿಸಲಾದ ಪ್ರದೇಶದಲ್ಲಿದೆ.
ಮಾಸ್ಕೋದಲ್ಲಿ ಮೋದಿ: ರಾಜತಾಂತ್ರಿಕತೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಮತೋಲನದ ನಾಜೂಕಿನ ಹಾದಿ
ಈ ಕುಳಿಯೂ ಸೇರಿದಂತೆ, ಚಂದ್ರನ ಮೇಲೆ ಗುರುತಿಸಲಾಗಿರುವ ಇತರ 200ಕ್ಕೂ ಹೆಚ್ಚು ಕುಳಿಗಳು ಲಾವಾ ಟ್ಯೂಬ್‌ನ ಕುಸಿತದಿಂದ ನಿರ್ಮಾಣಗೊಂಡಿವೆ ಎನ್ನಲಾಗಿದೆ.
ಲಾವಾ ಟ್ಯೂಬ್ ಎನ್ನುವುದು ಘನೀಕೃತ ಲಾವಾ ಹರಿವಿನ ಮೇಲ್ಮೈಯ ಕೆಳಭಾಗದಲ್ಲಿ ಲಾವಾ ಹರಿದಾಗ ಉಂಟಾಗುವ ನೈಸರ್ಗಿಕ ಸುರಂಗವಾಗಿದೆ. ಮೇಲ್ಮೈಯಲ್ಲಿರುವ ಲಾವಾ ತಣ್ಣಗಾಗಿ, ಗಟ್ಟಿಗೊಂಡ ಬಳಿಕವೂ, ಅದರ ಕೆಳಭಾಗದಲ್ಲಿರುವ ದ್ರವ ರೂಪದ ಲಾವಾ ಹರಿಯುವುದು ಮುಂದುವರಿಯುತ್ತದೆ. ಅಂತಿಮವಾಗಿ ಈ ಲಾವಾ ಬರಿದಾದ ಬಳಿಕ, ಖಾಲಿಯಾದ, ಟೊಳ್ಳಾದ ಕೊಳವೆಯಂತಹ ರಚನೆ ಉಳಿಯುತ್ತದೆ. ಇಂತಹ ಕೊಳವೆಗಳನ್ನು ಭೂಮಿಯಲ್ಲಿ ಮತ್ತು ಚಂದ್ರ ಮತ್ತು ಮಂಗಳ ಗ್ರಹದಂತಹ ಇತರ ಆಕಾಶ ಕಾಯಗಳಲ್ಲೂ ಕಾಣಬಹುದು. ಈ ರೀತಿಯ ಕೊಳವೆಗಳ ಗಾತ್ರ ಒಂದರಿಂದ ಒಂದು ಅಪಾರ ಭಿನ್ನತೆ ಹೊಂದಿರುತ್ತವೆ.
ಸಂಶೋಧಕರು ನಾಸಾದ ಲೂನಾರ್ ರಿಕನಯಸೆನ್ಸ್ ಆರ್ಬಿಟರ್ ನೀಡಿರುವ ರೇಡಾರ್ ಅಳತೆಗಳನ್ನು ಅಧ್ಯಯನ ನಡೆಸಿದ್ದು, ಅವುಗಳನ್ನು ಭೂಮಿಯಲ್ಲಿರುವ ಲಾವಾ ಟ್ಯೂಬ್‌ಗಳೊಡನೆ ಹೋಲಿಸಿ ನೋಡಿದ್ದಾರೆ. ಸಂಶೋಧಕರು ಕಲೆಹಾಕಿದ ಮಾಹಿತಿಗಳು 'ನೇಚರ್ ಆ್ಯಸ್ಟ್ರಾನಮಿ' ನಿಯತಕಾಲಿಕೆಯಲ್ಲಿ ಪ್ರಕಟವಾಗಿವೆ.
ವಿಜ್ಞಾನಿಗಳು ಈಗ ಲಭ್ಯವಿರುವ ರೇಡಾರ್ ಮಾಹಿತಿಗಳು ಭೂಮಿಯಾಳದ ಕುಳಿಗಳ ಆರಂಭಿಕ ಭಾಗಗಳನ್ನು ಮಾತ್ರವೇ ತೋರಿಸಿವೆ. ಇವುಗಳು ಕನಿಷ್ಠ 130 ಅಡಿ (40 ಮೀಟರ್) ಅಗಲವೂ, ಹತ್ತಾರು ಮೀಟರ್‌ಗಳಷ್ಟು ಉದ್ದವೂ, ಅಥವಾ ಅದಕ್ಕಿಂತಲೂ ದೊಡ್ಡವೂ ಆಗಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
"ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ಚಂದ್ರನ ಮೇಲಿನ ಗುಹೆಗಳು ನಿಗೂಢವಾಗಿಯೇ ಉಳಿದಿದ್ದವು. ಆದ್ದರಿಂದ, ಈಗ ಅಂತಹ ಗುಹೆಗಳಿವೆ ಎಂದು ಗುರುತಿಸಲು ಸಾಧ್ಯವಾಗಿರುವುದು ಒಂದು ರೋಮಾಂಚಕಾರಿ ವಿಚಾರವಾಗಿದೆ" ಎಂದು ಯುನಿವರ್ಸಿಟಿ ಆಫ್ ಟೊರಾಂಟೋದ ಲಿಯೋನಾರ್ಡೋ ಕ್ಯಾರರ್ ಮತ್ತು ಲೊರೆಂಜೋ಼ ಬ್ರುಜ್ಜೋನ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಬಹುತೇಕ ಗುಹೆಗಳು ಚಂದ್ರನ ಹಳೆಯ ಲಾವಾ ಬಯಲುಗಳಲ್ಲಿ ಇರುವಂತೆ ಕಂಡುಬರುತ್ತಿವೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲೂ ಕೆಲವು ಹೊಂಡಗಳಿರುವ ಸಾಧ್ಯತೆಗಳಿದ್ದು, ಅಲ್ಲಿ ನಾಸಾ ತನ್ನ ಗಗನಯಾತ್ರಿಗಳನ್ನು ಈ ದಶಕದ ಕೊನೆಯ ವೇಳೆಗೆ ಕಳುಹಿಸಲು ಉದ್ದೇಶಿಸಿದೆ. ಈ ಪ್ರದೇಶದಲ್ಲಿರುವ ಶಾಶ್ವತ ನೆರಳಿನ ಕುಳಿಗಳಲ್ಲಿ ಘನೀಕೃತಗೊಂಡ ನೀರಿದೆ ಎಂದು ಅಂದಾಜಿಸಲಾಗಿದ್ದು, ಅದನ್ನು ಭವಿಷ್ಯದಲ್ಲಿ ಕುಡಿಯುವ ಉದ್ದೇಶಕ್ಕೆ ಮತ್ತು ರಾಕೆಟ್ ಇಂಧನವಾಗಿ ಬಳಸಬಹುದು.
ನಾಸಾದ ಅಪೋಲೋ ಯೋಜನೆಯಲ್ಲಿ ಒಟ್ಟು 12 ಜನ ಗಗನಯಾತ್ರಿಗಳು ಚಂದ್ರನ ಮೇಲೆ ಇಳಿದಿದ್ದು, 1969ರ ಜುಲೈ 20ರಂದು ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಆಲ್ಡ್ರಿನ್ ಅವರು ಚಂದ್ರನ ಮೇಲಿಳಿದ ಮೊದಲ ಗಗನಯಾತ್ರಿಗಳಾಗಿದ್ದಾರೆ.
ಸಿಲಿಕಾನ್ ಸಿಟಿಯ ಕರಾಳ ಮುಖ: ಬೆಂಗಳೂರಿನ ಸುವ್ಯವಸ್ಥೆಗೆ ಸವಾಲಾದ ಬೈಕರ್ ಗ್ಯಾಂಗ್‌ಗಳು ಮತ್ತು ಭ್ರಷ್ಟಾಚಾರ
ಹೊಸ ಸಂಶೋಧನೆಗಳು ಚಂದ್ರನ ಮೇಲೆ ನೂರಾರು ಹೊಂಡಗಳು ಮತ್ತು ಸಾವಿರಾರು ಲಾವಾ ಕೊಳವೆಗಳು ಇರುವ ಸಾಧ್ಯತೆಗಳನ್ನು ಪ್ರದರ್ಶಿಸಿವೆ. ಈ ಸ್ಥಳಗಳು ಭವಿಷ್ಯದಲ್ಲಿ ಗಗನಯಾತ್ರಿಗಳಿಗೆ ನೈಸರ್ಗಿಕ ನೆಲೆಗಳಾಗಿ, ಅವರನ್ನು ಕಾಸ್ಮಿಕ್ ಕಿರಣಗಳು, ಸೌರ ವಿಕಿರಣಗಳು, ಮತ್ತು ಸೂಕ್ಷ್ಮ ಉಲ್ಕಾಶಿಲೆಗಳ ಪರಿಣಾಮದಿಂದ ರಕ್ಷಿಸಬಲ್ಲವು. ಮಾನವರಿಗೆ ಚಂದ್ರನ ಮೇಲೆ ಶೂನ್ಯದಿಂದ ನೆಲೆಗಳನ್ನು ನಿರ್ಮಿಸುವುದು ಸವಾಲಿನ ಕಾರ್ಯವಾಗಿದ್ದು, ಇಂತಹ ಸುರಂಗಗಳಲ್ಲಿ ನೆಲೆಸಬೇಕಾದರೂ ಅವುಗಳ ಗೋಡೆಗಳು ಕುಸಿಯದಂತೆ ಬಲಪಡಿಸಬೇಕಾದ ಅನಿವಾರ್ಯತೆ ಇರುತ್ತದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ಈ ಸುರಂಗಗಳ ಒಳಗಿರುವ ಕಲ್ಲುಗಳು ಮತ್ತು ಇತರ ವಸ್ತುಗಳು ಚಂದ್ರನ ಮೇಲ್ಮೈಯ ತೀವ್ರ ಪರಿಸ್ಥಿತಿಗಳಿಂದ ಅಬಾಧಿತವಾಗಿದ್ದು, ಚಂದ್ರ ಹೇಗೆ ನಿರ್ಮಾಣವಾಯಿತು ಮತ್ತು ಚಂದ್ರನ ಮೇಲಿನ ಜ್ವಾಲಾಮುಖಿ ಚಟುವಟಿಕೆಗಳು ಹೇಗಿದ್ದವು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನೆರವಾಗುವ ನಿರೀಕ್ಷೆಗಳಿವೆ.