ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಣೆ ವಿವಾದ, ನಾಸಾ ಆಡಿತಾ ನಾಟಕ?
ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶದಲ್ಲಿ ಅನಿವಾರ್ಯವಾಗಿ ಉಳಿದುಕೊಂಡಿದ್ದಾರೆ. ಹೀಗಾಗಿ ಕ್ರಿಸ್ಮಸ್ ಆಚರಿಸಿದ್ದಾರೆ. ಆದರೆ ಇದು ವಿವಾದಕ್ಕೆ ಕಾರಣಾಗಿದೆ. ತಾಂತ್ರಿಕ ದೋಷದ ಕಾರಣ ನೀಡಿ ಉದ್ದೇಶಪೂರ್ವಕವಾಗಿ ಸುನೀತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ಅವರನ್ನು ನಾಸಾ ಬಾಹ್ಯಾಕಾಶದಲ್ಲೇ ಇರಿಸಿದೆ ಅನ್ನೋ ಆರೋಪ ಕೇಳಿಬಂದಿದೆ. ಇದಕ್ಕೆ ನಾಸಾ ಸ್ಪಷ್ಟನೆ ನೀಡಿದೆ.
ವಾಶಿಂಗ್ಟನ್(ಡಿ.26) ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಸುನೀತಾ ವಿಲಿಯಮ್ಸ್ ನಿಜಕ್ಕೂ ತಾಂತ್ರಿಕ ದೋಷದಿಂದ ಬಾಹ್ಯಾಕಾಶದಲ್ಲೇ ಉಳಿದುಕೊಂಡಿದ್ದಾರ ಅನ್ನೋ ಪ್ರಶ್ನೆಗಳು ಮೂಡಿದೆ. ಇದರ ಜೊತೆಗೆ ವಿವಾದವೂ ಭುಗಿಲೆದ್ದಿದೆ. ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಹಬ್ಬ ಆಚರಣೆ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕ್ರಿಸ್ಮಸ್ ಹಬ್ಬದ ವರೆಗೆ ಗಗನಯಾತ್ರಿಗಳು ಬಾಹ್ಯಾಕಾಶದಲ್ಲೇ ಇರಲಿದ್ದಾರೆ ಅನ್ನೋ ಖಚಿತತೆಯಿಂದ ಸಾಂತಾ ಟೋಪಿ, ಕ್ರಿಸ್ಮಸ್ ಉಡುಗೆ ಹಾಗೂ ಇತರ ವಸ್ತುಗಳನ್ನು ಒಯ್ದಿದ್ದಾರೆ. ತಾಂತ್ರಿಕ ದೋಷ ನಾಸಾ ಆಡಿದ ನಾಟಕ ಎಂದು ಆರೋಪಗಳು ವ್ಯಕ್ತವಾಗಿದೆ.
ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಸಾಂತಾ ಕ್ಲಾಸ್ ಆಗಿರುವ ವಿಡಿಯೋ, ಕ್ರಿಸ್ಮಸ್ ಸಂಭ್ರಮ ಆಚರಿಸುತ್ತಿರುವ ವಿಡಿಯೋವನ್ನು ನಾಸಾ ಹಂಚಿಕೊಂಡಿತ್ತು. ಇದರ ಬೆನ್ನಲ್ಲೇ ವಿವಾದವೂ ಹುಟ್ಟಿಕೊಂಡಿತ್ತು. ಜೂನ್ ತಿಂಗಳಲ್ಲಿ ಒಂದು ವಾರದ ಭೇಟಿ ಹಾಗೂ ಅಧ್ಯಯನಕ್ಕಾಗಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶಕ್ಕೆ ತೆರಳಿದ್ದರು. ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಇಬ್ಬರು ಬಾಹ್ಯಾಕಾಶದಲ್ಲೇ ಉಳಿದುಕೊಳ್ಳಬೇಕಾಗಿದೆ ಎಂದು ನಾಸಾ ಸ್ಪಷ್ಟಪಡಿಸಿತ್ತು. ಬಳಿಕ ಗಗನಯಾತ್ರಿಗಳನ್ನು ಕರೆತರವು ಕೆಲ ಪ್ರಯತ್ನಗಳನ್ನು ನಾಸ ಮಾಡಿತ್ತು. ಆದರೆ ಕೈಗೂಡಲಿಲ್ಲ. ಇದೀಗ ಮಾರ್ಚ್ ತಿಂಗಳಲ್ಲಿ ಇಬ್ಬರು ಗಗನಯಾತ್ರಿಗಳು ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಹೇಳಿದೆ.
ಸುನಿತಾ ವಿಲಿಯಮ್ಸ್ ಭೂಮಿಗೆ ಮರಳುವುದು ಮತ್ತಷ್ಟು ತಡ! ನಾಸಾ ಹೇಳಿದ್ದೇನು?
ಒಂದು ವಾರದ ಮಟ್ಟಿಗೆ ಬಾಹ್ಯಾಕಾಶಕ್ಕೆ ತೆರಳಿದ ಗಗನಯಾತ್ರಿಗಳು ಕ್ರಿಸ್ಮಸ್ ಡ್ರೆಸ್, ಟೋಪಿ ಹಾಗೂ ಇತರ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದರೆ ಎಂದು ಹಲವರು ಪ್ರಶ್ನಿಸಿದ್ದಾರೆ. ಡಿಸೆಂಬರ್ ತಿಂಗಳಲ್ಲೂ ಗಗನಯಾತ್ರಿಗಳು ಬಾಹ್ಯಕಾಶದಲ್ಲೇ ತಂಗಲಿದ್ದಾರೆ ಅನ್ನೋ ಮಾಹಿತಿ ಇತ್ತು ಎಂದು ಹಲವರು ಆರೋಪಿಸಿದ್ದಾರೆ. ಆರೋಪ, ವಿವಾದ ಜೋರಾಗುತ್ತಿದ್ದಂತೆ ನಾಸಾ ಸ್ಪಷ್ಟನೆ ನೀಡಿದೆ. ಕಳೆದ ಕೆಲ ತಿಂಗಳಿನಿಂದ ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳ ಹಬ್ಬ ಆಚರಣೆಗೆ ನಾಸಾ ಎಲ್ಲಾ ವ್ಯವಸ್ಥೆ ಮಾಡಿದೆ. ಕ್ರಿಸ್ಮಸ್ ಪ್ಯಾಕೇಜ್ ರವಾನೆಯಲ್ಲಿ ಬಾಹ್ಯಾಕಾಶದಲ್ಲಿ ಸವಿಯಲು ಬೇಕಾದ ಆಹಾರ ವಸ್ತುಗಳನ್ನು ನೀಡಲಾಗಿದೆ. ಹಾಮ್, ಟರ್ಕಿ, ಆಲೂಗೆಡ್ಡೆ, ತರಕಾರಿ, ಬಟಾಣಿ ಹಾಗೂ ಕೂಕಿಸ್ ಕಳುಹಿಸಲಾಗಿದೆ. ಇದರ ಜೊತೆಗೆ ಕೆಲ ವೈಜ್ಞಾನಿಕ ವಸ್ತುಗಳನ್ನು ಕಳುಹಿಸಲಾಗಿದೆ ಎಂದು ನಾಸಾ ಹೇಳಿದೆ.
ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ತಾಂತ್ರಿಕ ದೋಷದಿಂದ ಅನಿವಾರ್ಯವಾಗಿ ಉಳಿದುಕೊಂಡಿದ್ದಾರೆ. ಕ್ರಿಸ್ಮಸ್ ಹಬ್ಬ ಆಚರಣೆಯಿಂದ ಎದ್ದಿರುವ ವಿವಾದ ನಿರಾಧಾರವಾಗಿದೆ. ನವೆಂಬರ್ ತಿಂಗಳಲ್ಲಿ ಸ್ಪೇಸ್ ಎಕ್ಸ್ ಅವರ ಸಪ್ಲೈ ಮಿಷನ್ ಅಡಿಯಲ್ಲಿ ಕ್ರಿಸ್ಮಸ್ ವಸ್ತುಗಳು, ಉಡುಗೆ ತೊಡುಗೆಗಳನ್ನು ಕಳುಹಿಸಲಾಗಿದೆ. ನವೆಂಬರ್ ತಿಂಗಳಿನಲ್ಲೇ ಇಬ್ಬರು ಗಗನಯಾತ್ರಿಗಳ ವಾಪಾಸಾತಿ ಮತ್ತಷ್ಟು ವಿಳಂಬ ಅನ್ನೋದು ಖಚಿತವಾಗಿತ್ತು. ಹೀಗಾಗಿ ಕ್ರಿಸ್ಮಸ್ ಆಚರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ನಾಸಾ ಖಚಿತಪಡಿಸಿದೆ.
ಆದರೆ ಇಷ್ಟಕ್ಕೆ ಅನುಮಾನಗಳು ನಿಂತಿಲ್ಲ. ಇಬ್ಬರು ಗಗನಯಾತ್ರಿಗಳ ವಾಪಾಸಾತಿ ವಿಳಂಬದ ಹಿಂದಿನ ನೈಜ ಕಾರಣವನ್ನು ಅಮರಿಕ ಹಾಗೂ ನಾಸಾ ಬಹಿರಂಗಪಡಿಸುತ್ತಿಲ್ಲ ಎಂದು ಹಲವರು ಆರೋಪಿಸಿದ್ದಾರೆ. ಇದರ ಹಿಂದೆ ಕೆಲ ನಿಗೂಢ ಕಾರಣಗಳಿವೆ ಅನ್ನೋ ಅನುಮಾಗಳು ವ್ಯಕ್ತವಾಗಿದೆ.
ಫೆಬ್ರವರಿಯಲ್ಲೂ ಭೂಮಿಗೆ ಬರೋದಿಲ್ಲ ಸುನೀತಾ ವಿಲಿಯಮ್ಸ್, ಖಚಿತಪಡಿಸಿದ ನಾಸಾ!