ಚಂದ್ರನ ರಹಸ್ಯಗಳ ಅನಾವರಣ: ಚಂದ್ರಯಾನ-3ರ ರೋವರ್‌ನ ಗಂಧಕ ಅನ್ವೇಷಣೆ, ಮಂಜಿನ ಅನುಬಂಧ
ಚಂದ್ರನ ಮೇಲ್ಮೈಯಲ್ಲಿ ನಡೆಸಿರುವ ಇನ್ - ಸಿತು (ಆನ್ ಸೈಟ್) ವೈಜ್ಞಾನಿಕ ಮಾಪನಗಳು ಆ ಪ್ರದೇಶದಲ್ಲಿ ಗಂಧಕದ (S) ಉಪಸ್ಥಿತಿಯನ್ನು ಖಚಿತಪಡಿಸಿವೆ. ಈ ಹಿನ್ನೆಲೆಯಲ್ಲಿ ಚಂದ್ರನ ಮೈಲ್ಮೈನ ಒಂದಿಷ್ಟು ಮಾಹಿತಿ ಇಲ್ಲಿದೆ.
- ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಮಂಗಳವಾರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3ರ ರೋವರ್ ಚಂದ್ರನ ದಕ್ಷಿಣ ಧ್ರುವದ ಬಳಿ ಗಂಧಕ ಹಾಗೂ ಹಲವಾರು ಧಾತುಗಳು ಇರುವುದನ್ನು ಪತ್ತೆ ಹಚ್ಚಿದೆ. ಗಂಧಕದ ಉಪಸ್ಥಿತಿ ಇರುವುದು ಸಾಮಾನ್ಯವಾಗಿ ಜ್ವಾಲಾಮುಖಿಯಂತಹ ಪ್ರಕ್ರಿಯೆಗಳಿಗೆ ಸಂಬಂಧಿಸಿರುತ್ತದೆ. ಇನ್ನು ಚಂದ್ರನ ಮೇಲೆ ಗಂಧಕದ ಲಭ್ಯತೆ, ಭೂಮಿಯ ನೈಸರ್ಗಿಕ ಉಪಗ್ರಹದ ನಿರ್ಮಾಣ ಮತ್ತು ವಿಕಾಸದ ಕುರಿತಾದ ಅವಶ್ಯಕ ಮಾಹಿತಿಗಳನ್ನು ಒದಗಿಸಲಿದೆ.
ಚಂದ್ರನಿಗೆ ಸಂಬಂಧಿಸಿದಂತೆ, ಗಂಧಕ ಒಂದು ಅಪರೂಪದ ಧಾತುವಾಗಿದ್ದು, ದಕ್ಷಿಣ ಧ್ರುವದ ಬಳಿ ಗಂಧಕ ಪತ್ತೆಯಾಗಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ. ಇದು ಬಹುತೇಕ ಮಂಜುಗಡ್ಡೆಯ ರೂಪದಲ್ಲಿರುವ ನೀರಿನ ಲಭ್ಯತೆಯ ಕುರಿತಾದ ಸುಳಿವು ನೀಡಿದ್ದು, ಹೆಚ್ಚಿನ ಮಹತ್ವ ಸಾಧಿಸಿದೆ. ಮಂಜುಗಡ್ಡೆಯ ರೂಪದಲ್ಲಿರುವ ನೀರು, ಚಂದ್ರನ ದಕ್ಷಿಣ ಧ್ರುವದಲ್ಲಿ ನೆರಳಿನಿಂದ ಆವೃತವಾಗಿರುವ ಕುಳಿಗಳಲ್ಲಿದೆ ಎಂದು ನಂಬಲಾಗಿದೆ. ಸಾಮಾನ್ಯವಾಗಿ ಗಂಧಕ ಮತ್ತು ಜ್ವಾಲಾಮುಖಿ ಪ್ರಕ್ರಿಯೆಗಳ ನಡುವೆ ಸಂಬಂಧ ಇರುವುದರಿಂದ, ಈ ಪ್ರದೇಶದಲ್ಲಿ ಮಂಜುಗಡ್ಡೆಯ ರೂಪದಲ್ಲಿ ನೀರಿನಂತಹ ಬಾಷ್ಪಶೀಲ ಸಂಯುಕ್ತಗಳು ಸಂರಕ್ಷಿಸಿಡಲ್ಪಟ್ಟಿರುವ ಸಾಧ್ಯತೆಗಳಿವೆ. ಗಂಧಕದ ಅಸ್ತಿತ್ವ ಮತ್ತು ಮಂಜುಗಡ್ಡೆಯ ರೂಪದ ನೀರಿನ ಉಪಸ್ಥಿತಿಯ ಸಾಧ್ಯತೆಗಳು ಚಂದ್ರನ ಸಂಯೋಜನೆ ಮತ್ತು ಅದರ ಇತಿಹಾಸದ ಕುರಿತು ನಮ್ಮ ಅರಿವನ್ನು ಹೆಚ್ಚಿಸಲಿದೆ.
ಚಂದ್ರನ ಮೇಲ್ಮೈಯಲ್ಲಿ ನಡೆಸಿರುವ ಇನ್ - ಸಿತು (ಆನ್ ಸೈಟ್) ವೈಜ್ಞಾನಿಕ ಮಾಪನಗಳು ಆ ಪ್ರದೇಶದಲ್ಲಿ ಗಂಧಕದ (S) ಉಪಸ್ಥಿತಿಯನ್ನು ಖಚಿತಪಡಿಸಿವೆ. ಚಂದ್ರಯಾನ-2ರ ಆರ್ಬಿಟರ್ ಹೊಂದಿದ್ದ ಉಪಕರಣಗಳಿಗೆ ಈ ಪ್ರಯೋಗಗಳನ್ನು ನಡೆಸಲು ಸಾಧ್ಯವಿರಲಿಲ್ಲ.
Chandrayaan 3: ಚಂದ್ರನ ದಕ್ಷಿಣ ಧ್ರುವದಲ್ಲಿ ಆಮ್ಲಜನಕ ಸೇರಿದಂತೆ 9 ಧಾತುಗಳನ್ನು ಪತ್ತೆ ಮಾಡಿದ ಇಸ್ರೋ!
ರೋವರ್‌ನಲ್ಲಿನ ಉಪಕರಣಗಳು ಅತ್ಯಂತ ಶಕ್ತಿಶಾಲಿ ಲೇಸರ್ ಕಿರಣಗಳ ಮೂಲಕ ತಾನು ಅಧ್ಯಯನ ಮಾಡಬೇಕಾದ ವಸ್ತುಗಳನ್ನು ಅತ್ಯಂತ ಬಿಸಿಯಾಗಿಸಿ, ಅವುಗಳ ಮೇಲ್ಮೈಯಲ್ಲಿ ಸಣ್ಣದಾದ, ಬಿಸಿಯಾದ ಪ್ಲಾಸ್ಮಾವನ್ನು ಸೃಷ್ಟಿಸುತ್ತವೆ. ಇದು ವಿಜ್ಞಾನಿಗಳಿಗೆ ಆ ವಸ್ತುಗಳು ಯಾವುದರಿಂದ ಮಾಡಲ್ಪಟ್ಟಿವೆ ಎಂದು ತಿಳಿಯಲು ನೆರವಾಗುತ್ತದೆ.
ಪ್ಲಾಸ್ಮಾದಿಂದ ಉತ್ಪತ್ತಿಯಾದ ಬೆಳಕನ್ನು ಸಂಗ್ರಹಿಸಿ, ಅವುಗಳನ್ನು ಬೇರೆ ಬೇರೆ ಬಣ್ಣಗಳಾಗಿ ಬೇರ್ಪಡಿಸುತ್ತದೆ. ಅದನ್ನು ಚಾರ್ಜ್ ಕಪಲ್ಡ್ ಡಿವೈಸಸ್ (ಸಿಸಿಡಿ) ಉಪಕರಣಗಳು ಪರಿಶೀಲಿಸುತ್ತವೆ. ಪ್ರತಿಯೊಂದು ಧಾತುವೂ ಪ್ಲಾಸ್ಮಾ ಸ್ಥಿತಿಯಲ್ಲಿದ್ದಾಗ ಬೇರೆ ಬೇರೆ ತರಂಗಾಂತರದ ಅಥವಾ ಬಣ್ಣದ ಬೆಳಕನ್ನು ಹೊರಸೂಸುತ್ತದೆ. ಅವುಗಳ ತರಂಗಾಂತರ ಅಥವಾ ಬೆಳಕಿನ ಬಣ್ಣದ ವಿಶ್ಲೇಷಣೆ ನಡೆಸಿ, ನಾವು ಆ ವಸ್ತುವಿನಲ್ಲಿರುವ ಧಾತುಗಳೇನು ಎಂದು ತಿಳಿಯಲು ಸಾಧ್ಯವಾಗುತ್ತದೆ.
ಚಂದ್ರನ ಮೇಲಿನ, ಈ ಹಿಂದೆ ಯಾರೂ ಅನ್ವೇಷಿಸಿರದ ಪ್ರದೇಶದಲ್ಲಿ ಯಶಸ್ವಿಯಾಗಿ ಇಳಿದ ಬಳಿಕ, ಪ್ರಗ್ಯಾನ್ ರೋವರ್ ರಾಂಪ್ ಮೂಲಕ ವಿಕ್ರಮ್ ಲ್ಯಾಂಡರ್‌ನಿಂದ ಕೆಳಗಿಳಿದು, ಮಹತ್ವದ ಮಾಹಿತಿಗಳನ್ನು ಕಲೆಹಾಕಲು ಆರಂಭಿಸಿತು. ರೋವರ್‌ನ ಪ್ರಾಥಮಿಕ ಉದ್ದೇಶ ಚಂದ್ರನ ಮೇಲೆ ಮಂಜುಗಡ್ಡೆಯ ರೂಪದಲ್ಲಿರುವ ನೀರನ್ನು ಹುಡುಕುವುದೇ ಆದರೂ, ರೋವರ್‌ನಲ್ಲಿನ ಉಪಕರಣಗಳು ಚಂದ್ರನ ವಾತಾವರಣವನ್ನು ಅನ್ವೇಷಿಸಿ, ಕಂಪನ ಚಟುವಟಿಕೆಗಳನ್ನೂ ಅನ್ವೇಷಿಸಲಿವೆ.
ಚಂದ್ರಯಾನ-3 ಯೋಜನೆಯಿಂದ ಇಸ್ರೋ ಗಳಿಸಿರುವ ಮಾಹಿತಿಗಳನ್ನು ಇನ್ನಷ್ಟು ಅರ್ಥೈಸಿಕೊಳ್ಳಲು ಅವುಗಳನ್ನು ವಿಶ್ಲೇಷಿಸುವ ಅವಶ್ಯಕತೆಯಿದೆ.
Chandrayaan-3: ಚಂದ್ರನ ಮೇಲೆ ಪ್ರಗ್ಯಾನ್ ರೋವರ್‌ಗೆ ಎದುರಾದ ದೊಡ್ಡ ಕುಳಿ, ಹೊಸ ಮಾರ್ಗ ನೀಡಿದ ಇಸ್ರೋ!
ಚಂದ್ರನ ತಾಪಮಾನ:
ಇಸ್ರೋ ಪ್ರಸ್ತುತ ನಡೆಯುತ್ತಿರುವ ಚಂದ್ರನ ಮೇಲಿನ ಪ್ರಯೋಗಗಳು ಹಾಗೂ ವಿವಿಧ ಉಪಕರಣಗಳ ಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯುತ್ತಿದೆ. ಚಂದ್ರಯಾನ-3 ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿರುವ, ಅಹಮದಾಬಾದಿನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿಯ ನಿರ್ದೇಶಕರು, ತಮ್ಮ ಸಂಸ್ಥೆ ಚಂದ್ರಾಸ್ ಸರ್ಫೇಸ್ ಥರ್ಮೋಫಿಸಿಕಲ್ ಎಕ್ಸ್‌ಪರಿಮೆಂಟ್ (ChaSTE) ನಂತಹ ಚಟುವಟಿಕೆಗಳನ್ನು ಲ್ಯಾಂಡರ್ ಮಾಡ್ಯುಲ್‌ಗಾಗಿ ಅಭಿವೃದ್ಧಿ ಪಡಿಸಿದೆ ಎಂದಿದ್ದಾರೆ.
ಭಾನುವಾರ ಚಂದ್ರನ ಮೇಲ್ಮೈ ತಾಪಮಾನಕ್ಕೆ ಸಂಬಂಧಿಸಿದಂತೆ ಬಿಡುಗಡೆಗೊಳಿಸಲಾದ ಚಿತ್ರಿತ ಮಾಹಿತಿ ಚಾಸ್ಟ್ ಉಪಕರಣ ನಿರಂತರವಾಗಿ ಕಲೆ ಹಾಕುವ ಮಾಹಿತಿಯ ಒಂದು ಸಣ್ಣ ಇಣುಕು ನೋಟವಷ್ಟೇ ಆಗಿದೆ. ಈ ತಾಪಮಾನಗಳು ಸಮಯಕ್ಕನುಗುಣವಾಗಿ ಬದಲಾಗುವ ಸಾಧ್ಯತೆಗಳಿವೆ. ಚಂದ್ರಯಾನ-3 ಹೊಂದಿರುವ ಉಪಕರಣಗಳು ಅಪಾರ ಪ್ರಮಾಣದಲ್ಲಿ ಮಾಹಿತಿ ಕಲೆಹಾಕಿ, ವಿವಿಧ ವೀಕ್ಷಣೆಗಳನ್ನು ನಡೆಸಿ, ಹಲವಾರು ಪ್ರಯೋಗಗಳನ್ನು ಕೈಗೊಳ್ಳಲಿವೆ. ಈ ಮಾಹಿತಿಗಳನ್ನು ಭೂ ಕೇಂದ್ರಗಳಿಗೆ ರವಾನಿಸಲಾಗುತ್ತದೆ. ಈ ಯೋಜನೆ ಮುಕ್ತಾಯಗೊಂಡ ಬಳಿಕ, ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದ ತಜ್ಞರು ಈ ಮಾಹಿತಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಿದ್ದಾರೆ. ಆ ಬಳಿಕವಷ್ಟೇ ಈ ಯೋಜನೆಯಿಂದ ಹೊಸದಾದ, ಅಥವಾ ಮಹತ್ತರವಾದ ಮಾಹಿತಿ ಲಭಿಸಿದೆಯೇ ಎಂದು ತಿಳಿದುಬರಲಿದೆ.