ಒಂದು ದಿನ ಒಂದೇ ಸೂರ್ಯೋದಯ ಹಾಗೂ ಸೂರ್ಯಸ್ತ. ಆದರೆ ಆಗಸ್ಟ್ 12ರಂದು ಒಂದೇ ದಿನ ಸಂಜೆ 2 ಸೂರ್ಯಾಸ್ತ ಘಟಿಸಲಿದೆ. ಇಷ್ಟೇ ಅಲ್ಲ ರಾತ್ರಿ ಉಲ್ಕಾಪಾತಕ್ಕೆ ಈ ಪುಟ್ಟ ಹಳ್ಳಿ ಸಾಕ್ಷಿಯಾಗಲಿದೆ.

ಸೂರ್ಯ ಉದಯಿಸುತ್ತಿದ್ದಂತೆ ಬೆಳಕು ಹರಿಯುತ್ತದೆ. ಸೂರ್ಯಾಸ್ತಮಾನದಿಂದ ಕತ್ತಲಾಗುತ್ತದೆ.ಇದು ಸಹಜ ಪ್ರಕ್ರಿಯೆ ಕತ್ತಲಿನಲ್ಲಿ ಆಕಾಶದ ನಕ್ಷತ್ರಗಳು, ಗ್ರಹಗಳು ವಿಸ್ಮಯಗಳ ತಾಣ. ಸೂರ್ಯ,ಚಂದ್ರ, ಭೂಮಿ ಸರಿದಂತೆ ಗ್ರಹಗಳ ಚಲನೆ ಎಲ್ಲವೂ ಅದೆಷ್ಟೇ ತಿಳಿದುಕೊಂಡರು ಕೌತುಕ. ಆದರೆ ಇದೀಗ ಮತ್ತೊಂದು ವಿಸ್ಮಯಕ್ಕೆ ಪುಟ್ಟ ಹಳ್ಳಿಯೊಂದು ಸಾಕ್ಷಿಯಾಗುತ್ತಿದೆ. ಒಂದೇ ದಿನ ಎರಡು ಸೂರ್ಯಸ್ತಗಳು ಸಂಭವಿಸಲಿದೆ. ಜೊತೆಗೆ ರಾತ್ರಿ ಆಗಸದಲ್ಲಿ ಉಲ್ಕಾಪಾತಗಳು ನಡೆಯಲಿದೆ. ಈ ವಿಸ್ಮಯ ನಡೆಯುವುದು ಕೇವಲ ಅವೆಲನೋಸಾ ಡಿ ಮುಣೋ ಗ್ರಾಮದಲ್ಲಿ ಮಾತ್ರ.

ಒಂದೇ ದಿನ ಸಂಜೆ ಎರಡು ಸೂರ್ಯಾಸ್ತ

ಹೌದು, ಆಗಸ್ಟ್ 12 ರಂದು ಒಂದೇ ದಿನ ಸಂಜೆ ಎರಡು ಸೂರ್ಯಾಸ್ತ ನಡೆಯಲಿದೆ. ಈಗಾಗಲೇ ಖಗೋಳ ವಿಜ್ಞಾನಿಗಳು ಈ ಅವೆಲನೋಸಾ ಡಿ ಮುಣೋ ಗ್ರಾಮದತ್ತ ಧಾವಿಸುತ್ತಿದ್ದಾರೆ. ಇದು ಸ್ಪೇನ್‌ನಲ್ಲಿರುವ ಪುಟ್ಟ ಹಳ್ಳಿ. ಸ್ಪೇನ್‌ನ ಬರ್ಗೋಸ್ ಪ್ರಾಂತ್ಯದಲ್ಲಿರುವ ಅವೆಲನೋಸಾ ಡಿ ಮುಣೋ ಗ್ರಾಮದಲ್ಲಿ ಜನರು ಎರಡು ಬಾರಿ ಸೂರ್ಯಾಸ್ತ ಅನುಭವಿಸಲಿದ್ದಾರೆ.

ಆಗಸ್ಟ್ 12 ರಂದು ಸ್ಪೇನ್‌ನಲ್ಲಿ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತಿದೆ. ವಿಶೇಷ ಅಂದರೆ ಬರೋಬ್ಬರಿ 114 ವರ್ಷಗಳ ಬಳಿಕ ಸ್ಪೇನ್‌ನಲ್ಲಿ ಸಂಪೂರ್ಣ ಸೂರ್ಯಗ್ರಹಣ ನಡೆಯುತ್ತಿದೆ. ಸ್ಪೇನ್‌ನಲ್ಲಿ ಆಗಸ್ಟ್ 12ರ ಸಂಜೆ ವೇಳೆಗೆ ಸಂಪೂರ್ಣ ಸೂರ್ಯಗ್ರಹಣ ಘಟಿಸಲಿದೆ. ಈ ವೇಳೆ ಸಂಪೂರ್ಣ ಕತ್ತಲು ಆವರಿಸಲಿದೆ. ಸೂರ್ಯಗ್ರಹಣ ಅವಧಿ ಮುಗಿದ ಬಳಿಕ ಸೂರ್ಯ ಮತ್ತೆ ಬೆಳಕು ಚೆಲ್ಲಿ ಹೊರಬರಲಿದ್ದಾನೆ. ಆದರೆ ಕೆಲವೇ ನಿಮಿಷಗಳಲ್ಲಿ ಸೂರ್ಯಾಸ್ತ ಸಂಭವಿಸಲಿದೆ. ಹೀಗಾಗಿ ಇಲ್ಲಿನ ಗ್ರಾಮಸ್ಥರು,ಪ್ರವಾಸಿಗರು ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಬಾರಿ ಸೂರ್ಯಾಸ್ತವಾಗಲಿದೆ. ಮೊದಲ ಬಾರಿ ಕತ್ತಲು ಆವರಿಸಿ ಕೆಲ ನಿಮಿಷಗಳ ಬಳಿಕ ಬೆಳಕು ಹರಿದು, ಮತ್ತೆ ಎಂದಿನಂತೆ ಸೂರ್ಯಾಸ್ತಮಾನವಾಗಲಿದೆ . ಈ ಅಪರೂಪದ ದೃಶ್ಯಕ್ಕಾಗಿ ಇದೀಗ ಹಲವರು ಕಾದು ಕುಳಿತಿದ್ದಾರೆ.

ರಾತ್ರಿ ಪರ್ಸೀಡ್ಸ್ ಉಲ್ಕಾಪಾತ

ಎರಡು ಸೂರ್ಯಾಸ್ತ ದೃಶ್ಯ ಅನುಭವಿಸಿದ ಬಳಿಕ ರಾತ್ರಿ ಆಗಸದಲ್ಲಿ ಪರ್ಸೀಡ್ಸ್ ಉಲ್ಕಾಪಾತ ಆರಂಭಗೊಳ್ಳಲಿದೆ. ಆಕಾಶದಲ್ಲಿ ನಕ್ಷತ್ರಗಳು ಕೆಳಕ್ಕೆ ಬಿದ್ದಂತೆ ಕೋಟಿ ಕೋಟಿ ಬೆಳಕಿನ ಕಿಡಿಗಳು ಚಿಮ್ಮುವ ಉಲ್ಕಾಪಾತ ದೃಶ್ಯಗಳು ಗೋಚರಿಸಲಿದೆ. ಸೂರ್ಯಾಸ್ತ ಹಾಗೂ ಉಲ್ಕಾಪಾತ ಒಂದೇ ದಿನ ಒಂದೇ ಸ್ಥಳದಲ್ಲಿ ನಡೆಯುವುದು ವಿಶೇಷವಾಗಿದೆ. ಈಗಾಗಲೇ ವಿಜ್ಞಾನಿಗಳು ಪ್ರದೇಶಕ್ಕೆ ಧಾವಿಸುತ್ತಿದ್ದಾರೆ.

ಈ ಪುಟ್ಟಹಳ್ಳಿಯಲ್ಲಿ ಕೇವಲ 10 ಖಾಯಂ ನಿವಾಸಗಳ ಮನೆಯಿದೆ. ಅತ್ಯಂತ ಪುಟ್ಟ ಹಳ್ಳಿ ಇದು. ಆದರೆ ಅಷ್ಟೇ ಸುಂದರವಾಗಿದೆ. ಯಾವುದೇ ಹೊಟೆಲ್, ರೆಸ್ಟೋರೆಂಟ್, ದೊಡ್ಡ ದೊಡ್ಡ ಕಟ್ಟಡಗಳು ಈ ಹಳ್ಳಿಯಲ್ಲಿ ಇಲ್ಲ. ಶಾಂತವಾಗಿರುವ ಹಳ್ಳಿಯಲ್ಲಿ ಸದ್ದುಗದ್ದಲಗಳಿಲ್ಲ. ಇದೀಗ ಖಗೋಳ ವಿಸ್ಮಯದಿಂದ ಈ ಹಳ್ಳಿ ವಿಶ್ವದ ಗಮನಸೆಳೆದಿದೆ.