*  ಲೈರಿಡಾ ಉಲ್ಕಾಪಾತ, ಬರಿಗಣ್ಣಿನಲ್ಲಿಯೇ ನೋಡಿ: ತಜ್ಞರು*  ಬೆಂಗಳೂರು ನಗರದಿಂದ ದೂರ ಹೋಗಿ ಉಲ್ಕಾಪಾತ ನೋಡಿ*  ಉಲ್ಕೆ ಬೀಳುವುದನ್ನು ನೋಡಲು ಶುಭ್ರ ಆಕಾಶ ಇರಬೇಕು 

ಬೆಂಗಳೂರು(ಏ.20): ಏ.21 ರಿಂದ ಏ.23ರ ರಾತ್ರಿ ಗಗನದಲ್ಲಿ ಉಲ್ಕಾಪಾತವಾಗಲಿದ್ದು(Quadrantid Meteor), ಬರಿಗಣ್ಣಿಗೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಖಗೋಳ ಶಾಸ್ತ್ರಜ್ಞರು(Astronomers) ಮಾಹಿತಿ ನೀಡಿದ್ದಾರೆ.
ಈ ಬಾರಿ ಲೈರಿಡಾ ಉಲ್ಕಾಪಾತವಾಗಲಿದ್ದು, ಒಂದು ಮೈಕ್ರಾನ್‌ನಿಂದ ಒಂದು ಸೆಂಟಿ ಮೀಟರ್‌ನಷ್ಟು ದೊಡ್ಡದಿರುವ ಧೂಮಕೇತುವಿನ(Comet) ಬಾಲದ ಕಣಗಳು, ಕ್ಷುದ್ರಗ್ರಹಗಳ ಕಣಗಳು ವೇಗವಾಗಿ ಭೂ ಕಕ್ಷೆ ಪ್ರವೇಶಿಸಿದಾಗ ವಾತಾವರಣದೊಂದಿಗೆ ಘರ್ಷಣೆಗೆ ಒಳಗಾಗಿ ಉರಿದು ಭಸ್ಮವಾಗಲಿವೆ.

ಬೆಂಗಳೂರು(Bengaluru) ಹವ್ಯಾಸಿ ಖಗೋಳ ಶಾಸ್ತ್ರಜ್ಞರ ಒಕ್ಕೂಟದ ಅಧ್ಯಕ್ಷ ರವೀಂದ್ರ ಆರಾಧ್ಯರ ಪ್ರಕಾರ, ಉಲ್ಕಾಪಾತವನ್ನು ಬರಿಗಣ್ಣಿನಿಂದ ನೋಡಬಹುದು. ಪೂರ್ವದ ದಿಕ್ಕಿನಲ್ಲಿ ಉಲ್ಕಾಪಾತ ಕಾಣಿಸಿಕೊಳ್ಳುವುದರಿಂದ ಪಶ್ಚಿಮಕ್ಕೆ ತಲೆ ಹಾಕಿ ಮಲಗಿಕೊಂಡು ಆಕಾಶ ನೋಡಿದರೆ ಉಲ್ಕಾಪಾತವನ್ನು ಸ್ಪಷ್ಟವಾಗಿ ಗಮನಿಸಬಹುದು. 

ನಾಳೆ, ನಾಡಿದ್ದು ಆಗಸದಲ್ಲಿ ವಿಸ್ಮಯ: ಮಿಸ್‌ ಮಾಡ್ದೆ ನೋಡಿ..!

ಬೆಳಕಿನ ಮಾಲಿನ್ಯ ಇಲ್ಲದ ನಗರ ಪ್ರದೇಶಗಳಿಂದ ದೂರ ಹೋಗಿ ನೋಡಿದರೆ ಉಲ್ಕಾಪಾತ ಚೆನ್ನಾಗಿ ಕಾಣಿಸಿಕೊಳ್ಳುತ್ತದೆ. ಉಲ್ಕೆ ಬೀಳುವುದನ್ನು ನೋಡಲು ಶುಭ್ರ ಆಕಾಶ ಇರಬೇಕು. ಚಂದಿರ ಹೆಚ್ಚು ಪ್ರಕಾಶಮಾನವಾಗಿರಬಾರದು. ಈ ಬಾರಿ ಮೋಡದ(Cloud) ವಾತಾವರಣ ಇರುವುದರಿಂದ ಉಲ್ಕೆಗಳ ಪತನ ಕಾಣಿಸಬಹುದೇ ಎಂಬ ಕುತೂಹಲವಿದೆ. ಆದರೂ ರಾತ್ರಿ 11.30 ರಿಂದ ಸೂರ್ಯೋದಯದ ತನಕ ಉಲ್ಕೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳುತ್ತಾರೆ. ಈ ಧೂಮಕೇತು 415 ವರ್ಷಕ್ಕೊಮ್ಮೆ ಸೂರ್ಯನಿಗೆ ಸುತ್ತು ಬರುತ್ತದೆ ಎಂದು ಅವರು ಹೇಳುತ್ತಾರೆ.

ಬೆಂಗಳೂರು ವಿವಿಯ ಭೂಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಅಶೋಕ್‌ ಹಂಜಗಿ, ಇದೊಂದು ನೈಸರ್ಗಿಕ ಪ್ರಕ್ರಿಯೆ. ಭೂ ಕಕ್ಷೆಯ 100 ಕಿ.ಮೀ. ವ್ಯಾಪ್ತಿಯೊಳಗೆ ಉಲ್ಕೆಗಳು ಉರಿದು ಹೋಗುತ್ತವೆ. ಲೈರಿಡಾ ಉಲ್ಕೆಯು ಥ್ಯಾಚರ್‌ ಧೂಮಕೇತುವಿನ ಧೂಳಿನ ಕಣವಾಗಿದೆ ಎನ್ನುತ್ತಾರೆ.