ಹೆಚ್ಚುತ್ತಿರುವ ತಾಪಮಾನದಿಂದಾಗಿ ಭೂಮಿಯ ಕೆಳಕಕ್ಷೆಯಲ್ಲಿರುವ ನಾಸಾದ 'ಸ್ವಿಫ್ಟ್' ದೂರದರ್ಶಕವು ಕೆಳಗೆ ಸರಿಯುತ್ತಿದ್ದು, ಭೂಮಿಗೆ ಬೀಳುವ ಅಪಾಯದಲ್ಲಿದೆ. ಈ ಅನಾಹುತವನ್ನು ತಪ್ಪಿಸಲು, ನಾಸಾ 'ಲಿಫ್ಟ್' ಎಂಬ ರೊಬೋಟಿಕ್ ಬಾಹ್ಯಾಕಾಶ ನೌಕೆಯನ್ನು ಬಳಸಿ, ಸ್ವಿಫ್ಟ್‌ನ ಕಕ್ಷೆಯನ್ನು ಎತ್ತರಕ್ಕೆ ಏರಿಸುವ ಅಪಾಯಕಾರಿ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದೆ.
ಕೇಪ್ ಕ್ಯಾನವೆರಲ್: 2004ರಲ್ಲಿ ಭೂಮಿಯ ಕೆಳಕಕ್ಷೆಗೆ ಹಾರಿ, ಅಂದಿನಿಂದ ಅಲ್ಲೇ ಕುಳಿತಿರುವ ‘ಸ್ವಿಫ್ಟ್’ ಹೆಸರಿನ ದೂರದರ್ಶಕವೊಂದು ಬಾಹ್ಯಾಕಾಶದಿಂದ ಭೂಮಿಗೆ ಬೀಳುವ ಅಪಾಯಕಾರಿ ಸ್ಥಿತಿಯಲ್ಲಿದೆ. ಹೀಗಿರುವಾಗ, ಆಗಬಹುದಾದ ಅನಾಹುತವನ್ನು ತಡೆಯಲು ಮುಂದಾಗಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, 283 ಕೋಟಿ ರು. ವ್ಯಯಿಸಿ, ಅಪಾಯಕಾರಿ ರಕ್ಷಣಾ ಕಾರ್ಯಾಚರಣೆ ಮಾಡಲು ಸಿದ್ಧವಾಗಿದೆ.
ಬ್ರಹ್ಮಾಂಡದಲ್ಲಾಗುವ ಬೃಹತ್ ಸ್ಫೋಟಗಳನ್ನು ಅಧ್ಯಯನ ಮಾಡುವ ಸ್ವಿಫ್ಟ್, ತಾಪಮಾನ ಹೆಚ್ಚಳದಿಂದಾಗಿ ವಿಸ್ತರಣೆಯಾಗುತ್ತಿರುವ ವಾತಾವರಣಕ್ಕೆ ಸಿಕ್ಕು ಕೆಳಗೆ ಬರುತ್ತಿದೆ. ಹೀಗೇ ಮುಂದುವರಿದಲ್ಲಿ, ಸ್ಫೋಟಗೊಂಡು ಅದರ ಚೂರುಗಳು ಭೂಮಿಗೆ ಬೀಳುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ರೊಬೋಟಿಕ್ ಬಾಹ್ಯಾಕಾಶ ನೌಕೆಯೊಂದನ್ನು ಉಡಾವಣೆ ಮಾಡಲು ನಾಸಾ, ಕ್ಯಾಟಲಿಸ್ಟ್ ಎಂಬ ನವೋದ್ಯಮದೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಕಾರ್ಯಾಚರಣೆ ಹೇಗೆ?
ಕ್ಯಾಟಲಿಸ್ಟ್‌ನ ‘ಲಿಫ್ಟ್’ ಎಂಬ ಗಗನನೌಕೆಯನ್ನು ಮಂಗಳವಾರ(ಅಮೆರಿಕ ಕಾಲಮಾನ) ಮಾರ್ಶಲ್ ದ್ವೀಪದಿಂದ ಉಡಾವಣೆ ಮಾಡುವ ಯೋಜನೆಯಿದೆ. 1 ತಿಂಗಳು ಬಾಹ್ಯಾಕಾಶದಲ್ಲಿ ಪ್ರಯಾಣಿಸಿ ಭೂಮಿಯ ಕೆಳಕಕ್ಷೆಯನ್ನು ತಲುಪುವ ಇದು, ತನ್ನ 3 ರೊಬೋಟಿಕ್ ಕೈಗಳನ್ನು ಬಳಸಿ ಸ್ವಿಫ್ಟ್‌ಅನ್ನು ಜನತದಿಂದ ಹಿಡಿದುಕೊಳ್ಳುತ್ತದೆ. ಬಳಿಕ, ಸದ್ಯ ಭೂಮಿಯಿಂದ 360 ಕಿ.ಮೀ. ದೂರದಲ್ಲಿರುವ ಸ್ವಿಫ್ಟ್‌ಅನ್ನು 2 ತಿಂಗಳುಗಳಲ್ಲಿ ನಿಧಾನವಾಗಿ 600 ಕಿ.ಮೀ. ಎತ್ತರಕ್ಕೆ ತಲುಪಿಸುತ್ತದೆ. ಇದೇ ವರ್ಷದ ಸೆಪ್ಟೆಂಬರ್ ವೇಳೆಗೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಒಮ್ಮೆ ದೂರದರ್ಶಕವು ಸರಿಯಾದ ಸ್ಥಾನದಲ್ಲಿ ಕುಳಿತ ಬಳಿಕ ಲಿಫ್ಟ್ ಅದನ್ನು ಮುಕ್ತಗೊಳಿಸುತ್ತದೆ.
ಇದನ್ನೂ ಓದಿ: ಆಕಾಶಗಂಗೆಯ ಅದ್ಭುತ ದೃಶ್ಯ ಸೆರೆ ಹಿಡಿದ ಯೂಕ್ಲಿಡ್ ಟೆಲಿಸ್ಕೋಪ್, 6 ಕೋಟಿ ಅಧಿಕ ನಕ್ಷತ್ರಗಳ ನಿಗೂಢ ಲೋಕ
ಇಲ್ಲಿಯವರೆಗೆ ಉಪಗ್ರಹವೊಂದನ್ನು ಎತ್ತರದ ಕಕ್ಷೆಗೆ ಏರಿಸುವ ಸಾಹಸವನ್ನು ಚೀನಾ ಒಂದೇ ಮಾಡಿತ್ತು. ಇದೀಗ ಅಮೆರಿಕ ಕೂಡ ಮುಂದಾಗಿದ್ದು, ಯಶಸ್ವಿಯಾದಲ್ಲಿ 2ನೇ ಸಾಧಕ ಎಂಬ ಹಿರಿಮೆಗೆ ಪಾತ್ರವಾಗಲಿದೆ.
ಇದನ್ನೂ ಓದಿ: ವಿಮಾನದಿಂದ ಕಿಲಿಮಂಜಾರೋ ಅದ್ಭುತ ದೃಶ್ಯ ಸೆರೆ ಹಿಡಿದ ಪೈಲೆಟ್, ಇಲ್ಲಿ ಅನ್ಯಗ್ರಹ ಜೀವಿ ವಾಸವಿತ್ತಾ?


