ವಾಷಿಂಗ್ಟನ್(ಮಾ.06): ಸೃಷ್ಟಿಯ ಮೂಲ ದೇವರು ಅಂತಾರೆ. ಕಾಣದ ದೇವರಿಗೆ ಈ ಶ್ರೇಯ ಕೊಡುವದಕ್ಕೂ ಮುಂಚೆ ಕಾಣುವ ದೇವರಾದ ಮಹಿಳೆಗೆ ಈ ಶ್ರೇಯ ಕೊಡುವುದು ಒಳ್ಳೆಯದು.

ಇದೇ ಕಾರಣಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ದೇವರ ಸ್ಥಾನ ನೀಡಲಾಗಿದೆ. ಹೊಸ ಜೀವವನ್ನು ಧರೆಗೆ ಎರವಲಾಗಿ ಕೊಡುವ ಹೆಣ್ಣು, ಆ ಜೀವ ಬೆಳೆದು ದೊಡ್ಡದಾಗಿ ಸಮಾಜಕ್ಕೆ, ದೇಶಕ್ಕೆ, ವಿಶ್ವಕ್ಕೆ ಕೊಡುಗೆ ನೀಡುವಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸುತ್ತಾಳೆ. ತಾಯಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ, ಪತ್ನಿಯಾಗಿ, ಮಗಳಾಗಿ ಹೆಣ್ಣು ಈ ಧರೆಯನ್ನು ಸಲುಹುತ್ತಾಳೆ.

ಅದರಂತೆ ಇದೇ ಮಾ.08ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು ವಿಶ್ವ ಸಜ್ಜಾಗಿದೆ. ಆಧುನಿಕ ಜಗ್ತತಿನ ನೊಗ ಇದೀಗ ಮಹಿಳೆಯ ಕೈಯಲ್ಲೇ ಇರುವುದು ಸ್ಫಟಿಕದಷ್ಟೇ ಸತ್ಯ. ಪ್ರತಿ ಕ್ಷೇತ್ರದಲ್ಲೂ ಹೆಣ್ಣು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿಯಾಗಿದೆ.

ಇದೀಗ ನಾಸಾ ಕೂಡ ಮಹಿಳೆಯ ಸಾಮರ್ಥ್ಯವನ್ನು ಓರೆಗೆ ಹಚ್ಚಿದ್ದು, ಶೀಘ್ರದಲ್ಲೇ ಇಬ್ಬರು ಮಹಿಳಾ ಖಗೋಳಯಾನಿಗಳಿಂದ ಬಾಹಾಕ್ಯಾಶ ನಡಿಗೆಗೆ ನಾಸಾ ಸಿದ್ಧತೆ ನಡೆಸಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲಿರುವ ಆ್ಯನೆ ಮ್ಯಾಕ್ಲೇನ್ ಮತ್ತು ಕ್ರಿಶ್ಚಿನಾ ಕೋಚ್ ಇದೇ ಮಾರ್ಚ್ 29ರಂದು ಬಾಹ್ಯಾಕಾಶ ನಡಿಗೆ ಕೈಗೊಳ್ಳಲಿದ್ದು, ಈ ಸಾಧನೆ ಮಾಡಿದ ವಿಶ್ವದ ಮೊದಲ ಮಹಿಳಾ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

ಎಕ್ಸ್ಪೆಡಿಶನ್ 59 ಭಾಗವಾಗಿ ಆ್ಯನೆ ಮ್ಯಾಕ್ಲೇನ್ ಮತ್ತು ಕ್ರಿಶ್ಚಿನಾ ಕೋಚ್ ಬಾಹ್ಯಾಕಾಶ ನಡಿಗೆ ಕೈಗೊಳ್ಳಲಿದ್ದು, ಇದಕ್ಕೂ ಮೊದಲು ಆ್ಯನೆ ಮ್ಯಾಕ್ಲೇನ್ ಇದೇ ಮಾ.22ರಂದು ಮತ್ತೋರ್ವ ಗಗನಯಾತ್ರಿ ನಿಕ್ ಹಾಗ್ಯೂ ಅವರೊಂದಿಗೆ ಬಾಹ್ಯಾಕಾಶ ನಡಿಗೆ ಕೈಗೊಳ್ಳಲಿದ್ದಾರೆ ಎಂದು ನಾಸಾ ತಿಳಿಸಿದೆ.

ಆ್ಯನೆ ಮ್ಯಾಕ್ಲೇನ್ ಮತ್ತು ಕ್ರಿಶ್ಚಿನಾ ಕೋಚ್ ಬಾಹ್ಯಾಕಾಶ ನಡಿಗೆಗೆ ಬೆಂಬಲವಾಗಿ ಕೆನಡಿಯನ್ ಸ್ಪೇಸ್ ಏಜೆನ್ಸಿಯ ಫ್ಲೈಟ್ ಕಂಟ್ರೋಲರ್ ಕ್ರಿಸ್ಟನ್ ಫೆಸಿಯೋಲ್ ನಿಲ್ಲಲಿದ್ದು, ಇದೇ ಮೊದಲ ಬಾರಿಗೆ ಸಂಪೂರ್ಣ ಮಹಿಳಾ ತಂಡವೊಂದು ಬಾಹ್ಯಾಕಾಶ ನಡಿಗೆ ಕೈಗೊಳ್ಳುವ ಘಳಿಗೆಗೆ ಇಡೀ ವಿಶ್ವ ಎದುರು ನೋಡುತ್ತಿದೆ.