ನವದೆಹಲಿ[ಡಿ.03]: ಚಂದ್ರನ ಅಂಗಳದಲ್ಲಿ ಇನ್ನೇನು ಇಳಿಯುವ ಹಂತದಲ್ಲಿದ್ದಾಗ ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ನೌಕೆಯ ‘ವಿಕ್ರಮ್‌’ ಲ್ಯಾಂಡರ್‌ ಇಸ್ರೋ ಸಂಪರ್ಕ ಕಡಿದುಕೊಂಡು ನಿಗೂಢವಾಗಿ ನಾಪತ್ತೆಯಾಗಿತ್ತು. ಇದನ್ನು ಹುಡುಕಿ ಮತ್ತೆ ಸಂಪರ್ಕ ಸಾಧಿಸಲು ಇಸ್ರೋ ವಿಜ್ಞಾನಿಗಳು ಬಹಳಷ್ಟು ಯತ್ನಿಸಿದರಾದರೂ ಇದರಲ್ಲಿ ಯಶಸ್ವಿಯಾಗಲಿಲ್ಲ. ಕೊನೇ ಪಕ್ಷ ವಿಕ್ರಮ್ ಲ್ಯಾಂಡರ್ ಫೋಟೋ ಆದ್ರೂ ಸಿಗಬಹುದೆಂದು ಹುಡುಕಾಟ ನಡೆಸಿದ ವಿಜ್ಞಾನಿಗಳಿಗೆ ಅದೂ ಸಿಕ್ಕಿರಲಿಲ್ಲ. ಇಸ್ರೋ ವಿಜ್ಞಾನಿಗಳ ಈ ಪ್ರಯತ್ನಕ್ಕೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡಾ ಕೈಜೋಡಿಸಿತ್ತಾದರೂ ಯಾವುದೂ ಫಲ ಕೊಟ್ಟಿರಲಿಲ್ಲ. ಆದರೀಗ ನಾಸಾ ಸಂಸ್ಥೆ ಚಂದ್ರನ ಅಂಗಳದಲ್ಲಿ ಬಿದ್ದಿರುವ ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ

ಕೊನೆಗೂ ಬಯಲಾಯ್ತು ಚಂದ್ರಯಾನ- 2 ವೈಫಲ್ಯದ ಹಿಂದಿನ ಕಾರಣ!.

ಹೌದು ಬರೋಬ್ಬರಿ 2 ತಿಂಗಳ ನಾಸಾ ಸಂಸ್ಥೆ ಬಳಿಕ ದಕ್ಷಿಣ ಧ್ರುವದಲ್ಲಿ ಬಿದ್ದಿರುವ ವಿಕ್ರಮ್ ಲ್ಯಾಂಡರ್ ಬಿದ್ದಿರುವ ನಿರ್ದಿಷ್ಟ ಸ್ಥಳ ಹಾಗೂ ಅವಶೇಷಗಳನ್ನು ಪತ್ತೆ ಹಚ್ಚಿದ್ದಲ್ಲದೇ, ಫೋಟೋ ಕೂಡಾ ಬಿಡುಗಡೆಗೊಳಿಸಿದೆ. ಚಂದ್ರಯಾನ-2 ಆರ್ಬಿಟರ್‌ನಂತೆಯೇ ನಾಸಾದ LRO ಉಪಕರಣ ಕೂಡ ಚಂದ್ರನನ್ನು ಸುತ್ತುತ್ತಿದ್ದು, ಇದು ವಿಕ್ರಮ್ ಲ್ಯಾಂಡರ್ ಬಿದ್ದಿರುವ ಸ್ಥಳವನ್ನು ಪತ್ತೆಹಚ್ಚಿ ಫೋಟೋ ಸೆರೆ ಹಿಡಿದಿದೆ. 

ಫೋಟೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ನಾಸಾ 'ನಮ್ಮ ನಾಸಾ ಮೂನ್ ಮಿಷನ್‌ನ LRO ಉಪಕರಣ ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದೆ. ಇದರ ಮೊದಲ ಚಿತ್ರ ನೋಡಿ' ಎಂದಿದೆ.

ಡಿಸೆಂಬರ್ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ