ವಾಷಿಂಗ್ಟನ್(ಮಾ.30): ವಿಶ್ವದ ಇತರ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಿಗಿಂತ ನಾಸಾ ಭಿನ್ನ ಸಂಸ್ಥೆ. ಇಲ್ಲಿನ ಪ್ರತಿಯೊಬ್ಬ ಉದ್ಯೋಗಿಯ ಕಣ್ಣೂ ಆಗಸದ ಮೇಲಿರುತ್ತದೆ. ದಿನಕ್ಕೊಂದು ಹೊಸ ಹೊಸ ಅನ್ವೇಷಣೆ, ಯೋಜನೆಗಳ ಮೂಲಕ ಬ್ರಹ್ಮಾಂಡವನ್ನು ಸೀಳುವ ಕಾಯಕದಲ್ಲಿ ನಿರತವಾಗಿದೆ ನಾಸಾ.

ನಾಸಾದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಕೈತುಂಬಾ ಸಂಬಳ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ನಾಸಾ ನಿದ್ದೆ ಮಾಡುವವರಿಗೂ ಲಕ್ಷ ಲಕ್ಷ ರೂ. ಸಂಬಳ ನೀಡುತ್ತದೆ ಎಂದರೆ ನೀವು ನಂಬಲೇಬೇಕು.

ಅರೆ! ನಿದ್ದೆ ಮಾಡೋರಿಗ್ಯಾಕೆ ಲಕ್ಷ ಲಕ್ಷ ಸಂಬಳ ಅಂತೀರಾ?. ಇದರಲ್ಲೂ ವಿಜ್ಞಾನವನ್ನು ಹುಡುಕುವ ನಾಸಾ, ಚಂದ್ರ ಮತ್ತು ಮಂಗಳ ಗ್ರಹಕ್ಕೆ ಮಾನವ ಸಹಿತ ಉಡಾವಣೆಯ ಯೋಜನೆಯ ಭಾಗವಾಗಿ ಹೊಸ ಘೋಷಣೆಯೊಂದನ್ನು ಮಾಡಿದೆ.

ಅದರಂತೆ ಸತತ 60 ದಿನಗಳ ಕಾಲ ಮಲಗುವವರಿಗಾಗಿ ನಾಸಾ ಹುಡುಕಾಟ ನಡೆಸಿದೆ. ಅಲ್ಲದೇ 60 ದಿನ ನಿರಂತರವಾಗಿ ನಿದ್ದೆ ಮಾಡುವವರಿಗೆ 13 ಲಕ್ಷ ರೂ. ನೀಡುವುದಾಗಿಯೂ ಘೋಷಿಸಿದೆ.

ಅಧ್ಯಯನವೊಂದರ ನಿಮಿತ್ತ ನಾಸಾ ಸಂಸ್ಥೆ ನಿದ್ರೆ ಮಾಡುವವರಿಗಾಗಿ ಶೋಧ ನಡೆಸುತ್ತಿದ್ದು, ಕೇವಲ 60 ದಿನ ನಿದ್ದೆ ಮಾಡಿದರೆ 13 ಲಕ್ಷ ರೂ ನೀಡುವುದಾಗಿ ಘೋಷಣೆ ಮಾಡಿದೆ. ಬಾಹ್ಯಾಕಾಶದ ಗುರುತ್ವಾಕರ್ಷಣೆಯ ವಾತಾವರಣದಲ್ಲಿ ನಿದ್ದೆ ಮತ್ತು ಇತರೆ ಆರೋಗ್ಯ ಸಂಬಂಧಿ ವ್ಯತ್ಯಾಸಗಳನ್ನು ಕಂಡು ಹಿಡಿಯಲು ವಿಜ್ಞಾನಿಗಳು ಈ ಅಧ್ಯಯನ ನಡೆಸುತ್ತಿದ್ದಾರೆ. 

ಅಮೇರಿಕನ್ ಸ್ಪೇಸ್ ಏಜೆನ್ಸಿ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ ಜಂಟಿಯಾಗಿ ಕೃತಕ ಗುರುತ್ವದಲ್ಲಿ ನಿದ್ದೆ ಮಾಡುವ ಬಗ್ಗೆ ಸಂಶೋಧನೆ ನಡೆಸಲು ಮುಂದಾಗಿವೆ. ಇದಕ್ಕಾಗಿ ಕೃತಕ ಗುರುತ್ವಾಕರ್ಷಣೆಯಲ್ಲಿ 2 ತಿಂಗಳ ಕಾಲ ನಿದ್ದೆ ಮಾಡುವ ಜನರನ್ನು ನಾಸಾ ಹುಡುಕುತ್ತಿದೆ.

ಈ ಸಂಶೋಧನೆಗಾಗಿ ನಾಸಾಗೆ 24ರಿಂದ 55 ವರ್ಷದೊಳಗಿನ 12 ಪುರುಷರು ಹಾಗೂ 12 ಮಹಿಳೆಯರ ಅವಶ್ಯಕತೆಯಿದೆ. ಅಂತೆಯೇ ಈ ಕೆಲಸಕ್ಕೆ ನಾಸಾ, 12.81 ಲಕ್ಷ ರೂ. ವೇತನ ನೀಡಲಿದೆ.