ಗುರುಗ್ರಹದ ಕ್ಷುದ್ರ ಗ್ರಹಗಳ ಅಧ್ಯಯನಕ್ಕೆ ನಾಸಾದ ಲೂಸಿ!
* 630 ಕೋಟಿ ಕಿ.ಮೀ ದೂರದಲ್ಲಿ 12 ವರ್ಷ ಅಧ್ಯಯನ
* ಗುರುಗ್ರಹದ ಕ್ಷುದ್ರ ಗ್ರಹಗಳ ಅಧ್ಯಯನಕ್ಕೆ ನಾಸಾದ ಲೂಸಿ
ಅಮೆರಿಕ(ಅ.17): ಗುರುಗ್ರಹದ ಸುತ್ತಲೂ ಸುತ್ತುತ್ತಿರುವ 8 ಕ್ಷುದ್ರಗ್ರಹಗಳ(Asteroid) ಅಧ್ಯಯನಕ್ಕೆಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ(NASA) ಲೂಸಿ(Lucy) ಎಂಬ ಬಾಹ್ಯಾಕಾಶ ನೌಕೆಯೊಂದನ್ನು ಶುಕ್ರವಾರ ಹಾರಿಬಿಟ್ಟಿದೆ. ಭೂಮಿಯಿಂದ 630 ಕಿ.ಮೀ ದೂರದಲ್ಲಿರುವ ಈ ಕ್ಷುದ್ರಗಳ ಕುರಿತು ಅಧ್ಯಯನ ನಡೆಸಲು ಸುಮಾರು 12 ವರ್ಷಗಳ ಕಾಲ ಅವುಗಳನ್ನು ಸುತ್ತುವ ಕೆಲಸವನ್ನು ಲೂಸಿ ನೌಕೆ ಮಾಡಲಿದೆ.
ಸೌರಮಂಡಲ ರಚನೆಯಾದ ವೇಳೆ ಛಿದ್ರಗೊಂಡ ದೊಡ್ಡ ಆಕೃತಿಗಳೇ ಗುರುಗ್ರಹದ ಸುತ್ತಲೂ ಕ್ಷುದ್ರಗ್ರಹಗಳಾಗಿ ಸುತ್ತುತ್ತಿದ್ದು, ಅವುಗಳ ಕುರಿತ ಯಾವುದೇ ಮಾಹಿತಿ ಸೌರ ಮಂಡಲ ರಚನೆಯ ಮೇಲೆ ಹೊಸ ಬೆಳಕು ಚೆಲ್ಲಬಹುದು ಎಂಬುದು ನಾಸಾ ವಿಜ್ಞಾನಿಗಳ(NASA Scientists) ಆಲೋಚನೆ. ಹೀಗಾಗಿಯೇ ಅಂದಾಜು 7350 ಕೋಟಿ ರು. ವೆಚ್ಚದ ಈ ಬಹುನಿರೀಕ್ಷಿತ ಯೋಜನೆಯನ್ನು ನಾಸಾ ರೂಪಿಸಿದೆ. ಲೂಸಿ ನೌಕೆಯನ್ನು ಅಟ್ಲಾಸ್ ವಿ ರಾಕೆಟ್(Rocket) ಮೂಲಕ ಉಡ್ಡಯನ ಮಾಡಲಾಗಿದೆ. ಪ್ರಯೋಗದ ಉದ್ದೇಶಕ್ಕಾಗಿ, ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾದ ವಜ್ರವೊಂದನ್ನು ನೌಕೆಯಲ್ಲಿ ಇಟ್ಟು ಕಳಿಸಲಾಗಿದೆ.
ಲೂಸಿ(Lucy) ಎಂಬುದು 3.2 ಮಿಲಿಯನ್ ವರ್ಷಗಳಷ್ಟುಹಳೆಯ ಮಾನವನ ಅಸ್ಥಿಪಂಜರವಾಗಿದ್ದು, ಸುಮಾರು 50 ವರ್ಷದ ಹಿಂದೆ ಇಥಿಯೋಪಿಯಾದ ಬಳಿ ಪತ್ತೆಯಾಗಿದೆ. ಹೀಗಾಗಿ ಈ ಬಾಹ್ಯಾಕಾಶ ನೌಕೆಗೆ ಲೂಸಿ ಎಂದು ಹೆಸರಿಡಲಾಗಿದೆ. ಲೂಸಿ ಬಾಹ್ಯಾಕಾಶದಿಂದ ಮಹತ್ವದ ಮಾಹಿತಿಯನ್ನು ಹೊತ್ತು ತರಲಿದ್ದಾನೆ ಎಂಬುದು ನಾಸಾ ವಿಜ್ಞಾನಿಗಳ ನಿರೀಕ್ಷೆಯಾಗಿದೆ.