ಕೇಪ್‌ ಕೆನವೆರಲ್‌(ಏ.20): ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಮಹತ್ವಾಕಾಂಕ್ಷಿ ಪ್ರಾಯೋಗಿಕ ಮಿನಿ ಹೆಲಿಕಾಪ್ಟರ್‌ ಮಂಗಳ ಗ್ರಹದ ನೆಲದಿಂದ ಟೇಕ್‌ ಆಫ್‌ ಆಗುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಇದು ಅನ್ಯಗ್ರಹದ ನೆಲದಿಂದ ಹಾರಿದ ಜಗತ್ತಿನ ಮೊದಲ ನೌಕೆಯಾಗಿದೆ.

ಫೆಬ್ರವರಿಯಲ್ಲಿ ನಾಸಾ ಮಂಗಳ ಗ್ರಹದ ಮೇಲೆ ‘ಪರ್ಸೀವರೆನ್ಸ್‌’ ಎಂಬ ರೋವರ್‌ ಇಳಿಸಿತ್ತು. ಆ ರೋವರ್‌ನಲ್ಲಿ ‘ಇಂಜೆನ್ಯುಟಿ’ ಎಂಬ ಪುಟ್ಟಹೆಲಿಕಾಪ್ಟರ್‌ ಇತ್ತು. ಆ ಹೆಲಿಕಾಪ್ಟರ್‌ ಸೋಮವಾರ ಮಂಗಳ ಗ್ರಹದ ಮೇಲೆ ಮೊದಲ ಬಾರಿ ಹಾರಾಟ ನಡೆಸಿದೆ. ಇದು 1.8 ಕೆ.ಜಿ. ತೂಕದ ಹೆಲಿಕಾಪ್ಟರ್‌ ಆಗಿದ್ದು, ಸಣ್ಣ ಪ್ರಮಾಣದಲ್ಲಿ ಹಾರಾಟ ನಡೆಸಿದೆ. ಅದನ್ನು 200 ಅಡಿ ದೂರದಿಂದ ಪರ್ಸೀವರೆನ್ಸ್‌ ರೋವರ್‌ ಗಮನಿಸಿದೆ ಎಂದು ನಾಸಾ ತಿಳಿಸಿದೆ.

ಮಂಗಳ ಗ್ರಹದ ಮೇಲಿನ ವಾತಾವರಣ ಭೂಮಿಯ ವಾತಾವರಣದ ಶೇ.1ರಷ್ಟುಮಾತ್ರ ದಪ್ಪವಿದೆ. ಹೀಗಾಗಿ ಹೆಲಿಕಾಪ್ಟರನ್ನು ಬಹಳ ಹಗುರವಾಗಿ ನಿರ್ಮಿಸಲಾಗಿದೆ. ಮಂಗಳದಲ್ಲಿ ರಾತ್ರಿಯ ಉಷ್ಣಾಂಶ ಮೈನಸ್‌ 90 ಡಿಗ್ರಿ ಸೆಲ್ಷಿಯಸ್‌ವರೆಗೂ ಹೋಗುತ್ತದೆ. ಹೀಗಾಗಿ ಅಲ್ಲಿನ ಅಗತ್ಯಕ್ಕೆ ತಕ್ಕಂತೆ ಹಾರುವ ಯಂತ್ರ ನಿರ್ಮಿಸಲು ನಾಸಾ 6 ವರ್ಷ ತೆಗೆದುಕೊಂಡಿದೆ. ಅಲ್ಲಿನ ವಾತಾವರಣವನ್ನು ಅಧ್ಯಯನ ನಡೆಸಲು ನಾಸಾ ರೋವರ್‌ ಹಾಗೂ ಮಿನಿ ಹೆಲಿಕಾಪ್ಟರ್‌ ಕಳುಹಿಸಿದೆ. ಬೆಂಗಳೂರು ಮೂಲದ ವಿಜ್ಞಾನಿ ಡಾ

ಸ್ವಾತಿ ಮೋಹನ್‌ ನಿರ್ದೇಶನದಲ್ಲಿ ಫೆ.18ರಂದು ಪರ್ಸೀವರೆನ್ಸ್‌ ರೋವರ್‌ ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿದಿತ್ತು.