ಬಾಹ್ಯಾಕಾಶ ನಿಲ್ದಾಣದಲ್ಲಿ ಬ್ಯಾಕ್ಟೀರಿಯಾ: ಇದೆಲ್ಲಿಂದ ಬಂತು ಮಾರಾಯಾ?
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬ್ಯಾಕ್ಟೀರಿಯಾ| ಶಿಲೀಂಧ್ರ ಜಾತಿಗೆ ಸೇರಿದ ಸೂಕ್ಷ್ಮಾಣು ಜೀವಿಗಳು ಪತ್ತೆ| ಬಾಹ್ಯಾಕಾಶ ನಿಲ್ದಾಣದಲ್ಲಿ ಬ್ಯಾಕ್ಟೀರಿಯಾ ಪತ್ತೆ ಹಚ್ಚಿದ ನಾಸಾ ಸಂಶೋಧಕರ ತಂಡ| ಗಗನಯಾತ್ರಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ|
ವಾಷಿಂಗ್ಟನ್(ಏ.08): ಭೂಮಿಯನ್ನು ಪರಿಭ್ರಮಿಸುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸೂಕ್ಷ್ಮಾಣು ಜೀವಿಗಳು ಪತ್ತೆಯಾಗಿದ್ದು, ನಾಸಾದ ವಿಜ್ಞಾನಿಗಳ ನಿದ್ದೆಗೆಡೆಸಿದೆ.
ಭಾರತೀಯ ಮೂಲದ ವಿಜ್ಞಾನಿಯೂ ಸೇರಿದಂತೆ ನಾಸಾದ ಸಂಶೋಧಕರ ತಂಡವೊಂದು ಬಾಹ್ಯಾಕಾಶ ನಿಲ್ದಾಣದಲ್ಲಿ ಸೂಕ್ಷ್ಮಾಣು ಜೀವಿಯ ಇರುವಿಕೆ ಪತ್ತೆ ಹಚ್ಚಿದೆ. ಭೂಮಿಯಲ್ಲಿ ಸಾಮಾನ್ಯವಾಗಿ ಕಚೇರಿಗಳಲ್ಲಿ ಮತ್ತು ಜಿಮ್‌ಗಳಲ್ಲಿ ಕಂಡುಬರುವ ಸೂಕ್ಷ್ಮಾಣು ಜೀವಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ.
ಇದು ಬಾಹ್ಯಾಕಾಶ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗಗನಯಾತ್ರಿಗಳ ಆರೋಗ್ಯಕ್ಕೆ ಮಾರಕವಾಗಬಹುದು ಎಂದು ನಾಸಾ ಆತಂಕ ವ್ಯಕ್ತಪಡಿಸಿದೆ. ಅಲ್ಲದೇ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೂ ಸೂಕ್ಷ್ಮಾಣು ಜೀವಿಗಳ ಇರುವಿಕೆ ಮಾರಕವಾಗಬಹುದು ಎಂದು ಅಂದಾಜಿಸಲಾಗಿದೆ.
ಶಿಲೀಂಧ್ರ ಜಾತಿಗೆ ಸೇರಿದ ಸೂಕ್ಷ್ಮಾಣು ಜೀವಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಕಂಡು ಬಂದಿವೆ. ಇವು ಸಾಮಾನ್ಯವಾಗಿ ಕಚೇರಿ, ಮನೆಗಳಲ್ಲಿ ಕಂಡು ಬರುತ್ತವೆ. ಇವು ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಅದರಂತೆ ಗಗನಯಾತ್ರಿಗಳ ಆರೋಗ್ಯದ ಮೇಲೂ ಇವು ಪರಿಣಾಮ ಬೀರುವ ಆತಂಕ ಇದೀಗ ಎದುರಾಗಿದೆ.