ಭೂಮಿಯಡಿ ಎವರೆಸ್ಟ್‌ಗಿಂತ 4 ಪಟ್ಟು ಎತ್ತರದ ಪರ್ವತ ಪತ್ತೆ: ಅಂಟಾರ್ಟಿಕಾದ ಆಳದಲ್ಲಿ ಭಾರಿ ಗಾತ್ರದ ಪರ್ವತಗಳು
ಅಂಟಾರ್ಟಿಕಾದಲ್ಲಿ ಉಂಟಾದ ಭೂಕಂಪನಗಳ ಸಾವಿರಾರು ಸೀಸ್ಮಿಕ್ ದಾಖಲೆಗಳನ್ನು ಹೈ-ಡೆಫಿನಿಶನ್ ಇಮೇಜಿಂಗ್ ವಿಧಾನದಲ್ಲಿ ಪರೀಕ್ಷಿಸಿ ವಿಜ್ಞಾನಿಗಳು ಅಲ್ಲಿ ಪರ್ವತಗಳು ಇರುವುದನ್ನು ಮತ್ತು ಅವುಗಳ ಎತ್ತರವನ್ನು ಅಂದಾಜಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಫೀನಿಕ್ಸ್ (ಜೂನ್ 12, 2023): ಜಗತ್ತಿನ ಅತಿ ಎತ್ತರದ ಪರ್ವತ ಎಂದು ಹೇಳಲಾಗುವ ಮೌಂಟ್ ಎವರೆಸ್ಟ್‌ಗಿಂತ ಕನಿಷ್ಠ 3ರಿಂದ 4 ಪಟ್ಟು ಎತ್ತರವಾಗಿರುವ ಪರ್ವತಗಳನ್ನು ಭೂಮಿಯ ಅಡಿಯಲ್ಲಿ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ! ಅಂಟಾರ್ಟಿಕಾ ಖಂಡದ ಅಡಿಯಲ್ಲಿ ಈ ಪರ್ವತಗಳಿವೆ ಎಂದು ಹೇಳಿದ್ದಾರೆ.
ಅಮೆರಿಕದ ಅರಿಜೋನಾ ಯುನಿವರ್ಸಿಟಿ ಹಾಗೂ ಅಲಬಾಮಾ ಯುನಿವರ್ಸಿಟಿಯ ಭೂವಿಜ್ಞಾನಿಗಳು ಭೂಕಂಪನ ಸಂಭವಿಸಿದಾಗ ಸೀಸ್ಮಿಕ್ ಉಪಕರಣಗಳು ಕಳುಹಿಸುವ ಸಿಗ್ನಲ್‌ಗಳನ್ನು ಅಧ್ಯಯನ ಮಾಡಿ ಅಂಟಾರ್ಟಿಕಾದ ಅಡಿಯ ನೆಲದಾಳದಲ್ಲಿ 24 ಮೈಲು (38 ಕಿ.ಮೀ.) ಎತ್ತರದವರೆಗಿನ ಪರ್ವತಗಳಿವೆ ಎಂದು ಕಂಡುಹಿಡಿದಿದ್ದಾರೆ. ಮೌಂಟ್ ಎವರೆಸ್ಟ್‌ನ ಎತ್ತರ 5.5 ಮೈಲು (8.8 ಕಿ.ಮೀ.).
ಇದನ್ನು ಓದಿ: LAC ಪರ್ವತ ಹಾದಿಗಳನ್ನು ಚೀನಾ ಸೇನೆಗೂ ಮುನ್ನವೇ ಭಾರತೀಯ ಸೇನೆ ಹೀಗೆ ತಲುಪಬಹುದು ನೋಡಿ..!
ಅಂಟಾರ್ಟಿಕಾದಲ್ಲಿ ಉಂಟಾದ ಭೂಕಂಪನಗಳ ಸಾವಿರಾರು ಸೀಸ್ಮಿಕ್ ದಾಖಲೆಗಳನ್ನು ಹೈ-ಡೆಫಿನಿಶನ್ ಇಮೇಜಿಂಗ್ ವಿಧಾನದಲ್ಲಿ ಪರೀಕ್ಷಿಸಿ ವಿಜ್ಞಾನಿಗಳು ಅಲ್ಲಿ ಪರ್ವತಗಳು ಇರುವುದನ್ನು ಮತ್ತು ಅವುಗಳ ಎತ್ತರವನ್ನು ಅಂದಾಜಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಅಚ್ಚರಿಯ ಸಂಗತಿಯೆಂದರೆ ಈ ಬೃಹತ್ ಪರ್ವತಗಳು ಭೂಮಿಯ ಕೇಂದ್ರ ಭಾಗ ಹಾಗೂ ಮೇಲ್ಪದರದ ನಡುವೆ ಸುಮಾರು 2,900 ಕಿ.ಮೀ. ಆಳದಲ್ಲಿವೆ. ಭೂಮಿಯ ಕೇಂದ್ರದಲ್ಲಿ ಭಾರೀ ಪ್ರಮಾಣದ ಉಷ್ಣತೆಯಿದ್ದು, ಇಂತಹ ಪರ್ವತಗಳ ಕಾರಣದಿಂದಾಗಿಯೇ ಒಮ್ಮೊಮ್ಮೆ ಭೂಮಿಯಾಳದಿಂದ ಉಷ್ಣತೆ ಹೊರಗೆ ಬರಬಹುದು ಎಂದು ಅಂದಾಜಿಸಲಾಗಿದೆ.
ಈ ಪರ್ವತಗಳು ಅನಾದಿ ಕಾಲದ ಹಿಂದೆ ಭೂಮಿಯೊಳಗೆ ಸಮುದ್ರವು ಘನೀಕೃತಗೊಂಡು ಅಥವಾ ಟೆಕ್ಟಾನಿಕ್ ಪದರಗಳು ಭೂಮಿಯ ಒಳಕ್ಕೆ ಕುಸಿದ ಪರಿಣಾಮವಾಗಿ ನಿರ್ಮಾಣವಾಗಿರಬಹುದು. ಇಲ್ಲಿ ಬಸಾಲ್ಟ್ ಬಂಡೆಗಳು ಹಾಗೂ ಬೆಣಚು ಕಲ್ಲುಗಳು ಹೆಚ್ಚಿನ ಪ್ರಮಾಣದಲ್ಲಿರಬಹುದು ಎಂದೂ ವಿಜ್ಞಾನಿಗಳು ಊಹಿಸಿದ್ದಾರೆ.
ಇದನ್ನೂ ಓದಿ: ರೇಡಿಯೋ ಸಂಪರ್ಕಕ್ಕೂ ಸಿಗದೆ ನೇಪಾಳದಲ್ಲಿ ನಾಪತ್ತೆಯಾಗಿದ್ದ ಭಾರತದ ಖ್ಯಾತ ಪರ್ವತಾರೋಹಿ ಬಲ್ಜೀತ್ ಕೌರ್ ರಕ್ಷಣೆ