ಮಾರುಕಟ್ಟೆಯಲ್ಲಿನ ಪ್ರಮುಖ 5 ಬ್ರ್ಯಾಂಡ್‌ಗಳ ತುಪ್ಪದಲ್ಲಿ ಕೀಟನಾಶಕ ಅಂಶಗಳು ಪತ್ತೆಯಾಗಿ ಲ್ಯಾಬ್ ಪರೀಕ್ಷೆಯಲ್ಲಿ ಫೇಲ್ ಆಗಿವೆ. ಆದರೆ, ಕರ್ನಾಟಕದ ಹೆಮ್ಮೆಯ ನಂದಿನಿ ತುಪ್ಪವು ಶುದ್ಧತೆ ಮತ್ತು ಕೀಟನಾಶಕ ಮುಕ್ತ ಪರೀಕ್ಷೆಯಲ್ಲಿ ಸಂಪೂರ್ಣವಾಗಿ ಪಾಸ್ ಆಗಿದೆ. ಇದು ದೇಶದಲ್ಲೇ ನಂಬರ್ ಒನ್ ಎಂಬುದನ್ನು ಟ್ರಸ್ಟಿಫೈಡ್ ವರದಿ ಸಾಬೀತುಪಡಿಸಿದೆ.

ಭಾರತೀಯ ಅಡುಗೆಯಲ್ಲಿ ತುಪ್ಪಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಆರೋಗ್ಯ, ಪೌಷ್ಟಿಕಾಂಶ ಹಾಗೂ ರುಚಿಗಾಗಿ ಬಹುತೇಕ ಮನೆಗಳಲ್ಲಿ ದಿನನಿತ್ಯ ತುಪ್ಪವನ್ನು ಬಳಸಲಾಗುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬ್ರ್ಯಾಂಡ್‌ಗಳ ತುಪ್ಪ ನಿಜಕ್ಕೂ ಶುದ್ಧವಾಗಿದೆಯೇ? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದ್ದು, ಕರ್ನಾಟಕದ ಹೆಮ್ಮೆಯ ಕೆಎಂಎಫ್‌ನ 'ನಂದಿನಿ ತುಪ್ಪ' (Nandini Ghee) ಗುಣಮಟ್ಟ ಮತ್ತು ಸುರಕ್ಷತೆಯಲ್ಲಿ ಇಡೀ ದೇಶದಲ್ಲೇ ನಂಬರ್ ಒನ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಉತ್ಪನ್ನಗಳ ಗುಣಮಟ್ಟವನ್ನು ಸ್ವತಂತ್ರವಾಗಿ ಪರೀಕ್ಷಿಸುವ ಖ್ಯಾತ ಸಂಸ್ಥೆ 'ಟ್ರಸ್ಟಿಫೈಡ್' (Trustified) ನಡೆಸಿದ ಲ್ಯಾಬ್ ಪರೀಕ್ಷೆಯ ವರದಿಯನ್ನು ಉಲ್ಲೇಖಿಸಿ, ಖ್ಯಾತ ನ್ಯೂಟ್ರಿಷನಿಸ್ಟ್ ಊರ್ವಶಿ ಅಗರ್ವಾಲ್ ತಮ್ಮ ‘bano.nutrismart’ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಪ್ರಮುಖ 5 ಬ್ರ್ಯಾಂಡ್‌ಗಳು ಫೇಲ್!

'ಟ್ರಸ್ಟಿಫೈಡ್' ಸಂಸ್ಥೆಯು ಮಾರುಕಟ್ಟೆಯಲ್ಲಿ ಅತ್ಯಧಿಕವಾಗಿ ಮಾರಾಟವಾಗುವ ಪತಂಜಲಿ (Patanjali), ಅಮೂಲ್ (Amul), ಮದರ್ ಡೈರಿ (Mother Dairy), ಕಂಟ್ರಿ ಡಿಲೈಟ್ (Country Delight) ಹಾಗೂ ಆಶೀರ್ವಾದ್ (Aashirvaad) ಬ್ರ್ಯಾಂಡ್‌ಗಳ ತುಪ್ಪವನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಆಘಾತಕಾರಿ ವಿಚಾರವೆಂದರೆ, ಈ ಐದೂ ಪ್ರಮುಖ ಬ್ರ್ಯಾಂಡ್‌ಗಳ ತುಪ್ಪದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಗದಿಪಡಿಸಿರುವ ಸುರಕ್ಷಿತ ಮಿತಿಗಿಂತಲೂ ಅಧಿಕ ಪ್ರಮಾಣದ ಕೀಟನಾಶಕದ (Pesticides) ಅಂಶಗಳು ಪತ್ತೆಯಾಗಿದ್ದು, ಇವೆಲ್ಲವೂ ಲ್ಯಾಬ್ ಟೆಸ್ಟ್‌ನಲ್ಲಿ ಫೇಲ್ ಆಗಿವೆ ಎಂದು ವರದಿ ತಿಳಿಸಿದೆ.

ಪರೀಕ್ಷೆಯಲ್ಲಿ ನಂದಿನಿ ತುಪ್ಪ ಪಾಸ್!

ಇತ್ತೀಚೆಗಷ್ಟೇ 'ಟ್ರಸ್ಟಿಫೈಡ್' ಸಂಸ್ಥೆಯು ಕರ್ನಾಟಕದ ಜನಪ್ರಿಯ 'ನಂದಿನಿ' ತುಪ್ಪವನ್ನು ಕಠಿಣ ಲ್ಯಾಬ್ ಪರೀಕ್ಷೆಗೆ ಒಳಪಡಿಸಿತ್ತು. ಈ ವರದಿಯ ಪ್ರಕಾರ, ನಂದಿನಿ ತುಪ್ಪವು 'ಶುದ್ಧತೆ' (Purity) ಹಾಗೂ 'ಕೀಟನಾಶಕ ಮುಕ್ತ' (Pesticide Test) ಎಂಬ ಎರಡೂ ಪ್ರಮುಖ ಮಾನದಂಡಗಳಲ್ಲಿ ಸಂಪೂರ್ಣವಾಗಿ ತೇರ್ಗಡೆಯಾಗಿದೆ. ಇದರಲ್ಲಿ ಯಾವುದೇ ಹಾನಿಕಾರಕ ಕೀಟನಾಶಕಗಳ ಅಂಶಗಳಿಲ್ಲದೆ, ನೈಸರ್ಗಿಕ ಶುದ್ಧತೆಯಿಂದ ಕೂಡಿದೆ ಎಂದು ವರದಿ ದೃಢಪಡಿಸಿದೆ.

ಈ ವರದಿ ಹೊರಬರುತ್ತಿದ್ದಂತೆ ಕನ್ನಡಿಗರು ಮತ್ತು ಗ್ರಾಹಕರು ನಂದಿನಿ ತುಪ್ಪದ ಗುಣಮಟ್ಟಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಪ್ಯಾಕ್ ಮಾಡಿದ ತುಪ್ಪ ಖರೀದಿಸುವ ಮುನ್ನ ಜನರು ಎಚ್ಚರ ವಹಿಸಬೇಕೆಂದು ಆಹಾರ ತಜ್ಞರು ಸಲಹೆ ನೀಡಿದ್ದಾರೆ.

View post on Instagram