ಫೆ.1 ಗಗನಯಾತ್ರಿ ಕಲ್ಪನಾ ಚಾವ್ಲಾರ 21ನೇ ಪುಣ್ಯ ಸ್ಮರಣೆ. ಅಂದೂ, ಇಂದೂ ಮುಂದೂ ಆಕೆ ಜಗತ್ತಿನ ಎಲ್ಲ ಮಹಿಳಾಮಣಿಯರಿಗೆ ಸ್ಪೂರ್ತಿಯಾಗಿರುತ್ತಾರೆ. ಆಕೆ ಸ್ಪೇಸ್‌ನಿಂದ ಭಾರತಕ್ಕೆ ನೀಡಿದ ಕಡೆಯ ಸಂದೇಶ ಇಲ್ಲಿದೆ. 

ಕಲ್ಪನಾ ಚಾವ್ಲಾ ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಮತ್ತು ಅಂತರಿಕ್ಷಯಾನ ಇಂಜಿನಿಯರ್. ಅವರು ಹರಿಯಾಣದ ಕರ್ನಾಲ್‌ನಲ್ಲಿ 1962ರಲ್ಲಿ ಜನಿಸಿದರು ಮತ್ತು ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಮ್ಮ ಪದವಿಯ ಶಿಕ್ಷಣ ಮುಗಿಸಿದರು.

ನಂತರ ಏರೋಸ್ಪೇಸ್ ಎಂಜಿನಿಯರ್ ಆಗಲು ಸ್ನಾತಕೋತ್ತರ ಶಿಕ್ಷಣವನ್ನು ಅಮೆರಿಕದಲ್ಲಿ ಪೂರೈಸಿದ ಅವರು ಅಮೆರಿಕನ್ ಪ್ರಜೆ ಜಾನ್ ಪಿಯರೆ ಹಾರಿಸನ್ ಅವರನ್ನು ವಿವಾಹವಾದರು. ಬಾಹ್ಯಾಕಾಶಕ್ಕೆ ಯಾನ ಬೆಳೆಸಿದ ಭಾರತೀಯ ಮೂಲದ ಮೊದಲ ಮಹಿಳೆ ಕಲ್ಪನಾ ಚಾವ್ಲಾರ 21ನೇ ಪುಣ್ಯಸ್ಮರಣೆ ಇಂದು. ಅವರು ಬಾಹ್ಯಾಕಾಶಕ್ಕೆ ಇತರೆ 6 ಸಹೋದ್ಯೋಗಿಗಳೊಂದಿಗೆ ಹಾರಿದ್ದಾಗ ಇಡೀ ಜಗತ್ತೇ ಅವರ ಬಗ್ಗೆ ಹೆಮ್ಮೆ ಅನುಭವಿಸಿತ್ತು. ವಿಶೇಷವಾಗಿ ಹೆಣ್ಣುಮಕ್ಕಳು ಹೊಸ ಕನಸು ಕಾಣಲು ಆರಂಭಿಸಿದ್ದರು. ಬಾಹ್ಯಾಕಾಶದಿಂದ ಕಲ್ಪನಾ ಚಾವ್ಲಾ ಕಳುಹಿಸಿದ ಕಡೆಯ ಸಂದೇಶವೆಂದರೆ, 'ನಾವೆಲ್ಲರೂ ಇಲ್ಲಿ ಸುರಕ್ಷಿತವಾಗಿದ್ದೀವಿ' ಎಂಬುದು. ಆದರೆ, ಗಗನನೌಕೆಯು ಹಿಂದಿರುಗಿ ಬರುವಾಗ ಭೂಮಿಯ ವಾತಾವರಣ ಪ್ರವೇಶಿಸುತ್ತಿದ್ದಂತೆಯೇ ಸುಟ್ಟು ಭಸ್ಮವಾಗಿತ್ತು. ಅವರ ಯಾನ ಯಶಸ್ಸು ಪಡೆಯಲು ಕೇವಲ 16 ನಿಮಿಷಗಳು ಬಾಕಿ ಇದ್ದಾಗ ಈ ದುರಂತ ಸಂಭವಿಸಿತ್ತು. ಒಳಗಿದ್ದ 7 ಗಗನಯಾತ್ರಿಗಳೂ ಮರಣ ಹೊಂದಿದ್ದರು. 



30 ದಿನಗಳು, 14 ಗಂಟೆಗಳು ಮತ್ತು 54 ನಿಮಿಷಗಳ ಕಾಲ ಬಾಹ್ಯಾಕಾಶದಲ್ಲಿ ಕಳೆದಿದ್ದ ಎಲ್ಲ 7 ಗಗನಯಾತ್ರಿಗಳ ವಿಶೇಷ ಅನುಭವಗಳು, ಜಗತ್ತು ಮರೆಯಲಾಗದ ಸಾಧನೆ ಭೂಮಿಗಿಳಿದು ಹಂಚಿಕೊಳ್ಳುವ ಸಮಯದಲ್ಲಿ ಅಂತ್ಯ ಕಂಡಿತ್ತು.

ಬಾಹ್ಯಾಕಾಶದಿಂದ ವಿಶೇಷವಾಗಿ ಭಾರತದ ಅಂದಿನ ಪ್ರಧಾನಿ ಐಕೆ ಗುಜ್ರಾಲ್ ಜೊತೆ ಮಾತನಾಡಿದ್ದ ಕಲ್ಪನಾ, ಭಾರತಕ್ಕೆ ಕೂಡಾ ತಮ್ಮ ಸಂದೇಶವನ್ನು ನೀಡಿದ್ದರು. ಅವರ ಕಡೆಯ ಸಂದೇಶದ ವಿಡಿಯೋ ಮನಸ್ಸನ್ನು ಕರಗಿಸುತ್ತದೆ. ಅವರ ಮುಖದ ನಗು ಕಾಡುತ್ತದೆ. ಕಲ್ಪನಾ ನಮ್ಮ ಮಾಜಿ ಪ್ರಧಾನಿ ಜೊತೆ ಏನು ಮಾತನಾಡಿದ್ದರೆಂಬ ವಿಡಿಯೋ ಇಲ್ಲಿದೆ.

Scroll to load tweet…

 ಗುಜ್ರಾಲ್ ಅವರು, ಕಲ್ಪನಾ ಚಾವ್ಲಾ ಅವರಿಗೆ ಅವರ ಸಾಧನೆಗಾಗಿ ತಾವೂ ಸೇರಿದಂತೆ ಎಲ್ಲ ಭಾರತೀಯರು ಹೆಮ್ಮೆ ಪಡುತ್ತಿರುವುದಾಗಿ ಹೇಳಿದ್ದಾರೆ ಮತ್ತು ಅವರನ್ನು ಮಿಶನ್ ಮುಗಿದ ಮೇಲೆ ಕುಟುಂಬದೊಂದಿಗೆ ಭಾರತಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಇದಕ್ಕೆ ಕಲ್ಪನಾ ಚಾವ್ಲಾ ಧನ್ಯವಾದ ಅರ್ಪಿಸಿ, ತಾವು ಬರುವುದಾಗಿ ಹೇಳಿದ್ದಾರೆ. ನೀವು ಹುಟ್ಟಿ ಬೆಳೆದ ಕರ್ನಾಲ್‌ನಲ್ಲಿಯೇ ಕಾಳಿದಾಸ ಹುಟ್ಟಿದ್ದು. ಅವರು ಸ್ವಿಮ್ ಆಫ್ ದಿ ಸ್ವಾನ್ ಎಂಬ ಕವಿತೆ ಬರೆದಿದ್ದಾರೆ ಎಂದು ಪ್ರಧಾನಿ ಹೇಳುತ್ತಿದ್ದಂತೆ, ಚಾವ್ಲಾ ನನಗೆ ಆ ಕಾವ್ಯ ಗೊತ್ತಿದೆ. ಅದೊಂದು ವಿಶೇಷ ಕವಿತೆ ಎಂದಿದ್ದಾರೆ. ಇದಕ್ಕೆ ಗುಜ್ರಾಲ್, ನೀವು ಈಗ ಅದೇ ಹಂಸವಾಗಿದ್ದು, ಗಗನದಲ್ಲಿ ಈಜಾಡುತ್ತಿದ್ದೀರಿ ಎಂದಿದ್ದಾರೆ. ಕೇಳಲು ಖುಷಿಯೆನಿಸುತ್ತದೆ ಎಂದು ಚಾವ್ಲಾ ಉತ್ತರಿಸಿದ್ದಾರೆ. ಜೊತೆಗೆ, ತಾವು ಸ್ಪೇಸ್‌ನಿಂದ ಹಿಮಾಲಯವನ್ನು ವೀಕ್ಷಿಸಿದ್ದಾಗಿ ತಿಳಿಸಿ ಅಲ್ಲಿಂದ ತೆಗೆದ ಹಿಮಾಲಯದ ಚಿತ್ರಗಳನ್ನು ತೋರಿಸಿದ್ದಾರೆ.