ಶತಕೋಟಿ ವರ್ಷದ ಹಿಂದಿನ ಗೆಲಾಕ್ಸಿ ಚಿತ್ರ ತೆಗೆದ James Webb Space Telescope!
ಅಂದಾಜು ಶತಕೋಟಿ ವರ್ಷಗಳ ಹಿಂದಿನ ಗೆಲಾಕ್ಸಿಗಳ ಚಿತ್ರ
ಜೇಮ್ಸ್ ವೆಬ್ ಟೆಲಿಸ್ಕೋಪ್ ತೆಗೆದ ಅತ್ಯಾಕರ್ಷಕ ಚಿತ್ರವನ್ನು ಬಿಡುಗಡೆ ಮಾಡಿದ ನಾಸಾ
ಬಾಹ್ಯಾಕಾಶದ ಆಳದಲ್ಲಿ ಇತ್ತೀಚೆಗಷ್ಟೇ ತನ್ನ ಮೊಟ್ಟಮೊದಲ ಫೋಟೋ ತೆಗೆದಿದ್ದ ಜೆಡಬ್ಲ್ಯುಎಸ್ ಟಿ
ವಾಷಿಂಗ್ಟನ್ (ಮಾ. 17): ಜೇಮ್ಸ್ ವೆಬ್ ಟೆಲಿಸ್ಕೋಪ್ (James Webb Space Telescope) ಇತ್ತೀಚೆಗೆ ನಾಸಾದ (NASA) ಅಧಿಕಾರಿಗಳಿಗೆ ಬಾಹ್ಯಾಕಾಶದ ಆಳದಲ್ಲಿ ತೆಗೆದ ತನ್ನ ಮೊದಲ ಅಧಿಕೃತ ಫೋಟೋವನ್ನು ಕಳುಹಿಸಿಕೊಟ್ಟಿದೆ. ಹಬಲ್ ಟೆಲಿಸ್ಕೋಪ್ (Hubble Telescope) ನಂತರದಲ್ಲಿ 10 ಶತಕೋಟಿ ಡಾಲರ್ ವೆಚ್ಚದ ದೂರದರ್ಶಕವು ಭವಿಷ್ಯದಲ್ಲಿ ಎಷ್ಟು ಉಪಯೋಗವಾಗಲಿದೆ ಎನ್ನುವುದನ್ನು ಸಾರಿ ಹೇಳುವಂಥ ಚಿತ್ರ ಇದಾಗಿದೆ. ಜೇಮ್ಸ್ ವೆಬ್ ಟೆಲಿಸ್ಕೋಪ್ ಕಳುಹಿಸಿಕೊಟ್ಟಿದ್ದ, ಎಚ್‌ಡಿ 84406 ಫೋಟೋವನ್ನು ನಾಸಾ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಅಂದಾಜು 1 ಸಾವಿರ ಪುರಾತನ ಗೆಲಾಕ್ಸಿಗಳು (galaxies) ಈ ಚಿತ್ರದಲ್ಲಿದೆ ಎಂದು ಅಂದಾಜು ಮಾಡಲಾಗಿದೆ.
'ಫೈನ್ ಫೇಸಿಂಗ್' ಎಂದು ಕರೆಯಲ್ಪಡುವ ಅದರ ಕನ್ನಡಿಗಳ ಪ್ರಮುಖ ಜೋಡಣೆ ಪೂರ್ಣಗೊಂಡ ನಂತರ ಇದನ್ನು ತೆಗೆದುಕೊಳ್ಳಲಾಗಿದೆ. ಈ ಪ್ರಕ್ರಿಯೆಯನ್ನು ನಾಸಾ ವಿಜ್ಞಾನಿಗಳು ವಿವರಿಸಿದ್ದು, ಇದು 18 ಷಡ್ಭುಜಾಕೃತಿಯ ಕನ್ನಡಿಗಳ ಇಳಿಜಾರು ಮತ್ತು ನಿಯೋಜನೆಯನ್ನು ಸೂಕ್ಷ್ಮವಾಗಿ ಹೊಂದಿಸುವುದನ್ನು ಒಳಗೊಂಡಿರುತ್ತದೆ, ಇದಕ್ಕೆ ನ್ಯಾನೊಮೀಟರ್-ಪ್ರಮಾಣದ ನಿಖರತೆಯ ಅಗತ್ಯವಿರುತ್ತದೆ ಎಂದಿದ್ದಾರೆ.
ಈಗ ಒಂದು ಪ್ರಮುಖ ಹಂತವನ್ನು ಪೂರೈಸಲಾಗಿದೆ, ಅತ್ಯಂತ ಸಂಕೀರ್ಣ ಮತ್ತು ಅತ್ಯಂತ ದುಬಾರಿ ವೀಕ್ಷಣಾಲಯವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುವ ಮೊದಲು ನಾಸಾ ಮುಂದಿನ ಹಂತದತ್ತ ಸಾಗಲಿದೆ.
ಎಚ್‌ಡಿ 84406, ಮಿಲ್ಕಿವೇ ಗ್ಯಾಲಕ್ಸಿಯಲ್ಲಿರುವ ನಕ್ಷತ್ರ, ದೂರದರ್ಶಕದಿಂದ ತೆಗೆದ ಫೋಟೋದಲ್ಲಿ ಕೇವಲ ಹೊಳೆಯುವ ಪ್ರಕಾಶಮಾನವಾದ ಫೋಕಸ್‌ಗಿಂತ ಹೆಚ್ಚಾಗಿ ಕಂಡುಬರುತ್ತದೆ. ನಾಸಾ ಪ್ರಕಾರ, ನಕ್ಷತ್ರವನ್ನು ಯಾವುದೇ ವೈಜ್ಞಾನಿಕ ಪ್ರಾಮುಖ್ಯತೆಗಾಗಿ ಆಯ್ಕೆ ಮಾಡಲಾಗಿಲ್ಲ ಆದರೆ ಅದರ ಹೊಳಪು ಮತ್ತು ಸ್ಥಳಕ್ಕಾಗಿ ಮಾತ್ರ ಆಯ್ಕೆ ಮಾಡಲಾಗಿದೆ.
ಈ ಚಿತ್ರವನ್ನು ಕೇವಲ ಸುಂದರವಲ್ಲ ಆದರೆ ವೈಜ್ಞಾನಿಕವಾಗಿ ಮಹತ್ವಪೂರ್ಣವಾಗಿಸುವುದು ಚಿತ್ರದ ಉದ್ದಕ್ಕೂ ಕಾಣುವ, ಅಂಬರ್-ಬಣ್ಣದ ಗೆರೆಗಳ ಹಿಂದೆ ಕಂಡುಬರುವ ಸಣ್ಣ ಚುಕ್ಕೆಗಳು. ಆ ಚಿಕ್ಕ ಚುಕ್ಕೆಗಳು ವಾಸ್ತವವಾಗಿ ಶತಕೋಟಿ ವರ್ಷಗಳ ದೂರದಲ್ಲಿರುವ ಗೆಲಾಕ್ಸಿಗಳಾಗಿವೆ. ಇದನ್ನು ಸ್ಪೇಸ್ ಡೀಪ್ ಫೀಲ್ಡ್ ಎಂದೂ ಕರೆಯಲಾಗುತ್ತದೆ.
James Webb Space Telescope : ನಭಕ್ಕೆ ಚಿಮ್ಮಿದ 75 ಸಾವಿರ ಕೋಟಿ ರೂಪಾಯಿ ವೆಚ್ಚದ ವಿಶ್ವದ ಅತ್ಯಂತ ಶಕ್ತಿಶಾಲಿ ಟೆಲಿಸ್ಕೋಪ್!
ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‌ನ ಆಪರೇಷನ್ ಪ್ರಾಜೆಕ್ಟ್ ಸೈಂಟಿಸ್ಟ್ (Operations Project Scientist for the James Webb Space Telescope) ಆಗಿ ಕಾರ್ಯನಿರ್ವಹಿಸುತ್ತಿರುವ ಜೇನ್ ರಿಗ್ಬಿ (Jane Rigby) ಈ ಕುರಿತಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು "ಇನ್ನು ಮುಂದೆ ಇದು ಭವಿಷ್ಯವಾಗಲಿದೆ. ನಾವು ಎಲ್ಲಿ ನೋಡಿದರೂ ಇದು ಬಾಹ್ಯಾಕಾಶದಲ್ಲಿ ಡೀಪ್ ಫೀಲ್ಡ್ ಆಗಿರಲಿದೆ. ಒಂಚೂರು ಶ್ರಮವಹಿಸದೇ, ಶತಕೋಟಿ ವರ್ಷಗಳ ಹಿಂದೆ ನಾವು ಕಂಡಿರುವ ಗೆಲಾಕ್ಸಿಗಳನ್ನು ನಾವು ನೋಡುತ್ತಿದ್ದೇವೆ." ಎಂದಿದ್ದಾರೆ. ನಕ್ಷತ್ರವು ಭೂಮಿಯಿಂದ 1.6 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ ಎನ್ನಲಾಗಿದೆ. ಜೇಮ್ಸ್ ವೆಬ್ ಟೆಲಿಸ್ಕೋಪ್‌ನ ಎಲ್ಲಾ ಯಂತ್ರಗಳನ್ನು ನಿಯೋಜಿಸಿದ ನಂತರ, ಬಿಗ್ ಬ್ಯಾಂಗ್‌ನ ನಂತರ ಹೊರಹೊಮ್ಮಿದ ಮೊದಲ ನಕ್ಷತ್ರಗಳನ್ನು ನೋಡಲು ಸಾಧ್ಯವಾಗುತ್ತದೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ.
NASA JW Telescope: ಸೆಲ್ಫಿ ಜತೆಗೆ ಬಾಹ್ಯಾಕಾಶದಿಂದ ಮೊದಲ ಚಿತ್ರ ಕಳುಹಿಸಿದ ಜೇಮ್ಸ್ ವೆಬ್ ಟೆಲಿಸ್ಕೋಪ್!
ಮೊದಲ ಸಂಪೂರ್ಣ ರೆಸಲ್ಯೂಶನ್ ಚಿತ್ರಣ ಮತ್ತು ವಿಜ್ಞಾನದ ಡೇಟಾವನ್ನು ಬೇಸಿಗೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ನಾಸಾ ಹೇಳಿದೆ. ವೆಬ್ ವಿಶ್ವದ ಪ್ರಮುಖ ಬಾಹ್ಯಾಕಾಶ ವಿಜ್ಞಾನ ವೀಕ್ಷಣಾಲಯವಾಗಿದೆ ಮತ್ತು ಒಮ್ಮೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಆರಂಭಿಸಿದ ಬಳಿಕ, ನಮ್ಮ ಸೌರವ್ಯೂಹದಲ್ಲಿನ ರಹಸ್ಯಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಇತರ ನಕ್ಷತ್ರಗಳ ಸುತ್ತಲಿನ ದೂರದ ಪ್ರಪಂಚಗಳನ್ನು ನೋಡಲು ಮತ್ತು ನಮ್ಮ ಬ್ರಹ್ಮಾಂಡದ ನಿಗೂಢ ರಚನೆಗಳು ಮತ್ತು ಮೂಲಗಳನ್ನು ಮತ್ತು ಅದರಲ್ಲಿ ನಮ್ಮ ಸ್ಥಾನವನ್ನು ಪರಿಹರಿಸಲು ಕೂಡ ಸಹಾಯ ಮಾಡುತ್ತದೆ.