ತಿರುವನಂತಪುರ[ನ.17]: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಐತಿಹಾಸಿಕ ಚಂದ್ರಯಾನ-2 ನೌಕೆ ಕಡೆಯ ಕ್ಷಣದಲ್ಲಿ ವೈಫಲ್ಯ ಅನುಭವಿಸಲು ಸಾಫ್ಟ್‌ವೇರ್‌ನಲ್ಲಿ ಎದುರಾದ ಅನಿರೀಕ್ಷಿತ ದೋಷ ಕಾರಣ ಎಂಬುದು ಪತ್ತೆಯಾಗಿದೆ.

ಮಾರ್ಗಸೂಚಿಯಾಗಿ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್‌ ದಿಢೀರ್‌ ನಿಷ್ಕಿ್ರಯವಾದ ಹಿನ್ನೆಲೆಯಲ್ಲಿ ‘ವಿಕ್ರಮ್‌’ ಲ್ಯಾಂಡರ್‌ ಸಂಪರ್ಕ ಕಡಿದುಕೊಂಡು, ಚಂದ್ರನ ಮೇಲೆ ಅಪ್ಪಳಿಸಿದೆ ಎಂದು ಬಾಹ್ಯಾಕಾಶ ಆಯೋಗಕ್ಕೆ ಇಸ್ರೋ ಸಲ್ಲಿಸಿರುವ ಆಂತರಿಕ ವರದಿಯಲ್ಲಿ ಉಲ್ಲೇಖವಾಗಿದೆ.

ಚಂದ್ರಯಾನ-2 ಕಳುಹಿಸಿದ ಚಂದ್ರನ ಕುಳಿಯ 3D ಫೋಟೋ!

ಈವರೆಗೆ ಯಾವುದೇ ದೇಶವೂ ನೌಕೆ ಇಳಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ‘ವಿಕ್ರಮ್‌’ ಲ್ಯಾಂಡರ್‌ ಅನ್ನು ಇಳಿಸಿ, ಸೆ.7ರಂದು ಹೊಸ ಇತಿಹಾಸ ಬರೆಯಲು ಇಸ್ರೋ ಮುಂದಾಗಿತ್ತು. ಆದರೆ ಚಂದ್ರನ ಮೇಲ್ಮೈನಿಂದ ಕೇವಲ 500 ಮೀಟರ್‌ ದೂರದಲ್ಲಿದ್ದಾಗ ವಿಕ್ರಮ್‌ ಲ್ಯಾಂಡರ್‌ ಸಂಪರ್ಕ ಕಡಿದುಕೊಂಡಿತ್ತು. ಅಂದಿನಿಂದ ಲ್ಯಾಂಡರ್‌ ಶೋಧಿಸಲು ಪ್ರಯತ್ನಗಳು ನಡೆಯುತ್ತಿವೆಯಾದರೂ ಫಲ ಸಿಕ್ಕಿಲ್ಲ. ನೌಕೆಯ ವೈಫಲ್ಯಕ್ಕೆ ಸಾಫ್ಟ್‌ವೇರ್‌ ದೋಷ ಕಾರಣ ಎಂಬುದನ್ನು ಇಸ್ರೋ ಪತ್ತೆ ಹಚ್ಚಿದೆ.

ಪ್ರಾಯೋಗಿಕ ಅವಧಿಯಲ್ಲಿ ಈ ಸಾಫ್ಟ್‌ವೇರ್‌ ದೋಷರಹಿತವಾಗಿ ಕೆಲಸ ಮಾಡಿತ್ತು. ಆದರೆ ಕಡೆಯ ಕ್ಷಣದಲ್ಲಿ ಕೈಕೊಟ್ಟಿತು ಎಂದು ಲಿಕ್ವಿಡ್‌ ಪ್ರೊಪಲ್ಷನ್‌ ಸಿಸ್ಟಮ್‌ ಸೆಂಟರ್‌ ನಿರ್ದೇಶಕ ವಿ. ನಾರಾಯಣನ್‌ ನೇತೃತ್ವದ ಇಸ್ರೋದ ಆಂತರಿಕ ಸಮಿತಿ ಫೋಟೋ ಹಾಗೂ ಥರ್ಮಲ್‌ ಇಮೇಜ್‌ಗಳನ್ನು ಆಧರಿಸಿ ಅಂತಿಮ ನಿಲುವಿಗೆ ಬಂದಿದೆ. ಚಂದ್ರನ ಅಂಗಳದಿಂದ 100 ಕಿ.ಮೀ. ಎತ್ತರದಲ್ಲಿ ಸುತ್ತುತ್ತಿರುವ ಇಸ್ರೋದ ಆರ್ಬಿಟರ್‌ ಹಾಗೂ ಅಮೆರಿಕದ ನಾಸಾದಂತಹ ವಿದೇಶಿ ಬಾಹ್ಯಾಕಾಶ ಸಂಸ್ಥೆಗಳಿಂದ ಫೋಟೋ ಹಾಗೂ ಥರ್ಮಲ್‌ ಇಮೇಜ್‌ಗಳನ್ನು ಪಡೆದು, ಅದನ್ನು ವಿಶ್ಲೇಷಣೆಗೊಳಪಡಿಸಿ ಈ ವರದಿಯನ್ನು ನೀಡಿದೆ.

ನಾವು ವಚನಬದ್ಧ: ಚಂದ್ರಯಾನ-3 ಯೋಜನೆಗೆ ಇಸ್ರೋ ಸಿದ್ಧ!

ಚಂದ್ರಯಾನ-2 ವೈಫಲ್ಯದಿಂದ ಎದೆಗುಂದದ ಇಸ್ರೋ, ಮುಂದಿನ ವರ್ಷ ನವೆಂಬರ್‌ನಲ್ಲಿ ಮತ್ತೊಮ್ಮೆ ಚಂದ್ರನ ಮೇಲೆ ನೌಕೆ ಇಳಿಸುವ ಸಲುವಾಗಿ ಚಂದ್ರಯಾನ-3 ಯೋಜನೆಗೆ ಸಜ್ಜಾಗುತ್ತಿದೆ.