ಚಂದ್ರಯಾನ-4 ಉದ್ದೇಶ ಬಹಿರಂಗಪಡಿಸಿದ ಇಸ್ರೋ, ಚಂದ್ರನ ಮೇಲೆ ಲ್ಯಾಂಡ್ ಮಾತ್ರವಲ್ಲ ಮರಳಿ ಭೂಮಿಗೆ ಬರುತ್ತೆ ನೌಕೆ!
ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸುವುದು ಮತ್ತು ವೈಜ್ಞಾನಿಕ ಅಧ್ಯಯನಕ್ಕಾಗಿ ಮಾದರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿಸುವುದು ಚಂದ್ರಯಾನ-4ನ ಅತಿದೊಡ್ಡ ಉದ್ದೇಶವಾಗಿದೆ. ಇಷ್ಟ ಮಾತ್ರವೇ ಅಲ್ಲ, ಇನ್ನೂ ಕೆಲವು ಉದ್ದೇಶಗಳು ಕೂಡ ಇದರಲ್ಲಿದೆ.
ನವದೆಹಲಿ (ಮಾ.7): ಚಂದ್ರಯಾನ-3 ಯೋಜನೆಯ ದೊಡ್ಡ ಮಟ್ಟದ ಯಶಸ್ಸಿನ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಮತ್ತೊಮ್ಮೆ ಚಂದ್ರನನ್ನು ಅನ್ವೇಷಿಸಲು ಮುಂದಾಗಿದೆ. ಚಂದ್ರಯಾನ-4 ಯೋಜನೆಯಲ್ಲಿ ಚಂದ್ರಯಾನ-3 ಯೋಜನೆಗಿಂತ ತೀರಾ ಭಿನ್ನವಾದ ಕೆಲವು ಉದ್ದೇಶಗಳನ್ನು ಇಸ್ರೋ ಹೊಂದಿದೆ. ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ವಿಚಾರ ಸಂಕಿರಣದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತದ ಮುಂದಿನ ಚಂದ್ರನ ಕಾರ್ಯಾಚರಣೆಯ ಬಹು ಅಂಶಗಳನ್ನು ಬಹಿರಂಗಪಡಿಸಿದರು, ಅದು ಕೇವಲ ಚಂದ್ರನ ಮೇಲೆ ಇಳಿಯುವ ಗುರಿಯನ್ನು ಮಾತ್ರವೇ ಹೊಂದಿಲ್ಲ. ಅದರೊಂದಿಗೆ ಚಂದ್ರನ ರೆಗೋಲಿತ್ ಎಂದು ಕರೆಯಲ್ಪಡುವ ಕಲ್ಲುಗಳು ಮತ್ತು ಮಣ್ಣಿನ ಮೊದಲ ಮಾದರಿಗಳೊಂದಿಗೆ ಭೂಮಿಗೆ ಹಿಂತಿರುಗುತ್ತದೆ. ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸುವುದು ಮತ್ತು ವೈಜ್ಞಾನಿಕ ಅಧ್ಯಯನಕ್ಕಾಗಿ ಮಾದರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿಸುವುದು ಪ್ರಾಥಮಿಕ ಉದ್ದೇಶವಾಗಿದೆ.
ವಿಶ್ವದ ಮೂರು ದೇಶಗಳು ಈವರೆಗೂ ಈ ಸಾಹಸವನ್ನು ಮಾಡಿದೆ. ಇದರಲ್ಲಿ ಯುನೈಟೆಡ್ ಸ್ಟೇಟ್ಸ್ ತನ್ನ ಅಪೊಲೊ ಕಾರ್ಯಾಚರಣೆಗಳೊಂದಿಗೆ, ಸೋವಿಯತ್ ಒಕ್ಕೂಟವು ಅದರ ಲೂನಾ ಕಾರ್ಯಕ್ರಮದೊಂದಿಗೆ ಮತ್ತು ಚೀನಾವನ್ನು ಅದರ ಚಾಂಗ್'ಇ ಕಾರ್ಯಾಚರಣೆಗಳೊಂದಿಗೆ ಈ ಸಾಹಸವನ್ನು ಯಶಸ್ವಿಯಾಗಿ ಮಾಡಿದೆ.
ಚಂದ್ರಯಾನ-4 ಚಂದ್ರನ ಮೇಲೆ ಮಾಡುವ ಕೆಲಸಗಳೇನು?
ಚಂದ್ರಯಾನ ಸರಣಿಯ ನಾಲ್ಕನೇ ಮಿಷನ್ ಭಾಗವು ಅದರ ಮಿಷನ್ ಅವಧಿಯ ಉದ್ದಕ್ಕೂ ಚಂದ್ರನ ಮೇಲೆ ಅನೇಕ ಉದ್ದೇಶಗಳನ್ನು ಹೊಂದಿರುತ್ತದೆ. ಅವುಗಳಲ್ಲಿ ಪ್ರಮುಖವಾಗಿ,
* ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಸಾಫ್ಟ್ ಲ್ಯಾಂಡಿಂಗ್ ಆಗುವುದು
* ಚಂದ್ರನ ಮಾದರಿ ಸಂಗ್ರಹಣೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡುವುದು
* ಚಂದ್ರನ ಮೇಲ್ಮೈಯಿಂದ ಯಶಸ್ವಿಯಾಗಿ ಉಡಾವಣೆಯಾಗುವುದು
* ಚಂದ್ರನ ಕಕ್ಷೆಯಲ್ಲಿ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಅನ್ನು ನಿರ್ವಹಿಸುವುದು
* ಒಂದು ಮಾಡ್ಯೂಲ್‌ನಿಂದ ಇನ್ನೊಂದಕ್ಕೆ ಮಾದರಿಗಳ ವರ್ಗಾವಣೆ ಮಾಡುವುದು
* ಮಾದರಿಯನ್ನು ಹೊತ್ತ ಮಾಡ್ಯುಲ್ ಭೂಮಿಗೆ ಹಿಂತಿರುಗುವುದು
Chandrayan 4: ಚಂದ್ರನ ನೆಲದಿಂದ ಮಣ್ಣನ್ನು ಭೂಮಿಗೆ ವಾಪಾಸ್ ತರಲಿದೆ ಇಸ್ರೋ!
ಚಂದ್ರಯಾನ-4 ಮಿಷನ್ ವೈಜ್ಞಾನಿಕವಾಗಿ ಮತ್ತು ಎಂಜಿನಿಯರಿಂಗ್ ವಿಚಾರದಲ್ಲೂ ಹೆಚ್ಚು ಸಂಕೀರ್ಣವಾಗಿರುತ್ತದೆ. ಇದು ಚಂದ್ರನ ಮೇಲೆ ಇಳಿಯುವುದು ಮಾತ್ರವಲ್ಲ, ಚಂದ್ರನ ಕಕ್ಷೆಯಲ್ಲಿ ಸುತ್ತುವ ಮಾಡ್ಯೂಲ್‌ಗೆ ವಾಪಾಸಗಿ ನೌಕೆ ಅದಕ್ಕೆ ಸೇರ್ಪಡೆ ಆಗಬೇಕಿರುತ್ತದೆ. ನಂತರ ಅದು ಕಕ್ಷೀಯ ಡೈನಾಮಿಕ್ಸ್‌ನ ಅನ್ನು ನಿರ್ವಹಿಸಿ ಚಂದ್ರನಿಂದ ಭೂಮಿಗೆ ಹಿಂದಿರುಗುವ ಪ್ರಯಾಣವನ್ನು ನಡೆಸಬೇಕಾಗುತ್ತದೆ. ಇದು ಎರಡು-ಹಂತದ ಮಿಷನ್ ಎಂದು ಇಸ್ರೋ ಈಗಾಗಲೇ ಹೇಳಿದೆ, ಇದನ್ನು ಎಲ್‌ವಿಎಂ -3 ಮತ್ತು ಪಿಎಸ್ಎಲ್‌ವಿ ಸೇರಿದಂತೆ ಎರಡು ಉಡಾವಣಾ ವಾಹನಗಳಲ್ಲಿ ಪ್ರಾರಂಭಿಸಲಾಗುವುದು. ಚಂದ್ರಯಾನ-4 ಘಟಕಗಳು ಐದು ಬಾಹ್ಯಾಕಾಶ ನೌಕೆ ಮಾಡ್ಯೂಲ್‌ಗಳನ್ನು ಒಳಗೊಂಡಿರುತ್ತವೆ, ಅದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಪ್ರಯತ್ನಿಸುವ ಅತ್ಯಂತ ಸವಾಲಿನ ಮತ್ತು ಸಂಕೀರ್ಣ ಕಾರ್ಯಾಚರಣೆಗಳಲ್ಲಿ ಒಂದಾಗಿದೆ.
Chandrayaan 3: ಕೊನೆಗೂ ಚಂದ್ರನ ಮೇಲೆ ಇಳಿಯಿತು ಪ್ರಗ್ಯಾನ್ ರೋವರ್, ಮೂಡಿತು ಇಸ್ರೋ ಚಿತ್ರ!
ಚಂದ್ರಯಾನ-4 ಮಿಷನ್‌ನ ಐದು ಘಟಕಗಳನ್ನು ಒಟ್ಟಿಗೆ ಉಡಾವಣೆ ಮಾಡಲಾಗುವುದಿಲ್ಲ. ಇಸ್ರೋ ಮುಖ್ಯಸ್ಥರ ಪ್ರಕಾರ, ಭಾರತದ ಅತ್ಯಂತ ಭಾರವಾದ ಉಡಾವಣಾ ವಾಹನ LVM-3 ಮೂರು ಘಟಕಗಳೊಂದಿಗೆ ಉಡಾವಣೆಯಾಗಲಿದೆ, ಇದು ಪ್ರೊಪಲ್ಷನ್ ಮಾಡ್ಯೂಲ್, ಡಿಸೆಂಡರ್ ಮಾಡ್ಯೂಲ್ ಮತ್ತು ಅಸೆಂಡರ್ ಮಾಡ್ಯೂಲ್ ಅನ್ನು ಒಳಗೊಂಡಿರುತ್ತದೆ. ವರ್ಗಾವಣೆ ಮಾಡ್ಯೂಲ್ ಮತ್ತು ರಿ ಎಂಟ್ರಿ ಮಾಡ್ಯೂಲ್ ಅನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ನಲ್ಲಿ ಉಡಾವಣೆ ಮಾಡಲಾಗುತ್ತದೆ.