ಶುಭಾಂಶು ಶುಕ್ಲಾರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕಳುಹಿಸಿದ ನಾಸಾ- ಇಸ್ರೋ ಸಾರಥ್ಯದ ಬೆನ್ನಲ್ಲೇ ಭಾರತ ಮತ್ತು ಅಮೆರಿಕ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ವಿಶ್ವದ ಅತ್ಯಾಧುನಿಕ ಭೂ ಸರ್ವೇಕ್ಷಣಾ ಉಪಗ್ರಹ ನಿಸಾರ್‌ ಜು.30ರ ಸಂಜೆ ಉಡ್ಡಯನಕ್ಕೆ ಸಜ್ಜಾಗಿದೆ.  

ಇಸ್ರೋ- ನಾಸಾ ಜಂಟಿ ಸಾಹಸಕ್ಕೆ 1975ರಲ್ಲಿ ಕರ್ನಾಟಕವೇ ವೇದಿಕೆ!

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ - ಅಮೆರಿಕ ಸಹಭಾಗಿತ್ವಕ್ಕೆ 50 ವರ್ಷಗಳ ಇತಿಹಾಸವಿದೆ. 1975ರಲ್ಲಿ ಅಮೆರಿಕ ಮತ್ತು ಭಾರತ ಜಂಟಿಯಾಗಿ ಸೈಟ್‌ (ಸ್ಯಾಟಲೈಟ್‌ ಇನ್ಫ್ರಾಸ್ಟ್ರಕ್ಚರ್‌ ಟೆಲಿವಿಷನ್‌ ಎಕ್ಸೆಪೆರಿಮೆಂಟ್‌) ಯೋಜನೆ ಜಾರಿಗೊಳಿಸಿದ್ದವು. ಅದರನ್ವಯ ಅಮೆರಿಕ ಉಪಗ್ರಹ ಹಾರಿಬಿಟ್ಟಿದ್ದರೆ ಭಾರತವು ಭೂಮಿಯಲ್ಲಿ ಪ್ರಸಾರ ಮೂಲಸೌಕರ್ಯ ಕಲ್ಪಿಸುವ ಮೂಲಕ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ 2400 ಗ್ರಾಮಗಳಲ್ಲಿ ಸಮುದಾಯ ಟೀವಿ ಪ್ರಸಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಇದು ಅಂದಿನ ಕಾಲಕ್ಕೆ ವಿಶ್ವದಲ್ಲೇ ಅತಿದೊಡ್ಡ ಸಾಮಾಜಿಕ ಪ್ರಯೋಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಜಂಟಿ ಉಪಗ್ರಹ ಉಡ್ಡಯನದ ಹೊಸ ಸಾಹಸ ಅನಾವರಣ

ಭಾರತದ ಪರಮಾಣು ಪ್ರಯೋಗದ ಬಳಿಕ ಭಾರತಕ್ಕೆ ರಷ್ಯಾದ ಕ್ರಯೋಜೆನಿಕ್‌ ಎಂಜಿನ್‌ ಪೂರೈಕೆಗೆ ಅಮೆರಿಕ ತಡೆ ಒಡ್ಡಿತ್ತು. ಆದರೆ ನಂತರದ ವರ್ಷಗಳಲ್ಲಿ ಬಾಹ್ಯಾಕಾಶ ಸೇರಿದಂತೆ ಜಾಗತಿಕ ವಲಯದಲ್ಲಿ ಭಾರತದ ವರ್ಚಸ್ಸು ವೃದ್ಧಿ ಬೆನ್ನಲ್ಲೇ ಭಾರತದ ಮೇಲಿನ ನಿರ್ಬಂಧ ತೆಗೆದು ಹಾಕಿದ್ದ ಅಮೆರಿಕ, 2014ರಲ್ಲೇ ನಾಸಾ- ಇಸ್ರೋ ಸಹಭಾಗಿತ್ವದಲ್ಲಿ ಜಂಟಿ ಉಪಗ್ರಹ ನಿರ್ಮಾಣದ ಘೋಷಣೆ ಮಾಡಿತ್ತು. ಹೀಗೆ ಅಮೆರಿಕದಲ್ಲಿ ನಿರ್ಮಾಣಗೊಂಡ ಉಪಗ್ರಹವನ್ನು ನಾಸಾದ ಸಿ-130 ಕಾರ್ಗೋ ವಿಮಾನದಲ್ಲಿ ಬೆಂಗಳೂರಿಗೆ ತಂದು ಅಲ್ಲಿಂದ ಶ್ರೀಹರಿಕೋಟಾಕ್ಕೆ ಕೊಂಡೊಯ್ಯಲಾಗಿದೆ.

13000 ಕೋಟಿ ರು.ವೆಚ್ಚ ವಿಶ್ವದಲ್ಲೇ ಅತಿ ದುಬಾರಿ!

ನಿಸಾರ್‌ ಇದುವರೆಗಿನ ಅತ್ಯಂತ ಬೆಲೆಬಾಳುವ ಭೂ ಸರ್ವೇಕ್ಷಣಾ ಉಪಗ್ರಹವಾಗಿದ್ದು ಅಂದಾಜು 12900 ಕೋಟಿ ರು.ವೆಚ್ಚ ಮಾಡಲಾಗಿದೆ. ಇದಕ್ಕಾಗಿ ನಾಸಾ 10,320 ಕೋಟಿ ರು. ವ್ಯಯಿಸಿದರೆ, ಭಾರತದ ಇಸ್ರೋ 788 ಕೋಟಿ ರು. ಖರ್ಚು ಮಾಡಿದೆ.

ನಭದಲ್ಲಿ ನಿಸಾರ್‌ ಕೆಲಸ ಮಾಡೋದು ಹೇಗೆ?

ನಿಸಾರ್‌, ತನ್ನಲ್ಲಿರುವ ಸ್ವೀಪ್‌ಸಾರ್‌ ತಂತ್ರಜ್ಞಾನ ಬಳಸಿ, 747 ಕಿ.ಮೀ. ಎತ್ತರದಿಂದ ಭೂಮಿಯ ಮೇಲೆ ನಿಗಾ ವಹಿಸಲಿದೆ. ಸ್ವೀಪ್‌ಸಾರ್‌ ಎಂದರೆ, ಅತ್ಯಾಧುನಿಕ ರಾಡಾರ್ ಇಮೇಜಿಂಗ್ ತಂತ್ರಜ್ಞಾನವಾಗಿದ್ದು, ನಿಸಾರ್‌ ಇದನ್ನು ಹೊಂದಿರುವ ಮೊದಲ ಉಪಗ್ರಹ.

ಈ ತಂತ್ರಜ್ಞಾನದ ಬಳಕೆಯಿಂದ, ನಿಸಾರ್‌ ಒಂದು ಬಾರಿ ಕಕ್ಷೆಗೆ ಸುತ್ತುಬರುವಷ್ಟರಲ್ಲಿ 242 ಕಿ.ಮೀ. ಭೂಮಿ ಅಥವಾ ಸಾಗರ ಪ್ರದೇಶದ ಡೇಟಾವನ್ನು ಸೆರೆಹಿಡಿಯುತ್ತದೆ. 3-10 ಮೀಟರ್‌ ರೆಸಲ್ಯೂಷನ್‌ ಹೊಂದಿರುವ ಉಪಗ್ರಹವು, ಅಷ್ಟು ಸಣ್ಣ ಪ್ರದೇಶದಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳನ್ನೂ ಪತ್ತೆ ಮಾಡಬಲ್ಲದು. ನಿಸಾರ್‌ನ ಪ್ರತಿ ಪಿಕ್ಸೆಲ್‌ನಲ್ಲಿ, ಟೆನಿಸ್ ಕೋರ್ಸ್‌ನ ಅರ್ಧ ಗಾತ್ರದ ಪ್ರದೇಶ ಸೆರೆಯಾಗಿರುತ್ತದೆ.

ಸೂರ್ಯನಿಗೆ ಸಮವಾದ ವಿಶೇಷ ಕಕ್ಷೆಯಲ್ಲಿ ಉಪಗ್ರಹ ನಿಯೋಜನೆ

ನಿಸಾರ್‌ ಉಪಗ್ರಹವನ್ನು 743 ಕಿ.ಮೀ. ಎತ್ತರದಲ್ಲಿ ಸೂರ್ಯನ ಕಕ್ಷೆಗೆ ಸಮವಾದ ಕಕ್ಷೆಯಲ್ಲಿ ಕೂರಿಸಲಾಗುವುದು. ಈ ಕಕ್ಷೆಯಲ್ಲೇ ಉಪಗ್ರಹ ನಿಯೋಜನೆಯಿಂದ ಉಪಗ್ರಹವು ಭೂಮಿಯ ಮೇಲಿನ ಯಾವುದೇ ನಿರ್ದಿಷ್ಟ ಪ್ರದೇಶದ ಮೇಲೆ ಅದೇ ಸ್ಥಳೀಯ ಸೌರ ಸಮಯದಲ್ಲಿ ಹಾದುಹೋಗಲು ಸಾಧ್ಯವಾಗುತ್ತದೆ. ಜತೆಗೆ, ಸೂರ್ಯನಿಗೆ ಸಮೀಪದಲ್ಲಿ ಸ್ಥಿರವಾಗಿರುವುದರಿಂದ, ಅದರಲ್ಲಿ ಅಳವಡಿಸಲಾಗಿರುವ ಸೌರಫಲಕಗಳಿಗೆ ನಿರಂತವಾಗಿ ಬಿಸಿಲು ಬೀಳುತ್ತಿದ್ದು, ಅನವರತ ಕಾರ್ಯಾಚರಣೆ ನಡೆಯುತ್ತಿರುತ್ತದೆ.

ನಿಸಾರ್‌ ಉಪಗ್ರಹದಲ್ಲಿದೆ ಹಲವು ಹೊಸ ವಿಶೇಷಗಳು

ಇದು ಎರಡು ರಡಾರ್‌ ಫ್ರೀಕ್ವೆನ್ಸಿ ಬಳಸುವ ಮೊದಲ ಉಪಗ್ರಹ. ನಾಸಾದ ಎಲ್‌ ಬ್ಯಾಂಡ್‌ ಮತ್ತು ಇಸ್ರೋದ ಎಸ್‌ ಬ್ಯಾಂಡ್‌ಗಳನ್ನು ಒಳಗೊಂಡಿದೆ. ಪರಿಣಾಮ ಹಗಲು, ರಾತ್ರಿ ಎರಡೂ ಹೊತ್ತು ಇದರ ನಿಗಾ ಸಾಧ್ಯ. ಎಲ್‌ ಬ್ಯಾಂಡ್‌ ರಡಾರ್‌ಗಳು ಜೀವಸಂಕುಲ, ಕಲ್ಲುಬಂಡೆ, ಮರದ ಟೊಂಗೆಗಳ ಮೇಲೆ ನಿಗಾ ಇಟ್ಟರೆ, ಎಸ್‌ ಬ್ಯಾಂಡ್‌ ಮರದ ಎಲೆಗಳು, ಭೂಮಿಯ ಮೇಲ್ಪದರ, ಮೋಡಗಳ ಮೇಲೆ ನಿಗಾ ಇಡುತ್ತವೆ. ಹೀಗೆ ಒಂದೇ ಭೂಪ್ರದೇಶದ ಮಾಹಿತಿಯನ್ನು ಎರಡೂ ಪ್ರತ್ಯೇಕ ರಡಾರ್‌ಗಳ ಮೂಲಕ ಸಂಗ್ರಹಿಸಬಹುದಾಗಿದೆ. ಭೂಮಿಯ ಪ್ರತಿ ಇಂಚು ಪ್ರದೇಶವನ್ನೂ ಈ ಉಪಗ್ರಹ ಪ್ರತಿ 12 ದಿನಕ್ಕೊಮ್ಮೆ ಪರಿಶೀಲಿಸಿ ಮಾಹಿತಿ ಸಂಗ್ರಹಿಸುತ್ತದೆ. ಇದಕ್ಕಾಗಿ ಸ್ವೀಪ್‌ಸಾರ್ ತಂತ್ರಜ್ಞಾನ ಬಳಸಲಾಗಿದೆ. ಉಪಗ್ರಹದಲ್ಲಿ ಈ ತಂತ್ರಜ್ಞಾನ ಬಳಕೆ ಇದೇ ಮೊದಲು. ನಿಸಾರ್‌ನ ಪ್ರತಿ ಪಿಕ್ಸೆಲ್‌ನಲ್ಲಿ, ಟೆನಿಸ್ ಕೋರ್ಟ್‌ನ ಅರ್ಧ ಗಾತ್ರದ ಪ್ರದೇಶ ಸೆರೆಯಾಗಿರುತ್ತದೆ.

ಭೂಮಿ, ಸಮುದ್ರ, ಜೀವಸಂಕುಲ ಬದಲಾವಣೆಗಳ ನಿಖರ ಮಾಹಿತಿ

- ಭೂಮಿಯ ಮೇಲ್ಮೈಯಲ್ಲಿ ನೆಲದ ರೂಪದಲ್ಲಿ ಆಗುವ ಬದಲಾವಣೆ, ಮಂಜುಗಡ್ಡೆಯ ಚಲನೆ, ಸಸ್ಯವರ್ಗದ ಚಲನಶೀಲತೆಯಂತಹ ಸಣ್ಣ ಪರಿವರ್ತನೆಗಳು ಪತ್ತೆ

- ಪ್ರತಿ 12 ದಿನಗಳಿಗೊಮ್ಮೆ ಹವಾಮಾನ ವರದಿ ಲಭ್ಯವಾಗುವ ಕಾರಣ ನೈಸರ್ಗಿಕ ವಿಕೋಪ ಮೊದಲೇ ಪತ್ತೆಮಾಡಿ, ಮುಂಜಾಗ್ರತೆ ವಹಿಸುವುದು ಸಾಧ್ಯ

- ಸಮುದ್ರದ ಮಂಜುಗಡ್ಡೆಯ ವರ್ಗೀಕರಣ, ಬಿರುಗಾಳಿಯ ಅಧ್ಯಯನ, ಮಣ್ಣಿನ ತೇವಾಂಶದಲ್ಲಿನ ಬದಲಾವಣೆ, ಮೇಲ್ಮೈ ಜಲ ಸಂಪನ್ಮೂಲ ಮೇಲ್ವಿಚಾರಣೆ ಸಾಧ್ಯ

- ಕಡಲಲ್ಲಿ ಹಡಗುಗಳ ಪತ್ತೆ, ಸಮುದ್ರ ತೀರದ ಮೇಲೆ ನಿಗಾ, ಪ್ರವಾಹ, ಪ್ರವಾಹದ ತೀವ್ರತೆ, ಪ್ರವಾಹದ ಮಾರ್ಗ, ಜ್ವಾಲಾಮುಖಿ, ಕಡಲ್ಗೊರೆತ ಮುನ್ಸೂಚನೆ

ಅಮೆರಿಕ ತಡೆಯೊಡ್ಡಿದ್ದ ರಾಕೆಟ್‌ ಬಳಸಿ ಉಪಗ್ರಹ ಉಡ್ಡಯನ!

90ರ ದಶಕದಲ್ಲಿ ಭಾರತ, ಕ್ರಯೋಜೆನಿಕ್ (ದ್ರವ ರೂಪದ ಇಂಧನ ಬಳಸುವ) ಎಂಜಿನ್ ಅಭಿವೃದ್ಧಿಗೆ ಯತ್ನಿಸುತ್ತಿತ್ತು. ಇದಕ್ಕಾಗಿ, ಯುಎಸ್‌ಎಸ್‌ಆರ್‌ (ಇಂದಿನ ರಷ್ಯಾ)ನಿಂದ ತಂತ್ರಜ್ಞಾನವನ್ನು ಪಡೆಯುವ ಬಯಕೆಯಲ್ಲಿತ್ತು. ಆದರೆ ಭಾರತದ ಪರಮಾಣು ಬಾಂಬ್‌ ಪ್ರಯೋಗ ಖಂಡಿಸಿ, ಭಾರತದ ಮೇಲೆ ಅಮೆರಿಕ ನಿರ್ಬಂಧ ಹೇರಿತು. ಈ ಮೂಲಕ ಭಾರತಕ್ಕೆ ರಷ್ಯಾ ಸಿದ್ಧಸ್ಥಿತಿಯಲ್ಲಿದ್ದ ಕ್ರಯೋಜೆನಿಕ್‌ ಎಂಜಿನ್‌ ನೀಡಲು ತಡೆ ಒಡ್ಡಿತ್ತು. ಆದರೆ ಛಲಬಿಡದ ಇಸ್ರೋ ನಂತರದ ದಶಕಗಳಲ್ಲಿ ಆ ತಂತ್ರಜ್ಞಾನ ಸಿದ್ಧಿಸಿಕೊಂಡು ಜಿಎಸ್‌ಎಲ್‌ವಿ ರಾಕೆಟ್‌ ಅಭಿವೃದ್ಧಿಪಡಿಸಿತು. ಇದೀಗ ಅದೇ ರಾಕೆಟ್‌ ಮೂಲಕ ನಿಸಾರ್‌ ಉಡ್ಡಯನ ಜಾಗತಿಕ ಮಟ್ಟದಲ್ಲಿ ಬದಲಾದ ಭಾರತದ ಸ್ಥಾನಮಾನಕ್ಕೊಂದು ಉದಾಹರಣೆ.

ಉಡಾವಣೆ ಯಾವತ್ತು?: ಜು.30

  • ಎಲ್ಲಿ?: ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರ
  • ಸಮಯ?: ಸಂಜೆ 5:40
  • 2392 ಕೆ.ಜಿ. ಉಪಗ್ರಹದ ತೂಕ
  • ₹12900 ಕೋಟಿ ನಿಸಾರ್‌ ಯೋಜನೆ ವೆಚ್ಚ
  • 3 ವರ್ಷ ಉಪಗ್ರಹ ಅಂದಾಜು ಜೀವಿತಾವಧಿ
  • 80 ಟಿಬಿ ಉಪಗ್ರಹದಿಂದ ನಿತ್ಯ 80 ಟಿಬಿ ಮಾಹಿತಿ
  • 748 ಕಿ.ಮೀ ಇಷ್ಟು ಎತ್ತರದ ಕಕ್ಷೆಯಲ್ಲಿ ಉಪಗ್ರಹ
  • 12 ದಿನ ಪ್ರತಿ 12 ದಿನಕ್ಕೊಮ್ಮೆ ಭೂಮಿಯ ಪೂರ್ಣ ಸಮೀಕ್ಷೆ