ಚಂದ್ರನ ಕಪ್ಪು ಭಾಗದಲ್ಲಿ ಮಂಜುಗಡ್ಡೆ ಪತ್ತೆ!
* ಹಿಂದಿನ ಅಧ್ಯಯನಗಳನ್ನು ಖಚಿತಪಡಿಸಿದ ಚಂದ್ರಯಾನ-2
* ಧ್ರುವಗಳಲ್ಲಿ ಧೂಳಿನ ಕಣಗಳ ಜೊತೆ ಸೇರಿಕೊಂಡಿರುವ ಮಂಜುಗಡ್ಡೆ
* ವೈಜ್ಞಾನಿಕ ದತ್ತಾಂಶಗಳನ್ನು ವಿಶ್ಲೇಷಿಸಿ ಇಸ್ರೋದಿಂದ ಸಂಗತಿ ಬಹಿರಂಗ
ನವದೆಹಲಿ(ಸೆ.10): ಚಂದ್ರನ ಮೇಲೆ ನೀರಿನ ಕಣಗಳ ಇರುವಿಕೆಯನ್ನು ಪತ್ತೆಹಚ್ಚಿದ್ದ ಇಸ್ರೋದ ಚಂದ್ರಯಾನ-2 ನೌಕೆ ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ಚಂದ್ರದ ಕಪ್ಪುಭಾಗದಲ್ಲಿ ಮಂಜುಗಡ್ಡೆಗಳು ಇರುವುದನ್ನು ಖಚಿತಪಡಿಸಿದೆ.
ಸದಾ ನೆರಳಿನಲ್ಲಿ ಇರುವ ಕಾರಣ ಚಂದ್ರನ ಕಪ್ಪು ಭಾಗದಲ್ಲಿ ಏನಿದೆ ಎನ್ನುವುದನ್ನು ಸಂಶೋಧಿಸಲು ಸಾಧ್ಯವಾಗಿರಲಿಲ್ಲ. ಚಂದ್ರಯಾನ-2 ನೌಕೆ ಎರಡು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಇಸ್ರೋ ಬಿಡುಗಡೆ ಮಾಡಿರುವ ವೈಜ್ಞಾನಿಕ ದತ್ತಾಂಶಗಳಿಂದ ಈ ಸಂಗತಿ ಬೆಳಕಿಗೆ ಬಂದಿದೆ. ಚಂದ್ರನ ಧ್ರುವ ಪ್ರದೇಶದಲ್ಲಿ ಧೂಳಿನ ಕಣಗಳ ಜೊತೆ ಮಂಜುಗಡ್ಡೆಗಳು ಕೂಡ ಸೇರಿಕೊಂಡಿದೆ ಎಂದು ಇಸ್ರೋ ತಿಳಿಸಿದೆ.
ಚಂದ್ರನ ಧ್ರುವ ಪ್ರದೇಶದಲ್ಲಿ ಈ ಹಿಂದೆ ರಾಡಾರ್‌ಗಳ ಆಧರಿತ ಅಧ್ಯಯನಗಳು ‘ಚಂದ್ರನಲ್ಲಿ ಮಂಜುಗಡ್ಡೆ ಇವೆ’ ಎಂದು ಹೇಳಿದ್ದವು. ಈ ಸಂಶೋಧನೆಯನ್ನು ಇಸ್ರೋದ ಚಂದ್ರಯಾನ- 2 ಖಚಿತಪಡಿಸಿದೆ. ಮಂಜುಗಡ್ಡೆಗಳು ಇರಬಹುದಾದ ಸಂಭಾವ್ಯ ಸ್ಥಳಗಳನ್ನು ಕೂಡ ಚಂದ್ರಯಾನ-2 ಗುರುತಿಸಿದೆ.
ಮಂಜುಗಡ್ಡೆ ಪತ್ತೆ ಹೇಗೆ?:
ಚಂದ್ರನ ದಕ್ಷಿಣ ಧ್ರುವದಲ್ಲಿ ಶಾಶ್ವತ ಕತ್ತಲು ನೆಲೆಸಿರುತ್ತದೆ. ಅದರ ಮೇಲೆ ಸೂರ್ಯನ ಒಂದೇ ಒಂದು ಕಿರಣವೂ ಬೀಳುವುದಿಲ್ಲ. 200 ಕೋಟಿ ವರ್ಷದಿಂದ ಇಲ್ಲಿ ಸೂರ‍್ಯನ ಒಂದು ಕಿರಣವೂ ಬಿದ್ದಿಲ್ಲ. ಹೀಗಾಗಿ ಚಂದ್ರಯಾನ-2 ನೌಕೆಯಲ್ಲಿ ಧ್ರುವ ಪ್ರದೇಶಗಳ ಅಧ್ಯಯನಕ್ಕೆ ಡ್ಯೂಯಲ್ ಫ್ರೀಕ್ವೆನ್ಸಿ ಇಮೇಜಿಂಗ್ ರಾಡಾರ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಇವು ಧ್ರುವ ಪ್ರದೇಶಗಳ ಕರಾರುವಾಕ್ಕಾದ ಮಾಹಿತಿಯನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿವೆ. ಫ್ರೀಕ್ವೆನ್ಸಿ ಇಮೇಜಿಂಗ್ ರಾಡಾರ್ ಮಂಜುಗಡ್ಡೆಗಳು ಇರಬಹುದಾದ ಸಂಭಾವ್ಯ ಸ್ಥಳಗಳ ಮಾಹಿತಿಯನ್ನು ರವಾನಿಸಿತ್ತು.