ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿಗೆ ಆದ್ಯತೆ ನೀಡಿ ಒಳಿತಿಗಾಗಿ ವಿಜ್ಞಾನ ಬಳಸಿಕೊಳ್ಳಬೇಕೆ ಹೊರತು, ಕೃತಕ ಬುದ್ಧಿಮತ್ತೆ ಬಳಸಿ ಅಂತಾರಾಷ್ಟ್ರೀಯ ಕಂಪನಿಗಳು ಮನುಷ್ಯನನ್ನು ಗ್ರಾಹಕರನ್ನಾಗಿ ಮಾಡಿಕೊಂಡಿವೆ 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ ಉದ್ಘಾಟನೆ
ಮೈಸೂರು (ಸೆ.9) : ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಂಡು ಅಂತಾರಾಷ್ಟ್ರೀಯ ಕಂಪನಿಗಳು ಮನುಷ್ಯನ ವ್ಯಕ್ತಿತ್ವ ಬದಲಾಯಿಸಿ, ಕೇವಲ ಗ್ರಾಹಕರನ್ನಾಗಿ ಮಾಡಿಕೊಂಡು ಲಾಭ ಪಡೆಯುತ್ತಿವೆ ಎಂದು ಇಸ್ರೋದ ವಿಶ್ರಾಂತ ಅಧ್ಯಕ್ಷ ಪದ್ಮಶ್ರೀ ಎ.ಎಸ್.ಕಿರಣ್‌ಕುಮಾರ್ ತಿಳಿಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕೆಆರ್‌ವಿಪಿ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪೋ›ತ್ಸಾಹಕ ಸೊಸೈಟಿ, ಜಿಪಂ, ಜಿಲ್ಲಾಡಳಿತ, ಕೆಎಸ್‌ಒಯು ಹಾಗೂ ಮೈಸೂರು ವಿವಿ ಸಹಯೋಗದಲ್ಲಿ ನಗರದ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಹಮ್ಮಿಕೊಂಡಿರುವ 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Mysuru: ಮಳೆ ಹಾನಿ ಕುರಿತು ನಿಖರ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಿ: ಜಿ.ಟಿ.ದೇವೇಗೌಡ
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ನಾವು ಮಾಡುವ ಎಲ್ಲಾ ಕೆಲಸಗಳ ಮಾಹಿತಿ ಸಂಗ್ರಹಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮ ಬೌದ್ಧಿಕ ಸಾಮರ್ಥ್ಯವನ್ನು ಕಚ್ಚಾ ಪದಾರ್ಥವಾಗಿ ಬಳಸಿಕೊಂಡು ವಸಾಹತುಶಾಹಿ ಪ್ರದೇಶವಾಗಿ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದರ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದರು. ವಿಜ್ಞಾನವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ವಿಜ್ಞಾನವನ್ನು ಒಳಿತಿಗಾಗಿ ಬಳಸಿಕೊಳ್ಳಬೇಕೆ ಹೊರತು, ದುರುಪಯೋಗದ ಬಗ್ಗೆ ತಿಳಿಸಿಕೊಡಬೇಕು. ಪ್ರಕೃತಿಯನ್ನು ಸಕಲ ಜೀವರಾಶಿಗಳಿಗೂ ಉಳಿಸಿಕೊಳ್ಳಬೇಕು ಎನ್ನುವ ಪ್ರಜ್ಞೆ ಬೆಳೆಸಬೇಕು. ತಂತ್ರಜ್ಞಾನವೊಂದು ಹೇಗೆ ಎರಡು ಮೊಬೈಲ್ ಫೋನ್‌ಗಳ ನಡುವೆ ಸಂಪರ್ಕ ಕಲ್ಪಿಸುವುದೋ, ಹಾಗೆಯೇ ಎರಡು ಜೀವಗಳು ಕೂಡ ತರಂಗಾಂತರಗಳ ಮೂಲಕ ಸಂಪರ್ಕಿಸಬಹುದು ಎಂಬುದನ್ನು ತಳ್ಳಿ ಹಾಕುವಂತಿಲ್ಲ ಎಂದು ಅವರು ಹೇಳಿದರು.
ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಸುಸ್ಥಿರ ಅಭಿವೃದ್ಧಿಗೆ ಬಳಸಿಕೊಳ್ಳಲು ಆದ್ಯತೆ ನೀಡಬೇಕು. ಹಿಂದೆ ಬ್ರಿಟಿಷರು ನಮ್ಮಲ್ಲಿದ್ದ ಸಂಪತ್ತಿಗಾಗಿ ಇಲ್ಲಿಗೆ ಬಂದಿದ್ದರು. ಈಗ, ಬೌದ್ಧಿಕ ಸಾಮರ್ಥ್ಯ ದುರುಪಯೋಗದ ಮೂಲಕ ವೈಯಕ್ತಿಕ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನದ ನೆರವಿನಿಂದ ಅನೇಕ ದೇಶಗಳು ಬಾಹ್ಯಾಕಾಶ ಸಂಶೋಧನೆಯ ಜೊತೆಗೆ ಬಾಹ್ಯಾಕಾಶ ಪ್ರವಾಸೋದ್ಯಮವನ್ನಾಗಿಯೂ ಮಾಡಿಕೊಂಡಿವೆ. ಈ ಕ್ಷಿಪ್ರಗತಿಯ ಬದಲಾವಣೆ ವೇಳೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮನುಷ್ಯ ನಿರಂತರ ಪ್ರಯತ್ನದಲ್ಲಿದ್ದಾನೆ. ಹಿಂದೆ ಜೀವನ ನಡೆಸಲು ದೈಹಿಕ ಸಾಮರ್ಥ್ಯ ಬೇಕಿತ್ತು. ಈಗ ತಂತ್ರಜ್ಞಾನಗಳ ಬಳಕೆ ಮೂಲಕ ಸುಲಭ, ಸುಗಮವಾಗುತ್ತಿದೆ ಎಂದು ಅವರು ತಿಳಿಸಿದರು.
ಹವಾಮಾನ ವೈಪರಿತ್ಯ ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದರಿಂದಾಗಿ ಬಹಳ ತೊಂದರೆ ಆಗುತ್ತಿದೆ. ನಿಖರವಾಗಿ ಹವಾಮಾನದ ಮುನ್ಸೂಚನೆ ಹೇಳಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಕ್ಷೇತ್ರದ ಬೆಳವಣಿಗೆಯಲ್ಲಿಯೂ ವಿಜ್ಞಾನದ ಕೊಡುಗೆ ಸಾಕಷ್ಟಿದೆ. ಯಂತ್ರ ಬಳಸಿ ಕೆಲಸ ಸುಗಮವಾಗುತ್ತಿದೆ. ಕಂಪ್ಯೂಟರ್ ಮೂಲಕ ತಮ್ಮ ಆಲೋಚನೆ ಕೆಲಸ ಮಾಡಿಸುತ್ತಿದ್ದಾನೆ. ಸಂವಹನ ವಲಯ ಕ್ಷಿಪ್ರವಾಗಿ ಬೆಳೆಯುತ್ತಿದೆ. ಸಾಮಾಜಿಕ ಬದಲಾವಣೆ ಆಗುತ್ತಿದೆ. ಡಿಜಿಟಲ್ ಕ್ರಾಂತಿ ಮತ್ತು ಚಿಪ್‌ಗಳ ಬೆಳವಣಿಗೆಯಲ್ಲಿ ಒಂದು ಮಿತಿಗೆ ಬಂದು ನಿಂತಿದ್ದೇವೆ ಎಂದು ಅವರು ತಿಳಿಸಿದರು.
ಮನುಷ್ಯ ತನ್ನಲ್ಲಿರುವ ತಂತ್ರಜ್ಞಾನದ ಸಾಮರ್ಥ್ಯದ ಮೂಲಕ ಯುದ್ಧದ ವೇಳೆ ದಬ್ಬಾಳಿಕೆ ಮಾಡುತ್ತಿದ್ದಾನೆ. ಆದ್ದರಿಂದ ಹೊಸ ಹೊಸ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ತಂತ್ರಜ್ಞಾನದ ದುರ್ಬಳಕೆಯಿಂದಾಗುವ ಅನಾಹುತದ ಬಗ್ಗೆ ಯೋಚಿಸಬೇಕಿದೆ ಎಂದರು. ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಸಾಮಾಜಿಕ ರೋಗಗಳಾದ ಅನಕ್ಷರತೆ, ಬಡತನ ನಿವಾರಣೆಗೆ ಸರ್ಕಾರಗಳು ಗಮನ ಕೊಡಬೇಕು. ಜಾತೀಯತೆ ಬಹಳ ದೊಡ್ಡ ಕಾಯಿಲೆಯಾಗಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಅಪಾರ ಪ್ರಮಾಣದಲ್ಲಿ ಬೆಳೆದಿದ್ದರೂ ಜಾತಿ ಹೋಗಲಾಡಿಸಲು ಆಗಿಲ್ಲ ಎಂದರು.
Mysuru; ಸಹಾಯಕ ಪ್ರಾಧ್ಯಾಪಕರ ಹುದ್ದೆ ಹೆಚ್ಚಳ ಆಗ್ರಹಿಸಿ ಪತ್ರ ಚಳುವಳಿ
ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್, ವಿಶ್ರಾಂತ ಕುಲಪತಿ ಪೊ›.ಪಿ. ವೆಂಕಟರಾಮಯ್ಯ, ಕೆಆರ್‌ವಿಪಿ ಅಧ್ಯಕ್ಷ ಗಿರೀಶ ವಿ. ಕಡ್ಲೆವಾಡ, ಉಪಾಧ್ಯಕ್ಷ ಎಚ್.ಜಿ. ಹುದ್ದಾರ್, ಖಜಾಂಚಿ ಈ. ಬಸವರಾಜು, ಕಾರ್ಯಕಾರಿ ಸಮಿತಿ ಸದಸ್ಯರಾದ ಹರಿಪ್ರಸಾದ…, ಮೀನಾಕ್ಷಿ ಕುಡುಸೋಮಣ್ಣವರ, ಡಾ. ರಾಮಚಂದ್ರ, ಶಂಕರ ಟಿ.ನಾಯಕ, ದಾನಿ ಬಾಬುರಾವ್, ಅಣದೊರೆ ಮಹಾರುದ್ರಪ್ಪ, ಬಸವಲಿಂಗಪ್ಪ ಮಲ್ಹಾರ ಇದ್ದರು.
