2025-26ರ ಬಾಹ್ಯಾಕಾಶ ಬಜೆಟ್ ಇನ್ನೂ ಘೋಷಣೆಯಾಗಿಲ್ಲವಾದರೂ, ಹಿಂದಿನ ಬಜೆಟ್ ಮತ್ತು ಭಾರತೀಯ ಬಾಹ್ಯಾಕಾಶ ವಲಯದ ಬೆಳವಣಿಗೆಗಳ ಆಧಾರದ ಮೇಲೆ ಈ ವರ್ಷದ ಆದ್ಯತೆಗಳನ್ನು ಅಂದಾಜಿಸಬಹುದು. ಈ ಲೇಖನವು ಬಜೆಟ್ ನಿರೀಕ್ಷೆಗಳು, ಗಗನಯಾನ, ಚಂದ್ರಯಾನ-4, ಮತ್ತು ಇತರ ಮಹತ್ವದ ಯೋಜನೆಗಳಿಗೆ ನಿರೀಕ್ಷಿತ ಹಣಕಾಸಿನ ನೆರವುಗಳನ್ನು ಚರ್ಚಿಸುತ್ತದೆ.

2025-26ನೇ ಸಾಲಿನಲ್ಲಿ ಭಾರತೀಯ ಬಾಹ್ಯಾಕಾಶ ಯೋಜನೆಗಳಿಗೆ ಎಷ್ಟು ಬಜೆಟ್ ನಿಯೋಜನೆಗೊಳ್ಳಲಿದೆ ಎನ್ನುವುದು ಇನ್ನೂ ಅಧಿಕೃತವಾಗಿ ಘೋಷಿತವಾಗಿಲ್ಲ. ಆದರೆ, ಹಿಂದಿನ ವರ್ಷದ ಬಜೆಟ್ ಆಧಾರದಲ್ಲಿ, ಮತ್ತು ಭಾರತೀಯ ಬಾಹ್ಯಾಕಾಶ ವಲಯದ ಪ್ರಮುಖ ಬೆಳವಣಿಗೆಯ ಆಧಾರದಲ್ಲಿ, ಈ ವರ್ಷದ ಪ್ರಮುಖ ಆದ್ಯತೆಗಳನ್ನು ನಾವು ಅಂದಾಜಿಸಬಹುದು.

2024-25 ಬಾಹ್ಯಾಕಾಶ ಬಜೆಟ್ ನೋಟ

ಹೆಚ್ಚಿನ ಅನುದಾನ: ಹಿಂದಿನ ಬಜೆಟ್‌ನಲ್ಲಿ ಬಾಹ್ಯಾಕಾಶ ಇಲಾಖೆಗೆ ಮಹತ್ತರ ಉತ್ತೇಜನ ಲಭಿಸಿದ್ದು, ಇಲಾಖೆಯ ಅನುದಾನದಲ್ಲಿ 18% ಹೆಚ್ಚಳವಾಗಿತ್ತು. 2024-25ರಲ್ಲಿ ಬಾಹ್ಯಾಕಾಶ ಇಲಾಖೆಗೆ 13,042.75 ಕೋಟಿ ರೂಪಾಯಿ ಲಭಿಸಿತ್ತು.

ಡೀಪ್ ಸ್ಪೇಸ್ ಅನ್ವೇಷಣೆಗೆ ಒತ್ತು: ಬಾಹ್ಯಾಕಾಶ ಇಲಾಖೆಗೆ ನೀಡುವ ಹೆಚ್ಚುವರಿ ಅನುದಾನ ಚಂದ್ರಯಾನ-4, ಶುಕ್ರ ಗ್ರಹ ಅನ್ವೇಷಣಾ ಯೋಜನೆ (ವೀನಸ್ ಆರ್ಬಿಟರ್ ಮಿಷನ್ - ವಿಒಎಂ), ಮತ್ತು ಮಾನವ ಸಹಿತ ಬಾಹ್ಯಾಕಾಶ ಯೋಜನೆಯಾದ ಗಗನಯಾನದಂತಹ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಬಳಕೆಯಾಗಲಿದೆ.

ಭಾರತೀಯ ಅಂತರಿಕ್ಷ ಸ್ಟೇಷನ್ (ಬಿಎಎಸ್-1): ಬಜೆಟ್‌ನಲ್ಲಿ ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣಕ್ಕೆ ಪೂರ್ವಭಾವಿ ಕಾರ್ಯಗಳನ್ನು ನಡೆಸಲು ಅನುದಾನ ಒದಗಿಸಲಾಗಿದೆ.

ಸಾಹಸೋದ್ಯಮ ಬಂಡವಾಳ ನಿಧಿ: ಭಾರತದಲ್ಲಿ ಬಾಹ್ಯಾಕಾಶ ಸಂಬಂಧಿತ ಸ್ಟಾರ್ಟಪ್‌ಗಳಿಗೆ ಬೆಂಬಲ, ಉತ್ತೇಜನ ನೀಡಲು 1,000 ಕೋಟಿ ರೂಪಾಯಿಗಳ ಸಾಹಸೋದ್ಯಮ ಬಂಡವಾಳ ನಿಧಿಯನ್ನು ಸ್ಥಾಪಿಸಲಾಗಿದೆ.

2025-26 ಬಾಹ್ಯಾಕಾಶ ಬಜೆಟ್ ನಿರೀಕ್ಷೆಗಳು

ಮುಂದುವರಿದ ಬೆಳವಣಿಗೆ: ಸರ್ಕಾರ ಬಾಹ್ಯಾಕಾಶ ಮತ್ತು ಬೆಳೆಯುತ್ತಿರುವ ಖಾಸಗಿ ಬಾಹ್ಯಾಕಾಶ ಉದ್ಯಮದತ್ತ ಹೆಚ್ಚಿನ ಗಮನ ಹರಿಸಿದ್ದು, ಇದರಿಂದಾಗಿ ಬಾಹ್ಯಾಕಾಶ ಬಜೆಟ್‌ನಲ್ಲಿ 15-20% ಹೆಚ್ಚಳ ಕಂಡು, 15,000 ಕೋಟಿಯಿಂದ 16,000 ಕೋಟಿ ರೂಪಾಯಿಗಳ ನಿಯೋಜನೆಯಾಗುವ ನಿರೀಕ್ಷೆಗಳಿವೆ.

ಖಾಸಗಿ ವಲಯಕ್ಕೆ ಬೆಂಬಲ: ಖಾಸಗಿ ಬಾಹ್ಯಾಕಾಶ ಸಂಸ್ಥೆಗಳಿಗೆ ಹೆಚ್ಚಿನ ಸಹಾಯಧನ ಮತ್ತು ಬೆಂಬಲವನ್ನು ನಿರೀಕ್ಷಿಸಲಾಗಿದ್ದು, ಇದಕ್ಕಾಗಿ 500-700 ಕೋಟಿ ರೂಪಾಯಿಗಳಷ್ಟು ಪಿಎಲ್ಐ ಯೋಜನೆಗಳ ವಿಸ್ತರಣೆ, ತೆರಿಗೆ ವಿನಾಯಿತಿಗಳು, ಮತ್ತು ನಿಯಮಾವಳಿಗಳ ಸುಧಾರಣೆಗಳನ್ನು ಕೈಗೊಳ್ಳುವ ನಿರೀಕ್ಷೆಗಳಿವೆ.

ಮೂಲಭೂತ ಸೌಕರ್ಯಗಳ ಅಭಿವೃದ್ಧಿ: ಉಡಾವಣಾ ವ್ಯವಸ್ಥೆಗಳು, ಪರೀಕ್ಷಾ ಕೇಂದ್ರಗಳು, ಮತ್ತು ಭೂ ಕೇಂದ್ರಗಳು ಸೇರಿದಂತೆ, ಬಾಹ್ಯಾಕಾಶ ಮೂಲಭೂತ ವ್ಯವಸ್ಥೆಗಳಿಗೆ ಹೂಡಿಕೆ ನಡೆಸುವುದಕ್ಕೆ ಆದ್ಯತೆ ನೀಡುವ ಸಾಧ್ಯತೆಗಳಿವೆ. ಇದಕ್ಕಾಗಿ 3,000 - 4,000 ಕೋಟಿ ರೂಪಾಯಿಗಳನ್ನು ವಿನಿಯೋಗಿಸುವ ನಿರೀಕ್ಷೆಗಳಿವೆ.

ಬೆಳೆಯುತ್ತಿರುವ ತಂತ್ರಜ್ಞಾನಗಳತ್ತ ಗಮನ: ಬೆಳೆಯುತ್ತಿರುವ ಬಾಹ್ಯಾಕಾಶ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ (ಎಐ), ರೋಬಾಟಿಕ್ಸ್, ಮತ್ತು ಆಧುನಿಕ ಪ್ರೊಪಲ್ಷನ್ ವ್ಯವಸ್ಥೆಗಳ ಕುರಿತು ಹೆಚ್ಚಿನ ಸಂಶೋಧನೆ ಮತ್ತು ಅಭಿವೃದ್ಧಿ ನಡೆಸುವ ಸಲುವಾಗಿ ಹೆಚ್ಚಿನ ಬಂಡವಾಳ ಒದಗಿಸುವ ಸಾಧ್ಯತೆಗಳಿದ್ದು, ಇದಕ್ಕಾಗಿ 1,500 - 2,000 ಕೋಟಿ ರೂಪಾಯಿಗಳು ಮೀಸಲಿಡಬಹುದು.

ಕೌಶಲ ಮತ್ತು ಸಾಮರ್ಥ್ಯ ವೃದ್ಧಿ: ಬಾಹ್ಯಾಕಾಶ ವಲಯಕ್ಕೆ ಸಂಬಂಧಿಸಿದಂತೆ, ಕೌಶಲ್ಯಾಭಿವೃದ್ಧಿ ನಡೆಸಲು ಮತ್ತು ಕುಶಲ ಉದ್ಯೋಗಿಗಳ ಪಡೆಯ ನಿರ್ಮಾಣಕ್ಕಾಗಿ ತರಬೇತಿ ನೀಡುವಂತ ಕಾರ್ಯಕ್ರಮಗಳಿಗಾಗಿ ಹೂಡಿಕೆ ನಡೆಸುವುದು ಅತ್ಯಂತ ಮುಖ್ಯವಾಗಿದೆ. ಇದಕ್ಕಾಗಿ ವಿಶೇಷ ತರಬೇತಿಗಳಿಗೆ, ವಿದ್ಯಾರ್ಥಿ ವೇತನಕ್ಕೆ, ಮತ್ತು ಶಿಕ್ಷಣ ಸಂಸ್ಥೆಗಳೊಡನೆ ಸಹಭಾಗಿತ್ವಕ್ಕೆ 200ರಿಂದ 300 ಕೋಟಿ ರೂಪಾಯಿ ಒದಗಿಸಬಹುದು.

ಅಂತಾರಾಷ್ಟ್ರೀಯ ಸಹಯೋಗ: ಬಾಹ್ಯಾಕಾಶ ಅನ್ವೇಷಣೆ ಮತ್ತು ಸಂಶೋಧನೆಗಾಗಿ ಈ ಬಾರಿಯ ಬಜೆಟ್‌ನಲ್ಲಿ ಅಂತಾರಾಷ್ಟ್ರೀಯ ಸಹಭಾಗಿತ್ವಕ್ಕೆ ಆದ್ಯತೆ ನೀಡಿ, ಅದಕ್ಕಾಗಿ ಅಂದಾಜು 500ರಿಂದ 800 ಕೋಟಿ ರೂಪಾಯಿ ಒದಗಿಸಬಹುದು.

ನಿರ್ದಿಷ್ಟವಾಗಿ ಗಮನ ಹರಿಸುವ ವಲಯಗಳು

ಗಗನಯಾನ ಯೋಜನೆ: ಭಾರತ ತನ್ನ ಪ್ರಥಮ ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಸಿದ್ಧತೆ ನಡೆಸುತ್ತಿದ್ದು, ಮಹತ್ವಾಕಾಂಕ್ಷಿ ಗಗನಯಾನ ಯೋಜನೆಗೆ ಮುಂದಿನ ಅಭಿವೃದ್ಧಿ, ಪರೀಕ್ಷೆಗಳಿಗೆ ಅಂದಾಜು 3,000 ಕೋಟಿ ರೂಪಾಯಿ ಒದಗಿಸುವ ಸಾಧ್ಯತೆಗಳಿವೆ.

ಚಂದ್ರಯಾನ - 4 ಮತ್ತು ವಿಒಎಂ: ಈ ಡೀಪ್ ಸ್ಪೇಸ್ ಯೋಜನೆಗಳಿಗೂ ಸರ್ಕಾರದ ಆರ್ಥಿಕ ಬೆಂಬಲ ಮುಂದುವರಿದು, ಅವುಗಳು ಯಶಸ್ವಿಯಾಗಿ ಪೂರ್ಣಗೊಳ್ಳುವಂತೆ ಮಾಡುವ ನಿರೀಕ್ಷೆಗಳಿವೆ. ಇದಕ್ಕಾಗಿ ಚಂದ್ರಯಾನ-4 ಮತ್ತು ವಿಒಎಂ ಯೋಜನೆಗಳಿಗೆ ತಲಾ 1,000 - 1,500 ಕೋಟಿ ರೂಪಾಯಿ ಮೀಸಲಿಡುವ ನಿರೀಕ್ಷೆಗಳಿವೆ.

ಬಾಹ್ಯಾಕಾಶ ಆಧಾರಿತ ಸೇವೆಗಳು: ಈ ಬಾರಿಯ ಬಾಹ್ಯಾಕಾಶ ಬಜೆಟ್ ವಿವಿಧ ರೀತಿಯ ಬಳಕೆಗಳಿಗೆ ಬಾಹ್ಯಾಕಾಶ ತಂತ್ರಜ್ಞಾನದ ಬಳಕೆಯನ್ನು ವಿಸ್ತರಿಸುವುದಕ್ಕೆ ಆದ್ಯತೆ ನೀಡಲಿದೆ. ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಕೃಷಿ, ವಿಪತ್ತು ಪರಿಹಾರ, ಮತ್ತು ಸಂವಹನದಂತಹ ಕ್ಷೇತ್ರಗಳಲ್ಲಿ ಬಳಸುವ ಸಲುವಾಗಿ ಅಂದಾಜು 2,000 - 2,500 ಕೋಟಿ ರೂಪಾಯಿಗಳನ್ನು ಮೀಸಲಿಡಬಹುದು.

ಬಾಹ್ಯಾಕಾಶ ಪರಿಸ್ಥಿತಿಯ ಅರಿವು: ಬಾಹ್ಯಾಕಾಶ ತ್ಯಾಜ್ಯಗಳು ಮತ್ತು ಭದ್ರತಾ ಅಪಾಯಗಳ ಕುರಿತು ಕಳವಳಗಳು ಹೆಚ್ಚಾಗುತ್ತಿದ್ದು, ಬಾಹ್ಯಾಕಾಶದ ಪರಿಸ್ಥಿತಿಯ ಅರಿವು ಹೊಂದುವ ಕುರಿತು ಹೂಡಿಕೆ ನಡೆಸುವ ಅಗತ್ಯವಿದೆ. ಇದಕ್ಕಾಗಿ ಅಂದಾಜು 800ರಿಂದ 1,000 ಕೋಟಿ ರೂಪಾಯಿಗಳನ್ನು ಒದಗಿಸಬಹುದು.

ಒಟ್ಟಾರೆ ಮೇಲ್ನೋಟ:

2025-26ನೇ ಸಾಲಿನ ಬಾಹ್ಯಾಕಾಶ ಬಜೆಟ್ ಬಾಹ್ಯಾಕಾಶ ಅನ್ವೇಷಣೆ ಮತ್ತು ಖಾಸಗಿ ಬಾಹ್ಯಾಕಾಶ ವಲಯದ ಅಭಿವೃದ್ಧಿಯ ಕುರಿತು ಭಾರತದ ಬೆಳೆಯುತ್ತಿರುವ ಮಹತ್ವಾಕಾಂಕ್ಷೆಯನ್ನು ಮತ್ತು ಬದ್ಧತೆಯನ್ನು ಪ್ರತಿಬಿಂಬಿಸಲಿದೆ. ತಾಂತ್ರಿಕ ಸಾಮರ್ಥ್ಯವನ್ನು ವೃದ್ಧಿಸುವತ್ತ, ನಾವೀನ್ಯತೆಯನ್ನು ಉತ್ತೇಜಿಸುವತ್ತ, ಮತ್ತು ರಾಷ್ಟ್ರೀಯ ಅಭಿವೃದ್ಧಿಗಾಗಿ ಬಾಹ್ಯಾಕಾಶ ತಂತ್ರಜ್ಞಾನದ ಬಳಕೆಯನ್ನು ವಿಸ್ತರಿಸುವತ್ತ ಈ ಬಾರಿಯ ಬಾಹ್ಯಾಕಾಶ ಬಜೆಟ್ ಗಮನ ಹರಿಸಲಿದೆ. ಕಾರ್ಯತಂತ್ರದ ಹೂಡಿಕೆ ಮತ್ತು ಕೌಶಲ್ಯಾಭಿವೃದ್ಧಿಯತ್ತ ಗಮನ ಹರಿಸುವ ಮೂಲಕ, ಭಾರತ ಜಾಗತಿಕ ಬಾಹ್ಯಾಕಾಶ ಸ್ಪರ್ಧೆಯಲ್ಲಿ ಮಹತ್ವದ ಸ್ಥಾನ ಸಂಪಾದಿಸುವ ನಿರೀಕ್ಷೆಗಳಿವೆ.

(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ನೀವು ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)