ಕಪ್ಪೆಗಳ ಕುತೂಹಲದ ಲೋಕದಲ್ಲೊಂದು ಇಂಡಿಯನ್ ಬುಲ್ಫ್ರಾಗ್. ಮುಂಗಾರು ಮಳೆಯಲ್ಲಿ ಸಂತಾನೋತ್ಪತ್ತಿ ಮಾಡುವ ಸಮಯದಲ್ಲಿನ ಕಲರ್ಫುಲ್ ಲೋಕದ ವಿಡಿಯೋ ಇಲ್ಲಿದೆ...
ಪ್ರಕೃತಿಯೇ ವಿಸ್ಮಯ. ಯಾರ ಊಹೆಗೂ ನಿಲುಕದ ಅದೆಷ್ಟೋ ಘಟನೆಗಳು ದಿನನಿತ್ಯ ಈ ಪ್ರಕೃತಿಯಲ್ಲಿ ಆಗುತ್ತಲೇ ಇರುತ್ತವೆ. ವಿಜ್ಞಾನಕ್ಕೇ ಸವಾಲೆಸೆಯುವ, ಯಾವ ವಿಜ್ಞಾನಿಗಳಿಂದಲೂ ಕಂಡು ಹಿಡಿಯಲು ಸಾಧ್ಯವಾಗದ ಅದೆಷ್ಟೋ ವಿಚಿತ್ರಗಳಿವೆ. ಮನುಷ್ಯ ತಾನು ಎಷ್ಟೇ ಬುದ್ಧಿವಂತ ಎಂದುಕೊಂಡರೂ, ಯುಗಗಳು ಎಷ್ಟೇ ಬದಲಾದರೂ ಪ್ರಕೃತಿಯ ಮುಂದೆ ಎಲ್ಲವೂ ಗೌಣವೇ. ಅದರಲ್ಲಿಯೂ ಮುಂಗಾರು ಮಳೆ ಬಂದೊಡನೆ ಪ್ರಕೃತಿಯಲ್ಲಿ ಆಗುವ ಬದಲಾವಣೆ ಅಗೆದಷ್ಟೂ ಬಗೆದಷ್ಟೂ ಕುತೂಹಲವೇ. ಈ ಸಮಯದಲ್ಲಿ ಹಲವು ಜೀವಿಗಳು ಸಂತಾನೋತ್ಪತ್ತಿ ಮಾಡುವುದು ಉಂಟು. ಅಷ್ಟಕ್ಕೂ ಮಳೆಗೂ, ಕಪ್ಪೆಗೂ ಇರುವ ಸಂಬಂಧ ಎಲ್ಲರಿಗೂ ತಿಳಿದದ್ದೇ. ಕಪ್ಪೆಗಳು ಒಟಗುಟ್ಟುತ್ತಿದ್ದರೆ, ಮಳೆ ಖಂಡಿತವಾಗಿಯೂ ಬಂದೇ ಬರುತ್ತದೆ ಎಂದು ಹೇಳಲಾಗುತ್ತದೆ. ಇದೇ ಸಮಯದಲ್ಲಿ ಒಂದು ಜಾತಿಯ ಕಪ್ಪೆಗಳು ಸಂತಾನೋತ್ಪತ್ತಿ ಮಾಡುವುದು ಉಂಟು. ಆ ವಿಸ್ಮಯ ಕಲರ್ಪುಲ್ ಲೋಕದ ನೋಟದ ವಿಡಿಯೋ ವೈರಲ್ ಆಗಿದೆ.
ಮುಂಗಾರು ಮಳೆ ಎಂದರೆ ಕಪ್ಪೆಗಳ ಅವುಗಳ ಶಿಶಿರ ನಿದ್ರೆಯ ಅಂತ್ಯ ಮತ್ತು ಸಂತಾನೋತ್ಪತ್ತಿ ಋತುವಿನ ಆರಂಭವನ್ನು ಸೂಚಿಸುತ್ತದೆ. ಇಲ್ಲಿ ಭಾರತೀಯ ಬುಲ್‌ಫ್ರಾಗ್‌ಗಳು, ಸಂಗಾತಿಗಳನ್ನು ಆಕರ್ಷಿಸಲು ಮತ್ತು ತಮ್ಮ ವಂಶಾವಳಿಯನ್ನು ಮುಂದಕ್ಕೆ ಸಾಗಿಸಲು ಸಿದ್ಧವಾಗುತ್ತಿರುವಾಗ, ತಮ್ಮ ರೋಮಾಂಚಕ ಹಳದಿ ಬಣ್ಣಗಳಲ್ಲಿ ಕಲರ್ಫುಲ್ ಆಗಿ ಕಾಣಿಸುತ್ತದೆ. ಅದರ ವಿಡಿಯೋ ಈಗ ವೈರಲ್ ಆಗಿದೆ. ಕುತೂಹಲದ ವಿಷಯ ಏನೆಂದರೆ, ಈ ಬದಲಾಗುವ ಬಣ್ಣವು ಕ್ಷಣಿಕವಾಗಿರುತ್ತದೆ. ಇದನ್ನು ಅಪರೂಪದ ಮತ್ತು ವಿಶೇಷ ದೃಶ್ಯವನ್ನಾಗಿ ಮಾಡುತ್ತದೆ. ಪ್ರಕೃತಿಯ ಚಕ್ರದಲ್ಲಿ ಈ ಆಕರ್ಷಕ ಕ್ಷಣವನ್ನು ಮನ್ ಮಾನಸಿ ಎನ್ನುವ ಫೋಟೋಗ್ರಾಫರ್ ಸೆರೆ ಹಿಡಿದಿದ್ದು ಅದನ್ನು ವೈರಲ್ಭಯಾನಿಯಲ್ಲಿ ಶೇರ್ ಮಾಡಲಾಗಿದೆ.
ಈ ವಿಡಿಯೋದಲ್ಲಿ ಪ್ರಕೃತಿಯ ವಿಸ್ಮಯ ಲೋಕವನ್ನು ಕಾಣಬಹುದಾಗಿದೆ. ಇನ್ನು ಈ ಕಪ್ಪೆಯ ಕುರಿತು ಹೇಳುವುದಾದರೆ, ಇದನ್ನು "ಹಲಗೆ ಕಪ್ಪೆ" ಎಂದು ಕನ್ನಡದಲ್ಲಿ ಕರೆಯುತ್ತಾರೆ. ಈ ಕಪ್ಪೆಗಳು ಮುಖ್ಯವಾಗಿ ನಿಂತ ನೀರಿನಲ್ಲಿ, ಉದಾಹರಣೆಗೆ ಕೆರೆ, ಕೊಳ, ಮತ್ತು ಇತರ ಜಲಾನಯನ ಪ್ರದೇಶಗಳಲ್ಲಿ ಕಂಡುಬರುತ್ತವೆ. ಕೆಲವು ಬುಲ್ಫ್ರಾಗ್ ತಳಿಗಳು ಶ್ರೀಲಂಕಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಅಷ್ಟಕ್ಕೂ ಕಪ್ಪೆಗಳ ಲೋಕವೇ ಬಲು ವಿಚಿತ್ರವಾದದ್ದು. ಅಂಥ ವಿಚಿತ್ರಗಳಲ್ಲಿ ಒಂದು ಮಹಾಬಲಿ ಕಪ್ಪೆ ಈಚೆಗಷ್ಟೇ ಬೆಳಕಿಗೆ ಬಂದಿದೆ. ಇದು ಕೇರಳದಲ್ಲಿ ಕಾಣಿಸಿಕೊಳ್ಳುವ ಕಪ್ಪೆ. ವರ್ಷಪೂರ್ತಿ ಭೂಮಿಯ ಒಳಗೆ ಇರುವ ಈ ಕಪ್ಪೆ ಇದೀಗ ಅಂದರೆ ಮಳೆಗಾಲದ ಸಮಯದಲ್ಲಿ ಒಮ್ಮೆ ಮಾತ್ರ ಮೇಲಕ್ಕೆ ಬಂದು ದರುಶನವನ್ನು ನೀಡುತ್ತದೆ! ವರ್ಷದಲ್ಲಿ ಒಂದು ದಿನ ಸಂತಾನೋತ್ಪತ್ತಿ ಮಾಡಲು ಮೇಲ್ಮೈಗೆ ಬರುತ್ತದೆ ಮತ್ತು ಮೊಟ್ಟೆಗಳನ್ನು ಇಡುತ್ತದೆ ಮತ್ತು ಭೂಮಿಯ ಆಳವಾದ ಪದರಗಳಿಗೆ ಮರಳುತ್ತದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ .ಕೇರಳದ ಮುನ್ನಾರದಲ್ಲಿ ಇದು ಸದ್ಯದಲ್ಲಿಯೇ ಕಾಣಿಸಿಕೊಳ್ಳಲಿದೆ.
ಈ ಕಪ್ಪೆಯ ವಿಶೇಷತೆ ಬಲು ಸೋಜಿಗ. ಇದನ್ನು ನೇರಳೆ ಕಪ್ಪೆ (ನಾಸಿಕಾಬಟ್ರಾಕಸ್ ಸಹ್ಯಾಡ್ರೆನ್ಸಿಸ್) ಎಂದೂ ಕರೆಯುತ್ತಾರೆ. ಕಪ್ಪೆಯಾದರೂ ಇದು ಜಿಗಿಯುವುದಿಲ್ಲ. ಈ ಕಪ್ಪೆಯು ಚಿಕ್ಕ ಕಾಲುಗಳನ್ನು ಹೊಂದಿದ್ದು, ಕಡು ಬಣ್ಣದಲ್ಲಿರುತ್ತದೆ. ಇದರ ದೇಹವು ಸುಮಾರು ಏಳು ಸೆಂಟಿಮೀಟರ್ ಉದ್ದವಿರುತ್ತದೆ ಮತ್ತು ಉಬ್ಬಿಕೊಂಡಿರುವಂತೆ ಕಾಣುತ್ತದೆ. ಇದರ ಮೊನಚಾದ ಮೂಗುಗಳಿಂದಾಗಿ ಹಂದಿ ಮೂತಿ ಕಪ್ಪೆ ಎಂದೂ ಕರೆಯುತ್ತಾರೆ. ದಪ್ಪ ಸ್ನಾಯುಗಳನ್ನು ಹೊಂದಿರುವ ಸಣ್ಣ ಕಾಲುಗಳು ಮತ್ತು ತೋಳುಗಳು ಮಣ್ಣಿನಲ್ಲಿ ಅಗೆಯಲು ಸಹಾಯ ಮಾಡುತ್ತದೆ. ಆದರೆ, ಅದರ ಹಿಂಗಾಲುಗಳು ಚಿಕ್ಕದಾಗಿರುವ ಕಾರಣ, ಜಿಗಿಯಲು ಬರುವುದಿಲ್ಲ.