ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಕೈಗೊಳ್ಳಬೇಕಿದ್ದ ಬಾಹ್ಯಾಕಾಶ ಯಾತ್ರೆ ದಿಢೀರ್ ರದ್ದಾಗಿದೆ. Axiom-4 ಉಡಾವಣೆ ರದ್ದಾಗಿರುವ ಕುರಿತು ಇಸ್ರೋ ಸ್ಪಷ್ಟಪಡಿಸಿದೆ.

ಫ್ಲೋರಿಡಾ(ಜೂ.09): ಆಕ್ಸಿಯಂ 4 ಉಡಾವಣೆ ಮೇಲೆ ವಿಶ್ವದ ಚಿತ್ತ ನೆಟ್ಟಿತ್ತು. ಫ್ಲೋರಿಡಾದ ಅಂತಾರಾಷ್ಟ್ರೀಯ ಬಾಹ್ಯಾಕಾಶಕೇಂದ್ರದಿಂದ ಈ ನೌಕೆ ಉಡಾವಣೆಯಾಗಬೇಕಿತ್ತು. ವಿಶೇಷವಾಗಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ ಹಾಗೂ ಮೈಲಿಗಲ್ಲು ಸ್ಥಾಪನೆಗೆ ಭಾರತೀಯರ ಕಾತುರದಿಂದ ಕಾದಿದ್ದರು. ಆದರೆ ಪ್ರತಿಕೂಲ ಹವಾಮಾನದಿಂದ ಆಕ್ಸಿಯಂ 4 ಉಡಾವಣೆ ರದ್ದು ಮಾಡಲಾಗಿದೆ. ಇಷ್ಟೇ ಅಲ್ಲ ಆಕ್ಸಿಯಂ 4 ಉಡಾವಣೆಯನ್ನು ಮುಂದೂಡಲಾಗಿದೆ.

ನಾಳೆ ನಡೆಯಬೇಕಿದ್ದ ಉಡಾವಣೆಯನ್ನು ಒಂದು ದಿನ ಮುಂದೂಡಲಾಗಿದೆ. ಮರುದಿನ ಸಂಜೆ 5.30 ಕ್ಕೆ ಶುಭಾಂಶು ಅವರ ಬಾಹ್ಯಾಕಾಶ ಯಾನ ನಡೆಯಲಿದೆ. ಹವಾಮಾನ ಪರಿಸ್ಥಿತಿಯನ್ನು ಪರಿಗಣಿಸಿ ಬಾಹ್ಯಾಕಾಶ ಯಾನವನ್ನು ಮುಂದೂಡಲಾಗಿದೆ. ಆಕ್ಸಿಯಂ ಸ್ಪೇಸ್, ನಾಸಾ ಮತ್ತು ಸ್ಪೇಸ್‌ಎಕ್ಸ್ ಜಂಟಿಯಾಗಿ ಆಯೋಜಿಸಿರುವ ಆಕ್ಸಿಯಂ 4 ಯೋಜನೆಯಲ್ಲಿ ನಾಸಾ-ಇಸ್ರೋ ಸಹಯೋಗದ ಭಾಗವಾಗಿ ಶುಭಾಂಶು ಶುಕ್ಲಾ ಅವರಿಗೆ ಅವಕಾಶ ದೊರೆತಿದೆ. ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಎರಡನೇ ಭಾರತೀಯ ಮತ್ತು ಐಎಸ್‌ಎಸ್‌ಗೆ ಭೇಟಿ ನೀಡುವ ಮೊದಲ ಭಾರತೀಯ ಎನಿಸಿಕೊಳ್ಳಲು 39 ವರ್ಷದ ಶುಭಾಂಶು ಶುಕ್ಲಾ ಸಜ್ಜಾಗಿದ್ದಾರೆ.

1984 ರಲ್ಲಿ ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆಯಲ್ಲಿ ರಾಕೇಶ್ ಶರ್ಮಾ ನಡೆಸಿದ ಐತಿಹಾಸಿಕ ಬಾಹ್ಯಾಕಾಶ ಯಾನದ ನಾಲ್ಕು ದಶಕಗಳ ನಂತರ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸುತ್ತಿದ್ದಾರೆ. ಶುಭಾಂಶು ಜೊತೆಗೆ ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್ (ಯುಎಸ್‌ಎ), ಸ್ಲಾವೋಸ್ ಉಸ್ನಾನ್ಸ್ಕಿ-ವಿಸ್ನಿಯೇವ್ಸ್ಕಿ (ಪೋಲೆಂಡ್), ಟಿಬೋರ್ ಕಪು (ಹಂಗೇರಿ) ಕೂಡ ಆಕ್ಸಿಯಂ 4 ತಂಡದಲ್ಲಿದ್ದಾರೆ.

ಈ ಯೋಜನೆಗಾಗಿ ಆಕ್ಸಿಯಂ ಸ್ಪೇಸ್ ಬಳಸುತ್ತಿರುವುದು ಸ್ಪೇಸ್‌ಎಕ್ಸ್‌ನ ವಿಶ್ವಾಸಾರ್ಹ ಕ್ರೂ ಡ್ರಾಗನ್ ನೌಕೆ. ಜೂನ್ 10 ರಂದು ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ ಬಳಸಿ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಂ 4 ಯೋಜನೆಯನ್ನು ಉಡಾವಣೆ ಮಾಡಲಾಗುವುದು. ಉಡಾವಣೆಗಾಗಿ ಡ್ರಾಗನ್ ಕ್ಯಾಪ್ಸುಲ್ ಮತ್ತು ಫಾಲ್ಕನ್ 9 ರಾಕೆಟ್ ಅನ್ನು 39ಎ ಉಡಾವಣಾ ಪ್ಯಾಡ್‌ಗೆ ತಲುಪಿಸಲಾಗಿದೆ.