ಭೂಮಿ, ಚಂದ್ರನ ಫೋಟೋ ಸೆಲ್ಫಿ ತೆಗೆದುಕೊಂಡ ಆದಿತ್ಯ ಎಲ್-1 ನೌಕೆ
ಸೂರ್ಯನ ಅಧ್ಯಯನಕ್ಕೆ ಇಸ್ರೋ ಉಡಾವಣೆ ಮಾಡಿರುವ ಮೊದಲ ಅಂತರಿಕ್ಷ ನೌಕೆ ‘ಆದಿತ್ಯ ಎಲ್-1’ ಭೂಮಿ ಹಾಗೂ ಚಂದ್ರ ಕಾಣುವಂತೆ ಫೋಟೋ ತೆಗೆದಿದೆ. ಇಸ್ರೋ ಈ ಫೋಟೋವನ್ನು ಬಿಡುಗಡೆ ಮಾಡಿದೆ. ಮೊದಲ ಬಾರಿ ಎಲ್1 ತೆಗೆದ ಫೋಟೋ ಬಿಡುಗಡೆ ಮಾಡಿದ ಇಸ್ರೋ
ಬೆಂಗಳೂರು (ಸೆ.8): ಸೂರ್ಯನ ಅಧ್ಯಯನಕ್ಕೆ ಇಸ್ರೋ ಉಡಾವಣೆ ಮಾಡಿರುವ ಮೊದಲ ಅಂತರಿಕ್ಷ ನೌಕೆ ಆದಿತ್ಯ ಎಲ್-1 ನೌಕೆ ಸೆಲ್ಫಿ ಮತ್ತು ಭೂಮಿ ಹಾಗೂ ಚಂದ್ರ ಕಾಣುವಂತೆ ಫೋಟೋ ತೆಗೆದಿದ್ದು, ಇಸ್ರೋ ಈ ಫೋಟೋವನ್ನು ಬಿಡುಗಡೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಇಸ್ರೋ, ‘ಸೂರ್ಯನ ಅಧ್ಯಯನಕ್ಕಾಗಿ ಎಲ್-1 ಪಾಯಿಂಟ್‌ನತ್ತ ಹೊರಟಿರುವ ಆದಿತ್ಯ ಎಲ್-1 ನೌಕೆ, ಒಂದು ಸೆಲ್ಫಿ ಹಾಗೂ ಭೂಮಿ ಮತ್ತು ಚಂದ್ರನ ಫೋಟೋವನ್ನು ತೆಗೆದಿದೆ’ ಎಂದು ಹೇಳಿದೆ. ಸೆಲ್ಫಿಯಲ್ಲಿ ವಿಇಎಲ್‌ಸಿ (ವಿಸಿಬಲ್ ಎಮಿಶನ್ ಲೈನ್ ಕೊರೋನಾಗ್ರಾಫ್) ಮತ್ತು ಎಸ್‌ಯುಐಟಿ (ಸೋಲಾರ್ ಅಲ್ಟಾ್ರವಾಯ್ಲೆಟ್ ಇಮೇಜರ್) ಪೇಲೋಡ್‌ಗಳು ಕಾಣಿಸುತ್ತಿವೆ. ವಿಇಎಲ್‌ಸಿ ಪೇಲೋಡನ್ನು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟೊ್ರೕಫಿಸಿಕ್ಸ್ ಅಭಿವೃದ್ಧಿ ಮಾಡಿದ್ದು, ಇದು ದಿನವೊಂದಕ್ಕೆ 1,440 ಫೋಟೋಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ.
ಆದಿತ್ಯ ಎಲ್-1 ನೌಕೆಯನ್ನು ಸೆ.2ರಂದು ಪಿಎಸ್‌ಎಲ್‌ವಿ ಸಿ-57 ರಾಕೆಟ್ ರಾಕೆಟ್ ಮೂಲಕ ಉಡಾವಣೆ ಮಾಡಿತ್ತು. ಈ ನೌಕೆಯನ್ನು ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ಲಾಗ್ರಾಂಜ್ ಪಾಯಿಂಟ್-1ರಲ್ಲಿನ ಹ್ಯಾಲೋ ಕಕ್ಷೆಗೆ ಸೇರಿಸಲಾಗುವುದು. ಬಳಿಕ ನೌಕೆಯಲ್ಲಿರುವ 7 ಪೇಲೋಡ್‌ಗಳು ಸೂರ್ಯ ಮತ್ತು ಎಲ್-1 ಪಾಯಿಂಟ್ ಸುತ್ತಮುತ್ತಲಿನ ಪ್ರದೇಶದ ಅಧ್ಯಯನ ಮಾಡಲಿದೆ.