ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ಭಾರತದ ಮೊದಲ ಖಾಸಗಿ ರಾಕೆಟ್ 'ವಿಕ್ರಮ್-1' ಉಡಾವಣೆಗೆ ಸಿದ್ಧವಾಗಿದೆ. ಈ ರಾಕೆಟ್ ಪ್ರಧಾನಿ ಮೋದಿಯವರ ಕೈಬರಹದ 'ವಂದೇ ಮಾತರಂ' ಪೋಸ್ಟ್‌ಕಾರ್ಡ್ ಸೇರಿದಂತೆ ಹಲವು ವಿಶೇಷ ವಸ್ತುಗಳನ್ನು ಹೊತ್ತೊಯ್ಯಲಿದೆ.

ನವದೆಹಲಿ (ಜು.17): ಭಾರತೀಯ ಬಾಹ್ಯಾಕಾಶ ಕ್ಷೇತ್ರವು ಮತ್ತೊಂದು ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾಗಲು ಕ್ಷಣಗಣನೆ ಆರಂಭವಾಗಿದೆ. ದೇಶದ ಮೊಟ್ಟಮೊದಲ ಖಾಸಗಿ ಆರ್ಬಿಟಲ್ ಕ್ಲಾಸ್ ರಾಕೆಟ್ 'ವಿಕ್ರಮ್-1' (Vikram-1) ಶನಿವಾರ ಬೆಳಿಗ್ಗೆ 11:30 ಕ್ಕೆ ಬಾಹ್ಯಾಕಾಶಕ್ಕೆ ಹಾರಲಿದೆ. ಹೈದರಾಬಾದ್ ಮೂಲದ ಪ್ರಮುಖ ಸ್ಪೇಸ್‌ಟೆಕ್ ಸಂಸ್ಥೆ 'ಸ್ಲೈರೂಟ್ ಏರೋಸ್ಪೇಸ್' (Skyroot Aerospace) ಈ ಅತ್ಯಾಧುನಿಕ ರಾಕೆಟ್‌ ಅನ್ನು ಅಭಿವೃದ್ಧಿಪಡಿಸಿದ್ದು, ಇಡೀ ವಿಶ್ವದ ಕಣ್ಣು ಈಗ ಈ ಉಡಾವಣೆಯ ಮೇಲೆ ನೆಟ್ಟಿದೆ.

'ವಿಕ್ರಮ್-1 ಟೆಸ್ಟ್ ಫ್ಲೈಟ್-1' ಹೊತ್ತೊಯ್ಯುತ್ತಿರುವ ಪೇಲೋಡ್‌ನಲ್ಲಿ ಅತ್ಯಂತ ವಿಶಿಷ್ಟವಾದ ವಸ್ತುವೊಂದನ್ನು ಇರಿಸಲಾಗಿದೆ ಎಂದು ಸ್ಕೈರೂಟ್ ಏರೋಸ್ಪೇಸ್ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಕೈಬರಹದಲ್ಲಿ ಬರೆದಿರುವ ಪೋಸ್ಟ್‌ಕಾರ್ಡ್ ಇದಾಗಿದ್ದು, ಅದರಲ್ಲಿ 'ವಂದೇ ಮಾತರಂ' ಎಂದು ಬರೆಯಲಾಗಿದೆ. ಈ ಕಾರ್ಡ್ ಮೇಲೆ ಪ್ರಧಾನಿ ಮೋದಿಯವರ ಸಹಿ ಇದ್ದು, ಅವರದ್ದೇ ಕೈಬರಹದಲ್ಲಿ '26.06.26' ರ ದಿನಾಂಕವನ್ನು ನಮೂದಿಸಲಾಗಿದೆ.

ಪ್ರಧಾನಿ ಮೋದಿಯವರ ಈ ವಿಶೇಷ ಸಂದೇಶದ ಜೊತೆಗೆ ದೇಶದ ಹಲವು ತಜ್ಞರು ಮತ್ತು ಗಣ್ಯರು ಬರೆದ ಪೋಸ್ಟ್‌ಕಾರ್ಡ್‌ಗಳನ್ನು ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸ್ಕೈರೂಟ್ ಏರೋಸ್ಪೇಸ್‌ನ ಸಂಸ್ಥಾಪಕ ಮತ್ತು ಸಿಇಒ ಪವನ್ ಕುಮಾರ್ ಚಂದನಾ, "ಪ್ರಧಾನಿಯವರ ಕೈಬರಹದ ಪೋಸ್ಟ್‌ಕಾರ್ಡ್ ಓದಿದಾಗ ನನಗೆ ಮೈ ರೋಮಾಂಚನಗೊಳ್ಳುತ್ತದೆ. ಇದು ನಮ್ಮ ಇಡೀ ತಂಡ, ಹೂಡಿಕೆದಾರರು, ನೀತಿ ನಿರೂಪಕರು ಮತ್ತು ವಿಶ್ವದಾದ್ಯಂತ ಇರುವ ನಮ್ಮ ಹಿತಚಿಂತಕರ ಹಸ್ತಪ್ರತಿ ಸಂದೇಶಗಳೊಂದಿಗೆ ಬಾಹ್ಯಾಕಾಶಕ್ಕೆ ಪಯಣಿಸಲಿದೆ" ಎಂದಿದ್ದಾರೆ. ಕೇಂದ್ರ ಕ್ಯಾಬಿನೆಟ್ ಸಚಿವರಾದ ಜಿತೇಂದ್ರ ಸಿಂಗ್, ಪಿಯೂಷ್ ಗೋಯಲ್, ಇಸ್ರೋ (ISRO) ಚೇರ್ಮನ್ ವಿ. ನಾರಾಯಣನ್, ಇಸ್ರೋದ ಮಾಜಿ ಚೇರ್ಮನ್ ಎಸ್. ಸೋಮನಾಥ್ ಮತ್ತು ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಈ ಮಿಷನ್‌ನ ಯಶಸ್ಸಿಗಾಗಿ ಬರೆದಿರುವ ಶುಭಾಶಯ ಸಂದೇಶಗಳು ಈ ಪಟ್ಟಿಯಲ್ಲಿವೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಬೃಹತ್ ಸಾಧನೆ ಮಾಡಿರುವ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯು ಇದುವರೆಗೆ ಜಾಗತಿಕ ಮಾರುಕಟ್ಟೆಯಿಂದ ಒಟ್ಟು 160 ಮಿಲಿಯನ್ ಡಾಲರ್ ಹೂಡಿಕೆಯನ್ನು ಸಂಗ್ರಹಿಸಿದೆ. ಈ ಮೂಲಕ 1.1 ಬಿಲಿಯನ್ ಡಾಲರ್ ಮೌಲ್ಯದೊಂದಿಗೆ (Valuation) ಭಾರತದ ಮೊಟ್ಟಮೊದಲ ಸ್ಪೇಸ್‌ಟೆಕ್ ಯೂನಿಕಾರ್ನ್ (Unicorn) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಂಪನಿಯಲ್ಲಿ ಸಿಂಗಾಪುರದ ಸಾವರಿಜಿನ್‌ ವೆಲ್ತ್ ಫಂಡ್ 'ಜಿಐಸಿ' (GIC), ಸಿಂಗಾಪುರ ಸರ್ಕಾರದ ಹೂಡಿಕೆ ಸಂಸ್ಥೆ 'ಟೀಮಾಸೆಕ್ ಹೋಲ್ಡಿಂಗ್ಸ್', ಗೂಗಲ್‌ನ ಆರಂಭಿಕ ಹೂಡಿಕೆದಾರ ಸಂಸ್ಥೆಯಾದ 'ಶೇರ್‌ಪಾಲೋ ವೆಂಚರ್ಸ್' ಮತ್ತು ಜಾಗತಿಕ ಆಸ್ತಿ ನಿರ್ವಹಣಾ ಸಂಸ್ಥೆ 'ಬ್ಲ್ಯಾಕ್‌ರಾಕ್' ಪ್ರಮುಖ ಹೂಡಿಕೆ ಮಾಡಿವೆ. ಇವುಗಳ ಜೊತೆಗೆ ಅರ್ಕಮ್ ವೆಂಚರ್ಸ್, ಸೋಲಾರ್ ಇಂಡಸ್ಟ್ರೀಸ್ ಇಂಡಿಯಾ, ಪ್ಲೇಬುಕ್ ಪಾರ್ಟನರ್ಸ್, ಸಾಂಘ್ವಿ ಫ್ಯಾಮಿಲಿ ಆಫೀಸ್ ಹಾಗೂ ಮೈಂತ್ರಾ/ಕ್ಯೂರ್‌ಫಿಟ್ ಸಂಸ್ಥಾಪಕ ಮುಕೇಶ್ ಬನ್ಸಲ್ ಕೂಡ ಹೂಡಿಕೆದಾರರಾಗಿದ್ದಾರೆ.

ಶ್ರೀಹರಿಕೋಟಾದ ಐತಿಹಾಸಿಕ ಮೊದಲ ಲಾಂಚ್‌ಪ್ಯಾಡ್‌ನಿಂದ ಈ ಉಡಾವಣೆ ನಡೆಯಲಿದೆ. ವಿಕ್ರಮ್-1 ರಾಕೆಟ್‌ನಲ್ಲಿ ಗ್ರಾಹಾ ಸ್ಪೇಸ್, ಕಾಸ್ಮೋಸರ್ವ್ ಸ್ಕೋಪ್ ಹಾಗೂ ಕಾಸ್ಮಾಸ್ ಡೈಮಂಡ್ಸ್ ಸಂಸ್ಥೆಯ 'ಕಾಸ್ಮಿಕ್ ಬ್ಲೂಮ್' ಎಂಬ ಕಲಾಕೃತಿ (Artwork) ಮತ್ತು ಒಂದು ಮೈಕ್ರೋ ಆರ್ಟ್ ಪೀಸ್ ಅನ್ನು ಕಳುಹಿಸಲಾಗುತ್ತಿದೆ. ಅತ್ಯಂತ ಆಕರ್ಷಕವಾದ 18 ಕ್ಯಾರೆಟ್ ಚಿನ್ನದ ರಾಕೆಟ್ ಮಾದರಿಯ ಮೈಕ್ರೋ-ಆರ್ಟ್‌ನಲ್ಲಿ ಭಾರತದ ಹೆಮ್ಮೆಯ ವಿಜ್ಞಾನಿಗಳಾದ ಸರ್ ಸಿ.ವಿ. ರಾಮನ್, ಡಾ. ವಿಕ್ರಮ್ ಸಾರಾಭಾಯ್ ಮತ್ತು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸೂಕ್ಷ್ಮ ಮೂರ್ತಿಗಳನ್ನು (Micro-sculptures) ಕೆತ್ತಲಾಗಿದ್ದು, ಇವು ಬಾಹ್ಯಾಕಾಶದ ಕಕ್ಷೆ ಸೇರಲಿವೆ.

ಭಾರತದ ಬಾಹ್ಯಾಕಾಶ ವಲಯಕ್ಕೆ ಸಿಗಲಿದೆ ಹೊಸ ಬಲ

ಈ ಉಡಾವಣೆ ಯಶಸ್ವಿಯಾದರೆ, ಭಾರತೀಯ ಬಾಹ್ಯಾಕಾಶ ರಂಗಕ್ಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮನ್ನಣೆ ಸಿಗಲಿದೆ. ಇದುವರೆಗೆ ಭೂಮಿಯ ಕೆಳ ಕಕ್ಷೆಗೆ (Low Earth Orbit - LEO) ಉಪಗ್ರಹಗಳನ್ನು ಉಡಾವಣೆ ಮಾಡಲು ಕೇವಲ ಇಸ್ರೋ (ISRO) ರಾಕೆಟ್‌ಗಳನ್ನೇ ಅವಲಂಬಿಸಬೇಕಾಗಿತ್ತು. ಆದರೆ, ವಿಕ್ರಮ್-1 ಯಶಸ್ಸಿನ ಬಳಿಕ ವಾಣಿಜ್ಯ ಉಪಗ್ರಹ ಉಡಾವಣೆಗೆ ದೇಶೀಯವಾಗಿ ಮತ್ತೊಂದು ಅತ್ಯುತ್ತಮ ಮತ್ತು ಕೈಗೆಟುಕುವ ಖಾಸಗಿ ಪರ್ಯಾಯ ಆಯ್ಕೆ ಲಭ್ಯವಾಗಲಿದ್ದು, ಭಾರತದ ಸ್ಪೇಸ್ ಸೆಕ್ಟರ್ ಜಾಗತಿಕ ವಾಣಿಜ್ಯ ಮಾರುಕಟ್ಟೆಯಲ್ಲಿ ಮತ್ತಷ್ಟು ಬಲಿಷ್ಠವಾಗಲಿದೆ.