ಅಲ್ ಐನ್(ಮಾ.19): ಮಾನವ ಭೂಮಿಯ ಮೇಲೆ ಅದೆಷ್ಟೇ ಹಿಡಿತ ಸಾಧಿಸಿರಲಿ, ಆಗಸದಲ್ಲಿ ಮಾನವನ ಹಕ್ಕು ಅಲ್ಪ ಮಾತ್ರ. ಆಗಸ ಬ್ರಹ್ಮಾಂಡದ ಹೆಬ್ಬಾಗಿಲು. ಇಲ್ಲಿ ನಡೆಯುವ ವಿಸ್ಮಯಗಳು ಮಾನವನ ಊಹೆಗೂ ನಿಲುಕದ್ದು.

ಅದರಂತೆ ಸಂಯುಕ್ತ ಅರಬ್ ಸಂಸ್ಥಾನದ ಆಗಸದಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿದ್ದು, ಶುಭದ್ರ ಆಗಸದಲ್ಲಿ ಬೃಹತ್ ಕುಳಿಯೊಂದು ಗೋಚರಿಸಿದೆ.

ಇಲ್ಲಿನ ಅಲ್ ಐನ್ ನಗರದ ಆಗಸದಲ್ಲಿ ಏಕಾಏಕಿ ಬೃಹತ್ ಕುಳಿ ನಿರ್ಮಾಣವಾಗಿದ್ದು, ಜನರಲ್ಲಿ ಆತಂಕ ಮೂಡಿಸಿತ್ತು. ಇಬ್ರಾಹಿಂ ಅಲ್ ಜವ್ರಾನ್ ಎಂಬ ಖಗೋಳಶಾಸ್ತ್ರಜ್ಞ ಈ ವಿಸ್ಮಯ ಬೃಹತ್ ಕುಳಿಯ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ.

ಈ ವಿಸ್ಮಯ ಕುಳಿ ಕಂಡ ಜನ ಆತಂಕಗೊಂಡಿದ್ದಲ್ಲದೇ ಬಹುಶಃ ಇದು ಮತ್ತೊಂದು ಜಗತ್ತಿಗೆ ಹೋಗುವ ಪೋರ್ಟಲ್ ಇರಬಹುದು ಎಂದು ಭಾವಿಸಿದ್ದಾರೆ. 

ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಹವಾಮಾನಶಾಸ್ತ್ರಜ್ಞರು, ಮೋಡಗಳಲ್ಲಿನ ನೀರಿನ ಉಷ್ಣತೆಯು ಘನೀಕರಣಕ್ಕಿಂತ ಕೆಳಗಿದ್ದಾಗ ಈ ರೀತಿಯ ಕುಳಿ ಸೃಷ್ಟಿಯಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ಪತನದ ಕುಳಿ ಎಂದು ಕರೆಯಲಾಗುತ್ತದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.