ಡೆಡ್ ಇಂಟರ್ನೆಟ್ ಥಿಯರಿಯು ಇಂಟರ್ನೆಟ್‌ನಲ್ಲಿ ಮನುಷ್ಯರಿಗಿಂತ ಕೃತಕ ಬುದ್ಧಿಮತ್ತೆ (AI) ಮತ್ತು ಬಾಟ್‌ಗಳ ಹಾವಳಿ ಹೆಚ್ಚುತ್ತಿದೆ ಎಂದು ಪ್ರತಿಪಾದಿಸುತ್ತದೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಪ್ರತಿ 10 ವೆಬ್‌ಸೈಟ್‌ಗಳಲ್ಲಿ ಒಂದು ಎಐನಿಂದ ಸಿದ್ಧವಾಗುತ್ತಿದ್ದು, ಮಾಹಿತಿಯ ವಿಶ್ವಾಸಾರ್ಹತೆಯನ್ನು ಪತ್ತೆ ಹಚ್ಚುವುದು ಮುಂದಿನ ದಿನಗಳಲ್ಲಿ ದೊಡ್ಡ ಸವಾಲಾಗಲಿದೆ.
ಬೆಂಗಳೂರು: ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಇಲ್ಲದೆ ಬದುಕುವುದು ಅಸಾಧ್ಯ ಎಂಬಂತಾಗಿದೆ. ನೀವು ಪ್ರತಿದಿನ ಇಂಟರ್ನೆಟ್‌ನಲ್ಲಿ ಓದುವ ಲೇಖನಗಳು, ನೋಡುವ ಪೋಸ್ಟ್‌ಗಳು ನಿಜವಾಗಿಯೂ ಮನುಷ್ಯರೇ ಸಿದ್ಧಪಡಿಸಿದ್ದಾ? ಅಥವಾ ಯಂತ್ರಗಳು ಸಿದ್ಧಪಡಿಸಿದ್ದಾ? ಇಂತಹದೊಂದು ಗಂಭೀರ ಚರ್ಚೆಯನ್ನು 'ಡೆಡ್ ಇಂಟರ್ನೆಟ್ ಥಿಯರಿ' (Dead Internet Theory) ಮುನ್ನೆಲೆಗೆ ತಂದಿದೆ.
ಏನಿದು ಡೆಡ್ ಇಂಟರ್ನೆಟ್ ಥಿಯರಿ?
ಈ ಸಿದ್ಧಾಂತದ ಪ್ರಕಾರ..ಇಂದಿನ ಇಂಟರ್ನೆಟ್‌ನ ಬಹುಪಾಲು ಭಾಗ ಮನುಷ್ಯರಿಂದಲ್ಲ.. ಬದಲಾಗಿ ಕೃತಕ ಬುದ್ಧಿಮತ್ತೆ (AI), ಬಾಟ್‌ಗಳು (Bots) ಮತ್ತು ಅಲ್ಗಾರಿದಮ್‌ಗಳ ಸಹಾಯದಿಂದ ಸಿದ್ಧವಾಗುತ್ತಿದೆ.. ಅಂದರೆ ಇಂಟರ್ನೆಟ್‌ನಲ್ಲಿ ನಾವು ಸಂವಹನ ನಡೆಸುತ್ತಿರುವುದು ಮನುಷ್ಯರ ಜೊತೆಗಿಂತ ಹೆಚ್ಚಾಗಿ ಯಂತ್ರಗಳ ಜೊತೆಗೆ ಎಂಬುದು ಈ ಥಿಯರಿಯನ್ನು ನಂಬುವವರ ವಾದ. ಇದು ಯಾವುದೇ ವೈಜ್ಞಾನಿಕವಾಗಿ ಸಾಬೀತಾದ ಸಿದ್ಧಾಂತವಲ್ಲದಿದ್ದರೂ ಎಐ ತಂತ್ರಜ್ಞಾನ ಬೆಳೆದಂತೆ ಈ ಕುರಿತ ಚರ್ಚೆಗಳು ತೀವ್ರಗೊಂಡಿವೆ.
ಪ್ಯೂ ರಿಸರ್ಚ್ (Pew Research) ಸಂಸ್ಥೆಯ ಆಘಾತಕಾರಿ ವರದಿ
ಇತ್ತೀಚೆಗೆ ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಅಧ್ಯಯನವು ಈ ಸಂಶೋಧನೆಗೆ ಬಲ ತುಂಬಿದೆ. ಸಂಶೋಧಕರು ಕಳೆದ ಐದು ವರ್ಷಗಳಲ್ಲಿ ಇಂಟರ್ನೆಟ್‌ನಲ್ಲಿರುವ ಸುಮಾರು 5 ಲಕ್ಷ ಇಂಗ್ಲಿಷ್ ವೆಬ್‌ಪೇಜ್‌ಗಳನ್ನು ವಿಶ್ಲೇಷಿಸಿದ್ದಾರೆ. ಈ ಅಧ್ಯಯನಕ್ಕಾಗಿ ಅವರು 'ಓಪನ್ ಪ್ಯಾಂಗ್ರಾಮ್' (Open Pangram) ಎಂಬ ಎಐ ಡಿಟೆಕ್ಷನ್ ಟೂಲ್ ಅನ್ನು ಬಳಸಿದ್ದಾರೆ. ಅದರ ಪ್ರಮುಖ ಅಂಶಗಳು ಇಲ್ಲಿವೆ.
.com ವೆಬ್‌ಸೈಟ್‌ಗಳಲ್ಲಿ ಎಐ ಹಾವಳಿ: ಅಧ್ಯಯನದ ಪ್ರಕಾರ, ಶೇ. 10ರಷ್ಟು ಅಂದರೆ ಪ್ರತಿ 10 ವೆಬ್‌ಪೇಜ್‌ಗಳಲ್ಲಿ ಒಂದು ಪೇಜ್ ಎಐನಿಂದ ಸಿದ್ಧವಾದ ಕಂಟೆಂಟ್ ಹೊಂದಿದೆ. ವಿಶೇಷವಾಗಿ ವಾಣಿಜ್ಯ ಉದ್ದೇಶದ '.com' ಡೊಮೇನ್‌ಗಳಲ್ಲಿ ಇದು ಹೆಚ್ಚಾಗಿ ಕಂಡುಬಂದಿದೆ.
ಇತರ ಡೊಮೇನ್‌ಗಳು: ಲಾಭರಹಿತ ಸಂಸ್ಥೆಗಳ '.org' ಸೈಟ್‌ಗಳಲ್ಲಿ ಶೇ. 4.6 ರಷ್ಟು ಎಐ ಕಂಟೆಂಟ್ ಇದ್ದರೆ, ಸರ್ಕಾರಿ (.gov) ಮತ್ತು ಶೈಕ್ಷಣಿಕ (.edu) ವೆಬ್‌ಸೈಟ್‌ಗಳಲ್ಲಿ ಇದರ ಪ್ರಮಾಣ ಕೇವಲ ಶೇ. 1 ರಷ್ಟಿದೆ.
ಹಳೆಯ ಮತ್ತು ಹೊಸ ಡೇಟಾ: 2022ರಲ್ಲಿ ಚಾಟ್-ಜಿಪಿಟಿ (ChatGPT) ಜನಪ್ರಿಯವಾಗುವ ಮೊದಲಿನ ಡೇಟಾವನ್ನು ಕೂಡ ಸಂಶೋಧಕರು ಪರಿಶೀಲಿಸಿದ್ದು, ಕಾಲಕ್ರಮೇಣ ಎಐ ಬಳಕೆ ಹೆಚ್ಚುತ್ತಿರುವುದು ಕಂಡುಬಂದಿದೆ.
ಸಂಶೋಧಕರು ಒಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಯಾವುದೇ ಎಐ ಡಿಟೆಕ್ಷನ್ ಟೂಲ್ 100% ನಿಖರವಾಗಿರುವುದಿಲ್ಲ. ಕೆಲವೊಮ್ಮೆ ಮನುಷ್ಯರು ಬರೆದದ್ದನ್ನು ಎಐ ಎಂದು ತೋರಿಸಬಹುದು. ಇನ್ನು ಕೆಲವು ಬಾರಿ ಎಐ ಬರೆದದ್ದನ್ನು ಮನುಷ್ಯರು ಬರೆದಿದ್ದಾರೆ ಎಂದು ತಪ್ಪಾಗಿ ಗುರುತಿಸಬಹುದು. ಇಂಟರ್ನೆಟ್‌ನಲ್ಲಿ ಎಐ ಕಂಟೆಂಟ್ ವೇಗವಾಗಿ ಹರಡುತ್ತಿರುವುದು ಮಾತ್ರ ಸುಳ್ಳಲ್ಲ.
ಮುಂದಿರುವ ಅಸಲಿ ಸವಾಲು ಏನು?
ಎಐ ಬಳಕೆಯಿಂದ ಕಂಟೆಂಟ್ ಕ್ರಿಯೇಟ್ ಮಾಡುವುದು ಸುಲಭವಾಗಿರಬಹುದು. ಆದರೆ ಓದುಗರಿಗೆ ಅದರ 'ವಿಶ್ವಾಸಾರ್ಹತೆ' (Credibility) ದೊಡ್ಡ ಪ್ರಶ್ನೆಯಾಗಿದೆ. ಇಂಟರ್ನೆಟ್‌ನಲ್ಲಿ ಸಿಗುವ ಮಾಹಿತಿ ನಿಜವೇ ಅಥವಾ ಯಂತ್ರಗಳು ಸೃಷ್ಟಿಸಿದ ಸುಳ್ಳೇ ಎಂಬುದನ್ನು ಪತ್ತೆ ಹಚ್ಚುವುದು ಮುಂದಿನ ದಿನಗಳಲ್ಲಿ ದೊಡ್ಡ ಸವಾಲಾಗಲಿದೆ. ಕೇವಲ ಮಾಹಿತಿ ಹುಡುಕುವುದು ಮಾತ್ರವಲ್ಲ, ಆ ಮಾಹಿತಿಯ ಮೂಲ (Source) ಯಾವುದು ಎಂದು ಪರಿಶೀಲಿಸುವುದು ಅನಿವಾರ್ಯವಾಗಲಿದೆ. ಒಟ್ಟಾರೆಯಾಗಿ ಡೆಡ್ ಇಂಟರ್ನೆಟ್ ಥಿಯರಿ ಸಂಪೂರ್ಣ ಸತ್ಯವಲ್ಲದಿದ್ದರೂ ಇಂಟರ್ನೆಟ್ ಜಗತ್ತು ಮನುಷ್ಯರ ಹಿಡಿತದಿಂದ ನಿಧಾನವಾಗಿ ಎಐ ಕಡೆಗೆ ಜಾರುತ್ತಿರುವುದಂತೂ ಸ್ಪಷ್ಟ.


