* ಚಾಂಗ್‌ 5 ಲ್ಯಾಂಡರ್‌ನಿಂದ ಸಂಶೋಧನೆ* ಚಂದ್ರನಲ್ಲಿ ನೀರು: ಸ್ಥಳದಲ್ಲೇ ಖಚಿತಪಡಿಸಿದ ಚೀನಾ ನೌಕೆ

ಬೀಜಿಂಗ್‌(ಜ.10): ಚೀನಾದ ಚಾಂಗ್‌ 5 ಲ್ಯಾಂಡರ್‌ ಚಂದ್ರನ ಮೇಲ್ಮೈಯಲ್ಲಿರುವ ಮಣ್ಣಿನ ಮಾದರಿಯನ್ನು ಸ್ಥಳದಲ್ಲೇ ಪರೀಕ್ಷಿಸಿ ನೀರಿನ ಅಂಶವಿರುವುದನ್ನು ಖಚಿತಪಡಿಸಿದೆ. ಈ ಮೊದಲು ದೂರದಿಂದಲೇ ಅವಲೋಕಿಸಿ ಚಂದ್ರನ ಮೇಲ್ಮೈಯಲ್ಲಿ ನೀರಿನ ಅಂಶವಿರುವುದಾಗಿ ಪತ್ತೆ ಹಚ್ಚಲಾಗಿತ್ತು. ಆದರೆ ಮೊಟ್ಟಮೊದಲ ಬಾರಿ ಸ್ಥಳದಲ್ಲೇ ಕಲ್ಲು, ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ನೀರಿರುವುದನ್ನು ಪುರಾವೆ ಸಮೇತ ಪತ್ತೆಹಚ್ಚಲಾಗಿದೆ.

ಸೈನ್ಸ್‌ ಅಡ್ವಾನ್ಸೆಸ್‌ ಜರ್ನಲ್‌ನಲ್ಲಿ ಪ್ರಕಟವಾದ ಲೇಖನವು ಚಂದ್ರನ ಮೇಲ್ಮೈಯಲ್ಲಿರುವ ಮಣ್ಣು ಪ್ರತಿ ಟನ್‌ಗೆ 120 ಗ್ರಾಂ ನೀರನ್ನು ಒಳಗೊಂಡಿದೆ ಹಾಗೂ ಚಂದ್ರನ ಕುಳಿಯಲ್ಲಿರುವ ಕಲ್ಲುಗಳು ಪ್ರತಿ ಮಿಲಿಯನ್‌ಗೆ 180 ಭಾಗದಷ್ಟುನೀರಿನ ಅಂಶಗಳ ಒಳಗೊಂಡಿದೆ ಎಂದು ತಿಳಿಸಿದೆ.

ಸೌರ ಮಾರುತಗಳು ಹೈಡ್ರೋಜನ್‌ನ್ನು ಹೊತ್ತು ತಂದು ಚಂದ್ರನ ಮೇಲ್ಮೈಯಲ್ಲಿ ಆದ್ರ್ರತೆ ಸೃಷ್ಟಿಸಿದವು. ಚಂದ್ರನ ಮೇಲಿರುವ ಹಳೆಯ ಶಿಲೆಗಳು ಹೆಚ್ಚಿನ ಆದ್ರ್ರತೆಯನ್ನು ಹೀರಿಕೊಂಡಿರುವುದು ಇದನ್ನು ಖಚಿತ ಪಡಿಸಿವೆ. ಮುಂಬರುವ ದಶಕಗಳಲ್ಲಿ ಚಂದ್ರನ ಮೇಲೆ ಮಾನವ ಸಹಿತ ಸ್ಟೇಷನ್‌ಗಳ ನಿರ್ಮಿಸುವ ಚೀನಾದ ಯೋಜನೆಯಲ್ಲಿ ಲ್ಯಾಂಡರ್‌ನ ಈ ಸಂಶೋಧನೆ ಅತಿ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ.