ಭೂಮಿಗೆ ಕಾಣದ ಚಂದ್ರನ ಭಾಗದಲ್ಲಿ ಸಾಹಸ, 2 ಕೆಜಿ ಕಲ್ಲು ಮಣ್ಣು ಹೊತ್ತು ತಂದ ಚೀನಾ!
ಚೀನಾದ ಚಾಂಗ್- 6 ನೌಕೆಯ ಚಂದ್ರಯಾನ ಪ್ರಯೋಗ ಯಶಸ್ವಿಯಾಗಿದೆ. ವಿಶೇಷವಾಗಿ ಭೂಮಿಗೆ ಕಾಣದ ಚಂದ್ರನ ಭಾಗದಲ್ಲಿ ಚೀನಾ ಸಾಹಸ ಮಾಡಿದೆ. ಚಂದಿರನ ಅಂಗಳದಿಂದ 2 ಕೇಜಿ ಕಲ್ಲು, ಮಣ್ಣನ್ನು ಚೀನಾ ಹೊತ್ತು ತಂದಿದೆ.
ಬೀಜಿಂಗ್(ಜೂ.26) ಭೂಮಿಗೆ ಗೋಚರಿಸದ ಚಂದಿರನ ಮತ್ತೊಂದು ಬದಿಯಿಂದ 2 ಕೇಜಿ ಕಲ್ಲು ಹಾಗೂ ಮಣ್ಣನ್ನು ಹೊತ್ತು ಚೀನಾದ ಚಾಂಗ್-6 ಚಂದ್ರಯಾನ ನೌಕೆ ಯಶಸ್ವಿಯಾಗಿ ಮಂಗಳವಾರ ಭುವಿಗೆ ಮರಳಿದೆ. ಈವರೆಗೂ ಹೆಚ್ಚು ಸಂಶೋಧನೆಯಾಗದ ಚಂದಿರನ ಮತ್ತೊಂದು ಬದಿಯಿಂದ ಮಾದರಿಗಳನ್ನು ಸಂಗ್ರಹಿಸಿ ತರುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ದೇಶ ಎಂಬ ಹಿರಿಮೆಗೆ ಚೀನಾ ಪಾತ್ರವಾಗಿದೆ.
ಉತ್ತರ ಚೀನಾದ ಮಂಗೋಲಿಯಾ ಸ್ವಾಯತ್ತ ಪ್ರದೇಶದಲ್ಲಿರುವ ನಿಗದಿತ ಪ್ರದೇಶದಲ್ಲಿ ಮಧ್ಯಾಹ್ನ 2.07 (ಬೀಜಿಂಗ್ ಸಮಯ) ಚೀನಾದ ಚಾಂಗ್-6 ನೌಕೆ ಬಂದಿಳಿದಿದೆ. ಈ ಯಾನ ಯಶಸ್ವಿಯಾಗಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್‌ಎಸ್‌ಎ) ಘೋಷಣೆ ಮಾಡಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.
ಇಸ್ರೋ ನೌಕೆ ಇಳಿದ ಚಂದ್ರನ ದಕ್ಷಿಣ ಧ್ರುವದಲ್ಲೇ ನೌಕೆ ಇಳಿಸಿದ ಚೀನಾ
2023ರ ಆಗಸ್ಟ್‌ನಲ್ಲಿ ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ ನೌಕೆ-3 ಇಳಿಸಿತ್ತು. ಆದರೆ ಚೀನಾ ಚಂದಿರನ ಮತ್ತೊಂದು ಬದಿಯಲ್ಲಿ ನೌಕೆ ಇಳಿಸಿರುವ ಏಕೈಕ ದೇಶವಾಗಿದೆ. 2019ರಲ್ಲೂ ಆ ದೇಶ ಇದೇ ಸಾಧನೆ ಮಾಡಿತ್ತು. ಭೂಮಿಗೆ ಗೋಚರವಾಗುವ ಚಂದಿರನ ಭಾಗಕ್ಕೆ ಹೋಲಿಸಿದರೆ, ಮತ್ತೊಂದು ಭಾಗ ದೂರದಲ್ಲಿರುವುದಲ್ಲದೆ ದೊಡ್ಡ ಕುಳಿಗಳು ಹಾಗೂ ಸಮತಟ್ಟಾದ ಪ್ರದೇಶಗಳಿಂದಾಗಿ ವಿಜ್ಞಾನಿಗಳಿಗೆ ತಾಂತ್ರಿಕವಾಗಿ ಸವಾಲಿನ ಭಾಗವಾಗಿದೆ.
ಚಾಂಗ್-6 ನೌಕೆ ಕಳೆದ ಮೇ 3ರಂದು ಉಡಾವಣೆಯಾಗಿತ್ತು. ಚಾಂಗ್-5 ಯೋಜನೆಯ ಭಾಗವಾಗಿ ಕೂಡ ಚೀನಾ ಚಂದ್ರನ ಅಂಗಳದಿಂದ (ಭೂಮಿಗೆ ಗೋಚರವಾಗುವ ಭಾಗ) ಮಾದರಿ ಸಂಗ್ರಹಿಸಿ ತಂದಿತ್ತು.
ಚಂದ್ರನ ಅಂಗಳದಲ್ಲಿ ಎಲಾನ್ ಮಸ್ಕ್ ರಾಕೆಟ್
ಇತ್ತೀಚೆಗೆ ವಿಶ್ವದ ಅತ್ಯಂತ ಶಕ್ತಿಯುತ ರಾಕೆಟ್ ಎಂದೇ ಬಿಂಬಿತವಾಗಿರುವ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆಯ ಸ್ಟಾರ್‌ಶಿಪ್ ಗುರುವಾರದಂದು ಯಶಸ್ವಿಯಾಗಿ ಆಗಸಕ್ಕೆ ಉಡಾವಣೆಯಾಗಿದೆ.
ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂಪತ್ತು ತೋರಿಸಿದ್ರೆ ಚೀನಾದಲ್ಲಿ ಜೈಲು ಶಿಕ್ಷೆ!
ಭಾರತೀಯ ಕಾಲಮಾನ ಸಂಜೆ 7 ಗಂಟೆ ಸುಮಾರಿಗೆ ಸ್ಪೇಸ್‌ಎಕ್ಸ್ ಸಂಸ್ಥೆಯ ದಕ್ಷಿಣ ಟೆಕ್ಸಾಸ್‌ನಲ್ಲಿರುವ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಸ್ಟಾರ್‌ಶಿಪ್ ರಾಕೆಟ್‌ನ ಮೂಲಕ ಭವಿಷ್ಯದಲ್ಲಿ ಚಂದ್ರನ ಅಂಗಳದಲ್ಲಿ ಗಗನಯಾನಿಗಳನ್ನು ಇಳಿಸಲು ನಾಸಾ ಯೋಜನೆ ಹಾಕಿಕೊಂಡಿದ್ದರೆ ಸ್ಪೇಸ್‌ಎಕ್ಸ್ ಸಂಸ್ಥೆ ಇದರ ಮೂಲಕ ಮಂಗಳ ಗ್ರಹದಲ್ಲಿ ತನ್ನ ವಸಾಹತು ಸ್ಥಾಪಿಸುವ ಮಹತ್ವಾಕಾಂಕ್ಷೆ ಹೊಂದಿದೆ. ಇದಕ್ಕೂ ಮೊದಲು ಸ್ಪೇಸ್‌ಎಕ್ಸ್ ಸಂಸ್ಥೆ ಎರಡು ಬಾರಿ ಈ ರಾಕೆಟ್ ಉಡಾವಣೆ ಮಾಡುವಲ್ಲಿ ವಿಫಲ ಯತ್ನ ಮಾಡಿತ್ತು.