Chandrayaan-3 Mission: ಲ್ಯಾಂಡರ್‌ನಿಂದ ಯಶಸ್ವಿಯಾಗಿ ಕೆಳಗಿಳಿದ ರೋವರ್, ಚಂದ್ರನ ಮೇಲೆ ನಡೆದಾಡಿದ ಭಾರತ
ಚಂದ್ರಯಾನ-3ರ ಲ್ಯಾಂಡರ್ ವಿಕ್ರಮ್‌ನಿಂದ ಯಶಸ್ವಿಯಾಗಿ ಹೊರಬಂದ ರೋವರ್ ಪ್ರಗ್ಯಾನ್ ಚಂದ್ರನ ಮೇಲೆ ನಡೆದಾಡುವ ಮೂಲಕ ಭಾರತದ ಹೆಜ್ಜೆ ಗುರುತನ್ನು ಮೂಡಿಸಿದೆ.
ಬೆಂಗಳೂರು (ಆ.24): ಭಾರತದ ತ್ರವಿಕ್ರಮ ಸಾಧನೆಗಳಲ್ಲಿ ಒಂದಾಗಿರುವ ಚಂದ್ರಯಾನ-3ರ ಲ್ಯಾಂಡರ್ ವಿಕ್ರಮ್ ನಿನ್ನೆ ಸಂಜೆ ವೇಳೆಗೆ ಚಂದ್ರನ ಮೇಲೆ ಕಾಲಿಟ್ಟಿದೆ. ಈಗ ಲ್ಯಾಂಡರ್‌ನಿಂದ ಹೊರಬಂದ ರೋವರ್ ಪ್ರಗ್ಯಾನ್ ಕೂಡ ಯಶಸ್ವಿಯಾಗಿ ಹೊರಬಂದಿದೆ. ಈಗ ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ನಡೆದಾಡುವ ಮೂಲಕ ಚಂದ್ರನ ಮೇಲೆ ಭಾರತದ ಹೆಜ್ಜೆ ಗುರುತನ್ನು ಮೂಡಿಸಿದೆ. ಈ ಬಗ್ಗೆ ಸ್ವತಃ ಮಾಹಿತಿ ಹಂಚಿಕೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು ಚಂದ್ರನ ಮೇಲೆ ನಡೆದಾಡಿದ ಭಾರತ ಎಂದು ಮಾಹಿತಿಯನ್ನು ಹಂಚಿಕೊಂಡಿದೆ.
ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆದ ಬಳಿಕ 26 ಕೆಜಿ ತೂಕದ ಪ್ರಗ್ಯಾನ್ ರೋವರ್ ಕೂಡ ಚಂದ್ರನ ಮೇಲೆ ಇಳಿಯಲು ಯಶಸ್ವಿಯಾಗಿದೆ. ಈ ಬಗ್ಗೆ ಇಸ್ರೋ ಅಧಿಕೃತವಾಗಿ ಟ್ವೀಟ್ ಮಾಡಿದೆ. ಇದರಲ್ಲಿ ವಿಕ್ರಮ್‌ನ ಒಡಲಿನಿಂದ ರಾಂಪ್ ಮೂಲಕ ಪ್ರಗ್ಯಾನ್ ರೋವರ್ ಹೊರಬರುತ್ತಿರುವ ದೃಶ್ಯಾವಳಿಯನ್ನು ತೋರಿಸಲಾಗಿದೆ. ಅದರೊಂದಿಗೆ ಮಾಕ್ಸ್‌ನಲ್ಲಿ ಅಧಿಕಾರಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಪ್ರಗ್ಯಾನ್ ರೋವರ್ ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರ್‌ನಿಂದ ಹೊರಬರುವುದರೊಂದಿಗೆ ಚಂದ್ರಯಾನ-3ಯ ದೊಡ್ಡ ಮಟ್ಟದ ಕೆಲಸ ಪೂರ್ಣಗೊಂಡಂತಾಗಿದೆ. ಇನ್ನು 14 ದಿನ ಚಂದ್ರನ ನೆಲದಲ್ಲಿ ಪ್ರಗ್ಯಾನ್ ರೋವರ್ ತನ್ನ ಕೆಲಸಗಳನ್ನು ಮಾಡಲಿದೆ.
Chandrayaan 3: ಸಾಫ್ಟ್ ಲ್ಯಾಂಡಿಂಗ್ ಎಂದರೇನು? ರೋವರ್ ಕಾರ್ಯ ಹೇಗಿರಲಿದೆ, ಇಲ್ಲಿದೆ ಮಾಹಿತಿ
ಕೇವಲ 14 ದಿನಗಳು ಮಾತ್ರ ರೋವರ್ ಕಾರ್ಯ: ಚಂದ್ರನ ಅಂಗಳಳದಲ್ಲಿ ಯಶಸ್ವಿಯಾಗಿ ಇಳಿದ ಪ್ರಗ್ಯಾನ್ ರೋವರ್ ಕೇವಲ 14 ದಿನಗಳ ಕೆಲಸ ಮಾಡುತ್ತದೆ. ಯಾಕೆಂದರೆ, ಭೂಮಿಯ 14 ದಿನಗಳು ಚಂದ್ರನ ಒಂದು ದಿನಕ್ಕೆ ಸಮ. ಆ ಬಳಿಕ ಚಂದ್ರನಲ್ಲಿ ಕತ್ತಲಾಗುತ್ತದೆ. ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ಗೆ ಸೂರ್ಯನೇ ಶಕ್ತಿಯ ಮೂಲ. ಒಮ್ಮೆ ಸೂರ್ಯ ಬೆಳಕು ಹೋಗಿ ಕತ್ತಲು ಆವರಿಸಿದರೆ, ರೋವರ್ ಹಾಗೂ ಲ್ಯಾಂಡರ್ ಶಕ್ತಿಯೇ ಇಲ್ಲದಂತಾಗುತ್ತದೆ. ಇನ್ನು ಚಂದ್ರನ ಕತ್ತಲೆಂದರೆ, ಭೂಮಿಯ ರೀತಿಯಲ್ಲಿ -300 ಡಿಗ್ರಿಗಿಂತಲೂ ಕೆಳಕ್ಕೆ ತಾಪಮಾನ ಕುಸಿಯಲಿದೆ. ಇದೆಲ್ಲವನ್ನೂ ತಾಳಿಕೊಂಡು 14 ದಿನ ಕತ್ತಲೆಯಲ್ಲಿ ನಿಂತರೆ ಮತ್ತೆ ರೋವರ್ ಕೆಲಸ ಆರಂಭ ಮಾಡಲೂಬಹುದು. ಆದರೆ, ಇಸ್ರೋ ಮಾತ್ರ ಮುಂದಿನ 14 ದಿನಗಳ ಕೆಲಸಗಳನ್ನು ಮಾತ್ರವೇ ರೋವರ್‌ಗೆ ನಿಗದಿ ಮಾಡಿದೆ.
ಚಂದ್ರಯಾನ 3: ಇಂದಿನ ಪ್ರಕ್ರಿಯೆ ಏನು? ಮುಂದೆ ಯಾರ ಕೆಲಸ ಏನೇನು?
ವಿಕ್ರಮ್ ಲ್ಯಾಂಡರ್‌ನ ಮುಂದಿನ ಕೆಲಸವೇನು? ಚಂದ್ರನ ಮೇಲೆ ಪ್ರಗ್ಯಾನ್‌ಅನ್ನು ಯಶಸ್ವಿಯಾಗಿ ಇಳಿಸಿದ ವಿಕ್ರಮ್ ಲ್ಯಾಂಡರ್‌ಗೆ ಕೆಲಸ ಇಲ್ಲವೇ ಎಂದುಕೊಳ್ಳಬೇಡಿ. ರೋವರ್ ವಿಕ್ರಮ್ ಲ್ಯಾಂಡರ್‌ನ ಅಕ್ಕಪಕ್ಕದಲ್ಲಿಯೇ ಓಡಾಡಿಕೊಂಡಿರಬೇಕು. ಇಸ್ರೋ ತನ್ನ ಇಸ್ಟ್ರಾಕ್‌ನಿಂದ ಕಳಿಸುವ ಯಾವುದೇ ಕಮಾಂಡ್ ನೇರವಾಗಿ ರೋವರ್‌ಗೆ ಹೋಗೋದಿಲ್ಲ. ಅದು ಮೊದಲಿಗೆ ಮುಟ್ಟುವುದು ವಿಕ್ರಮ್ ಲ್ಯಾಂಡರ್‌ನ ಸೆನ್ಸಾರ್‌ಗಳಿಗೆ. ತಾನು ಪಡೆದುಕೊಂಡ ಕಮಾಂಡ್‌ಅನ್ನು ವಿಕ್ರಮ್ ಲ್ಯಾಂಡರ್ ತನ್ನ ಬಳಿಯಿರುವ ಪ್ರಗ್ಯಾನ್ ರೋವರ್‌ಗೆ ವರ್ಗಾಯಿಸುತ್ತದೆ. ಇನ್ನು ಪ್ರಗ್ಯಾನ್ ರೋವರ್ ಕೂಡ ಚಂದ್ರನ ಮೇಲೆ ಮಾಡಿರುವ ಯಾವುದೇ ಕೆಲಸಗಳನ್ನು ನೇರವಾಗಿ ಇಸ್ರೋಗೆ ತಿಳಿಸೋದಿಲ್ಲ. ಅದು ಮೊದಲಿಗೆ ವಿಕ್ರಮ್ ಲ್ಯಾಂಡರ್‌ಗೆ ತಿಳಿಸಲಿದ್ದು, ವಿಕ್ರಮ್ ಭೂಮಿಗೆ ವರ್ಗಾಯಿಸಲಿದ್ದಾನೆ. ಒಟ್ಟಾರೆ ಇಸ್ರೋ ಹಾಗೂ ರೋವರ್ ನಡುವಿನ ಕೊಂಡಿಯಾಗಿ ಲ್ಯಾಂಡರ್ ಕಾರ್ಯನಿರ್ವಹಿಸಲಿದೆ.