23ರ ಬದಲು 27ಕ್ಕೆ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್, ಚಂದ್ರಯಾನ3 ದಿನಾಂಕ ಬದಲಿಸಿತಾ ಇಸ್ರೋ?
ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಉಪಗ್ರಹ ಇಳಿಸಲು ಇಸ್ರೋ ಸಜ್ಜಾಗಿದೆ. ಆಗಸ್ಟ್ 23ಕ್ಕೆ ವಿಕ್ರಮ್ ಲ್ಯಾಂಡರ್ ಇಳಿಸಲು ಎಲ್ಲಾ ಸಿದ್ಧತೆ ನಡೆದಿದೆ. ಆದರೆ ಇಸ್ರೋ ಅಹಮ್ಮದಾಬಾದ್ ಕೇಂದ್ರದ ನಿರ್ದೇಶಕ ನಿಲೇಶ್ ಎಂ ದೇಸಾಯಿ ಹೊಸ ದಿನಾಂಕ ಸೂಚಿಸಿದ್ದಾರೆ. ಇದಕ್ಕೆ ಕಾರಣವೇನು?
ಅಹಮ್ಮದಾಬಾದ್(ಆ.21) ಭಾರತದ ಮಹತ್ವಕಾಂಕ್ಷಿ ಯೋಜನೆ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡ್ ಆಗಲು ಕ್ಷಣಗಣನೇ ಆರಂಭಗೊಂಡಿದೆ. ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ. ಇದರ ನಡುವೆ ಇಸ್ರೋ ಅಹಮ್ಮದಾಬಾದ್ ಕೇಂದ್ರದ ನಿರ್ದೇಶಕ ನಿಲೇಶ್ ಎಂ ದೇಸಾಯಿ ವಿಕ್ರಮ ಲ್ಯಾಂಡರ್ ಇಳಿಯಲು ಹೊಸ ದಿನಾಂಕ ಸೂಚಿಸಿದ್ದಾರೆ. ಆಗಸ್ಟ್ 23ಕ್ಕೆ ಸಾಧ್ಯವಾಗದಿದ್ದರೆ ಆಗಸ್ಟ್ 27ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಸಲಾಗುತ್ತದೆ ಎಂದಿದ್ದಾರೆ.
ಚಂದ್ರಯಾನ 3 ಯಶಸ್ವಿಯಾಗುವುದು ಖಚಿತ. ನೌಕೆ ಉಡಾವಣೆ ಬಳಿಕ ಪ್ರತಿ ನಿಮಿಷ ಸೂಕ್ಷ್ಮವಾಗಿ ಗಮನಿಸಿದ್ದೇವೆ, ನಿರ್ವಹಣೆ ಮಾಡಿದ್ದೇವೆ. ಆಗಸ್ಟ್ 23 ರಂದು ವಿಕ್ರಮ್ ಲ್ಯಾಂಡರ್ ಇಳಿಸಲು ಎಲ್ಲವೂ ಸಿದ್ಧಾವಾಗಿದೆ. ಆದರೆ ಆಗಸ್ಟ್ 23 ರಂದು ಚಂದ್ರನಲ್ಲಿರುವ ವಾತಾವರಣ, ಪರಿಸ್ಥಿತಿ, ಮಾಡ್ಯುಲ್ ಸ್ಥಿತಿಗತಿ ಗಮನಿಸಿ ಲ್ಯಾಂಡ್ ಮಾಡಲಾಗುತ್ತದೆ. ಒಂದು ವೇಳೆ ಪ್ರತಿಕೂಲ ವಾತಾವರಣವಿದ್ದರೆ ಆಗಸ್ಟ್ 27ರಂದು ವಿಕ್ರಮ್ ಲ್ಯಾಂಡರ್ ಇಳಿಸಲಾಗುತ್ತದೆ ಎಂದು ನಿಲೇಶ್ ಎಂ ದೇಸಾಯಿ ಹೇಳಿದ್ದಾರೆ.
Chandrayaan-3: ಇಸ್ರೋ ಮಾತ್ರವಲ್ಲ ವಿಕ್ರಮನ ಬೆನ್ನುಬಿದ್ದಿದೆ ನಾಸಾ, ಯುರೋಪಿಯನ್ ಸ್ಪೇಸ್ ಏಜೆನ್ಸಿ!
ಆಗಸ್ಟ್ 23 ರಂದು ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವುದಕ್ಕಿಂತ 2 ಗಂಟೆ ಮೊದಲು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅಂದಿನ ಪರಿಸ್ಥಿತಿ, ವಾತಾವರಣ ಗಮನಿಸಿ ಆಗಸ್ಟ್ 23ರಂದು ನಿಗಧಿತ ಸಮಯದಲ್ಲಿ ಲ್ಯಾಂಡಿಂಗ್ ಮಾಡಬೇಕಾ ಅಥವಾ ಆಗಸ್ಟ್ 27ಕ್ಕೆ ಮಂದೂಡಬೇಕಾ ಅನ್ನೋದು ನಿರ್ಧಾರವಾಗಲಿದೆ ಎಂದು ನಿಲೇಶ್ ಎಂ ದೇಸಾಯಿ ಹೇಳಿದ್ದಾರೆ.
ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಸಲು ಯಾವುದೇ ಸಮಸ್ಯೆ ಇಲ್ಲ. ಯಶಸ್ವಿಯಾಗಿ ಯೋಜನೆ ಪೂರ್ಣಗೊಳ್ಳಲಿದೆ. ಎಲ್ಲಾ ತಯಾರಿ ಮಾಡಿಕೊಂಡಿರುವ ಇಸ್ರೋ ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರ್ ಇಳಿಸುವುದರಲ್ಲಿ ಅನುಮಾನವಿಲ್ಲ ಎಂದು ನಿಲೇಶ್ ಎಂ ದೇಸಾಯಿ ಹೇಳಿದ್ದಾರೆ.
ಇತ್ತ ಚಂದ್ರಯಾನ 3- ವಿಕ್ರಮ ಲ್ಯಾಂಡರ್ ಮತ್ತೊಂದು ಮಹತ್ವದ ಯಶಸ್ಸು ಸಾಧಿಸಿದೆ. 2019ರಲ್ಲಿ ಚಂದ್ರಯಾನ-2 ನೌಕೆಯ ಜತೆ ಉಡಾವಣೆ ಮಾಡಲಾಗಿದ್ದ, ಚಂದಿರನ ಕಕ್ಷೆಯಲ್ಲಿ ಈಗಲೂ ಸುತ್ತುತ್ತಿರುವ ಆರ್ಬಿಟರ್ ಜತೆ ಚಂದ್ರಯಾನ-3 ನೌಕೆಯ ಜತೆ ಹೋಗಿರುವ ಲೂನಾರ್ ಮಾಡ್ಯೂಲ್ ಯಶಸ್ವಿಯಾಗಿ ಸಂಪರ್ಕ ಸಾಧಿಸಿದೆ. ಈ ವಿಷಯವನ್ನು ಟ್ವೀಟ್ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತಿಳಿಸಿದೆ. ‘ಬಾರೋ, ಗೆಳೆಯ! ಚಂದ್ರಯಾನ-3 ಲೂನಾರ್ ಮಾಡ್ಯೂಲ್ ಅನ್ನು ಆರ್ಬಿಟರ್ ಅಧಿಕೃತವಾಗಿ ಸ್ವಾಗತಿಸಿದೆ. ಎರಡೂ ಸಾಧನಗಳ ನಡುವೆ ಪರಸ್ಪರ ಸಂವಹನ ಸಾಧ್ಯವಾಗಿದೆ’ ಎಂದು ಇಸ್ರೋ ಮಾಹಿತಿ ನೀಡಿದೆ.
ಇನ್ನೆರಡೇ ದಿನ ಬಾಕಿ, ನಾಡಿದ್ದು ಸಂಜೆ 6.04ಕ್ಕೆ ವಿಕ್ರಂ ಲ್ಯಾಂಡರ್ ‘ಚಂದ್ರಸ್ಪರ್ಶ’ಕ್ಕೆ ಮುಹೂರ್ತ
2019ರಲ್ಲಿ ಚಂದ್ರಯಾನ-2 ನೌಕೆ ಯೋಜನೆಯಡಿ ಆರ್ಬಿಟರ್, ಲ್ಯಾಂಡರ್ ಹಾಗೂ ರೋವರ್ ಅನ್ನು ಕಳುಹಿಸಲಾಗಿತ್ತು. ಆದರೆ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವಾಗ ಸಂಪರ್ಕ ಕಡಿದುಕೊಂಡು ಚಂದ್ರನ ಒಡಲಿಗೆ ಅಪ್ಪಳಿಸಿತ್ತು. ಒಂದು ವರ್ಷ ಮಾತ್ರ ಜೀವಿತಾವಧಿ ಹೊಂದಿದ್ದ ಆರ್ಬಿಟರ್, ಇಸ್ರೋ ವಿಜ್ಞಾನಿಗಳು ಮಾಡಿದ ನಿಖರ ಉಡಾವಣೆ ಹಾಗೂ ಸೂಕ್ತ ರೀತಿಯ ಕಕ್ಷೆ ಬದಲಾವಣೆ ಪ್ರಕ್ರಿಯೆಯಿಂದಾಗಿ ತನ್ನ ಜೀವಿತಾವಧಿಯನ್ನು 7 ವರ್ಷಗಳಿಗೆ ಹೆಚ್ಚಿಸಿಕೊಂಡಿದೆ. ಚಂದ್ರಯಾನ 3 ಜತೆ ಹೋಗಿರುವ ಲೂನಾರ್ ಮಾಡ್ಯೂಲ್ ಕೂಡ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಅಮೂಲ್ಯ ಮಾಹಿತಿಯನ್ನು ಭೂಮಿಗೆ ಕಳುಹಿಸಿಕೊಡಲಿದೆ.