Chandrayaan 3: ಇಸ್ರೋಗೆ ಮತ್ತಷ್ಟು ಯಶಸ್ಸು: ಐದನೇ ಭೂಕಕ್ಷೆ ಪೂರ್ಣ; ಚಂದ್ರನಿಗೆ ಮತ್ತಷ್ಟು ಹತ್ತಿರವಾಗ್ತಿದೆ ನೌಕೆ
ಬೆಂಗಳೂರಿನ ಇಸ್ರೋ ವಿಜ್ಞಾನಿಗಳು ಐದನೇ ಭೂಕಕ್ಷೆಯನ್ನು ಸೋಮವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಮೂಲಕ ಭಾರತದ ಪ್ರತಿಷ್ಠಿತ ಚಂದ್ರಯಾನ - 3 ಯೋಜನೆಗೆ ಮತ್ತಷ್ಟು ಯಶಸ್ಸು ದೊರೆತಿದೆ.
ಬೆಂಗಳೂರು (ಜುಲೈ 26, 2023): ಚಂದ್ರಯಾನ-3 ಎತ್ತರವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಭೂಮಿಯಿಂದ ದೂರ ತೆಗೆದುಕೊಂಡು ಹೋಗಲು ಬೆಂಗಳೂರಿನ ಇಸ್ರೋ ವಿಜ್ಞಾನಿಗಳು ಐದನೇ ಭೂಕಕ್ಷೆಯನ್ನು ಸೋಮವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಮೂಲಕ ಭಾರತದ ಪ್ರತಿಷ್ಠಿತ ಚಂದ್ರಯಾನ - 3 ಯೋಜನೆಗೆ ಮತ್ತಷ್ಟು ಯಶಸ್ಸು ದೊರೆತಿದೆ. ಚಂದ್ರನಿಗೆ ಚಂದ್ರಯಾನ - 3 ಉಪಗ್ರಹ ಮತ್ತಷ್ಟು ಹತ್ತಿರವಾಗುತ್ತಿದೆ.
“ಕಕ್ಷೆಯನ್ನು ಏರಿಸುವ ಕುಶಲತೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಬಾಹ್ಯಾಕಾಶ ನೌಕೆಯು 1,27,609 ಕಿಮೀ X 236 ಕಿಮೀ ಕಕ್ಷೆಯನ್ನು ತಲುಪುವ ನಿರೀಕ್ಷೆಯಿದೆ. ವೀಕ್ಷಣೆಯ ನಂತರ ಸಾಧಿಸಿದ ಕಕ್ಷೆಯನ್ನು ದೃಢೀಕರಿಸಲಾಗುವುದು’’ ಎಂದು ಇಸ್ರೋ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಇದನ್ನು ಓದಿ: ಆಸ್ಟ್ರೇಲಿಯಾ ಬೀಚ್‌ನಲ್ಲಿ ಚಂದ್ರಯಾನ-3 ಅವಶೇಷಗಳು ಪತ್ತೆ? ನಿಗೂಢ ವಸ್ತು ಬಗ್ಗೆ ನೆಟ್ಟಿಗರ ಚರ್ಚೆ
ಉಡಾವಣೆಯ ನಂತರ 11 ನೇ ದಿನದಂದು ಐದನೇ ಭೂಕಕ್ಷೆಯು ಸಂಭವಿಸಿದೆ. ಬಳಿಕ, ಟ್ರಾನ್ಸ್-ಲೂನಾರ್ ಇಂಜೆಕ್ಷನ್ (TLI) ಇಸ್ರೋದ ಮುಂದಿನ ಮೈಲುಗಲ್ಲಾಗಿದ್ದು, ಇದರ ಪ್ರಯತ್ನವನ್ನು ಅಗಸ್ಟ್ 1 ರಂದು 12am ಮತ್ತು 1am ನಡುವೆ ಯೋಜಿಸಲಾಗಿದೆ ಎಂದು ಇಸ್ರೋಮಾಹಿತಿ ನೀಡಿದೆ. ಒಮ್ಮೆ, ಇದನ್ನು ಸಾಧಿಸಿದ ನಂತರ ಇಸ್ರೋ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಕಕ್ಷೆಗೆ ಸ್ಲಿಂಗ್‌ಶಾಟ್ ಮಾಡಲು ಪ್ರಯತ್ನಿಸುತ್ತದೆ. ಹಾಗೂ, ಯಶಸ್ವಿ TLI ನಂತರ ಚಂದ್ರಯಾನ-3 ಚಂದ್ರನ ಕಕ್ಷೆಯನ್ನು ತಲುಪಲು ಐದು ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಮದೂ ಹೇಳಲಾಗಿದೆ.
ನಂತರ ಆಗಸ್ಟ್ 23 ರಂದು ಚಂದ್ರಗ್ರಹದಲ್ಲಿ ಲ್ಯಾಂಡ್ ಮಾಡಲು ಪ್ರಯತ್ನಿಸುವ ಮೊದಲು ಇಸ್ರೋ ಸರಣಿ ಕುಶಲತೆಯನ್ನು ನಡೆಸುತ್ತದೆ. ಇಲ್ಲಿಯವರೆಗೆ, ಬಾಹ್ಯಾಕಾಶ ನೌಕೆಯು ಸ್ಥಿರವಾದ ಪ್ರಗತಿಯನ್ನು ಸಾಧಿಸಿದೆ ಮತ್ತು ಇಸ್ರೋ ಐದು ಭೂ ಕಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಮೂಲಕ ಚಂದ್ರಯಾನ - 3 ಸರಿಯಾದ ಮಾರ್ಗದಲ್ಲಿದೆ ಎಂಬುದನ್ನೂ ತೋರಿಸಿದೆ. ಜುಲೈ 20 ರಂದು ನಾಲ್ಕನೇ ಭೂ ಕಕ್ಷೆ ಕಾರ್ಯಾಚರಣೆಯ ನಂತರ - ಬಾಹ್ಯಾಕಾಶ ನೌಕೆಯು 71,351 ಕಿಮೀ X 233 ಕಿಮೀ ಕಕ್ಷೆಯಲ್ಲಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿತ್ತು. ಮತ್ತು, ಮೂರನೇ ಭೂ ಕಕ್ಷೆ ಪೂರ್ಣಗೊಳಿಸಿದ ನಂತರ (ಜುಲೈ 18), ಬಾಹ್ಯಾಕಾಶ ನೌಕೆಯು 51,400 ಕಿಮೀ X 228 ಕಿಮೀ ಕಕ್ಷೆಯಲ್ಲಿತ್ತು.
ಇದನ್ನೂ ಓದಿ: ಈರುಳ್ಳಿ ಬೇಗ ಕೊಳೆವುದನ್ನು ತಪ್ಪಿಸಲು ವಿಕಿರಣ ಚಿಕಿತ್ಸೆ; ಗಾಮಾ ಕಿರಣ ಹರಿಸಿ ಆಯಸ್ಸು ಹೆಚ್ಚಿಸಲು ಪ್ಲ್ಯಾನ್
ಜುಲೈ 14 ರಂದು ಚಂದ್ರಯಾನ - 3 ಉಪಗ್ರಹ ಉಡಾವಣೆಯಾದ ನಂತರ, ಇಸ್ರೋ ಜುಲೈ 15 ಮತ್ತು 16 ರಂದು ಮೊದಲ ಎರಡು ಭೂ ಕಕ್ಷೆಯನ್ನು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿತ್ತು. ಚಂದ್ರಯಾನ-3 ಚಂದ್ರಯಾನ-2 ನ ಮುಂದುವರಿದ ಮಿಷನ್ ಆಗಿದೆ. ವಿಕ್ರಮ್ ಮತ್ತು ಪ್ರಗ್ಯಾನ್ (ರೋವರ್) ಜೊತೆಗೆ ಆರ್ಬಿಟರ್ ಅನ್ನು ಹೊತ್ತೊಯ್ದ ಚಂದ್ರಯಾನ - 2 ಗಿಂತ ಭಿನ್ನವಾಗಿ, ಚಂದ್ರಯಾನ-3 ಪ್ರೊಪಲ್ಷನ್, ಲ್ಯಾಂಡರ್ ಮತ್ತು ರೋವರ್ ಎಂಬ 3 ಮಾಡ್ಯೂಲ್‌ಗಳ ಸಂಯೋಜನೆಯಾಗಿದೆ. ಈ ಬಾಹ್ಯಾಕಾಶ ನೌಕೆಯು 3,900 ಕೆಜಿ ತೂಗುತ್ತದೆ. ಈ ಪೈಕಿ, ಪ್ರೊಪಲ್ಷನ್ ಮಾಡ್ಯೂಲ್ 2,148 ಕೆಜಿ ತೂಗುತ್ತದೆ ಮತ್ತು ರೋವರ್ ಹಾಗೂ ಲ್ಯಾಂಡರ್ ಮಾಡ್ಯೂಲ್ ಸೇರಿ 1,752 ಕೆಜಿ ತೂಗುತ್ತದೆ ಎಂದೂ ವರದಿಯಾಗಿದೆ.
ಇದನ್ನೂ ಓದಿ: ಇನ್ನು ಕೆಲ ವಾರಗಳಲ್ಲಿ ಭೂಮಿಗೆ ಅಪ್ಪಳಿಸಲಿದೆ ಕಾರಿನ ಗಾತ್ರದ ಉಪಗ್ರಹ; ಜನರ ಜೀವ, ಮೂಲಸೌಕರ್ಯಕ್ಕೂ ಅಪಾಯ!