ಚಂದ್ರನ ಮೇಲಿನ ಹೊಸ ವಿಡಿಯೋ ಹಂಚಿಕೊಂಡ ಇಸ್ರೋ, ಪ್ರಗ್ಯಾನ್ ರೋವರ್ ಸಾಹಸಕ್ಕೆ ಜಗತ್ತೆ ಬೆರಗು!
ಭಾರತದ ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ಬೆನ್ನಲ್ಲೇ ಕಾರ್ಯಾರಂಭ ಮಾಡಿದೆ. ಈಗಾಗಲೇ ಹಲವು ಫೋಟೋಗಳನ್ನು ಕಳುಹಿಸಿದೆ. ಇದೀಗ ಚಂದ್ರನ ಮೇಲಿನ ವಿಡಿಯೋವನ್ನು ಇಸ್ರೋ ಬಹಿರಂಗ ಮಾಡಿದೆ.
ಬೆಂಗಳೂರು(ಆ.26) ಚಂದ್ರನ ಮೇಲೆ ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರ್ ಇಳಿಸಿದ ಇಸ್ರೋ ತನ್ನ ಸಂಶೋಧನೆ ಹಾಗೂ ಅಧ್ಯಯನ ಮುಂದುವರಿಸಿದೆ. ಪ್ರತಿ ದಿನ ಒಂದೊಂದೆ ಕುತೂಹಲ ಹಾಗೂ ರಹಸ್ಯಗಳು ಬಯಲಾಗುತ್ತಿದೆ. ಈಗಾಗಲೇ ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈನ ಹಲವು ಫೋಟೋಗಳನ್ನು ಕಳುಹಿಸಿದೆ. ಇದೀಗ ಇಸ್ರೋ ವಿಡಿಯೋ ಒಂದನ್ನು ಬಹಿರಂಗಪಡಿಸಿದೆ. ಚಂದ್ರನ ಮೇಲೆ ಪ್ರಗ್ಯಾನ್ ರೋವರ್ ಚಲಿಸುತ್ತಿರುವ ದೃಶ್ಯ ಇದಾಗಿದೆ. ಇಷ್ಟೇ ಅಲ್ಲ ಈ ವಿಡಿಯೋದಲ್ಲಿ ಚಂದ್ರನ ಮೇಲ್ಮೈನ ಹಲವು ಕುತೂಹಲಗಳಿಗೆ ಉತ್ತರ ನೀಡಿದೆ.
ಚಂದ್ರನ ಮೇಲೆ ಪ್ರಗ್ಯಾನ್ ರೋವರ್ ಯಾವ ರೀತಿ ಕೆಲಸ ಮಾಡುತ್ತಿದೆ ಅನ್ನೋ ವಿಡಿಯೋ ಇದಾಗಿದೆ. ಚಂದ್ರನ ಮೇಲೆ ಚಲಿಸುತ್ತಿರುವ ರೋವರ್, ಚಂದ್ರನ ಮೇಲಿನ ಕೌತುಕದ ಕುರಿತು ಮಾಹಿತಿ ನೀಡುತ್ತಿದೆ. ಇನ್ನು ಚಕ್ರಗಳ ಅಚ್ಚುಗಳು ಈ ವಿಡಿಯೋದಲ್ಲಿ ಕಾಣಿಸುತ್ತಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಪ್ರಗ್ಯಾನ್ ರೋವರ್ ಸತತ ಕೆಲಸ ಮಾಡುತ್ತಿದೆ. 14 ದಿನಗಲ್ಲಿ ಹಲವು ಕುತೂಹಲಗಳಿಗೆ ಉತ್ತರ ನೀಡುವ ಪ್ರಯತ್ನದಲ್ಲಿದೆ.
ಇಸ್ರೋ ವಿಜ್ಞಾನಿಗಳ ಸಾಧನೆ ನೆನೆದು ಪ್ರಧಾನಿ ಮೋದಿ ಭಾವುಕ !
ಈ ಕುರಿತು ಟ್ವೀಟ್ ಮಾಡಿರುವ ಇಸ್ರೋ, ಚಂದ್ರನ ದಕ್ಷಿಣ ಧ್ರುವದಲ್ಲಿನ ಶಿವ ಶಕ್ತಿ ಪ್ರದೇಶದಲ್ಲಿ ಪ್ರಗ್ಯಾನ್ ರೋವರ್ ರಹಸ್ಯಗಳನ್ನು ಬಯಲು ಮಾಡಲು ಅಧ್ಯಯನದಲ್ಲಿ ತೊಡಗಿದೆ ಎಂದು ಇಸ್ರೋ ಹೇಳಿದೆ.
ಇದಕ್ಕೂ ಮೊದಲು ಲ್ಯಾಂಡರ್‌ನಿಂದ ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ಇಳಿಯುತ್ತಿರುವ ದೃಶ್ಯವನ್ನು ರವಾನಿಸಿತ್ತು.ಚಂದ್ರನ ಅಂಗಳದಲ್ಲಿ ಅತ್ಯಂತ ಕರಾರುವಾಕ್ಕಾಗಿ ‘ವಿಕ್ರಂ’ ಲ್ಯಾಂಡರ್ ಇಳಿಸಿ ಜಗತ್ತಿನಿಂದ ಪ್ರಶಂಸೆಗೆ ಒಳಗಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಲ್ಯಾಂಡರ್‌ನಿಂದ ‘ಪ್ರಜ್ಞಾನ್’ ರೋವರ್ ಕೆಳಗಿಳಿಯುತ್ತಿರುವ ಮೊದಲ ವಿಡಿಯೋವನ್ನು ಬಿಡುಗಡೆ ಮಾಡಿತ್ತು.
ವಿಕ್ರಂ ಲ್ಯಾಂಡರ್‌ನ ಪ್ರಜ್ಞಾನ್ ರೋವರ್ ಕೆಳಕ್ಕಿಳಿಯಲು ಬೇಕಾದ ರಾರಯಂಪ್ ತೆರೆಯುವುದು ಹಾಗೂ ರೋವರ್‌ನ ಸೌರಫಲಕ ಬಿಡಿಸಿಕೊಳ್ಳುವ ವಿಡಿಯೋ ಮತ್ತು ರಾರಯಂಪ್‌ನಿಂದ ನಿಧಾನವಾಗಿ ಜಾರಿ ಚಂದಿರನ ಅಂಗಳಕ್ಕೆ ಮೊದಲ ಬಾರಿ ಇಳಿಯುವ ವಿಡಿಯೋಗಳು ಬಿಡುಗಡೆಯಾಗಿವೆ. ಮತ್ತೊಂದೆಡೆ, 2019ರಲ್ಲಿ ಉಡಾವಣೆಯಾಗಿದ್ದ ಚಂದ್ರಯಾನ-2ರ ಆರ್ಬಿಟರ್, ಚಂದಿರನ ಅಂಗಳದಲ್ಲಿ ಲ್ಯಾಂಡರ್ ಇಳಿದಿರುವ ಫೋಟೋವನ್ನು ತೆಗೆದಿದೆ. ‘ಈ ವೇಳೆ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಿರುವ ಚಂದ್ರಯಾನ-2 ಆರ್ಬಿಟರ್, ‘ನಾನು ನಿನ್ನ ಮೇಲೆ ಕಣ್ಣಿಟ್ಟಿದ್ದೇನೆ’ ಎಂದು ವಿಕ್ರಮ್ ಲ್ಯಾಂಡರ್‌ಗೆ ಹೇಳಿದೆ. ಈ ವಿಡಿಯೋ, ಫೋಟೋಗಳನ್ನು ಇಸ್ರೋ ತನ್ನ ಅಧಿಕೃತ ಟ್ವೀಟರ್ ಅಕೌಂಟ್‌ನಲ್ಲಿ ಬಿಡುಗಡೆ ಮಾಡಿದೆ.
ಚಂದ್ರಯಾನ -2 ತಲುಪಿದ ಸ್ಥಳ ಇನ್ಮುಂದೆ ತಿರಂಗಾ ಪಾಯಿಂಟ್: ಮೋದಿ ಘೋಷಣೆ
ಆಗಸ್ಟ್ 23 ರಂದು ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿತ್ತು. ಈ ನೇರಪ್ರಸಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಪಾಲ್ಗೊಂಡಿದ್ದರು. ಆದರೆ ಮೋದಿ ಸೌತ್ ಆಫ್ರಿಕಾದಲ್ಲಿನ ಬ್ರಿಕ್ಸ್ ಶೃಂಗಸಭೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು. ಸೌತ್ ಆಫ್ರಿಕಾದಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.