ಇನ್ಮುಂದೆ ಡೇಟಾ ದುರ್ಬಳಕೆ ಮಾಡಿದ್ರೆ ಬರೋಬ್ಬರಿ 250 ಕೋಟಿ ರೂ. ದಂಡ: ಮಸೂದೆಗೆ ಕೇಂದ್ರ ಸಚಿವ ಸಂಪುಟ ಅಸ್ತು
ಆಧಾರ್ / ಪಾನ್ ಸಂಖ್ಯೆಯಂಥ ದತ್ತಾಂಶಗಳನ್ನು ದುರ್ಬಳಕೆ ಮಾಡಿದ ಸಂಸ್ಥೆಗಳಿಗೆ 250 ಕೋಟಿ ರೂ.ವರೆಗೂ ದಂಡ ಹಾಕುವ ಅವಕಾಶ ಸರ್ಕಾರಕ್ಕೆ ಲಭಿಸಲಿದೆ. ಮಸೂದೆಗೆ ಈಗ ಸಂಪುಟ ಅನುಮೋದನೆ ನೀಡುವುದರೊಂದಿಗೆ ಜುಲೈ 20ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆಯಾಗುವುದು ಖಚಿತವಾಗಿದೆ.
ನವದೆಹಲಿ (ಜುಲೈ 6, 2023): ದೇಶದ ನಾಗರಿಕರಿಗೆ ಸೇರಿದ ದತ್ತಾಂಶಗಳ ದುರ್ಬಳಕೆ ತಡೆಯುವ ಉದ್ದೇಶ ಹೊಂದಿರುವ ಮಹತ್ವದ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ (ಡಿಪಿಡಿಎ) 2023 ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ಪ್ರಕಾರ ಆಧಾರ್ / ಪಾನ್ ಸಂಖ್ಯೆಯಂಥ ದತ್ತಾಂಶಗಳನ್ನು ದುರ್ಬಳಕೆ ಮಾಡಿದ ಸಂಸ್ಥೆಗಳಿಗೆ 250 ಕೋಟಿ ರೂ.ವರೆಗೂ ದಂಡ ಹಾಕುವ ಅವಕಾಶ ಸರ್ಕಾರಕ್ಕೆ ಲಭಿಸಲಿದೆ.
ಮಸೂದೆಗೆ ಈಗ ಸಂಪುಟ ಅನುಮೋದನೆ ನೀಡುವುದರೊಂದಿಗೆ ಜುಲೈ 20ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆಯಾಗುವುದು ಖಚಿತವಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಹಿಂದೆ ಸಮಾಲೋಚನೆಗಾಗಿ ಬಿಡುಗಡೆ ಮಾಡಿದ್ದ ಕರಡು ವರದಿಯಲ್ಲಿನ ಬಹುತೇಕ ಅಂಶಗಳು, ಮಸೂದೆಯಲ್ಲಿ ಅಡಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: ಇಂಟರ್ನೆಟ್ ಭವಿಷ್ಯಕ್ಕೆ ಭಾರತದ ಪ್ರತ್ಯೇಕ ನೀತಿ; ಸೂಕ್ತ ಮಾನದಂಡ ರಚಿಸಲು ಸಿದ್ಧ: ರಾಜೀವ್ ಚಂದ್ರಶೇಖರ್
ಖಾಸಗಿ ಸಂಸ್ಥೆಗಳು ದತ್ತಾಂಶ ರಕ್ಷಣಾ ಮಸೂದೆ ಅಡಿ ಸಂಪೂರ್ಣವಾಗಿ ಬರಲಿವೆ. ಇದೇ ವೇಳೆ, ನಾಗರಿಕರ ದತ್ತಾಂಶ ಬಳಸುವ ಸರ್ಕಾರಿ ಸಂಸ್ಥೆಗಳಿಗೆ ಪೂರ್ಣ ಕ್ಲೀನ್‌ಚಿಟ್ ನೀಡಿಲ್ಲ. ಅವು ಕೂಡ ಮಸೂದೆ ವ್ಯಾಪ್ತಿಗೆ ಬರುತ್ತವೆ ಎಂದು ಅವು ಹೇಳಿವೆ. ಈ ಮುನ್ನ ಸರ್ಕಾರಿ ಸಂಸ್ಥೆಗಳನ್ನು ಮಸೂದೆಯಿಂದ ಹೊರಗಿಡಲಾಗಿತ್ತು.
ದತ್ತಾಂಶ ರಕ್ಷಣಾ ಕಾಯ್ದೆ ಎಂದರೇನು?
ನಾಗರಿಕರ ಆಧಾರ್ ಸಂಖ್ಯೆಯಂಥ ಡಿಜಿಟಲ್ ದತ್ತಾಂಶಗಳನ್ನು ಸಂಗ್ರಹಿಸುವ ಕಂಪನಿಗಳು / ಸರ್ಕಾರಿ ಸಂಸ್ಥೆಗಳು, ಅವನ್ನು ದುರ್ಬಳಕೆ ಮಾಡಿಕೊಳ್ಳುವುದರಿಂದ ತಡೆಯುವ ಕಾಯ್ದೆಯೇ ದತ್ತಾಂಶ ರಕ್ಷಣಾ ಕಾಯ್ದೆ. ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ (ಡಿಪಿಡಿಎ) 2023 ಮಸೂದೆಯು, ಪ್ರತಿಯೊಬ್ಬ ಪ್ರಜೆಯ ಹಕ್ಕು ಮತ್ತು ಕರ್ತವ್ಯದ ಕುರಿತು ಚೌಕಟ್ಟನ್ನು ರೂಪಿಸುವುದರ ಜೊತೆಗೆ, ಹೀಗೆ ದತ್ತಾಂಶ ಸಂಗ್ರಹಿಸುವ ಸಂಸ್ಥೆಗಳು ಅದನ್ನು ಕಾನೂನುಬದ್ಧವಾಗಿ ಮಾತ್ರ ಬಳಸುವ ಕುರಿತು ಹೊಣೆಗಾರಿಕೆ ಬಳಸುವ ಉದ್ದೇಶವನ್ನು ಒಳಗೊಂಡಿದೆ. ಅಂದರೆ ವೈಯಕ್ತಿಕ ದಾಖಲೆಗಳನ್ನು ಸೂಕ್ತವಾಗಿ ನಿರ್ವಹಿಸುವ, ರಕ್ಷಿಸುವ, ಹಕ್ಕು ನೀಡುವ ಮತ್ತು ಬಳಕೆದಾರರಿಗೆ ಕರ್ತವ್ಯ ಸೂಚಿಸುವ ಮತ್ತು ಉದ್ಯಮಿಗಳಿಗೆ ಹೊಣೆ ವಹಿಸುವ ಗುರಿ ಹೊಂದಿದೆ. ಮಸೂದೆಯನ್ನು ಪ್ರಮುಖವಾಗಿ ದತ್ತಾಂಶ ಆರ್ಥಿಕತೆ, ದತ್ತಾಂಶ ಸಂಗ್ರಹ ಪ್ರಕ್ರಿಯೆ, ಕನಿಷ್ಠ ದತ್ತಾಂಶ ಸಂಗ್ರಹ, ದತ್ತಾಂಶ ರಕ್ಷಣೆ ಮತ್ತು ಹೊಣೆಗಾರಿಕೆ, ದತ್ತಾಂಶದ ನಿಖರತೆ ಹಾಗೂ ದತ್ತಾಂಶ ಸೋರಿಕೆ ಮಾಹಿತಿ ಎಂಬ 6 ತತ್ವಗಳನ್ನು ಆಧರಿಸಿ ರೂಪಿಸಲಾಗಿದೆ.
ಇದನ್ನೂ ಓದಿ: Data Protection Bill: ದತ್ತಾಂಶ ಸೋರಿಕೆ ಆದರೆ 500 ಕೋಟಿ ರೂ. ದಂಡ..!
ಮಸೂದೆಯಲ್ಲಿ ಏನಿದೆ?:
- ದತ್ತಾಂಶವನ್ನು ಹಂಚಿಕೊಳ್ಳುವ ವ್ಯಕ್ತಿಗೆ ಹಕ್ಕು/ಬಾಧ್ಯತೆಗಳನ್ನು ನೀಡಲಾಗುತ್ತದೆ.
- ಕಾಯ್ದೆ ಪಾಸಾದ ಬಳಿಕ ಮಸೂದೆಯಡಿ, ‘ದತ್ತಾಂಶ ರಕ್ಷಣಾ ಮಂಡಳಿ’ ಸ್ಥಾಪಿಸಲಾಗುತ್ತದೆ.
- ದತ್ತಾಂಶ ವಿಷಯದ ಕುರಿತು ಯಾವುದೇ ವಿವಾದ ಎದ್ದರೆ ಅದನ್ನು ದತ್ತಾಂಶ ರಕ್ಷಣಾ ಮಂಡಳಿ ಸೂಕ್ತ ಪರಿಶೀಲನೆ ಮಾಡಿ ತನ್ನ ನಿರ್ಧಾರ ಪ್ರಕಟಿಸಲಿದೆ.
- ವ್ಯಕ್ತಿಗಳಿಗೆ ತಮ್ಮ ದತ್ತಾಂಶ ಸಂಗ್ರಹ, ಶೇಖರಣೆ ಮತ್ತು ಸಂಸ್ಕರಣೆ ಕುರಿತು ಮಾಹಿತಿ ಕೇಳುವ ಎಲ್ಲಾ ಹಕ್ಕುಗಳು ಹೊಸ ಕಾಯ್ದೆ ಅನ್ವಯ ಲಭ್ಯವಾಗಲಿವೆ.
- ದತ್ತಾಂಶ ಬಳಕೆ ಮುನ್ನ ಕೆಲವು ವಿಷಯಗಳಲ್ಲಿ ವ್ಯಕ್ತಿಯ ಅನುಮತಿ ಕಡ್ಡಾಯ.
- ಆದರೆ ಆರೋಗ್ಯ ತುರ್ತುಸ್ಥಿತಿ, ಕೋರ್ಟ್ ಆದೇಶಗಳು ಹಾಗೂ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ದತ್ತಾಂಶ ಬಳಕೆಗೆ ನಾಗರಿಕರ ಅನುಮತಿ ಕಡ್ಡಾಯವಲ್ಲ.
- ದತ್ತಾಂಶ ಸೋರಿಕೆಯಾದರೆ ನಾಗರಿಕರಿಗೆ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಿ ಪರಿಹಾರ ಪಡೆದುಕೊಳ್ಳುವ ಅವಕಾಶ ಇರಲಿದೆ
- ಖಾಸಗಿ ಕಂಪನಿಗಳು ದತ್ತಾಂಶ ಸೋರಿಕೆ ಮಾಡಿದಲ್ಲಿ ಅವುಗಳಿಗೆ 250 ಕೋಟಿ ರೂ.ವರೆಗೂ ದಂಡ ವಿಧಿಸುವ ಅವಕಾಶವಿದೆ
ಇದನ್ನೂ ಓದಿ: ಭಾರತ ಈಗ ಸ್ಮಾರ್ಟ್‌ಫೋನ್ ಹಬ್: ಒಂದೇ ವರ್ಷದಲ್ಲಿ ಮೊಬೈಲ್ ರಫ್ತು ಡಬಲ್