ಪುರುಷರಿಗಿಂತ ಮಹಿಳೆಯರೇ ಬೇಗ ಪ್ರಬುದ್ಧರಾಗ್ತಾರಂತೆ: ಅಧ್ಯಯನ ವರದಿ
ಮಹಿಳೆಯರು ಮತ್ತು ಪುರುಷರಲ್ಲಿ ಪ್ರಬುದ್ಧತೆ ಬರುವ ವಯಸ್ಸಿನಲ್ಲಿ ವ್ಯತ್ಯಾಸವಿದೆ ಎಂದು ಅಧ್ಯಯನವೊಂದು ಹೇಳಿದೆ. ಮಹಿಳೆಯರು 32ನೇ ವಯಸ್ಸಿನಲ್ಲಿ ಪ್ರಬುದ್ಧರಾದರೆ, ಪುರುಷರಿಗೆ 43 ವರ್ಷ ಬೇಕಾಗುತ್ತದೆ. ಪುರುಷರ ಕೆಲವು ನಡವಳಿಕೆಗಳು ಅವರ ಪ್ರಬುದ್ಧತೆಯನ್ನು ವಿಳಂಬಗೊಳಿಸುತ್ತವೆ ಎಂದು ಅಧ್ಯಯನ ತಿಳಿಸಿದೆ.
ಮನುಷ್ಯರ ಪ್ರಬುದ್ಧತೆ ಬಗ್ಗೆ ಆಗಾಗ ಚರ್ಚೆಗಳಾಗುತ್ತಿರುತ್ತವೆ. ಮಕ್ಕಳಂತೆ ದೊಡ್ಡವರು ಆಡುತ್ತಿದ್ದರೆ ಇಷ್ಟು ವಯಸ್ಸಾದರೂ ಇವರಿಗೆ ಮೆಚ್ಯುರಿಟಿ(ಪ್ರಬುದ್ಧತೆ) ಇಲ್ಲ, ಸಣ್ಣ ಮಕ್ಕಳಂತೆ ಆಡ್ತಾರೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ಹಾಗಿದ್ರೆ ಈ ಪ್ರಬುದ್ಧತೆ ಅಥವ ಮೆಚ್ಯುರಿಟಿ ಎಂಬುದು ಯಾವಾಗ ಬರುತ್ತದೆ ಎಂಬುದು ಅನೇಕರ ಪ್ರಶ್ನೆಯಾಗಿದೆ. ಕೆಲವರು ಸಣ್ಣ ವಯಸ್ಸಿನಲ್ಲೇ ಎಲ್ಲವನ್ನೂ ತಿಳಿದ ಜ್ಞಾನಿಗಳಂತೆ ಪ್ರಬುದ್ಧರಾಗಿ ವರ್ತಿಸಿದರೆ ಮತ್ತೆ ಕೆಲವರು ಮುದುಕರಾದರೂ ಪ್ರಬುದ್ಧತೆ ಎಂಬುದೇ ಇರುವುದಿಲ್ಲ, ಹೀಗಿರುವಾಗ ಅಧ್ಯಯನವೊಂದು ಮಹಿಳೆಯರು ಹಾಗೂ ಪುರುಷರಿಗೆ ಬೇರೆ ಬೇರೆ ವಯಸ್ಸಿನಲ್ಲಿ ಪ್ರಬುದ್ಧತೆ ಬರುವುದು ಎಂದು ಹೇಳಿದೆ. ಅದರಲ್ಲೂ ಪುರುಷರಿಗಿಂತ ಮಹಿಳೆಯರಿಗೆ ಬೇಗ ಪ್ರಬುದ್ಧತೆ ಬರುವುದಂತೆ.
ಯುನೈಟೆಡ್ ಕಿಂಗ್‌ಡಮ್(ಬ್ರಿಟನ್)ನ 'ಅವರ್ ವರ್ಲ್ಡ್ ಯುಕೆ ಕಮ್ಯೂನಿಟಿ' ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿದ್ದು, ಅದರಂತೆ ಪುರುಷರು ಹಾಗೂ ಸ್ತೀಯರ ಭಾವನಾತ್ಮಕ ಪರಿಪಕ್ವತೆಯ ವಯಸ್ಸಿನಲ್ಲಿ ಗಮನಾರ್ಹವಾದ ವ್ಯತ್ಯಾಸವಿದೆ ಎಂಬುದನ್ನು ಬಹಿರಂಗಪಡಿಸಿದೆ. ಸಂಶೋಧನೆಯ ಪ್ರಕಾರ ಮಹಿಳೆಯರು 32ನೇ ವಯಸ್ಸಿನಲ್ಲಿ ಪೂರ್ಣವಾದ ಪ್ರಬುದ್ಧತೆಯನ್ನು ಪಡೆದರೆ ಪುರುಷರಿಗೆ ಸಂಪೂರ್ಣ ಪ್ರಬುದ್ಧತೆ ಬರಲು ಸುಮಾರು 43ವರ್ಷಗಳೇ ಕಳೆಯಬೇಕಂತೆ.
ಅದರಲ್ಲೂ ಪುರುಷರು ಪ್ರೌಢಾವಸ್ಥೆಯಲ್ಲಿಯೂ ಮಕ್ಕಳಂತ ನಡವಳಿಕೆಗಳನ್ನು ಉಳಿಸಿಕೊಳ್ಳುತ್ತಾರೆ ಎಂದು ಶೇಕಡಾ 80% ಮಹಿಳೆಯರು ಗ್ರಹಿಸುತ್ತಾರೆ ಎಂದು ಅಧ್ಯಯನವು ತೋರಿಸುತ್ತದೆ. ಫಾಸ್ಟ್ ಫುಡ್ ಮೇಲಿನ ಒಲವು, ಅತಿಯಾದ ವಿಡಿಯೋ ಗೇಮಿಂಗ್ ಮತ್ತು ಹಠಾತ್ ನಿರ್ಧಾರ ತೆಗೆದುಕೊಳ್ಳುವುದು ಈ ಮುಂತಾದ ಪುರುಷರ ನಡವಳಿಕೆಗಳು ಅವರು ಪುರುಷರು ಭಾವನಾತ್ಮಕವಾಗಿ ಪ್ರಬುದ್ಧರಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂಬ ಗ್ರಹಿಕೆಗೆ ಕೊಡುಗೆ ನೀಡಿದೆ ಎಂದು ಅಧ್ಯಯನ ತಿಳಿಸಿದೆ.
ಸಂಶೋಧನೆಯು ಮಹಿಳೆಯರು ತಮ್ಮ ಸಂಬಂಧಗಳಲ್ಲಿ ಸಾಮಾನ್ಯವಾಗಿ ವಹಿಸುವ ಪಾತ್ರಗಳನ್ನು ಪರಿಶೀಲಿಸುತ್ತದೆ. ಅನೇಕ ಮಹಿಳೆಯರು ತಮ್ಮ ಸಂಬಂಧದ ಪಾರ್ಟನರ್‌ಶಿಪ್‌ನಲ್ಲಿ ಪ್ರಾಥಮಿಕ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಎಂದು ಇದು ತಿಳಿಸುತ್ತದೆ. ಈ ಪಾತ್ರವು ಹಣಕಾಸು ನಿರ್ವಹಣೆ, ಪ್ರಮುಖ ಜೀವನ ಆಯ್ಕೆಗಳನ್ನು ಮಾಡುವುದು ಮತ್ತು ತಮ್ಮ ಪಾಲುದಾರರರು ತಮ್ಮ ವಯಸ್ಸಿಗೆ ತಕ್ಕಂತೆ ವರ್ತಿಸುವಂತೆ ಪ್ರೇರೇಪಿಸುತ್ತದೆಯಂತೆ. ಈ ಕ್ರಿಯಾಶೀಲತೆಯು ಮಹಿಳೆಯರು ಮೊದಲೇ ಪ್ರಬುದ್ಧತೆಯನ್ನು ತಲುಪುವುದರಿಂದ ಉಂಟಾಗಬಹುದು ಎಂದು ಅಧ್ಯಯನವು ಸೂಚಿಸುತ್ತದೆ, ಸ್ವಾಭಾವಿಕವಾಗಿ ಅಂತಹ ಜವಾಬ್ದಾರಿಗಳನ್ನು ನಿರ್ವಹಿಸಲು ಅವರನ್ನು ಇದು ಹೆಚ್ಚು ಸಿದ್ಧವಾಗಿಸುತ್ತದೆ ಎಂದು ಅಧ್ಯಯನ ವರದಿ ಹೇಳುತ್ತದೆ.