18 ನಿಮಿಷಗಳಿಗೊಮ್ಮೆ ರೇಡಿಯೊ ಸಿಗ್ನಲ್ ಹೊರಸೂಸುತ್ತಿರುವ ಅಜ್ಞಾತ ಬಾಹ್ಯಾಕಾಶ ವಸ್ತು ಪತ್ತೆ!
ಪ್ರತಿ 18 ನಿಮಿಷಗಳಿಗೊಮ್ಮೆ ಸುಮಾರು ಒಂದು ನಿಮಿಷ ಆಕ್ಟೀವಾಗುವ ಹೊಸ ವಸ್ತುವೊಂದನ್ನು ಆಸ್ಟ್ರೇಲಿಯಾದ ರೇಡಿಯೋ ಖಗೋಳಶಾಸ್ತ್ರಜ್ಞರ ತಂಡವು ಪತ್ತೆ ಮಾಡಿದೆ. ಈ ವಸ್ತುವಿನ ನಡವಳಿಕೆಯು ವಿಜ್ಞಾನಿಗಳು ಹಿಂದೆಂದೂ ಗಮನಿಸದ ಸಂಗತಿಯಾಗಿದೆ.
Tech Desk: ಬಾಹ್ಯಾಕಾಶವು ಅನೇಕ ಅಚ್ಚರಿಗಳಿಂದ ಕೂಡಿದ ಜಗತ್ತು. ಬಗೆದಷ್ಟು ಹೊಸ ಸಂಗತಿಗಳು ಇಲ್ಲಿ ಗೋಚರವಾಗುತ್ತವೆ. ಬಾಹ್ಯಾಕಾಶ ವಿಜ್ಞಾನದ ಅಧ್ಯಯನ ಎಂದೂ ಮುಗಿಯದ ಅಧ್ಯಾಯ. ಬಾಹ್ಯಾಕಾಶದಲ್ಲಿ ಪ್ರತಿ 18 ನಿಮಿಷಗಳಿಗೊಮ್ಮೆ ಸುಮಾರು ಒಂದು ನಿಮಿಷ ಆಕ್ಟೀವಾಗುವ ಹೊಸ ವಸ್ತುವೊಂದನ್ನು (Unknown Object) ಆಸ್ಟ್ರೇಲಿಯಾದ ರೇಡಿಯೋ ಖಗೋಳಶಾಸ್ತ್ರಜ್ಞರ (Radio Astronomers)ತಂಡವು ಈಗ ಪತ್ತೆ ಮಾಡಿದೆ. ಇದು ಭೂಮಿಯಿಂದ ಸುಮಾರು 4,000 ಬೆಳಕಿನ ವರ್ಷಗಳ ದೂರದಲ್ಲಿದ್ದು ಗಂಟೆಗೆ ಮೂರು ಬಾರಿ ನಿಯಮಿತ ಮಧ್ಯಂತರದಲ್ಲಿ ಬಲವಾದ ರೇಡಿಯೊ ಸಂಕೇತಗಳನ್ನು (Radio Waves)ಕಳುಹಿಸುತ್ತಿದೆ.
ಇದರಿಂದ ಹೊರಸೂಸಲಾಗುವು ಶಕ್ತಿಯ ಸ್ಫೋಟವು (Periodic Burst of Energy ) ಸುಮಾರು ಒಂದು ನಿಮಿಷದವರೆಗೆ ಇರುತ್ತದೆ. ಬಳಿಕೆ ವಸ್ತುವು ಮತ್ತೆ ಮೌನವಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಹಿಂದೆಂದೂ ಗಮನಿಸಿದ ಸಂಗತಿ ಈಗ ಈ ವಸ್ತುವಿನಲ್ಲಿ ಕಂಡುಬರುತ್ತಿದ್ದೂ ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದೆ.ಇದು ಕುಸಿದ ನಕ್ಷತ್ರದ (Collapsed Star) ಅವಶೇಷವಾಗಿರಬಹುದು, ದಟ್ಟವಾದ ನ್ಯೂಟ್ರಾನ್ ನಕ್ಷತ್ರ ಅಥವಾ ಬಲವಾದ ಕಾಂತೀಯ ಕ್ಷೇತ್ರದೊಂದಿಗೆ ಸತ್ತ ಬಿಳಿ ಕುಬ್ಜ ನಕ್ಷತ್ರವಾಗಿರಬಹುದು ( Dwarf Star), ಅಥವಾ ಅದು ಸಂಪೂರ್ಣವಾಗಿ ಬೇರೆ ಯಾವುದಾದರೂ ಆಗಿರಬಹುದು ಎಂಬುದು ಖಗೋಳಶಾಸ್ತ್ರಜ್ಞರ ಅಭಿಪ್ರಾಯ.
ಇದನ್ನೂ ಓದಿ: NASA JW Telescope: ಭೂಮಿಯಿಂದ 15,00,000 ಕಿ.ಮೀ ದರೂದಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಸ್ಥಿರ!
ಈ ಬೆನ್ನಲ್ಲೇ ಮಾಹಿತಿ ನೀಡಿರುವ ಆಸ್ಟ್ರೇಲಿಯಾದ ಕರ್ಟಿನ್ ವಿಶ್ವವಿದ್ಯಾಲಯದ (Curtin University) ಖಗೋಳ ಭೌತಶಾಸ್ತ್ರಜ್ಞ ಡಾ ನತಾಶಾ ಹರ್ಲಿ-ವಾಕರ್ "ನಮ್ಮ ಅವಲೋಕನಗಳ ಸಮಯದಲ್ಲಿ ಈ ವಸ್ತುವು ಕೆಲವು ಗಂಟೆಗಳ ಕಾಲ ಗೋಚರಿಸುತ್ತದೆ ಮತ್ತು ಕಣ್ಮರೆಯಾಗುತ್ತಿದೆ. ಇದು ಸಂಪೂರ್ಣವಾಗಿ ಅನಿರೀಕ್ಷಿತವಾಗಿತ್ತು. ಖಗೋಳಶಾಸ್ತ್ರಜ್ಞನಿಗೆ ಇದು ಒಂದು ರೀತಿಯ ಭಯಾನಕ ಸಂಗತಿ. ಏಕೆಂದರೆ ಆಕಾಶದಲ್ಲಿನ ವಸ್ತುವಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಇದರ ಬಗ್ಗೆ ಏನೂ ತಿಳಿದಿಲ್ಲ, ”ಎಂದು ಹೇಳಿದ್ದಾರೆ.
Transients: ಈ ರೀತಿಯ ಮಿನುಗುವ ನಡವಳಿಕೆ ಹೊಂದಿರುವ ಬಾಹ್ಯಾಕಾಶ ವಸ್ತುಗಳು ಬೃಹತ್ ಪ್ರಮಾಣದ ಶಕ್ತಿಯ ಆವರ್ತಕ ಬಿಡುಗಡೆಗಳಿಂದ ಉಂಟಾಗುತ್ತದೆ. ವಿಜ್ಞಾನಿಗಳು ಇದನ್ನು 'ಟ್ರಾನ್ಸಿಯೆಂಟ್ಸ್' (transients) ಎಂದು ಕರೆಯುತ್ತಾರೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ. "ಅಸ್ಥಿರತೆಯನ್ನು ಅಧ್ಯಯನ ಮಾಡುವಾಗ, ನೀವು ಬೃಹತ್ ನಕ್ಷತ್ರದ ಸಾವು ಅಥವಾ ಅದು ಬಿಟ್ಟುಹೋಗುವ ಅವಶೇಷಗಳ ಚಟುವಟಿಕೆಯನ್ನು ವೀಕ್ಷಿಸುತ್ತಿರಿ" ಎಂದು ICRAR-ಕರ್ಟಿನ್ ಖಗೋಳ ಭೌತಶಾಸ್ತ್ರಜ್ಞ ಮತ್ತು ಅಧ್ಯಯನದ ಸಹ-ಲೇಖಕ ಡಾ. ಗೆಮ್ಮಾ ಆಂಡರ್ಸನ್ ವಿವರಿಸಿದ್ದಾರೆ.
ಇದನ್ನೂ ಓದಿ: Space Film Studio: ಜಗತ್ತಿನ ಮೊದಲ ಸ್ಪೇಸ್ ಫಿಲ್ಮ್ ಸ್ಟುಡಿಯೋ 2024ರಲ್ಲಿ ಶುರು!
"'ಸ್ಲೋ ಟ್ರಾನ್ಸಿಯೆಂಟ್ಸ್' - ಸೂಪರ್ನೋವಾಗಳು ಕೆಲವು ದಿನಗಳ ಅವಧಿಯಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಕೆಲವು ತಿಂಗಳುಗಳ ನಂತರ ಕಣ್ಮರೆಯಾಗಬಹುದು. 'ಫಾಸ್ಟ್ ಟ್ರಾನ್ಸಿಯೆಂಟ್ಸ್' - ಪಲ್ಸರ್ ಎಂದು ಕರೆಯಲ್ಪಡುವ ನ್ಯೂಟ್ರಾನ್ ನಕ್ಷತ್ರಗಳು ಮಿಲಿಸೆಕೆಂಡ್‌ಗಳು ಅಥವಾ ಸೆಕೆಂಡುಗಳಲ್ಲಿ ಫ್ಲ್ಯಾಷ್ ಆನ್ ಮತ್ತು ಆಫ್ ಆಗುತ್ತವೆ, ”ಎಂದು ಅವರು ತಿಳಿಸಿದ್ದಾರೆ. ಆದರೆ ಹೊಸದಾಗಿ ಪತ್ತೆಯಾದ ವಸ್ತು ಪ್ರತಿ 18 ನಿಮಿಷಗಳಿಗೆಗೊಮ್ಮೆ ಆಕ್ಟೀವ್ ಆಗುತ್ತಿದೆ. ಇದು ಹಿಂದೆಂದೂ ಗಮನಿಸದ ಸಂಗತಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕರ್ಟಿನ್ ವಿಶ್ವವಿದ್ಯಾನಿಲಯ ಮತ್ತು ವೆಸ್ಟರ್ನ್ ಆಸ್ಟ್ರೇಲಿಯ ವಿಶ್ವವಿದ್ಯಾನಿಲಯದ ಜಂಟಿ ಉದ್ಯಮವಾದ ಇಂಟರ್ನ್ಯಾಷನಲ್ ಸೆಂಟರ್ ಫಾರ್ ರೇಡಿಯೋ ಅಸ್ಟ್ರಾನಮಿ ರಿಸರ್ಚ್ (ICRAR) ಪತ್ರಿಕಾ ಹೇಳಿಕೆಯ ಪ್ರಕಾರ ಡಾ ಹರ್ಲಿ-ವಾಕರ್ ಸಂಶೋಧನೆಯನ್ನು ಮಾಡಿದ ಸಂಶೋಧಕರ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ವಸ್ತುವನ್ನು ಕರ್ಟಿನ್ ವಿಶ್ವವಿದ್ಯಾಲಯದ ಆನರ್ಸ್ ವಿದ್ಯಾರ್ಥಿ ಟೈರೋನ್ ಒ'ಡೊಹೆರ್ಟಿ ಪಶ್ಚಿಮ ಆಸ್ಟ್ರೇಲಿಯಾದ ಔಟ್‌ಬ್ಯಾಕ್‌ನಲ್ಲಿರುವ ಮರ್ಚಿಸನ್ ವೈಡ್‌ಫೀಲ್ಡ್ ಅರೇ (MWA) ದೂರದರ್ಶಕವನ್ನು ಬಳಸಿಕೊಂಡು ಮತ್ತು ಅವರು ಅಭಿವೃದ್ಧಿಪಡಿಸಿದ ಹೊಸ ತಂತ್ರವನ್ನು ಬಳಸಿ ಕಂಡುಹಿಡಿದ್ದಾರೆ. ಈ ಸಂಶೋಧನೆಯನ್ನು ನೇಚರ್ ಜರ್ನಲ್‌ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.