ವೀರ್ಯ ದಾನ ಮಾಡಿ ಮಕ್ಕಳನ್ನು ಪಡೆಯುವುದು ಭಾರತದಲ್ಲಿಯೂ ಸಾಮಾನ್ಯವಾಗಿರುವ ಈ ದಿನಗಳಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಒಬ್ಬ ವ್ಯಕ್ತಿಯ ವೀರ್ಯದಿಂದ ಹುಟ್ಟಿದ 10 ಮಕ್ಕಳಲ್ಲಿ ಕ್ಯಾನ್ಸರ್​ ಪತ್ತೆಯಾಗಿದೆ!

ಪುರುಷರು ತಮ್ಮ ವೀರ್ಯವನ್ನು ದಾನ ಮಾಡುವ ಮೂಲಕ ಮಕ್ಕಳನ್ನು ಹುಟ್ಟಿಸುವುದು ಇದೀಗ ಕಾಮನ್​ ಆಗಿದೆ. ಹಲವು ಕಾರಣಕ್ಕಾಗಿ ಪುರುಷರಲ್ಲಿ ಮಕ್ಕಳನ್ನು ಹುಟ್ಟಿಸುವ ಸಾಮರ್ಥ್ಯ ಇಲ್ಲದಾಗ ಬೇರೆ ಪುರುಷರ ವೀರ್ಯವನ್ನು ದಾನ ಪಡೆಯುವ ಮೂಲಕ ಮಕ್ಕಳನ್ನು ಹುಟ್ಟಿಸಲಾಗುತ್ತಿದೆ. ವಿದೇಶಗಳಲ್ಲಿ ಆರಂಭವಾದ ಈ ಪ್ರವೃತ್ತಿ ಈಗ ಭಾರತದಲ್ಲೂ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ದೇಶದ ಹಲವು ಸ್ಥಳಗಳಲ್ಲಿ ವೀರ್ಯದಾನ ಮಾಡಲಾಗುತ್ತದೆ. ಈ ಉದ್ದೇಶಕ್ಕಾಗಿ ವೀರ್ಯ ಬ್ಯಾಂಕುಗಳು ಪ್ರಾರಂಭವಾಗಿದೆ. ಕಳೆದ ಕೆಲವು ವರ್ಷಗಳಿಂದೀಚೆಗೆ ವೀರ್ಯ ದಾನಿಗಳ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ವೀರ್ಯದಾನದಿಂದ ಅನೇಕರು ದುಡ್ಡನ್ನೂ ಸಂಪಾದಿಸುತ್ತಾರೆ. ಆದರೆ ಇದೀಗ ಹೀಗೆ ವೀರ್ಯವನ್ನು ಪಡೆದುಕೊಂಡು ಮಕ್ಕಳನ್ನು ಹುಟ್ಟಿಸುವವರಿಗೆ ಆಘಾತಕಾರಿ ಎನ್ನುವಂಥ ಅಂಶವೊಂದು ಪತ್ತೆಯಾಗಿದೆ. ಅದೇನೆಂದರೆ, ವೀರ್ಯ ದಾನಿಯೊಬ್ಬನಿಗೆ ಹುಟ್ಟಿದ 10 ಮಕ್ಕಳಿಗೆ ಕ್ಯಾನ್ಸರ್​ ಇರುವುದು ಪತ್ತೆಯಾಗಿದೆ!

ಸಂತಾನೋತ್ಪತ್ತಿ ತಂತ್ರಜ್ಞಾನ ಮಸೂದೆ, 2021 ರ ಅಡಿಯಲ್ಲಿ, ಭಾರತದಲ್ಲಿ 18 ರಿಂದ 39 ವರ್ಷದೊಳಗಿನ ಪುರುಷರು ತಮ್ಮ ವೀರ್ಯವನ್ನು ದಾನ ಮಾಡಬಹುದು. ಕೆಲವು ವೀರ್ಯ ದಾನ ಬ್ಯಾಂಕುಗಳಲ್ಲಿ, ವೀರ್ಯ ದಾನಕ್ಕೆ ವಯಸ್ಸನ್ನು 34 ವರ್ಷ ಎಂದು ನಿಗದಿಪಡಿಸಲಾಗಿದೆ. ಇದೇ ಕಾರಣಕ್ಕೆ ವೀರ್ಯ ದಾನ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಆದರೆ, ಯುರೋಪ್‌ನಲ್ಲಿ ನಡೆದ ಪ್ರಕರಣದಿಂದ ದಿಗಿಲು ಉಂಟಾಗಿದೆ. ವ್ಯಕ್ತಿಯೊಬ್ಬ ತನ್ನ ವೀರ್ಯ ದಾನ ಮಾಡುವ ಮೂಲಕ 67 ಮಕ್ಕಳಿಗೆ ತಂದೆಯಾಗಿದ್ದಾನೆ. ಆದರೆ ತನಗೆ ಕ್ಯಾನ್ಸರ್​ ಇದೆ ಎನ್ನುವುದು ಆತನಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಕ್ಯಾನ್ಸರ್​ ಆನುವಂಶಿಕ ಕಾಯಿಲೆಯಾಗಿರುವ ಕಾರಣ, ಆತನ ವೀರ್ಯದಿಂದ ಹುಟ್ಟಿದ 67 ಮಕ್ಕಳಲ್ಲಿ ಇದಾಗಲೇ 10 ಮಕ್ಕಳಿಗೆ ಕ್ಯಾನ್ಸರ್​ ಇರುವುದು ಪತ್ತೆಯಾಗಿದೆ! 2008 ಮತ್ತು 2015 ರ ನಡುವೆ ಬಳಸಲಾದ ದಾನಿಯ ವೀರ್ಯವು ಎಂಟು ಯುರೋಪಿಯನ್ ದೇಶಗಳಲ್ಲಿ ಮಕ್ಕಳ ಜನನಕ್ಕೆ ಕಾರಣವಾಗಿದೆ. ಆದರೆ ಹತ್ತು ಮಕ್ಕಳಲ್ಲಿ ಕ್ಯಾನ್ಸರ್​ ಪತ್ತೆಯಾಗಿರುವ ಕಾರಣದಿಂದ, ವೈದ್ಯಕೀಯದ ಬಗ್ಗೆಯೇ ಇದೀಗ ಸಂದೇಹ ಹುಟ್ಟುಹಾಕುವಂತಿದೆ.

ವೀರ್ಯವನ್ನು ದಾನ ಮಾಡುವ ಪೂರ್ವದಲ್ಲಿ ವ್ಯಕ್ತಿಯ ಆರೋಗ್ಯವನ್ನು ಪರೀಕ್ಷೆಮಾಡಲಾಗುತ್ತದೆ. ಆದರೆ ಕ್ಯಾನ್ಸರ್​ ಇರುವುದು ತಿಳಿಯದೇ ವೀರ್ಯ ನೀಡಲು ಅನುಮತಿ ನೀಡಿರುವುದು ಈಗ ಸಂದೇಹ ಮಾತ್ರವಲ್ಲದೇ ವೀರ್ಯ ಪಡೆಯಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ಕೆಲವು ರಕ್ತದ ಗುಂಪುಗಳನ್ನು ಹೊಂದಿರುವ ಜನರು ಮಾತ್ರ ಇದಕ್ಕೆ ಅರ್ಹರು. ದಾನಿಯಿಂದ ಸಂಗ್ರಹಿಸಿದ ವೀರ್ಯವನ್ನು ವಿಶೇಷ ವಿಧಾನಗಳನ್ನು ಬಳಸಿ ಸಂಗ್ರಹಿಸಲಾಗುತ್ತದೆ. ಮಹಿಳೆಯರಿಂದ ಸಂಗ್ರಹಿಸಿದ ಮೊಟ್ಟೆಗಳನ್ನು ಸಂಗ್ರಹಿಸಲು ಇದೇ ರೀತಿಯ ಬ್ಯಾಂಕುಗಳು ಇವೆ. ಇದು ಸಂಪೂರ್ಣವಾಗಿ ಕಾನೂನುಬದ್ಧ ಪ್ರಕ್ರಿಯೆಯಾಗಿರುತ್ತದೆ.

ಇನ್ನು ವೀರ್ಯವನ್ನು ಸಂಗ್ರಹಿಸುವ ಕುರಿತು ಹೇಳುವುದಾದರೆ, ಈಗ ಭಾರತದಲ್ಲಿಯೂ ಹಲವೆಡೆ ವೀರ್ಯ ಬ್ಯಾಂಕುಗಳು ಮತ್ತು ಫಲವತ್ತತೆ ಚಿಕಿತ್ಸಾಲಯಗಳು ಸ್ಥಾಪನೆಯಾಗಿವೆ. ಅಲ್ಲಿ ದಾನಿಗಳ ಸಂಪೂರ್ಣ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದುದ. ಬಳಿಕ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಮತ್ತು ಅವು ಸರಿ ಎಂದು ಪರಿಗಣಿಸಿದರೆ, ವೀರ್ಯ ಪರೀಕ್ಷೆಯನ್ನು ಮಾಡಿ ಅನುಮೋದಿಸಲಾಗುತ್ತದೆ. ಈ ಸಂದರ್ಭದಲ್ಲಿ, ವೀರ್ಯ ದಾನಿಯ ಹಾಗೂ ಕುಟುಂಬ ಯಾವುದೇ ಸದಸ್ಯರಿಗೆ ಯಾವುದಾದರೂ ಕಾಯಿಲೆಗಳಿರುವ ಕುರಿತು ಮಾಹಿತಿ ನೀಡಬೇಕು. ಇಷ್ಟೆಲ್ಲಾ ಪ್ರಕ್ರಿಯೆ ಇದ್ದರೂ ಇದೀಗ ಕ್ಯಾನ್ಸರ್​ ಇರುವುದು ಹೇಗೆ ತಿಳಿದಿಲ್ಲ ಎನ್ನುವುದೇ ವಿಚಿತ್ರವಾಗಿದೆ.